ಮಡಿಕೇರಿ; ಮುಂಗಾರು ನಡುವೆ ಸಾಹಿತ್ಯದ ಕಂಪು

7

ಮಡಿಕೇರಿ; ಮುಂಗಾರು ನಡುವೆ ಸಾಹಿತ್ಯದ ಕಂಪು

Published:
Updated:
ಮಡಿಕೇರಿ; ಮುಂಗಾರು ನಡುವೆ ಸಾಹಿತ್ಯದ ಕಂಪು

ಮಡಿಕೇರಿ: ಮುಂಗಾರು ಮಳೆ ನಡುವೆಯೂ ಶನಿವಾರ ಮಡಿಕೇರಿ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಕಳೆಗಟ್ಟಿತ್ತು. ಬೆಳಿಗ್ಗೆ ನಗರದಲ್ಲಿ ಬಿಸಿಲ ವಾತಾವರಣ; ಮಧ್ಯಾಹ್ನದ ಬಳಿಕ ಹೊರಗೆ ಮಳೆ ಸುರಿಯುತ್ತಿದ್ದರೆ ಕಾವೇರಿ ಕಲಾಕ್ಷೇತ್ರದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯದ ವಾತಾವರಣ ಮನೆ ಮಾಡಿತ್ತು...

ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರು, ಹಳೆ ಕೋಟೆ ಆವರಣದಲ್ಲಿ ಸಮ್ಮೇಳನದ ಮೆರವಣಿಗೆಯ ವೈಭವಕ್ಕೆ ಚಾಲನೆ ನೀಡಿದರು. ಬಳಿಕ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ನೀಡಿದರು.

ಸಮ್ಮೇಳನದ ಅಧ್ಯಕ್ಷ ಬಿ.ಎ.ಷಂಶುದ್ದೀನ್‌ ಮಾತನಾಡಿ, ‘ಕೊಡಗಿನಲ್ಲಿ ಸಾಹಿತ್ಯದ ಕೃಷಿ ಕಡಿಮೆ ಇದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ನೂರಾರು ವರ್ಷಗಳ ಹಿಂದಿನಿಂದಲೂ ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಗಟ್ಟಿಯಾದ ನೆಲೆಯಿತ್ತು ಎನ್ನುವುದು ಬಹಳಷ್ಟು ಜನರಿಗೇ  ತಿಳಿದಿಲ್ಲ. ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡಿದೆ’ ಎಂದರು.

‘ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈಚೆಗೆ ಮಹಿಳಾ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ. ಇದರ ಶ್ರೇಯಸ್ಸು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲಬೇಕು’ ಎಂದು ಹೇಳಿದರು.

‘ಭಾಷೆ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಸಾಹಿತ್ಯದ ಬೆಳವಣಿಗೆಯೆಂದರೆ ಭಾಷೆಯ ಬೆಳವಣಿಗೆ. ಕನ್ನಡ ಭಾಷೆ ಬೆಳೆಯಬೇಕಾದರೆ ಕನ್ನಡ ಸಾಹಿತ್ಯ ಸಮೃದ್ಧವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಸಾಹಿತ್ಯ ರಚನೆಯಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದೆ. ಆಯಾ ಸಂಸ್ಥೆಗಳ ಭಾಷಾ ಶಿಕ್ಷಕರು ಮನಸ್ಸು ಮಾಡಿದರೆ ಸಾಹಿತ್ಯದತ್ತ ಮಕ್ಕಳನ್ನು ಆಕರ್ಷಿಸಬಹುದು. ಆದರೆ, ಶಿಕ್ಷಕರಲ್ಲಿಯೇ ಸಾಹಿತ್ಯದ ಪರಿಚಯ ಕಡಿಮೆಯಾಗಿದೆ. ಈ ಹಿಂದೆ ಶಾಲೆಗಳಲ್ಲಿ ಮಾಡುತ್ತಿದ್ದ ಕೈಬರಹ ಪತ್ರಿಕೆ, ಗೋಡೆ ಪತ್ರಿಕೆಗಳನ್ನು ಹೊರತರುವ ಚಟುವಟಿಕೆಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬಹುದು’ ಎಂದು ತಿಳಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ‘ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡದ ಕಡೆಗಣನೆ ಸಲ್ಲದು. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ಜಾತ್ಯತೀತ, ಪಕ್ಷಾತೀತವಾಗಿ ಬೆರೆಯಲು ಸಾಧ್ಯ. ಇಂತಹ ಸಮ್ಮೇಳನಗಳ ಸಂಖ್ಯೆ ಹೆಚ್ಚಾಗಲಿ’ ಎಂದು ಆಶಿಸಿದರು.

‘ಜಿಲ್ಲೆಯ ಬಹಳಷ್ಟು ಮಂದಿ ಶಿಕ್ಷಣ, ಉದ್ಯೋಗ ಅರಸಿ ದೂರದ ಊರಿಗೆ ವಲಸೆ ಹೋಗುತ್ತಿದ್ದಾರೆ. ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೆ. ಬದುಕಿಗೆ ವಿವಿಧ ಬಾಷೆಗಳ ಅಗತ್ಯವಿದ್ದರೂ ಕನ್ನಡ ಭಾಷೆಗೆ ಒತ್ತು ನೀಡುವ ಕೆಲಸ ಆಗಬೇಕು’ ಎಂದು ಪ್ರತಿಪಾದಿಸಿದರು.

‘ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಇಂಗ್ಲಿಷ್ ಕಲಿತರಷ್ಟೇ ಉನ್ನತ ಸ್ಥಾನಮಾನ ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯತ್ತಿದೆ’ ಎಂದು ಶಾಸಕ ಕೆ.ಜಿ. ಬೋಪ್ಪಯ್ಯ ವಿಷಾದಿಸಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ‘ಜಿಲ್ಲೆಯಲ್ಲಿ ಕನ್ನಡ ಮಾತ್ರವಲ್ಲದೆ ಕೊಡವ, ಅರೆಭಾಷೆ,  ತುಳು, ಮರಾಠಿ, ಬ್ಯಾರಿ ಭಾಷೆಗಳನ್ನು ಮಾತನಾಡುವರು ಅನೇಕರಿದ್ದಾರೆ. ಇವರೆಲ್ಲರೂ ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನೇ ಬಳಸುತ್ತಿದ್ದಾರೆ. ಭಾಷೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಕೊಡಗಿನಲ್ಲಿದೆ’ ಎಂದು ಹೇಳಿದರು. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಹೆಗಡೆ, ‘ಭಾಷೆ ಸಂಬಂಧಗಳನ್ನು ಬೆಸೆಯುತ್ತದೆ.

ಆದ್ದರಿಂದ, ಮಾತೃ ಭಾಷೆಯನ್ನು ಮರೆಯಬಾರದು. ಕನ್ನಡ ಭಾಷೆ ಇನ್ನಷ್ಟು ಬೆಳವಣಿಗೆಗೆ ಸಂಬಂಧಿಸಿದಂತೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಕನ್ನಡ ಭಾಷಾ ಅಭಿವೃದ್ಧಿಗೆ ಪಣತೊಡಬೇಕು’ ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ ಶಯನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ತಾಲ್ಲೂಕು ಘಟಕದ ಅಧ್ಯಕ್ಷ ಕುಡೆಕಲ್‌ ಸಂತೋಷ್‌, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತೆಕ್ಕಡೆ ಶೋಭಾ ಮೋಹನ್‌ ಹಾಜರಿದ್ದರು.

‘ಕನ್ನಡ ಮಾಧ್ಯಮದಲ್ಲಿ ಓದಿದರೆ ನಷ್ಟ ಇಲ್ಲ’

ಮಡಿಕೇರಿ:  ‘ಕನ್ನಡವನ್ನು ಪ್ರಯೋಜನಕ್ಕೆ ಬಾರದ ಭಾಷೆ ಎಂದು ಬಿಂಬಿಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ನಷ್ಟ ಇಲ್ಲ. ಯಾವ ಭಾಷೆಯೂ ಇನ್ನೊಂದು ಭಾಷೆಗಿಂತ ಹೆಚ್ಚಲ್ಲ; ನಾಡು– ನುಡಿಯ ಬಗ್ಗೆ ಪ್ರೀತಿ, ಅಭಿಮಾನ ಇರಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಷಂಶುದ್ದೀನ್‌ ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry