ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನಕ್ಕೆ ಮತ್ತೊಬ್ಬ ತಾಳಿಕೋಟೆ...

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ವಾರದ ಹಿಂದೆಯಷ್ಟೆ ತೆರೆಕಂಡ ನೈಜ ಕಥಾನಕದ ಚಿತ್ರ ‘ಜಿಂದಾ’. ಆರು ರೌಡಿಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವವ­ರೆಲ್ಲರೂ ಹೊಸಬರಾದರೂ, ದ್ಯಾವಪ್ಪ ಅಲಿಯಾಸ್ ದೇವ್ ಪಾತ್ರಕ್ಕೆ ಜೀವ ತುಂಬಿರುವ ಭರತ್‌ರಾಜ್ ತಾಳಿಕೋಟೆ ಹೆಚ್ಚು ಗಮನ ಸೆಳೆದಿದ್ದಾರೆ.

ಭರತ್‌ರಾಜ್ ವೃತ್ತಿ ರಂಗಭೂಮಿಗೆ ಪರಿಚಿತ. ಹಾಸ್ಯ ನಟ ರಾಜು ತಾಳಿಕೋಟೆ ಅವರ ಮಗ. ‘ಜಿಂದಾ’ ಮೂಲಕ ಸಿನಿಮಾದಲ್ಲೂ ಅಪ್ಪ–ಮಗನ ಜುಗಲ್‌ಬಂದಿ ಆರಂಭವಾಗಿದೆ. ಕಲೆಯೇ ಬದುಕಾಗಿದ್ದ ಕುಟುಂಬದಲ್ಲಿ ಹುಟ್ಟಿದ ಭರತ್‌ರಾಜ್ ಮೂಲ ಹೆಸರು ಬಶೀರ್ ತಾಳಿಕೋಟೆ.

ಅಪ್ಪ– ಅಮ್ಮ ನಾಟಕ ಸಂಚಾರಿಗಳು. ಹಾಗಾಗಿ ಊರಿಂದೂರಿಗೆ ಅಲೆದಾಟ. ಮಕ್ಕಳಿಗೆ ಹಾಸ್ಟೆಲ್‌ವಾಸ. ಆದರೂ ಭರತ್‌ರಾಜ್‌ 12ನೇ ವಯಸ್ಸಿಗೆ ನಾಟಕಕ್ಕೆ ಬಣ್ಣ ಹಚ್ಚಿದ್ದರು. ಅಪ್ಪನ ಆಸೆಯಂತೆ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರೂ ಅವರು ವೃತ್ತಿ ರಂಗಭೂಮಿಯ ಹಾದಿ ಹಿಡಿದಿದ್ದು ಆಕಸ್ಮಿಕ.

‘ತಾಳಿಕೋಟೆಯಲ್ಲಿ ನಮ್ಮ ‘ಶ್ರೀಗುರು ಖಾಸ್ಗತೇಶ್ವರ ನಾಟಕ ಕಂಪನಿ’ ಬೀಡು ಬಿಟ್ಟಿತ್ತು. ನಾನಾಗ ಕಾಲೇಜಿಗೆ ಹೋಗುತ್ತಿದ್ದೆ. ಒಮ್ಮೆ ನಾಟಕದ ಪಾತ್ರಧಾರಿಯೊಬ್ಬರು ತುರ್ತು ಕಾರಣ ಹೇಳಿ ಊರಿಗೆ ಹೋದರು. ಆಗ, ಅಪ್ಪ ನನ್ನನ್ನು ಕರೆದು ಇದೊಂದು ಪಾತ್ರ ಮಾಡು ಎಂದರು. ಕೆಲವೇ ಹೊತ್ತಿನಲ್ಲಿ ತಯಾರಾಗಿ ನಟಿಸಿದೆ’ ಎಂದು ಭರತ್‌ರಾಜ್ ತಮ್ಮ ಆರಂಭದ ದಿನಗಳನ್ನು ನೆನೆಯುತ್ತಾರೆ.

‘ಮುಂಚಿನಿಂದಲೂ ನಾನು ಸಿನಿಮಾ ಮೋಹಿ. ನನ್ನ ಕೊಠಡಿ ತುಂಬಾ ಸಿನಿಮಾ ನಟರ ಚಿತ್ರಗಳನ್ನು ಅಂಟಿಸಿಕೊಂಡಿದ್ದೆ. ಇಷ್ಟದ ನಟರನ್ನು ಅನುಕರಿಸಿ ಡೈಲಾಗ್‌ಗಳನ್ನು ಹೇಳುತ್ತಿದ್ದೆ. ಅಪ್ಪ ಹಾಸ್ಯ ನಟನಾಗಿ ಹೆಸರು ಮಾಡಿದರೂ ನನ್ನಲ್ಲಿ  ಹಾಸ್ಯ ಚಿಗುರಲೇ ಇಲ್ಲ. ಹಾಗಾಗಿ, ನಾಟಕಗಳಲ್ಲಿ ನಾಯಕ ಅಥವಾ ಖಳನಾಗಿ ಕಾಣಿಸಿಕೊಳ್ಳುತ್ತಿದ್ದೆ. ವಿಶೇಷವೆಂದರೆ, ‘ಜಿಂದಾ’ದಲ್ಲಿ ಸಿಕ್ಕಿರುವುದೂ ನೆಗೆಟಿವ್ ಪಾತ್ರ’ ಎನ್ನುತ್ತಾರೆ ಭರತ್‌ರಾಜ್.

ಅಪ್ಪ–ಮಗನ ಈ ತದ್ವಿರುದ್ಧ ಸ್ವಭಾವ ಸಿನಿಮಾದಲ್ಲೂ ಮುಂದುವರಿದಿದೆ. ‘ಜಿಂದಾ’ದಲ್ಲಿ ರಾಜು ತಾಳಿಕೋಟೆ  ಅವರು ಕಾನ್‌ಸ್ಟೆಬಲ್ ಆಗಿದ್ದರೆ, ಮಗ ಕಳ್ಳ! ‘ಅಪ್ಪನಿಂದ ನಿಜ ಜೀವನದಲ್ಲಷ್ಟೆ  ಅಲ್ಲದೆ, ಸಿನಿಮಾದಲ್ಲೂ ಒದೆ ತಿಂದಿದ್ದೇನೆ (ನಗುತ್ತಾ). ಆದರೆ, ನಟನೆಯ ವಿಷಯದಲ್ಲಿ ಅವರೇ ಪರಮ ಗುರು’ ಎಂದು ವಿನಯಪೂರ್ವಕ ಹೇಳುತ್ತಾರೆ ಭರತ್‌ರಾಜ್‌.

ನಾಟಕಗಳ ಮೂಲಕ ಜನಪ್ರಿಯರಾಗಿದ್ದ ಭರತ್‌ರಾಜ್‌ಗೆ, ಕೆಲ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೂ ನಾಟಕ ಕಂಪೆನಿ ಬಿಟ್ಟು ಅವರು ಕದಲಲಿಲ್ಲ.

‘ನಮ್ಮ ಕಂಪೆನಿ  ನಂಬಿಕೊಂಡು 30 ಮಂದಿ ಇದ್ದಾರೆ. ಅಪ್ಪ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾನೂ ಹೋದರೆ ಮುಂದೇನು ಗತಿ ಅಂದುಕೊಂಡು ಸುಮ್ಮನಾಗಿದ್ದೆ. ಸದ್ಯ  ಕಂಪೆನಿಯ ಹೊಣೆಯನ್ನು ಸಹೋದರ ದಾವಲ್ ತಾಳಿಕೋಟೆ ಹೊತ್ತಿದ್ದಾನೆ. ಹಾಗಾಗಿ, ನಾನು ಸಿನಿಮಾದತ್ತ ಬಂದೆ. ಆದರೂ, ನಾಟಕಗಳಲ್ಲಿ ಅಭಿನಯಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ’ ಎಂದು ಭರತ್‌ ತಮ್ಮ ಬದ್ಧತೆ ಪ್ರದರ್ಶಿಸುತ್ತಾರೆ.

‘ಬೆಳ್ಳಿಪರದೆಗೂ ನಾಟಕದ ವೇದಿಕೆಗೂ ಅಜಗಜಾಂತರವಿದೆ. ನಾಟಕದಲ್ಲಿ ನಟಿಸುವಾಗ ನಮ್ಮನ್ನು ಕ್ಯಾಮರಾ ಬದಲು ನೂರಾರು ಕಣ್ಣುಗಳು ನೋಡುತ್ತಿರುತ್ತವೆ. ಅಲ್ಲಲ್ಲೇ ಜನರಿಂದ ಚಪ್ಪಾಳೆ, ಶಿಳ್ಳೆ, ಕಿರುಚಾಟದ ಪ್ರತಿಕ್ರಿಯೆ ಸಿಗುತ್ತದೆ. ಸಿನಿಮಾದಲ್ಲಿ ಅಭಿನಯಿಸು­ವಾಗ ನಮ್ಮ ಗಮನ ಕ್ಯಾಮರಾ ಕೇಂದ್ರಿತವಾಗಿರುತ್ತದೆ.

ಪ್ರೇಕ್ಷಕರ ಪ್ರತಿಕ್ರಿಯೆ ನಮ್ಮನ್ನು ತಲುಪುವುದು ಸ್ವಲ್ಪ ತಡವಾಗುತ್ತದೆ. ಆದರೆ, ಅಭಿನಯ, ಹಾವಭಾವ ಹಾಗೂ ಡೈಲಾಗ್‌ಗಳು ಸಿನಿಮಾದಲ್ಲಿ ಹೈಲೈಟ್ ಆಗುವಷ್ಟು ನಾಟಕದಲ್ಲಿ ಅಷ್ಟಾಗಿ ಆಗುವುದಿಲ್ಲ’ ಎಂದು ಭರತ್‌ರಾಜ್ ಸಿನಿಮಾ ಮತ್ತು ನಾಟಕಕ್ಕಿರುವ ವ್ಯತ್ಯಾಸದ ಎಳೆಗಳನ್ನು ಬಿಚ್ಚಿಡುತ್ತಾರೆ.

‘ಜಿಂದಾ’ಗೆ ಆ್ಯಕ್ಷನ್ ಕಟ್ ಹೇಳಿರುವ ಮುಸ್ಸಂಜೆ ಮಹೇಶ್ ಅವರ ಮುಂದಿನ ಚಿತ್ರದಲ್ಲೂ ಭರತ್‌ರಾಜ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಆ ಚಿತ್ರಕ್ಕೆ ಆದಿತ್ಯ ಮತ್ತು ರಾಗಿಣಿ ನಾಯಕ–ನಾಯಕಿ. ಆದಿತ್ಯ ಅವರ ಸ್ನೇಹಿತನ ಪಾತ್ರದಲ್ಲಿ ಭರತ್‌ ಮಿಂಚಲಿದ್ದಾರಂತೆ.

*
ಮನುಷ್ಯನನ್ನು  ಟಿ.ವಿ ಚಿಕ್ಕದಾಗಿ ತೋರಿಸಿದರೆ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ಆದರೆ, ರಂಗಭೂಮಿ ಮಾತ್ರ ನಟನೊಬ್ಬ ಹೇಗಿದ್ದಾನೊ ಅದೇ ರೀತಿ ತೋರಿಸುತ್ತದೆ.
–ಭರತ್‌ ರಾಜ್‌ ತಾಳಿಕೋಟೆ,
ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT