ರಂಜಾನ್‌ ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ

7

ರಂಜಾನ್‌ ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ

Published:
Updated:
ರಂಜಾನ್‌ ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ

ಮಡಿಕೇರಿ: ‘ರಂಜಾನ್‌ ಬಳಿಕ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು ಬಳಿಕ ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ’ ಎಂದು ಮಾಜಿ ಸಂಸದ ಎಚ್‌. ವಿಶ್ವನಾಥ್‌ ಹೇಳಿದರು. ನಗರದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜೀನಾಮೆಯ ಬಳಿಕ ಬೆಂಬಲಿಗರ ಮಾತಿನಂತೆ ನಡೆದುಕೊಳ್ಳುತ್ತೇನೆ. ಪಕ್ಷದಿಂದ ನನಗೆ ಯಾವುದೇ ನೋವಾಗಿಲ್ಲ. ನಾಯಕರ ನಡವಳಿಕೆಯಿಂದ ಮನಸ್ಸಿಗೆ ಘಾಸಿಯಾಗಿದೆ’ ಎಂದು ನೋವು ತೋಡಿಕೊಂಡರು.

‘ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಹಲವು ಮಂದಿಗೆ ಬೇಸರವಾಗಿದೆ. ಬೇಸರಗೊಂಡವರ ಧ್ವನಿಯಾಗಿ ಮಾತನಾಡುತ್ತಿರುವೆ. ಯಾರನ್ನೂ ರಾಜೀನಾಮೆ ಕೊಟ್ಟು ನನ್ನೊಂದಿಗೆ ಬನ್ನಿ ಎಂದು ಕರೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘1975ರಿಂದಲೂ ಕಾಂಗ್ರೆಸ್‌ ತತ್ವ, ಸಿದ್ಧಾಂತ ಮೈಗೂಡಿಸಿಕೊಂಡು ಬೆಳೆದವ ವ್ಯಕ್ತಿ. ನೇರವಾಗಿ ಮಾತನಾಡಿದರೆ ಕೆಲವರು ಸಹಿಸಿಕೊಳ್ಳುತ್ತಿಲ್ಲ. ಪ್ರಶ್ನೆಯನ್ನೇ ಮಾಡಬಾರದು ಎಂಬುದು ಕೆಲವರ ಧೋರಣೆ. ಕಾಂಗ್ರೆಸ್ ಯಾರ ಸ್ವಂತ ಆಸ್ತಿಯೂ ಅಲ್ಲ; ಅದೊಂದು ಚಳವಳಿ; ಸಾರ್ವಜನಿಕರ ಆಸ್ತಿ’ ಎಂದು ವಿಶ್ವನಾಥ್‌ ಪ್ರತಿಪಾದಿಸಿದರು.

‘ಅಧಿಕಾರ ವಂಚಿತರಾಗಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದರೆ ಅವರೇ ಮಾಲೀಕರಾಗಿದ್ದಾರೆ. ಆಂತರಿಕ ಪ್ರಜಾಪ್ರಭುತ್ವ ಕಣ್ಮರೆಯಾಗಿ, ಪಕ್ಷದಲ್ಲಿ ತುರ್ತು ಪರಿಸ್ಥಿತಿಯಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಮೌನ ವಹಿಸಿದ್ದಾರೆ’ ಎಂದು ನೋವು ತೋಡಿಕೊಂಡರು.

‘ನಾನು ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕನಾಗಿದ್ದವನು. ಉಪ ಚುನಾವಣೆಯಲ್ಲೂ ಕಡೆಗಣಿಸಲಾಯಿತು. ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರು ತೆಗೆದು ಸಿದ್ದರಾಮಯ್ಯ ಪುತ್ರನ ಹೆಸರು ಸೇರಿಸಲಾಯಿತು. ಇಂತಹ ಅವಮಾನವನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ, ಕಾಂಗ್ರೆಸ್‌ ತತ್ವ– ಸಿದ್ಧಾಂತದ ಆಧಾರದ ಮೇಲೆ ನಡೆಯುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಸಹ ಅಸಹಾಯಕರಾಗಿದ್ದಾರೆ. ಹಿಂದಿದ್ದ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ ಸೂಟ್‌ಕೇಸ್‌ ಅನ್ನೇ ನೋಡುತ್ತಿದ್ದರು. ಅಧಿಕಾರದಿಂದ ದೂರವಿಟ್ಟವರನ್ನು ಪಕ್ಷಕ್ಕೆ ಕರೆತಂದು ಮುಖ್ಯಮಂತ್ರಿ ಮಾಡಿದರೆ ಕೃತಜ್ಞತೆ ಇಲ್ಲ. ನಾನೇನು ಗಣಿಗಾರಿಕೆ, ಮರಳು ಹಾಗೂ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿಲ್ಲ. ವಸ್ತುಸ್ಥಿತಿ ಪ್ರಶ್ನಿಸಿದರೆ ದ್ರೋಹ ಎನ್ನುತ್ತಾರೆ’ ಎಂದು ಅಳಲು ತೋಡಿಕೊಂಡರು.

ಮಾಜಿ ಶಾಸಕ ಬಸವರಾಜ್‌ ಮಾತನಾಡಿ, ‘ಎಚ್. ವಿಶ್ವನಾಥ್‌ ಅವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅವರಿಂದ ಅಧಿಕಾರ ಅನುಭವಿಸಿದ ಕೆಲವರು ಧೈರ್ಯ ತುಂಬಲು ಈ ಸಭೆಗೆ ಬರಬೇಕಿತ್ತು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂದು ಭರವಸೆ ನೀಡಿದರು.

ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ನಗರಸಭೆ ಸದಸ್ಯ ಕೆ.ಎಂ. ಗಣೇಶ್‌, ‘ಪಕ್ಷದ ನಾಯಕರೇ ದ್ರೋಹ ಎಸಗಿದರೆ ತಡೆಯಲು ಸಾಧ್ಯವಿಲ್ಲ. ನಾನೂ 30 ವರ್ಷದಿಂದ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವೆ. ವಿಶ್ವನಾಥ್‌ ಅವರು ಕರೆದ ಸಭೆಗೆ ತೆರಳಬಾರದೆಂದು ಸೂಚನೆ ಬಂದಿತ್ತು. ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷರು, ಕೆಎಸ್‌ಆರ್‌ಟಿಸಿ ನಿರ್ದೇಶಕರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಅಧಿಕಾರ ಬರಲು ವಿಶ್ವನಾಥ್‌ ಕಾರಣ; ತಳಮಟ್ಟದ ಕಾರ್ಯಕರ್ತರನ್ನು ಹುಡುಕಿ ಅವರಿಗೆ ಅಧಿಕಾರ ನೀಡಿದ್ದರು’ ಎಂದು ಸ್ಮರಿಸಿದರು.

‘ವಿಶ್ವನಾಥ್‌ ಎಲ್ಲಿಗೇ ಹೋಗಲಿ ಕೊಡಗಿನ ಸಾಕಷ್ಟು ಮಂದಿ ಅವರೊಂದಿಗೆ ಬರಲಿದ್ದಾರೆ’ ಎಂದು ಗಣೇಶ್‌ ಭರವಸೆ ನೀಡಿದರು. ಸಭೆಯಲ್ಲಿ ಮುಖಂಡರಾದ ಶ್ರೀಮತಿ ಬಂಗೇರಾ, ವೀಣಾಕ್ಷಿ, ಮ್ಯಾಥ್ಯೂ, ಸಜು ನಂಜಪ್ಪ, ಅಂಗವಿಕಲರ ಸಂಘದ ಅಧ್ಯಕ್ಷ ಡಿ.ಕೆ. ಸುರೇಶ್ ಹಾಜರಿದ್ದರು.

* * 

ನೋವಿನಿಂದ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ. ರಾಜ್ಯದ ನಾಯಕತ್ವ ದಿವಾಳಿಯಾಗಿದೆ; ಅದನ್ನು ಪ್ರಶ್ನಿಸಿದವರಿಗೇ ನೋಟಿಸ್‌ ಜಾರಿ ಮಾಡುತ್ತಾರೆ

ಎಚ್‌. ವಿಶ್ವನಾಥ್‌

ಮಾಜಿ ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry