ಪಿಚ್‌ ವಿಶ್ಲೇಷಣೆಗೂ ಡ್ರೋನ್‌!

7

ಪಿಚ್‌ ವಿಶ್ಲೇಷಣೆಗೂ ಡ್ರೋನ್‌!

Published:
Updated:
ಪಿಚ್‌ ವಿಶ್ಲೇಷಣೆಗೂ ಡ್ರೋನ್‌!

ಕ್ರೀಡಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಹೊಸದೇನಲ್ಲ. ಆವಿಷ್ಕಾರಗೊಳ್ಳುವ ಹೊಸ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಎಲ್ಲ ಕ್ರೀಡೆಗಳೂ ರೂಪಾಂತರಗೊಳ್ಳುತ್ತಲೇ ಇವೆ. ಕ್ರಿಕೆಟ್‌ ಕೂಡ ಇದಕ್ಕೆ ಹೊರತಾಗಿಲ್ಲ.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನುಸರಿಸುವುದರಲ್ಲಿ ಕ್ರಿಕೆಟ್‌ ಯಾವಾಗಲೂ ಹಿಂದೆ ಬಿದ್ದಿಲ್ಲ. ಅದರ ಇತಿಹಾಸದ ಮೇಲೆ ಕಣ್ಣು ಹಾಯಿಸಿದರೆ ಇದು ಸ್ಪಷ್ಟವಾಗುತ್ತದೆ. ಇದುವರೆಗೆ ಅಳವಡಿಸಿಕೊಳ್ಳಲಾಗಿರುವ ಬಹುತೇಕ ತಂತ್ರಜ್ಞಾನಗಳು ಕ್ರಿಕೆಟ್‌ಗೆ ಹೊಸ ಆಯಾಮವನ್ನೇ ನೀಡಿವೆ. ಅದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿವೆ. 

ಹಾಕ್‌–ಐ, ಹಾಟ್‌ಸ್ಪಾಟ್‌, ಸ್ಪೈಡರ್‌ ಕ್ಯಾಮೆರಾ, ಪಿಚ್‌ ವಿಷನ್‌ (ಆಟಗಾರರ ಪ್ರದರ್ಶನವನ್ನು ವಿಶ್ಲೇಷಿಸುವ ವ್ಯವಸ್ಥೆ) ಎಲ್‌ಇಡಿ ಬಲ್ಬ್‌ ಹೊಂದಿರುವ ಬೇಲ್‌ಗಳು, ಸ್ನಿಕೊಮೀಟರ್‌, ಸ್ಟಂಪ್‌ ಕ್ಯಾಮೆರಾ, ಸ್ಪೀಡ್‌ ಗನ್‌, ಬೌಲಿಂಗ್‌ ಮೆಶೀನ್‌, ಡಿಆರ್‌ಎಸ್‌... ಕ್ರಿಕೆಟ್‌ ಆಟದಲ್ಲಿ ಸದ್ಯ ಅನು ಸರಿಸಲಾಗುತ್ತಿರುವ ಕ್ರಾಂತಿಕಾರಕ ತಂತ್ರಜ್ಞಾನ ವ್ಯವಸ್ಥೆಗಳ ಸಣ್ಣ ಪಟ್ಟಿ ಇದು.

ಈ ಪಟ್ಟಿಗೆ ಹೊಸ ಸೇರ್ಪಡೆ, ಡ್ರೋನ್ ಆಧರಿತ ಪಿಚ್‌ ವಿಶ್ಲೇಷಣೆ. ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಂಡ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಕ್ರಿಕೆಟ್‌ ಪಂದ್ಯದ ಫಲಿತಾಂಶದಲ್ಲಿ ಪಿಚ್‌ ನಿರ್ವಹಿಸುವ ಪಾತ್ರ ದೊಡ್ಡದು. ಹಾಗಾಗಿ, ಪಂದ್ಯಕ್ಕೂ ಮುನ್ನ ಮಾಡುವ ಪಿಚ್‌ ವಿಶ್ಲೇಷಣೆಗೆ ಹೆಚ್ಚು ಮಹತ್ವ ಇದೆ. ಪಿಚ್‌ ಕಾರಣಕ್ಕೆ ಫಲಿತಾಂಶವೇ ಬುಡಮೇಲಾದ ಹಲವು ಘಟನೆಗಳಿಗೆ ಕ್ರಿಕೆಟ್‌ ಸಾಕ್ಷಿಯಾಗಿದೆ (ಪಿಚ್‌ ಬಗ್ಗೆ ತಂಡಗಳು ಆಕ್ಷೇಪ ವ್ಯಕ್ತಪಡಿಸಿದ್ದೂ ಇವೆ).

ಬಲಿಷ್ಠ ತಂಡದಲ್ಲಿ ಅತಿರಥ ಮಹಾರಥ ಆಟಗಾರರಿದ್ದರೂ ಪಿಚ್‌ ಕೈಕೊಟ್ಟರೆ ಗೆಲುವು ಕೈಜಾರುವುದರಲ್ಲಿ ಸಂಶಯ ಇಲ್ಲ. ಈ ಕಾರಣಕ್ಕಾಗಿಯೇ ಎರಡೂ ತಂಡಗಳು ಪಂದ್ಯಕ್ಕೂ ಮೊದಲು ಪಿಚ್‌ಗಳ ಪರಿಶೀಲನೆಯಲ್ಲಿ ತೊಡಗುತ್ತವೆ. ಪಿಚ್‌ ವರ್ತನೆಯ ಆಧಾರದಲ್ಲೇ ಟಾಸ್‌ ಗೆದ್ದ ಮೇಲೆ ಬ್ಯಾಟಿಂಗ್‌ ಆಯ್ದುಕೊಳ್ಳಬೇಕೋ ಅಥವಾ ಬೌಲಿಂಗೋ ಎಂಬುದನ್ನು ತಂಡಗಳು ನಿರ್ಧರಿಸುತ್ತವೆ.

ಪಂದ್ಯದ ನೇರಪ್ರಸಾರದ ಸಂದರ್ಭದಲ್ಲಿಯೂ ಟಿವಿ ಮುಂದೆ ಕುಳಿತುಕೊಳ್ಳುವ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಪಿಚ್‌ ವಿಶ್ಲೇಷಣೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾರೆ.

ಪಂದ್ಯದ ಗತಿ ಬದಲಿಸಬಲ್ಲ ಪಿಚ್‌ ಅನ್ನು ವಿಶ್ಲೇಷಿಸಲು ಇದುವರೆಗೂ ಸಾಮಾನ್ಯ ಕ್ಯಾಮೆರಾಗಳನ್ನೇ ಬಳಸಲಾಗುತ್ತಿತ್ತು. ಈ ಸಲದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈ ಉದ್ದೇಶಕ್ಕೆ ಅತ್ಯಾಧುನಿಕ ಡ್ರೋನ್‌ ಅನ್ನು ಬಳಸಲಾಗಿದೆ.

ಏನು ಮಾಡುತ್ತದೆ?: ಮಾಹಿತಿ ತಂತ್ರಜ್ಞಾನ ದೈತ್ಯ ಕಂಪೆನಿ ಇಂಟೆಲ್‌  ಈ ಅತ್ಯಾಧುನಿಕ ಡ್ರೋನ್‌ ಅನ್ನು ರೂಪಿಸಿದೆ. ಹೆಸರು ‘ಇಂಟೆಲ್‌ ಫಾಲ್ಕನ್‌ 8–ಡ್ರೋನ್‌’.

ಇನ್‌ಫ್ರಾರೆಡ್‌ ಮತ್ತು ಅತ್ಯಂತ ಹೆಚ್ಚು ಸ್ಫುಟವಾಗಿರುವ (ಹೈ–ಡೆಫಿನಿಷನ್‌) ಚಿತ್ರಗಳನ್ನು  ತೆಗೆಯಬಲ್ಲ ಕ್ಯಾಮೆರಾಗಳನ್ನು ಹೊಂದಿರುವ ಈ ಡ್ರೋನ್‌, ಪಿಚ್‌ ಮೇಲ್ಭಾಗದಲ್ಲಿ ಹಾರುತ್ತಾ ಅದರ ಚಿತ್ರಗಳನ್ನು ಸೆರೆ ಹಿಡಿದು  ಪಿಚ್‌ನಲ್ಲಿರುವ ಹುಲ್ಲಿನ ಪ್ರಮಾಣ, ಹುಲ್ಲುಗಳ ಸ್ಥಿತಿ ಮತ್ತು ಪಿಚ್‌ನ ಗುಣಲಕ್ಷಣಗಳ ಬಗ್ಗೆ ಸಮಗ್ರ ದತ್ತಾಂಶಗಳನ್ನು ಕಲೆ ಹಾಕುತ್ತದೆ.

ಈ ಮಾಹಿತಿಗಳ ಆಧಾರದಲ್ಲಿ ಪ್ರತಿ ದಿನ ಪಿಚ್‌ ಬಗೆಗಿನ ವರದಿ ಸಿದ್ಧಪಡಿಸಲಾಗುತ್ತದೆ. ಟಿವಿ/ಇಂಟರ್‌ನೆಟ್‌ಗಳಲ್ಲಿ ಪಂದ್ಯ ನೇರಪ್ರಸಾರವಾಗುವ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರರು ಕೂಡ ಇದೇ ದತ್ತಾಂಶಗಳನ್ನು ಇಟ್ಟುಕೊಂಡು  ಪಿಚ್‌ ವಿಶ್ಲೇಷಣೆ ಮಾಡುತ್ತಾರೆ.

ಡ್ರೋನ್‌ ನೀಡುವ ಮಾಹಿತಿಗಳು ಸ್ಪಷ್ಟವಾಗಿ ಮತ್ತು ಸಮಗ್ರವಾಗಿರುವುದರಿಂದ ಹೆಚ್ಚು ನಿಖರವಾದ ವಿಶ್ಲೇಷಣೆ ಸಾಧ್ಯ ಎಂಬುದು ಕ್ರಿಕೆಟ್‌ ಪಂಡಿತರು ಹೇಳುತ್ತಾರೆ.

ಇನ್ನೂ ಎರಡು ತಂತ್ರಜ್ಞಾನ

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇಂಟೆಲ್‌ ಕಂಪೆನಿ ಅಭಿವೃದ್ಧಿಪಡಿಸಿರುವ ಇನ್ನೂ ಎರಡು ತಂತ್ರಜ್ಞಾನಗಳನ್ನು ಬಳಸಲಾಗಿದೆ.  ಒಂದು, ಬ್ಯಾಟ್‌ ಸೆನ್ಸರ್‌. ಇನ್ನೊಂದು ವಿಆರ್‌ (ವರ್ಚ್ಯುವಲ್ ರಿಯಾಲಿಟಿ–ವಾಸ್ತವವನ್ನೇ ಹೋಲುವ) ತಂತ್ರಜ್ಞಾನ.

ಬ್ಯಾಟ್‌ ಸೆನ್ಸರ್‌: ‘ಸ್ಪೆಕ್ಯುಲುರ್‌ ಬ್ಯಾಟ್‌ಸೆನ್ಸ್‌’ ಎಂಬ ಹೆಸರಿನ ಈ ಸೆನ್ಸರ್‌ಗಳನ್ನು ಆಟಗಾರರ ಬ್ಯಾಟ್‌ಗಳಲ್ಲಿ ಅಳವಡಿಸಲಾಗುತ್ತದೆ. ಇದು  ಆಟಗಾರರ ಬ್ಯಾಟಿಂಗ್‌ ಶೈಲಿಯ ಸಂಪೂರ್ಣ ಚಿತ್ರಣವನ್ನು (ಬ್ಯಾಟ್‌ ಬೀಸಿದ ವೇಗ, ಕೋನದ ಮಾಹಿತಿ ಇತ್ಯಾದಿ) ಕಟ್ಟಿಕೊಡುತ್ತದೆ. ವಿಶೇಷವೆಂದರೆ, ಈ ಸೆನ್ಸರ್‌ಗಳನ್ನು ರೂಪಿಸಿದ್ದು ಬೆಂಗಳೂರಿನ ‘ಸ್ಪೆಕ್ಯುಲುರ್‌’ ಎಂಬ ನವೋದ್ಯಮ (ಸ್ಟಾರ್ಟ್‌ಅಪ್‌) ಸಂಸ್ಥೆ!

ವಿಆರ್‌ ತಂತ್ರಜ್ಞಾನ: ಕ್ರಿಕೆಟ್‌ ಪ್ರೇಮಿಗಳಿಗೆ ಆಟದ ಸವಿಯನ್ನು ಅನುಭವಿಸಲು ಅವಕಾಶ ನೀಡುವ ಉದ್ದೇಶದಿಂದ ಇಂಟೆಲ್‌ ಕಂಪೆನಿ ವರ್ಚ್ಯುವಲ್‌ ರಿಯಾಲಿಟಿ  ತಂತ್ರಜ್ಞಾನ ರೂಪಿಸಿದೆ.

ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳು ನಡೆದಿದ್ದ ಓವಲ್‌ ಮತ್ತು ಎಜ್‌ಬಾಸ್ಟನ್‌ ಕ್ರೀಡಾಂಗಣಗಳಲ್ಲಿ ವಿಆರ್‌ ವಲಯವನ್ನು ಸೃಷ್ಟಿಸಲಾಗಿತ್ತು. ಇಲ್ಲಿ ಜನರು ವರ್ಚ್ಯುವಲ್‌ ರಿಯಾಲಿಟಿಯಲ್ಲಿ ಕ್ರಿಕೆಟ್‌ ಆಡಬಹುದಿತ್ತು.

ಇದೊಂದು ಮೋಜಿನ ಆಟವಾಗಿದ್ದು, ಇದಕ್ಕಾಗಿ ವಿಆರ್‌ ಹೆಡ್‌ಸೆಟ್‌ ಅನ್ನು ಜನರು ಹಾಕಿಕೊಳ್ಳಬೇಕಾಗುತ್ತದೆ. ವರ್ಚ್ಯುವಲ್‌ ಬೌಲರ್‌ಗಳ ಮುಂದೆ ತಮ್ಮ ಬ್ಯಾಟಿಂಗ್‌ ಕೌಶಲವನ್ನು ಅವರು ಪ್ರದರ್ಶಿಸುವುದಕ್ಕೆ ಇದರಲ್ಲಿ ಅವಕಾಶ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry