ಸಾಧನೆಯ ಹೊಸ ಭರವಸೆ...

7

ಸಾಧನೆಯ ಹೊಸ ಭರವಸೆ...

Published:
Updated:
ಸಾಧನೆಯ ಹೊಸ ಭರವಸೆ...

‘ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್‌ ಪದಕದ ಸನಿಹ ಬಂದಾಗ ಆ ಸ್ಪರ್ಧೆಯನ್ನು ಕಣ್ಣು ಮಿಟುಕಿಸದೇ ನೋಡಿದ್ದೆವು. ನಮ್ಮ ಹಾಸ್ಟೆಲಿನ ವಿದ್ಯಾರ್ಥಿಗಳು ತಾವೇ ಪದಕದ ಸನಿಹ ಬಂದಂತೆ ಕುತೂಹಲದಿಂದ ದೀಪಾ ಸಾಹಸ ನೋಡುತ್ತಿದ್ದರು. ಅವರು ಪದಕ ಗೆಲ್ಲಲಿಲ್ಲ ನಿಜ, ಆದರೆ ಜಿಮ್ನಾಸ್ಟಿಕ್ಸ್‌ನಲ್ಲಿನ ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ...’

ಧಾರವಾಡದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜೂನಿಯರ್‌ ವಸತಿ ನಿಲಯದಲ್ಲಿ ಜಿಮ್ನಾಸ್ಟಿಕ್ಸ್‌ ಕೋಚ್‌ ಆಗಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿರುವ ರಮೇಶ್‌ ಗಟನೆಟ್ಟಿ ಅವರು ಹೇಳಿದ ಮಾತಿದು.

ತ್ರಿಪುರದ ದೀಪಾ ಅವರು ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಚರಿತ್ರೆ ಬರೆದಿದ್ದಾರೆ. ಅವರ ಈ ಸಾಧನೆ ಭಾರತದ ಅನೇಕರಿಗೆ ಪ್ರೇರಣೆಯಾಗಿದೆ. ಜಿಮ್ನಾಸ್ಟಿಕ್ಸ್‌ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ಕಲಿಯುತ್ತಿರುವ ಅನೇಕ ಮಕ್ಕಳು ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ. ಧಾರವಾಡದಲ್ಲಿಯೂ ಈ ಕ್ರೀಡೆಯ ಬೇರುಗಳು ಹರಡಿವೆ.

ಹೋದ ವರ್ಷ ಇಲ್ಲಿನ ಹಾಸ್ಟೆಲಿನ ಸ್ಪರ್ಧಿಗಳು ಶಾಲಾ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಜಯಿಸಿದ್ದರು. ಮುಂಬರುವ ಶಾಲಾ ಕೂಟ ಮತ್ತು ದಸರಾ ಸ್ಪರ್ಧೆಗಾಗಿ ಈಗಾಗಲೇ ಕಸರತ್ತು ಆರಂಭಿಸಿದ್ದಾರೆ. ಇಲ್ಲಿನ ಜಿಮ್ನಾಸ್ಟಿಕ್ಸ್‌ನಲ್ಲಿ ಆದ ಬೆಳವಣಿಗೆ, ಮುಂದಿನ ಯೋಜನೆಗಳ ಬಗ್ಗೆ ಜಿಮ್ನಾಸ್ಟಿಕ್ಸ್‌ ಕೋಚ್‌ ರಮೇಶ್ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಎಂಟು ವರ್ಷಗಳಿಂದ ಕೋಚ್‌ ಆಗಿ ಕೆಲಸ ಮಾಡುತ್ತಿದ್ದೀರಿ. ಜಿಮ್ನಾಸ್ಟಿಕ್ಸ್‌ನಲ್ಲಿ ಹಾಸ್ಟೆಲ್‌ನ ವಿದ್ಯಾರ್ಥಿಗಳ ಬೆಳವಣಿಗೆ ಹೇಗಿದೆ? 

ವಾರ್ಷಿಕ ಇಂತಿಷ್ಟೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ನಿಯಮ ಇರುವ ಕಾರಣ ಈ ಬಾರಿ 16 ವಿದ್ಯಾರ್ಥಿಗಳು (8 ಬಾಲಕ ಮತ್ತು 8 ಬಾಲಕಿಯರು) ಜಿಮ್ನಾಸ್ಟಿಕ್ಸ್‌ ತರಬೇತಿಗೆ ಆಯ್ಕೆಯಾಗಿದ್ದಾರೆ. ಮಿತಿ ಹೆಚ್ಚಿಸಿದರೆ ಇನ್ನಷ್ಟು ವಿದ್ಯಾರ್ಥಿಗಳು ಬರುತ್ತಾರೆ.

ಧಾರವಾಡ ಜಿಲ್ಲೆಯ ಕಲಘಟಗಿ, ಕುಂದಗೋಳ, ನವಲಗುಂದದ ಮಕ್ಕಳು ಬಂದಿದ್ದಾರೆ. ಯುವ ಪ್ರತಿಭೆಗಳು ಸಾಹಸ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದೀಪಾ ಕರ್ಮಾಕರ್‌ ಐತಿಹಾಸಿಕ ಸಾಧನೆಯ ಬಳಿಕ ಸಾಕಷ್ಟು ಜನ ಈ ಕ್ರೀಡೆಯತ್ತ ಮುಖಮಾಡಿದ್ದಾರೆ. 2006 ರಲ್ಲಿ ಹಾಸ್ಟೆಲ್‌ ಆರಂಭವಾಯಿತು. ಆಗಿ ನಿಂದಲೂ ತರಬೇತಿ ನಡೆಯುತ್ತಿದೆ.

*ಯಾವ ವಿಭಾಗಗಳಲ್ಲಿ ತರಬೇತಿ ನೀಡುತ್ತೀರಿ?

ಬಾಲಕ ಮತ್ತು ಬಾಲಕಿಯರಿಗೆ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಬಗ್ಗೆ ಹೇಳಿ ಕೊಡುತ್ತೇನೆ. ಬಾಲಕಿಯರ ವಿಭಾಗದಲ್ಲಿ ವಾಲ್ಟ್‌, ಬ್ಯಾಲೆನ್ಸ್‌ ಬೀಮ್‌, ಫ್ಲೋರ್‌ ಸ್ಪರ್ಧೆಗಳಿಗೆ, ಬಾಲಕರ ವಿಭಾಗದಲ್ಲಿ ಫ್ಲೋರ್‌, ಪೊಮೆಲ್‌ ಹಾರ್ಸ್‌, ರಿಂಗ್ಸ್‌, ವಾಲ್ಟ್‌, ಪ್ಯಾರಲಲ್‌ ಬಾರ್‌್ ಮತ್ತು ಹಾರಿಜೆಂಟಲ್‌ ಬಾರ್‌್ ಬಗ್ಗೆ ತರಬೇತಿ ನೀಡಲಾಗುತ್ತದೆ.

*ನಿತ್ಯ ಅಭ್ಯಾಸದ ಕ್ರಮ ಹೇಗಿರುತ್ತದೆ?

ಬೆಳಿಗ್ಗೆ 6.30ರಿಂದ 8.30ರ ತನಕ, ಸಂಜೆ 5ರಿಂದ 7 ಗಂಟೆ ತನಕ ಒಳಾಂಗಣ ಅಂಕಣದಲ್ಲಿ ತರಬೇತಿ ನೀಡುತ್ತೇನೆ.

*ಅಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಇವೆಯೇ?

ಸೌಲಭ್ಯಗಳ ವಿಷಯದ ಬಗ್ಗೆ ಮಾತನಾಡಲು ಬೇಸರವಾಗುತ್ತದೆ. ಇದು ನಮ್ಮಲ್ಲಿರುವ ಸಮಸ್ಯೆ ಮಾತ್ರವಲ್ಲ. ಭಾರತದಲ್ಲಿಯೇ ಜಿಮ್ನಾಸ್ಟಿಕ್ಸ್‌ಗೆ ಸೌಲಭ್ಯಗಳ ಕೊರತೆಯಿದೆ. ಆದ ಕಾರಣ ನಮ್ಮವರು ಬೇರೆ ದೇಶಗಳಿಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಧಾರವಾಡದ ಮಟ್ಟಿಗೆ ಹೇಳಬೇಕಾದರೆ ಒಳಾಂಗಣ ಮತ್ತು ಹೊರಾಂಗಣ ಎರಡೂ ಕಡೆ ಅಭ್ಯಾಸ ನಡೆಸಲು ಅನುಕೂಲವಿದೆ. ನಿತ್ಯ ಬೆಳಿಗ್ಗೆ ಹೊರಾಂಗಣದಲ್ಲಿಯೇ ಅಭ್ಯಾಸ ಮಾಡುತ್ತಾರೆ. ಮಳೆ ಬಂದರೆ ತಾಲೀಮು ನಡೆಸಲು ತೊಂದರೆಯಾಗುತ್ತದೆ. ಆದ್ದ ರಿಂದ ಪ್ರತ್ಯೇಕ ಹಾಲ್‌ ಇದ್ದರೆ ಉತ್ತಮ. ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ನಂಥ ಕ್ರೀಡಾ ಕೂಟಗಳಲ್ಲಿ ಪದಕದ ಸಾಧನೆ ಮೂಡಿ ಬರಬೇಕಾದರೆ ಉತ್ತಮ ಸೌಲಭ್ಯಗಳು ಬೇಕು.

*ಜಿಮ್ನಾಸ್ಟಿಕ್ಸ್‌ನಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳ ಸಾಧನೆ ಏನು?

ಹೋದ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಕೂಲ್‌ ಗೇಮ್ಸ್ ಆಫ್‌ ಫೆಡರೇಷನ್‌ ಕ್ರೀಡಾಕೂಟದ ವಾಲ್ಟಿಂಗ್ ಟೇಬಲ್‌ ಮತ್ತು ಬ್ಯಾಲನ್ಸ್ ಬೀಮ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಅಶ್ವಿನಿ ಪದಕ ಜಯಿಸಿದ್ದಳು. ದಸರಾ ಕ್ರೀಡಾ ಕೂಟದಲ್ಲಿ  ಉತ್ತಮ ಸಾಮರ್ಥ್ಯ ನೀಡಿ ದ್ದಳು. ಇದೇ ಆಗಸ್ಟ್‌ನಲ್ಲಿ ಮತ್ತೆ ಶಾಲಾ ಕ್ರೀಡಾಕೂಟ ನಡೆಯಲಿದ್ದು ಆ ಕೂಟಕ್ಕೆ ತಯಾರಿ ನಡೆಯುತ್ತಿದೆ.

ವರ್ಷಕ್ಕೆ ಈ ಎರಡು ಕ್ರೀಡಾ ಕೂಟಗಳನ್ನು ಬಿಟ್ಟರೆ ಬೇರೆ ಸ್ಪರ್ಧೆಗಳೇ ಇರುವುದಿಲ್ಲ. ಸ್ಪರ್ಧೆಯ ಗುಣಮಟ್ಟ ಹೆಚ್ಚಲು ಹೆಚ್ಚು ಟೂರ್ನಿಗಳು ನಡೆಯಬೇಕು.

*ಜಿಮ್ನಾಸ್ಟಿಕ್ಸ್‌ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆಯಾದ ಕಾರಣ ಇದೇ ಕ್ರೀಡೆಯಲ್ಲಿ ಎಲ್ಲರೂ ಮುಂದುವರಿಯುತ್ತಾರೆಯೇ?

ನಮ್ಮಲ್ಲಿ ಸಮಸ್ಯೆ ಆಗುತ್ತಿರುವುದೇ ಇದು. ಒಂದು ಹಂತ ದವರೆಗೆ ಮಾತ್ರ  ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳು ತ್ತಾರೆ. ನಂತರ ದೇಹ ಭಾಗಿಸಲು, ಒಂದೇ ಕಡೆ ಗಮನ ವಹಿಸಿ ಸಾಹಸ ತೋರಿಸಲು ದೇಹ ಸ್ಪಂದಿಸುವುದಿಲ್ಲ. ಕ್ರೀಡಾಪಟು ಗಳಲ್ಲಿ ಆಸಕ್ತಿ ಇದ್ದರೂ ಅವರಲ್ಲಿ ಆಗುವ ದೈಹಿಕ ಬದಲಾವಣೆಗಳು ಅವಕಾಶ ಕೊಡುವುದಿಲ್ಲ. ಆದ್ದರಿಂದ ಬೇರೆ ಕ್ರೀಡೆಗಳತ್ತ ಮುಖಮಾಡುವವರೇ ಹೆಚ್ಚು.

ವಸತಿ ನಿಲಯದಲ್ಲಿರುವ ಜಿಮ್ನಾಸ್ಟಿಕ್ಸ್‌ ಕ್ರೀಡಾಪಟುಗಳು

ಬಾಲಕರು:
ವೀರೇಶ, ತೌಫಿಕ್‌, ಮಲ್ಲಿಕಾರ್ಜುನ ಅಮರಗೋಳ, ಗುರುನಾಥ, ಸಂಜಯ, ಮಂಜುನಾಥ ಬೆಳಗಾವ್‌, ಸಚಿನ್‌ ನರಗುಂದ

ಬಾಲಕಿಯರು: ಅಶ್ವಿನಿ ಪಾಟೀಲ, ಜ್ಯೋತಿ, ಪ್ರೀತಿ ಕಡದಳ್ಳಿ, ಪ್ರಿಯಾಂಕ, ನೇತ್ರಾ ಪತ್ತಾರ, ನೇತ್ರಾ ಹಾನಗಲ್‌, ಯಶಸ್ಸಿನಿ, ಅಂಕಿತಾ ಮಲ್ಲಿಗವಾಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry