ಅತಿ ಉದ್ದದ ಯೋಗ ಸರಪಳಿಗೆ ತಾಲೀಮು

7

ಅತಿ ಉದ್ದದ ಯೋಗ ಸರಪಳಿಗೆ ತಾಲೀಮು

Published:
Updated:
ಅತಿ ಉದ್ದದ ಯೋಗ ಸರಪಳಿಗೆ ತಾಲೀಮು

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ‘ಅತಿ ಉದ್ದದ ಯೋಗ ಸರಪಳಿ’ ರಚಿಸಿ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿರುವ ಜಿಲ್ಲಾಡಳಿತ, ಸುಮಾರು 8,500 ವಿದ್ಯಾರ್ಥಿಗಳನ್ನು ಸೇರಿಸಿ ಅರಮನೆ ಅಂಗಳದಲ್ಲಿ ಶನಿವಾರ ತಾಲೀಮು ನಡೆಸಿತು.

ನಗರದ ವಿವಿಧೆಡೆಯ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ತಾಲೀಮಿನಲ್ಲಿ ಭಾಗ­ವಹಿಸಿದ್ದರು. ‘ಅತಿ ಉದ್ದದ ಯೋಗ ಸರಪಳಿ’ಯನ್ನು ಅರಮನೆ ಆವರಣದಲ್ಲಿ ಜೂನ್‌ 19ರಂದು ನಿರ್ಮಿಸಲಾಗುತ್ತಿದೆ.

ಬೆಳಿಗ್ಗೆ 8.45ರಿಂದಲೇ ಅಂಬಾ­ವಿಲಾಸ ಅರಮನೆಯಲ್ಲಿ ಮಕ್ಕಳ ಕಲರವ ಶುರುವಾಯಿತು. ಬಲರಾಮ, ಜಯಮಾರ್ತಾಂಡ, ವರಾಹ, ಕರಿಕಲ್ಲು ತೊಟ್ಟಿ ದ್ವಾರದ ಮೂಲಕ ಕಿರಿಯ ಯೋಗಪಟುಗಳಿಗೆ ಪ್ರವೇಶ ನೀಡ­ಲಾಯಿತು. ಬ್ಯಾರಿಕೇಡ್‌ ತೆರವುಗೊಳಿಸಿ ತಾಲೀಮಿಗೆ ಸಜ್ಜುಗೊಳಿಸಿದ್ದ ವಿಶಾಲ ಆವರಣದಲ್ಲಿ ವೃತ್ತಾಕಾರದಲ್ಲಿ 30ಕ್ಕೂ ಹೆಚ್ಚು ಗೆರೆಗಳನ್ನು ಹಾಕಿ ಶಿಸ್ತುಬದ್ಧವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡ­ಲಾಯಿತು. ಶಾಲೆಯ ಸಮವಸ್ತ್ರದಲ್ಲಿ ಬಂದಿದ್ದ ಮಕ್ಕಳು ಮೊದಲೇ ನಿಗದಿ­ಪಡಿಸಿದ ಸ್ಥಳದಲ್ಲಿ ಆಸೀನರಾದರು. ಬಣ್ಣ ಬಣ್ಣದ ಬಟ್ಟೆಯಲ್ಲಿದ್ದ ಮಕ್ಕಳು ದೂರದಿಂದ ನೋಡುತ್ತಿದ್ದವರಿಗೆ ಚಿಟ್ಟೆಗಳಂತೆ ಕಂಗೊಳಿಸುತ್ತಿದ್ದರು.

ಪಾಲಿಸಬೇಕಾದ ನಿಯಮಗಳ ಕುರಿತು ಯೋಗ ತರಬೇತುದಾರರು ವಿವರಿಸಿದರು. ಅಗತ್ಯ ಸೂಚನೆಗಳನ್ನು ನೀಡಿ ಮೈದಾನದಲ್ಲಿದ್ದ ಇತರರನ್ನು ಹೊರಗೆ ಕಳುಹಿಸಿದರು. ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರು ತಾಲೀಮಿಗೆ ಚಾಲನೆ ನೀಡಿದರು. ವೃತ್ತದ ಮಧ್ಯಭಾಗದಲ್ಲಿದ್ದ ನುರಿತ ಯೋಗಪಟುಗಳನ್ನು ನೋಡುತ್ತ ವಿವಿಧ ಆಸನಗಳನ್ನು ಮಾಡಿದರು. ಅಲ್ಲಲ್ಲಿ ತರಬೇತುದಾರರು ನಿಂತು ಲೋಪವಾಗದಂತೆ ನೋಡಿಕೊಂಡರು.

ತಮ್ಮ ಬಲಗಾಲನ್ನು ಮತ್ತೊಬ್ಬರ ಎಡಗಾಲಿನೊಂದಿಗೆ ತಳುಕು ಹಾಕಿ ಸರಪಳಿ ನಿರ್ಮಿಸಿದರು. ಕೈ ಮೇಲೆತ್ತಿ ಯೋಗಾಸನಕ್ಕೆ ಸಜ್ಜಾಗಿರುವ ಸೂಚನೆ ನೀಡಿದರು. ದೇಹವನ್ನು ಬಲಕ್ಕೆ ತಿರುಗಿಸಿ ಬಲಗಾಲು ಮಡಚಿ ವೀರಭದ್ರಾಸನದ ವಿವಿಧ ಹಂತಗಳನ್ನು ಪ್ರದರ್ಶಿಸಿದರು. ಎರಡೂ ಕಾಲುಗಳನ್ನು ಅಗಲ ಮಾಡಿ ಬಲಗೈ ಮೇಲೆತ್ತಿ ತ್ರಿಕೋನಾಸನ ಸೇರಿ ನಾಲ್ಕು ಆಸನಗಳನ್ನು ಎಡೂವರೆಯಿಂದ ಮೂರು ನಿಮಿಷಗಳಲ್ಲಿ ಪೂರೈಸಿದರು.

ಶಾಸಕ ಎಂ.ಕೆ.ಸೋಮಶೇಖರ್‌, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಡಿ.ಭಾರತಿ, ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್‌, ಉದ್ಯಮಿ ಸುಧಾಕರ ಶೆಟ್ಟಿ ಇದ್ದರು.

ಒಂದು ಗಂಟೆ ವಿಳಂಬ...

ಮೈಸೂರು: ಯೋಗಾಸನ ಸರಪಳಿಯ ತಾಲೀಮು ಬೆಳಿಗ್ಗೆ 9.30ಕ್ಕೆ ನಿಗದಿಯಾಗಿತ್ತು. ಸಮಯಕ್ಕೆ ಸರಿಯಾಗಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ನಿರೀಕ್ಷೆಗೂ ಮೀರಿ ಮಕ್ಕಳು ಧಾವಿಸಿದ್ದರಿಂದ ಕೊಂಚ ಅಸ್ತವ್ಯಸ್ತ­ವಾಯಿತು. ಹೀಗಾಗಿ ಒಂದು ಗಂಟೆ ವಿಳಂಬವಾಗಿ ತಾಲೀಮು ಆರಂಭವಾಯಿತು. ಬಿಸಿಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿ­ಗಳು ಈ ಹೊತ್ತಿಗೆ ಸುಸ್ತಾಗಿದ್ದರು.

ತಲೆಸುತ್ತು ಕಾಣಿಸಿಕೊಂಡು ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದ. ನೆರವಿಗೆ ಧಾವಿಸಿದ ಶಿಕ್ಷಕರು ಆತನಿಗೆ ಉಪಚರಿಸಿದರು. ಬೆಳಗಿನ ಉಪಾಹಾರ ಸೇವಿಸಿದೆ ಬಂದಿದ್ದು ಇದಕ್ಕೆ ಕಾರಣವಾಗಿತ್ತು.

ಎಚ್‌ಐವಿ ಬಾಧಿತ ಮಕ್ಕಳಿಂದ ಯೋಗ

ಮೈಸೂರು: ಯೋಗ ದಿನಾಚರಣೆ ಅಂಗವಾಗಿ ನಗರದ ರೇಸ್‌ಕೋರ್ಸ್‌ನಲ್ಲಿ ಜೂನ್‌ 21ರಂದು ನಡೆಯುವ ಯೋಗ ಪ್ರದರ್ಶನದಲ್ಲಿ ನಗರದ ‘ಅಮ್ಮ ಮನೆ’ಯ ಎಚ್‌ಐವಿ ಬಾಧಿತ 12 ಮಕ್ಕಳು ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ 18,500 ಮಕ್ಕಳು ಎಚ್ಐವಿ ಬಾಧಿತರಾಗಿದ್ದಾರೆ. ಅವರನ್ನು ಪೋಷಿಸಲು ಅನಂತ ಭಾರತ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಆಸರೆ ಫೌಂಡೇಷನ್‌ ಅಡಿಯಲ್ಲಿ ‘ಅಮ್ಮ ಮನೆ’ ಸ್ಥಾಪಿಸಲಾಗಿದೆ. ನಮ್ಮ ವಸತಿನಿಲಯದ ಮಕ್ಕಳು ಸದೃಢ­ರಾಗಿದ್ದು, ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು ಎಂದು ಅಮ್ಮ ಮನೆ ಸ್ಥಾಪಕ ಎಸ್‌.ಎ.ರಾಮದಾಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2015ರ ಜೂನ್‌ 17ರಂದು ‘ಅಮ್ಮ ಮನೆ’ ಎಂಬ ವಸತಿನಿಲಯ ಆರಂಭಗೊಂಡಿತು. ಇಲ್ಲಿಗೆ ಕರೆತಂದಾಗ 12 ಮಕ್ಕಳೂ ಅಶಕ್ತರಾಗಿದ್ದರು. ಐದು ನಿಮಿಷವೂ ಯೋಗ ಮಾಡಲು ಸಾಧ್ಯವಾ­ಗುತ್ತಿರಲಿಲ್ಲ. ಅತಿಯಾದ ಸುಸ್ತು, ಕೆಮ್ಮು, ನೆಗಡಿ, ವಾಂತಿ, ಜ್ವರ, ದಣಿವು, ತಲೆನೋವು, ಕಣ್ಣಿನ ಸಮಸ್ಯೆ ಕಾಡುತ್ತಿದ್ದವು. ಅಗ್ನಿಹೋತ್ರ, ಸೂರ್ಯಪಾನ, ಯೋಗದ ಮೂಲಕ ಸಶಕ್ತರಾಗಿದ್ದಾರೆ. ಗಿನ್ನಿಸ್‌ ದಾಖಲೆಗಾಗಿ ನಡೆಯು­ತ್ತಿರುವ ಯೋಗ ಪ್ರದರ್ಶನದ ತಾಲೀಮಿ­ನಲ್ಲಿಯೂ ಭಾಗ­ವಹಿಸುತ್ತಿದ್ದಾರೆ ಎಂದರು.

ಚಾಮುಂಡಿ ಬೆಟ್ಟದ 1 ಸಾವಿರ ಮೆಟ್ಟಿಲುಗಳನ್ನು 55 ನಿಮಿಷಗಳಲ್ಲಿ ಹತ್ತುತ್ತಿದ್ದ ಮಕ್ಕಳು, ಕಳೆದ ಡಿಸೆಂಬರ್‌ 1ರ ವಿಶ್ವ ಏಡ್ಸ್‌ ದಿನಾಚರಣೆಯಂದು 16 ನಿಮಿಷಗಳಲ್ಲಿ ಹತ್ತಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಹೀಗೆ ಯೋಗದಿಂದ ಆರೋಗ್ಯ ಯೋಗ ಪಡೆದು­ಕೊಂಡಿದ್ದಾರೆ ಎಂದರು. ನಂತರ ಯೋಗಾಸನ ಪ್ರದರ್ಶಿಸಿದರು. ಯೋಗ ಗುರು ಧ್ರುವನಾರಾಯಣ ಹಾಜರಿದ್ದರು.

* * 

ತಮಿಳುನಾಡಿನಲ್ಲಿ 2014ರಲ್ಲಿ 3,854 ಮಂದಿ ನಿರ್ಮಿಸಿದ ಸರಪಳಿಯೇ ಈವರೆಗಿನ ದಾಖಲೆ. 6,001 ಮಕ್ಕಳ ಸರಪಳಿ ನಿರ್ಮಿಸುವ ಗುರಿ ಹೊಂದಲಾಗಿತ್ತು, ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬರುತ್ತಿದ್ದಾರೆ

ರಂಗರಾಜು, ಯೋಗ ತರಬೇತುದಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry