‘ಅಮೃತ್‌’ ಕಾಮಗಾರಿ ಉದ್ಘಾಟನೆಗೆ ಗ್ರಹಣ!

7

‘ಅಮೃತ್‌’ ಕಾಮಗಾರಿ ಉದ್ಘಾಟನೆಗೆ ಗ್ರಹಣ!

Published:
Updated:
‘ಅಮೃತ್‌’ ಕಾಮಗಾರಿ ಉದ್ಘಾಟನೆಗೆ ಗ್ರಹಣ!

ಮಂಡ್ಯ: ಮೂರು ತಿಂಗಳುಗಳಿಂದ ‘ಅಮೃತ್‌’ ಕಾಮಗಾರಿ ಶಂಕುಸ್ಥಾಪನೆಗೆ ಗ್ರಹಣ ಹಿಡಿದಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭೂಮಿಪೂಜೆ ‘ಮುಹೂರ್ತ’ ಮುಂದಕ್ಕೆ ಹೋಗುತ್ತಲೇ ಇದೆ. ಅಂದುಕೊಂಡಂತೆ ಅಮೃತ್‌ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ ಯೋಜನೆ)ಕಾಮಗಾರಿ ಆರಂಭವಾಗಿದ್ದರೆ ಈ ವೇಳೆಗೆ ಶೇ 20ರಷ್ಟು ಪ್ರಗತಿ ಕಾಣಬೇಕಾಗಿತ್ತು. ಆದರೆ, ಸ್ಥಳೀಯ ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಕಾಮಗಾರಿಗೆ ಉದ್ಘಾಟನಾ ಭಾಗ್ಯ ಬಂದಿಲ್ಲ.

ಮೇ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ, ಅವರ ದಿನಾಂಕ ಹೊಂದಾಣಿಕೆಯಾಗದ ಕಾರಣ ಕಡೇ ಕ್ಷಣದಲ್ಲಿ ಕಾರ್ಯಕ್ರಮ ಮುಂದೂಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರೇ ಕಾಮಗಾರಿ ಉದ್ಘಾಟಿಸಲಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದರು.

ಅದರಂತೆ ಜೂನ್‌ 2ರಂದು ಕಾರ್ಯಕ್ರಮ ನಿಗದಿಯಾಯಿತು. ಆದರೆ, ಅಂದು ಪಾರ್ವತಮ್ಮ ರಾಜ್‌ಕುಮಾರ್‌ ನಿಧನರಾದ ಕಾರಣ ಮತ್ತೆ ಮುಂದಕ್ಕೆ ಹಾಕಲಾಯಿತು.

‘ಭೂಮಿಪೂಜೆ ನೆರವೇರಿಸಲು 10 ನಿಮಿಷ ಸಾಕು. ಈ ಸಣ್ಣ ಕೆಲಸಕ್ಕೆ ಯಾಕಿಷ್ಟು ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸ ಮಾಡಲು ಆಸಕ್ತಿ ಇಲ್ಲ. ಕಾಮಗಾರಿ ತಡವಾದರೆ ವೆಚ್ಚ ಹೆಚ್ಚಾಗಲಿದೆ. ಇದರ ಅರಿವು ಅವರಿಗಿಲ್ಲ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆರೋಪಿಸಿದರು.

ಅಡ್ಡಿಯಾದ ನೀತಿ ಸಂಹಿತೆ: ನಗರಸಭೆ 28ನೇ ವಾರ್ಡ್‌ ಸದಸ್ಯತ್ವ ಸ್ಥಾನಕ್ಕೆ ಬಿ.ಸಿದ್ದರಾಜು ರಾಜೀನಾಮೆ ಸಲ್ಲಿಸಿದ್ದರಿಂದ ಸದ್ಯ ಉಪಚುನಾವಣೆ ಘೋಷಣೆಯಾಗಿದೆ. ಜುಲೈ 2ರಂದು ಮತದಾನ ನಡೆಯಲಿದೆ. ಹೀಗಾಗಿ ಅಮೃತ್‌ ಕಾಮಗಾರಿ ಚಾಲನೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಜೂನ್‌ 2ರಂದು ಆರಂಭಗೊಳ್ಳಬೇಕಾಗಿದ್ದ ಕಾಮಗಾರಿ ಒಂದು ತಿಂಗಳು ಮುಂದಕ್ಕೆ ಹೋದಂತಾಗಿದೆ.

ದರ ಹೊಂದಾಣಿಕೆ: ಅಮೃತ್‌ ಅಡಿಯಲ್ಲಿ ಒಳಚರಂಡಿ ಹಾಗೂ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ಈಗಾಗಲೇ ಆಂಧ್ರ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ನಿಗದಿಯಂತೆ ಕಾಮಗಾರಿ ಆರಂಭವಾಗದ ಕಾರಣ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಸಮಯ ಕೇಳುವ ಅಪಾಯ ಎದುರಾಗಿದೆ. ಅಲ್ಲದೇ ಕಾಮಗಾರಿ ತಡವಾದರೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುವ ಸಂಭವವಿದ್ದು ಗುತ್ತಿಗೆದಾರರು ಆ ದರ ಹೊಂದಾಣಿಕೆಗೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ.

ಜನರಿಗೆ ಕಿರಿಕಿರಿ: ಕಾಮಗಾರಿ ಉದ್ಘಾಟನೆ ಆಗದಿದ್ದರೂ ಶಾಸಕ ಅಂಬರೀಷ್‌ ಸೂಚನೆ ಮೇರೆಗೆ ಮೂರು ತಿಂಗಳ ಹಿಂದೆಯೇ ವಿವಿಧೆಡೆ ಒಳಚರಂಡಿ ಕಾಮಗಾರಿ ಆರಂಭವಾಗಿತ್ತು. ಆದ್ದರಿಂದ ನಗರದ ಗಾಂಧಿನಗರ, ಕಲ್ಲಹಳ್ಳಿ, ವಿದ್ಯಾನಗರ, ಶಂಕರಮಠ ಮುಂತಾದೆಡೆ ಚರಂಡಿ ಮ್ಯಾನ್‌ಹೋಲ್‌ ತೋಡಲಾಗಿದ್ದು ಹಾಗೆಯೇ ಮಣ್ಣು ಮುಚ್ಚಿ ಬಿಡಲಾಗಿದೆ. ಮಳೆ ಸುರಿದ ನಂತರ ಮಣ್ಣು ಕುಸಿದಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ.

‘ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮೂರು ತಿಂಗಳಾಯಿತು, ಗುಂಡಿ ತೋಡಿ ಹೋದವರು ಪತ್ತೆ ಇಲ್ಲ. ಗುಂಡಿಗೆ ಮಕ್ಕಳು ಬಿದ್ದರೆ ಅವರನ್ನು ದೇವರೇ ಕಾಪಾಡಬೇಕು’ ಎಂದು ಕಲ್ಲಹಳ್ಳಿ ಮುಖ್ಯರಸ್ತೆ ನಿವಾಸಿ ಶಾರದಮ್ಮ ನೋವು ತೋಡಿಕೊಂಡರು.

‘ಸ್ಥಳೀಯ ಜನಪ್ರತಿನಿಧಿಗಳ ಪ್ರತಿಷ್ಠೆಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗೆ ಉದ್ಘಾಟನಾ ಭಾಗ್ಯ ಬಂದಿಲ್ಲ. ವಿವಿಧೆಡೆ ಜನರು ಕಿರಿಕಿರಿ ಅನುಭವಿಸುತ್ತಿದ್ದು ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಆಗುತ್ತಿಲ್ಲ’ ಎಂದು ನಗರಸಭಾ ಸದಸ್ಯ ಅರುಣ್‌ಕುಮಾರ್‌ ಹೇಳಿದರು.

ನೀರು ಪೂರೈಕೆ, ಒಳಚರಂಡಿ ನಿರ್ಮಾಣ

‘ಅಮೃತ್‌ ಅಡಿ ₹ 123.8 ಕೋಟಿ ವೆಚ್ಚದಲ್ಲಿ ಕೆ.ಆರ್‌.ಎಸ್‌ ನಿಂದ ನಗರಕ್ಕೆ ನೀರು ಪೂರೈಕೆ ಕಾಮಗಾರಿ ನಡೆಯಲಿದೆ. ₹ 7 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಶಂಕುಸ್ಥಾಪನೆಗೆ ಎಲ್ಲ ಸಿದ್ಧತೆ ನಡೆಸಲಾಗಿದೆ. ಚುನಾವಣೆ ಮುಗಿದ ನಂತರ ಕಾಮಗಾರಿಗೆ ಚಾಲನೆ ದಿನಾಂಕ ಪ್ರಕಟಿಸಲಾಗುವುದು’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಮಹಾದೇವು ತಿಳಿಸಿದರು.

ಎಂ.ಎನ್‌.ಯೋಗೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry