ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರ ಪ್ರಯೋಗ...

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

‘ಮಹಿಳೆಯರೂ ಕ್ರಿಕೆಟ್‌ ಆಡುತ್ತಾರೆ ಎಂಬ ವಿಚಾರ ಗ್ರಾಮೀಣ ಭಾಗದ ಅನೇಕರಿಗೆ ಇನ್ನೂ ಗೊತ್ತಿಲ್ಲ. ಕ್ರಿಕೆಟ್‌ ಆಡಬೇಕೆಂಬ ಆಸೆ ಹಲವು ಹುಡುಗಿಯರಿಗೆ ಇದೆ. ಆದರೆ, ಅದಕ್ಕೊಂದು ಸರಿಯಾದ ವೇದಿಕೆಯೇ ಲಭಿಸುತ್ತಿಲ್ಲ. ಕಾಲೇಜುಗಳಲ್ಲಿಯೂ ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಿಲ್ಲ.

ಮಹಿಳೆಯರ ಟೂರ್ನಿ ಆಯೋಜನೆ ಸಂಬಂಧ ಕ್ರಿಕೆಟ್‌ ಸಂಸ್ಥೆ ಕಾಳಜಿಯೂ ಅಷ್ಟಕಷ್ಟೆ. ಹೀಗಾಗಿ, ನಮ್ಮಲ್ಲಿ ಹೊಳೆದಿದ್ದು ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿ ಆಯೋಜನೆ’ –ಹೀಗೆಂದು ಹೇಳಿದ್ದು ರಾಜ್ಯ ಕ್ರಿಕೆಟ್‌ ತಂಡದ ಉತ್ಸಾಹಿ ಯುವತಿಯರು. ವಿವಿಧ ಹಂತಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ತಂಡವನ್ನು ಪ್ರತಿನಿಧಿಸಿರುವ ಏಳೆಂಟು ಯುವತಿಯರೇ ಸೇರಿ ಈಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿ ವಿಶಿಷ್ಟ ಪ್ರಯೋಗವಾಗಿ ಹೊರಹೊಮ್ಮಿತು.

ವಿ.ಆರ್‌.ವನಿತಾ, ರಕ್ಷಿತಾ ಕೆ., ರಾಜೇಶ್ವರಿ ಗಾಯಕ್ವಾಡ್‌, ಪ್ರತ್ಯೂಷಾ ಚೆಲ್ಲೂರ್‌, ಪುಷ್ಪಾ ಕಿರೇಸೂರ್‌, ಸಂಜನಾ, ಸಹನಾ ಪವಾರ್‌, ಆಕಾಂಕ್ಷಾ ಕೊಹ್ಲಿ, ಸುಧಾ ಅವರೆಲ್ಲಾ ಒಂದೆಡೆ ಸೇರಿಸಿ ಸಮಾಲೋಚನೆ ನಡೆಸಿದ ಪ್ರತಿಫಲವೇ ಈ ಟೂರ್ನಿ. ವಿವಿಧ ರಾಜ್ಯಗಳ ಸುಮಾರು 100 ಆಟಗಾರ್ತಿಯರನ್ನು ಒಟ್ಟುಗೂಡಿಸಿ ಎಂಟು ತಂಡಗಳನ್ನಾಗಿ ಮಾಡಿಕೊಂಡು ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಐದು ದಿನ ಈ ಟೂರ್ನಿ ನಡೆಸಿದರು. ಹೆಚ್ಚಾಗಿ ರೈಲ್ವೆ ತಂಡಗಳ ಆಟಗಾರ್ತಿಯರು ಬಂದಿದ್ದರು. ಕರ್ನಾಟಕದಿಂದಲೂ ಎರಡು ತಂಡಗಳು ಇದ್ದವು. ಭಾರತ ತಂಡದಲ್ಲಿ ಆಡಿದ ಆಟಗಾರ್ತಿಯರೂ ಇದ್ದರು.

ಯುವತಿಯರೇ ವಿವಿಧ ಸಂಘ ಸಂಸ್ಥೆಗಳು, ಕಂಪೆನಿಗಳಿಂದ ಪ್ರಾಯೋಜಕತ್ವ ಪಡೆದು ಈ ಟೂರ್ನಿ ಆಯೋಜಿಸಿದ್ದು ವಿಶೇಷ. ಅಲ್ಲದೆ, ಚಾಂಪಿಯನ್‌ ಆದ ತಂಡಕ್ಕೆ ₹ 50 ಸಾವಿರ, ರನ್ನರ್‌ ಅಪ್‌ ತಂಡಕ್ಕೆ ₹ 25 ಸಾವಿರ ಬಹುಮಾನ ನೀಡಿದರು. ಉತ್ತಮ ಸಾಧನೆ ಮಾಡಿರುವ ಆಟಗಾರ್ತಿಯರನ್ನು ಸನ್ಮಾನಿಸಲಾಯಿತು. ಎಲ್ಲಾ ಆಟಗಾರ್ತಿಯರಿಗೆ ಉಚಿತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಹಿಳೆಯರಲ್ಲಿ ಕ್ರಿಕೆಟ್‌ ಆಡುವ ಉತ್ಸಾಹವಿದೆ. ಗ್ರಾಮೀಣ ಭಾಗದ ಹುಡುಗಿಯರೂ ಈಚಿನ ದಿನಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮಂಡ್ಯದ ಮಳವಳ್ಳಿಯಿಂದ ಬಂದ ರಕ್ಷಿತಾ ಅವರು ರಾಜ್ಯ ಟ್ವೆಂಟಿ–20 ಕ್ರಿಕೆಟ್‌ ತಂಡದ ನಾಯಕಿಯಾಗಿದ್ದೇ ಅದಕ್ಕೊಂದು ಸಾಕ್ಷಿ. ಆದರೆ, ಅವರ ಆಸೆಗೆ ತಕ್ಕಂತೆ ಟೂರ್ನಿಗಳೇ ನಡೆಯುತ್ತಿಲ್ಲ.

ಸರಿಯಾದ ವೇದಿಕೆ ಹಾಗೂ ಪ್ರೋತ್ಸಾಹ ಸಿಗುತ್ತಿಲ್ಲ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಕ್ರಿಕೆಟ್‌ ತಂಡಗಳೇ ಇಲ್ಲ. ರಾಷ್ಟ್ರಮಟ್ಟದಲ್ಲೂ ಮಹಿಳೆಯರ ಟೂರ್ನಿಗಳು ಕಡಿಮೆ. ಅಂತರರಾಜ್ಯ ಮಹಿಳಾ ಏಕದಿನ ಹಾಗೂ ಟ್ವೆಂಟಿ–20 ಟೂರ್ನಿ ವರ್ಷಕ್ಕೊಮ್ಮೆ ನಡೆಯುತ್ತಿವೆ ಅಷ್ಟೆ. ರಾಜ್ಯದಲ್ಲಿ ನಡೆಯುವ ಲೀಗ್‌ ಟೂರ್ನಿಗಳೂ ಕಡಿಮೆ.

‘ನಮ್ಮೂರಲ್ಲಿ ಹುಡುಗಿಯರು ಕ್ರಿಕೆಟ್ ಆಡುತ್ತಿರಲಿಲ್ಲ. ಹೀಗಾಗಿ, ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಸೇರಿ ಕ್ರಿಕೆಟ್‌ ಆಡುತ್ತಿದ್ದೆ. ಇದನ್ನು ಕಂಡು ಕೆಲವರು ಹೀಯಾಳಿಸುತ್ತಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿದ ನಾನು ರಾಜ್ಯ ಕ್ರಿಕೆಟ್‌ ತಂಡದಲ್ಲಿ ಆಡಲೇಬೇಕು ಎಂಬ ಛಲದಲ್ಲಿ ಅಭ್ಯಾಸ ನಡೆಸಿದೆ. ಆ ಕನಸು ನನಸಾಯಿತು’ ಎಂದು ರಕ್ಷಿತಾ ಹೇಳುತ್ತಾರೆ.

‘ಪುರುಷ ಕ್ರಿಕೆಟಿಗರ ರೀತಿ ಮಹಿಳಾ ಕ್ರಿಕೆಟಿಗರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಅವರಿಗೆ ಎಷ್ಟೊಂದು ಪ್ರಾಯೋಜಕರು ಇರುತ್ತಾರೆ. ಆದರೆ, ನಮ್ಮತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಇದೇ ಉದ್ದೇಶದಿಂದ ಮಹಿಳಾ ಕ್ರಿಕೆಟ್‌ ಟೂರ್ನಿ ಆಯೋಜಿಸಿ ಸಣ್ಣ ಪ್ರಯೋಗ ನಡೆಸಿದ್ದೇವೆ. ಇದು ಯಶಸ್ವಿಯಾಗಿದೆ. ಪ್ರಾಯೋಜಕರನ್ನು ನಾವೇ ಹುಡುಕಿಕೊಂಡೆವು. ಇದಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಸ್ಪೋರ್ಟ್ಸ್‌ ಕೌನ್ಸಿಲ್‌ ವತಿಯಿಂದ ಬೆಂಬಲ ದೊರೆತಿದೆ. ಮುಂದೆಯೂ ಇದೇ ರೀತಿ ಟೂರ್ನಿಗಳನ್ನು ನಡೆಸುತ್ತಾ ಇರುತ್ತೇವೆ’ ಎಂದು ಅವರು ನುಡಿಯುತ್ತಾರೆ.

‘ಗ್ರಾಮೀಣ ಪ್ರದೇಶದಲ್ಲಿ ಟೂರ್ನಿ ಆಯೋಜಿಸಬೇಕೆಂಬ ಉದ್ದೇಶದಿಂದ ಮೈಸೂರು ಆಯ್ಕೆ ಮಾಡಿಕೊಂಡೆವು. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರ ನಡೆಸಿದೆವು. ವಿವಿಧ ರಾಜ್ಯಗಳ ಆಟಗಾರ್ತಿಯರಿಂದ ಉತ್ತಮ ಬೆಂಬಲ ದೊರೆಯಿತು. ಬೆಂಗಳೂರಿನಲ್ಲಿ ಮಹಿಳಾ ಟೂರ್ನಿ ಆಯೋಜಿಸಿದರೆ ಏನೂ ಪ್ರಯೋಜನವಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳು ನಡೆದರೂ ಜನ ಬರಲ್ಲ. ಟೂರ್ನಿ ನಡೆಯುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ’ ಎನ್ನುತ್ತಾರೆ.

ಮಹಿಳಾ ಕ್ರಿಕೆಟ್‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯುವತಿಯರ ಪ್ರಯೋಗ ಶ್ಲಾಘನೀಯ. ಇಂಥ ಟೂರ್ನಿಗಳನ್ನು ವೀಕ್ಷಿಸುವ ಬಾಲಕಿಯರಿಗೆ, ಯುವತಿಯರಿಗೆ ಮುಂದೊಮ್ಮೆ ತಾವೂ ಕ್ರಿಕೆಟ್‌ ಆಡಬೇಕು ಎಂದೆನಿಸದೆ ಇರದು. 

ಗುಲಾಬಿ ಬಣ್ಣದ ಚೆಂಡು ಬಳಕೆ
ಮಹಿಳೆಯರಿಗಾಗಿ ಮಹಿಳೆಯರೇ ನಡೆಸಿದ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿಯಲ್ಲಿ ಗುಲಾಬಿ ಬಣ್ಣದ ಚೆಂಡು ಬಳಸಲಾಯಿತು. ಭಾರತದಲ್ಲಿ ಇದೇ ಮೊದಲ ಬಾರಿ ಈ ರೀತಿಯ ಪ್ರಯೋಗ ನಡೆದಿದ್ದು ವಿಶೇಷ.

ಐಪಿಎಲ್‌ ಕ್ರಿಕೆಟ್‌ ಟೂರ್ನಿ ಮಾದರಿಯಲ್ಲಿ 8 ತಂಡಗಳನ್ನು ಮಾಡಿಕೊಂಡು ಐದು ದಿನ ಆಡಿದರು. ಸ್ಕೈರೀಚರ್‌, ಸೌತ್ ಸೆಂಟ್ರಲ್‌ ರೈಲ್ವೆ, ವೆಸ್ಟರ್ನ್‌ ರೈಲ್ವೆ, ಎನ್ಎಫ್‌ಆರ್‌, ಬರೋಡ, ಕೇರಳ, ಸ್ಪಟರ್ನ್ಸ್‌, ರಾಯಲ್‌ ಫಿನಿಕ್ಸ್‌ ಬೆಂಗಳೂರು ತಂಡಗಳು ಪಾಲ್ಗೊಂಡಿದ್ದವು. ನಿತ್ಯ ನಾಲ್ಕು ಪಂದ್ಯಗಳು ನಡೆದವು. ವಿವಿಧ ರಾಜ್ಯಗಳ 100ಕ್ಕೂ ಅಧಿಕ ಆಟಗಾರ್ತಿಯರು ಇದ್ದರು. ವೆಸ್ಟರ್ನ್‌ ರೈಲ್ವೆ ಹಾಗೂ ಸೌತ್‌ ಸೆಂಟ್ರಲ್‌ ರೈಲ್ವೆ ತಂಡಗಳು ಫೈನಲ್‌ ತಲುಪಿದ್ದವು.

*
ಹುಡುಗಿಯರನ್ನು ಕ್ರಿಕೆಟ್‌ನತ್ತ ಸೆಳೆಯಲು, ವೃತ್ತಿಪರ ಆಟಗಾರ್ತಿಯರನ್ನಾಗಿಸುವ ಉದ್ದೇಶದಿಂದ ಈ ಟೂರ್ನಿ ಆಯೋಜಿಸಲಾಯಿತು. ಇದು ಸಂಪೂರ್ಣವಾಗಿ ಯುವತಿಯರ ಪರಿಕಲ್ಪನೆಯ ಟೂರ್ನಿ.
–ರಕ್ಷಿತಾ ಕೆ., ಕ್ರಿಕೆಟ್‌ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT