ಅಜ್ಜಿ ಕೈಯ ಬಿದಿರು ಬುಟ್ಟಿಗೆ ಕಲಾತ್ಮಕ ಸ್ಪರ್ಶ

7

ಅಜ್ಜಿ ಕೈಯ ಬಿದಿರು ಬುಟ್ಟಿಗೆ ಕಲಾತ್ಮಕ ಸ್ಪರ್ಶ

Published:
Updated:
ಅಜ್ಜಿ ಕೈಯ ಬಿದಿರು ಬುಟ್ಟಿಗೆ ಕಲಾತ್ಮಕ ಸ್ಪರ್ಶ

ಕೆ.ಜಿ. ನಗರದ ಹವ್ಯಾಸಿ ಛಾಯಾಚಿತ್ರಕಾರ, ಶ್ರೀಕಾಂತ್  ಜೋಯಿಸ್ ಅವರು ಕಳುಹಿಸಿರುವ ಚಿತ್ರ ಈ ಬಾರಿ ‘ಚೌಕಟ್ಟಿ’ನಲ್ಲಿ ಕುಳಿತಿದೆ.

ಕೆ.ಆರ್.ರಸ್ತೆಯ ಮಕ್ಕಳ ಕೂಟದ ಚೌಕದಿಂದ ಗಾಯನ ಸಮಾಜದವರೆಗೆ ಸಾಗುವ ಪಾದಚಾರಿ ಮಾರ್ಗದಲ್ಲಿ ಬಿಡಾರ ಹಾಕಿಕೊಂಡು ಬಿದಿರಿನ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಅಜ್ಜಿಯ ಚಿತ್ರವನ್ನು ಶ್ರೀಕಾಂತ್‌ ತೆಗೆದಿದ್ದಾರೆ. ಎಪ್ಪತ್ತರ ಈ ವೃದ್ಧೆ  ಹಸನ್ಮುಖದಿಂದ ಗ್ರಾಹಕನೊಬ್ಬನಿಗೆ  ಬುಟ್ಟಿ ಮಾರುವ ಪರಿ ಸಹಜವಾಗಿ ಮೂಡಿಬಂದಿದೆ.

ವೃತ್ತಿಯಲ್ಲಿ  ಹೋಳಿಗೆ ತಯಾರಿ ಮತ್ತು ಮಾರಾಟದಲ್ಲಿ ತೊಡಗಿರುವ ಶ್ರೀಕಾಂತ್‌, ಬಿಡುವಿನ ವೇಳೆಯಲ್ಲಿ ಕ್ಯಾಮೆರಾ ಕೈಗೆತ್ತಿಕೊಳ್ಳುತ್ತಾರೆ. ಛಾಯಾಗ್ರಹಣ ಪರಿಣಿತ  ಗೆಳೆಯ  ಶ್ರೀಧರ ಜಿ. ಎಸ್. ಅವರ ಮಾರ್ಗದರ್ಶನ ಪಡೆದು ಫೋಟೊ ತೆಗೆಯುತ್ತಾರೆ. ‘ಹೊಸತೇನಾದರೂ ಕಂಡಲ್ಲಿ  ಗೆಳೆಯರ ಸಲಹೆ ಪಡೆದು ಕ್ಲಿಕ್ಕಿಸುತ್ತೇನೆ. ಉತ್ತಮ ಫಲಿತಾಂಶ ಖಚಿತ’ ಎಂದು ಅವರು ಹೇಳುತ್ತಾರೆ.

ಅವರು ಬಳಸಿದ ಕ್ಯಾಮೆರಾ, ಕೆನಾನ್  ಇಒಎಸ್ 700 ಡಿ, ಮತ್ತು 18 – 55 ಎಂಎಂ ಜೂಮ್‌ ಲೆನ್ಸ್. ಈ ಚಿತ್ರದ ಎಕ್ಸ್‌ಪೋಶರ್ ವಿವರಗಳು ಇಂತಿವೆ: ಲೆನ್ಸ್ ಫೋಕಲ್ ಲೆನ್ತ್‌ 18 ಎಂ.ಎಂ. ವೈಡ್, ಅಪರ್ಚರ್ ಎಫ್ 71, ಷಟರ್ ವೇಗ 1/100 ಸೆಕೆಂಡ್, ಐ.ಎಸ್.ಒ. 200, ದಿನದ ಬೆಳಕಿನ  ವೈಟ್ ಬ್ಯಾಲೆನ್ಸ್.

ಈ ಛಾಯಾಚಿತ್ರದೊಂದಿಗೆ ಅವಲೋಕಿಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ:

*ಛಾಯಾಚಿತ್ರವೊಂದು ದಾಖಲೆಗಾಗಿ ಮಾತ್ರ ಸೀಮಿತಗೊಳ್ಳದೆ  ಅದರೊಳಗೆ ಸೆರೆಹಿಡಿಯಲಾದ ಮುಖ್ಯವಸ್ತುವೊಂದು  ಪ್ರವೇಶ ಭಾಗ (ಎಂಟ್ರಿ ಪಾಯಿಂಟ್) ಆಗಿರುತ್ತದೆ. ಅದು ನೋಡುಗನ ಕಣ್ಮನ ಸೆಳೆದು  ಹೇಳಬಯಸುವ ವಿಷಯ ಪರಿಣಾಮಕಾರಿಯೆನಿಸಲು ಇಡೀ ಚೌಕಟ್ಟಿನಲ್ಲಿ ಸೆರೆಹಿಡಿಯಲಾದ ಇತರ ಎಲ್ಲಾ ಉಪ ವಸ್ತುಗಳೂ ಮೂಲ ಆಶಯಕ್ಕೆ ಪೂರಕವಾಗಿಯೇ ಸಮರ್ಪಕವಾಗಿ ಗೋಚರಿಸುವುದೂ ಅವಶ್ಯಕ.

*ಈ ಬಗೆಯ ದೃಶ್ಯದ ಸಂದರ್ಭದಲ್ಲಿ  ಹಾಗಾಗಲು, ಕ್ಯಾಮೆರಾ ಲೆನ್ಸ್‌ನ ವಿಸ್ತಾರ ಗ್ರಹಣಕ್ಕೆ (ವೈಡ್ ಆ್ಯಂಗಲ್) ಸಹಾಯಕವಾಗುವಷ್ಟರ ಸಂಗಮ ವ್ಯಾಪ್ತಿಯುಳ್ಳ (ಫೋಕಲ್ ಲೆನ್ತ್‌) ಲೆನ್ಸ್‌ ಬಳಕೆ ಮತ್ತು ವಸ್ತುವಿನ ಎದುರಿಗೇ ನಿಲ್ಲದೇ ಒಂದು ಬದಿಯಿಂದ ಓರೆಯಾಗಿ ಕ್ಯಾಮೆರಾ ಕೋನವನ್ನು (ಆ್ಯಂಗಲ್ ಆಫ್ ವ್ಯೂ) ಅಳವಡಿಸುವುದು ಮುಖ್ಯ.

*ರಸ್ತೆ ಬದಿಯಲ್ಲಿ ವ್ಯಕ್ತಿಗಳಿಗೆ ಅರಿವು ಕೊಡದೇ ಸಹಜವಾಗಿ ಕ್ಲಿಕ್ಕಿಸುವುದು ಒಂದು ಸವಾಲೇ ಸರಿ. ತ್ವರಿತವಾಗಿ ಶೂಟ್ ಮಾಡುವುದೂ ಅನಿವಾರ್ಯ. ವಸ್ತುವಿನ ಮೇಲೆ ಮತ್ತು ಅದರ ಮುನ್ನೆಲೆ ಹಾಗೂ ಹಿನ್ನೆಲೆಯ ಮೇಲೆ ಬಿದ್ದ ಬೆಳಕು ವಿವಿಧ ಬಗೆಯ ಅತಿಯಾದ ಪ್ರಕಾಶವನ್ನು ಮುನ್ನೆಲೆಯಲ್ಲಿಯೂ, ಅಂತೆಯೇ ಗಾಢವಾದ ನೆರಳನ್ನು ಹಿಂಬದಿಯಲ್ಲೂ ಅಲ್ಲಲ್ಲಿ ಉಂಟುಮಾಡಿಬಿಟ್ಟಿರುತ್ತದೆ. ತಾಂತ್ರಿಕವಾಗಿ ಕ್ಯಾಮೆರಾದ ಇತರ ಎಕ್ಸ್‌ಪೋಶರ್ ಅಂಶಗಳಾದ ಐಎಸ್ಒ ಮತ್ತು ಅಪರ್ಚರ್ ಮೇಲಿನ ಹಿಡಿತವೂ ಇದ್ದರೆ ಮಾತ್ರ ಛಾಯಾಚಿತ್ರಕಾರ ಆ ಸವಾಲನ್ನು ಎದುರಿಸಬಹುದು. ಶ್ರೀಕಾಂತ್ ಜೋಯಿಸ್ ಅವರು ಇಲ್ಲಿ ಗೆದ್ದಿದ್ದಾರೆ.

*ಚಿತ್ರದೊಳಕ್ಕೆ  ನೋಡುಗನ ಕಣ್ಣು ನಾಟುವುದು ಕಾರ್ಯನಿರತ ಮಹಿಳೆ ಮತ್ತು ಗ್ರಾಹಕ ಕೈಯಲ್ಲಿ ಆರಿಸಿ ಹಿಡಿದ ಬುಟ್ಟಿಯ ಭಾಗ. ಕಲಾತ್ಮಕ ನಿಯಮವೊಂದರಂತೆ, ಅದು ಚಿತ್ರದ ಮುಖ್ಯ ದ್ವಾರ ಮತ್ತು ಚೌಕಟ್ಟಿನ ಒಂದು ಮೂರಾಂಶದ (ರೂಲ್ ಆಫ್ ಥರ್ಡ್) ಭಾಗದಲ್ಲಿದೆ. ಮುಂದುವರಿದ ಎರಡು ಮೂರಂಶದ  ಜಾಗದಲ್ಲಿ, ತುಸು ದೂರದಲ್ಲಿ ಪೂರಕವಾಗಿ ಮತ್ತಿಬ್ಬರು ಬುಟ್ಟಿ ಹೆಣೆಯುವವರು ಕಾರ್ಯನಿರತರಾಗಿರುವುದು ಗೋಚರಿಸುವುದು  ಚಿತ್ರದ ಭಾವನಾತ್ಮಕ ವ್ಯಾಪ್ತಿಯನ್ನು ಪುನರಾವರ್ತಿಸುತ್ತದೆ (ರಿಪಿಟಿಶನ್ ಆಫ್ ಸ್ಟೋರಿ).

*ಬಲಭಾಗದ ಕೆಳ ಮೂಲೆಯಿಂದ ಓರೆಯಾಗಿ ಪಕ್ಕದಲ್ಲಿರುವ ಪಾದಚಾರಿ ಮಾರ್ಗದ ರೇಖಾ ವಿನ್ಯಾಸಗಳು (ರಿಪಿಟೆಟಿವ್ ಲೈನ್ಸ್ ಡಿಸೈನ್) ಚಿತ್ರದ ಮುಖ್ಯ ಭಾಗದೆಡೆಗೆ (ಎಂಟ್ರಿ ಪಾಯಿಂಟ್) ನೋಡುಗನ ಕಣ್ಣನ್ನು ಸಹಜವಾಗಿ ತಳ್ಳುವ ಎಳೆಗಳಾಗಿ (ಲೀಡಿಂಗ್ ಲೈನ್ಸ್‌ನ ಗುಣ) ರೂಪುಗೊಂಡಿವೆ. ಎಡ ಕೆಳ ಮೂಲೆಯಿಂದಲೂ ಕೆಲವು ಬಿದಿರಿನ ಎಳೆಗಳು ಬಲಕ್ಕೆ ಓರೆಯಾಗಿ ಸಾಗಿ ಅದೇ ಗುಣಕ್ಕೆ  ಸಾತ್ ನೀಡಿದೆ.

ಮೇಲಿನ ಅಂಶಗಳ ಬಲದಿಂದ ಇದನ್ನು ಉತ್ತಮ ಕಲಾತ್ಮಕ ಚಿತ್ರ ಸಂಯೋಜನೆಯೆಂದು ಪರಿಗಣಿಸಬಹುದು ಮತ್ತು ಕ್ಯಾಮೆರಾ ಕಣ್ಣಿನ ಹಿಂದಿರುವ ಛಾಯಾಚಿತ್ರಕಾರರ ಪ್ರಯತ್ನ ಕೂಡಾ ಮೆಚ್ಚತಕ್ಕದ್ದೇ.

***ಛಾಯಾಗ್ರಾಹಕರು: ಶ್ರೀಕಾಂತ ಜೋಯಿಸ್, ಇಮೇಲ್: mjsrikanth30587@gmail.com ಮೊಬೈಲ್: 81976 96122

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry