ಸಮಾಜ ಸುಧಾರಣೆಗೆ ಪ್ರಾಮಾಣಿಕರ ಸೃಷ್ಟಿ ಅವಶ್ಯ

7

ಸಮಾಜ ಸುಧಾರಣೆಗೆ ಪ್ರಾಮಾಣಿಕರ ಸೃಷ್ಟಿ ಅವಶ್ಯ

Published:
Updated:
ಸಮಾಜ ಸುಧಾರಣೆಗೆ ಪ್ರಾಮಾಣಿಕರ ಸೃಷ್ಟಿ ಅವಶ್ಯ

ತುಮಕೂರು: ‘ಬೇಜವಾಬ್ದಾರಿ ಸಮಾಜ ಸುಧಾರಣೆ ಆಗಬೇಕಾದರೆ ಪ್ರಾಮಾ ಣಿಕರ ಸೃಷ್ಟಿ ಆಗಲೇಬೇಕು’  ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ಶನಿವಾರ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪಾವಗಡದ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೊಸಿಸ್ ಪ್ರತಿಷ್ಠಾನ ಜಂಟಿಯಾಗಿ ಪಾವನ ಗಂಗಾ ಯೋಜನೆಯಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

‘ಪ್ರಾಮಾಣಿಕರಿಗೆ ಸಮಾಜದಲ್ಲಿ ಇರಲು ಬಿಡುವುದಿಲ್ಲ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಕ್ಷೇತ್ರಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಕಾರ್ಯಾಂಗ, ಶಾಸಕಾಂಗದ ನೆರವು ಹುಸಿಯಾದರೆ ನ್ಯಾಯಾಂಗ ತನ್ನ ನೆರವಿಗೆ ಬರಲಿದೆ ಎಂಬ ನಂಬಿಕೆ, ವಿಶ್ವಾಸವಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನ್ಯಾಯದಾನ ವಿಳಂಬದ ಬಗ್ಗೆ ಅಸಮಾಧಾನವಿದೆ. ನ್ಯಾಯ ಸಿಗುವವರೆಗೆ ಕಕ್ಷಿದಾರರು ಬದುಕಿರುತ್ತಾರೊ ಇಲ್ಲವೊ ಎಂಬ ಪರಿಸ್ಥಿತಿ ಇದೆ’ ಎಂದು ಅಭಿಪ್ರಾಯಪಟ್ಟರು.

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಎಲ್ಲ ಸೌಕರ್ಯ, ಸಂಬಳ ಪಡೆದರೂ ತಮ್ಮ ಕರ್ತವ್ಯವನ್ನು ಜನರ ನಿರೀಕ್ಷೆಗೆ ತಕ್ಕಂತೆ, ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡುತ್ತಿಲ್ಲ. ಕಾರ್ಯಾಂಗ ಜನರಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಸೌಕರ್ಯ, ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ಪರಿತಪಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಹೆಣ ಪಡೆಯಲೂ, ಮರ ಣೋತ್ತರ ಪರೀಕ್ಷೆಗೂ ದುಡ್ಡು ಕೊಡುವ ಪರಿಸ್ಥಿತಿ ಕಂಡಿದ್ದೇನೆ ಎಂದು ಹೇಳಿದರು.

‘ಮಾಧ್ಯಮ ಕ್ಷೇತ್ರವೂ ಮೊದಲಿ ನಷ್ಟು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ ಎಂಬುದಕ್ಕೆ ನೀರಾ ರಾಡಿಯಾ ಪ್ರಕರಣವೇ ಉದಾಹರಣೆಯಾಗಿದೆ. ಹಣ ಕೊಟ್ಟು ಬೇಕಾದ ರೀತಿಯಲ್ಲಿ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾದುದು’ ಎಂದು ಎಚ್ಚರಿಕೆ ನೀಡಿದರು.

‘ನ್ಯಾಯಾಧೀಶನಾಗಿದ್ದರೂ ಸಹ ನಿವೃತ್ತಿಯಾಗುವವರೆಗೂ ನಾನು ಕೂಪ ಮಂಡೂಕನಾಗಿದ್ದೆ. ಲೋಕಾಯುಕ್ತನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಮಾಜದ ಒಟ್ಟು ವ್ಯವಸ್ಥೆಯ ಅರಿವಾಯಿತು. ಭ್ರಷ್ಟ ವ್ಯವಸ್ಥೆ ದೂರವಾಗಿಸಬೇಕು, ಪ್ರಾಮಾಣಿಕರನ್ನು ಸೃಷ್ಟಿಸಬೇಕು ಎಂಬ ದಿಶೆಯಲ್ಲಿ ಜನಜಾಗೃತಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ರಾಜ್ಯದ 900ಕ್ಕೂ ಹೆಚ್ಚು ಕಾಲೇಜುಗಳಿಗೆ ಭೇಟಿ ನೀಡಿ ಮಾತನಾಡಿದ್ದೇನೆ’ ಎಂದು ಹೇಳಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಮಾತನಾಡಿ,‘ ಈ ಕಾಲೇಜಿಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶೌಚಾಲಯ ಇಲ್ಲ ಎಂಬುದು ತಿಳಿದು ಬೇಸರವಾಯಿತು. ಹೀಗಾಗಿ ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಶಾಸಕ ರಫೀಕ್ ಅಹಮ್ಮದ್ ಅವರು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

‘ಎರಡೂವರೆ ಸಾವಿರ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿದ್ದಾರೆ. ಕನಿಷ್ಠ ಮೂಲಸೌಕರ್ಯಗಳಾದ ಶುದ್ಧ ನೀರು, ವಾಷ್‌ ರೂಮ್ ವ್ಯವಸ್ಥೆ ಇಲ್ಲದೇ ಇದ್ದರೆ ಹೇಗೆ?’ ಎಂದರು.

‘ಆರೋಗ್ಯ, ಅಕ್ಷರ ಕಡೆಗಣಿಸಿದರೆ ದೇಶದ ಆರೋಗ್ಯವೇ ಹಾಳಾಗುತ್ತದೆ. ಹಾಗೆಯೇ ಹಳ್ಳಿಗಳನ್ನು, ರೈತರನ್ನು ಕಡೆಗಣಿಸಿದರೆ, ರೈತರ ಮಕ್ಕಳಿಗೆ ಸ್ವಾವಲಂಬನೆ ಬದುಕು ಕಲ್ಪಿಸಿ ಕೊಡುವ ಬಗ್ಗೆ ಚಿಂತನೆ ಮಾಡದೇ ಇದ್ದರೆ ದೇಶ ಉಳಿಯುವುದಿಲ್ಲ’ ಎಂದರು.

‘ಈ ಕಾಲೇಜಿನಲ್ಲಿ ಟಿ.ಪಿ.ಕೈಲಾಸಂ, ವಿಜ್ಞಾನಿ ಡಾ.ರಾಜಾ ರಾಮಣ್ಣ, ಡಾ.ಶಿವಕುಮಾರ ಸ್ವಾಮೀಜಿ ಶಿಕ್ಷಣ ಪಡೆದಿದ್ದಾರೆ. ಅದೇ ಪರಂಪರೆಯನ್ನು ಈ ಶಾಲೆ ಮುಂದುವರಿಸಬೇಕು. ಮಹಾನ್ ಸಾಧಕರನ್ನು ಕಾಲೇಜು ಸಮಾಜಕ್ಕೆ ಕೊಡಬೇಕು. ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು’ ಎಂದರು.

ಶಾಸಕ ರಫೀಕ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಎಚ್‌ಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಷಫಿ ಅಹಮ್ಮದ್, ರೆಡ್ಡಿ ಚಿನ್ನಪ್ಪ,   ಬಸವಲಿಂಗಪ್ಪ ಇದ್ದರು. ಪ್ರಾಂಶುಪಾಲ  ಜಯರಾಮಯ್ಯ ಪ್ರಾಸ್ತಾವಿಕ ಮಾತನಾಡಿದರು.

7 ವರ್ಷಗಳಾದರೂ ಏನೂ ಆಗಿಲ್ಲ

‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಕೊಟ್ಟು 7 ವರ್ಷಗಳಾಗಿವೆ. ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದೆ. ಏನೂ ಆಗಿಲ್ಲ. ವಿವಿಧ ಪಕ್ಷಗಳಿಗೆ ಸೇರಿದ 3 ಮುಖ್ಯಮಂತ್ರಿಗಳು, 8 ಸಚಿವರು, 700ಕ್ಕೂ ಹೆಚ್ಚು ಅಧಿಕಾರಿಗಳು, ಅಧಿಕಾರಿಗಳಲ್ಲೇ ಐಎಎಸ್, ಐಪಿಎಸ್ ಅಧಿಕಾರಿಗಳ ಹೆಸರೂ ವರದಿಯಲ್ಲಿವೆ’ ಎಂದು ಸಂತೋಷ್ ಹೆಗ್ಡೆ ಹೇಳಿದರು

ಅವರು ನೀರ್‌ಸಾಬ್... ಇವರು ನೀರ್‌ ಸ್ವಾಮೀಜಿ!

‘ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ನಜೀರ್‌ಸಾಬ್ ಎಂಬ ಸಚಿವರು ಇದ್ದರು. ಅವರು ಜನರಿಗೆ ನೀರು ಕಲ್ಪಿಸಲು ಮಾಡಿದ ಪ್ರಯತ್ನ, ಸಂಕಲ್ಪ ಮೆಚ್ಚಿ ಜನರು ನೀರ್ ಸಾಬ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅದೇ ರೀತಿ ನಮ್ಮ ಪಾವಗಡದ ಸ್ವಾಮಿ ಜಪಾನಂದ ಅವರು ನೀರ್ ಸ್ವಾಮಿ ಎನ್ನಬಹುದು. ಬರೀ ನೀರು ಮಾತ್ರ ಕೊಡುತ್ತಿಲ್ಲ. ದನಕರುಗಳಿಗೆ ಮೇವನ್ನೂ ಕೊಡುತ್ತಿದ್ದಾರೆ. ಅದಕ್ಕಾಗಿ ಮೇವು ಸ್ವಾಮೀಜಿ ಎನ್ನಬಹುದು’ ಎಂದು ಹೆಗ್ಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry