‘ಮಾಯವಾಯ್ತು ಸೌಂದರ್ಯದ ಸಿರಿ’

7
ನಾ ಕಂಡ ಬೆಂಗಳೂರು

‘ಮಾಯವಾಯ್ತು ಸೌಂದರ್ಯದ ಸಿರಿ’

Published:
Updated:
‘ಮಾಯವಾಯ್ತು ಸೌಂದರ್ಯದ ಸಿರಿ’

ನಾನು ಹುಟ್ಟಿದ್ದು, ಬೆಳೆದದ್ದು ಉಡುಪಿಯಲ್ಲಿ. ವಿಜಯಾ ಬ್ಯಾಂಕ್‌ನಲ್ಲಿ ಅಧಿಕಾರಿ ಹುದ್ದೆ ಸಿಕ್ಕಿದ್ದರಿಂದ 1974ರಲ್ಲಿ ಬೆಂಗಳೂರಿಗೆ ಬಂದೆ. ಅದಕ್ಕೂ ಮುನ್ನ ಒಂದೆರಡು ಬಾರಿ ಇಲ್ಲಿಗೆ ಬಂದಿದ್ದ ನೆನಪು.

ನಾನು ದುಡಿಯುವ ಮಹಿಳೆಯಾಗಿ, ಲೇಖಕಿಯಾಗಿ ಬೆಳೆದದ್ದು ಇಲ್ಲಿಗೆ ಬಂದ ಬಳಿಕವೇ. ಬ್ಯಾಂಕಿನಲ್ಲಿ ಸಂಖ್ಯೆಗಳೊಡನೆ, ಮನೆಯಲ್ಲಿ ಅಕ್ಷರಗಳೊಡನೆ ಹೆಚ್ಚಿನ ಸಮಯಕ್ಕಾಗಿ ಪರದಾಡುವಂತಾಗಿತ್ತು. ಸಮಯ ಪಾಲನೆ, ನಿರ್ವಹಣೆಯ ಉಪಾಯಗಳನ್ನು ಕಲಿಸಿದ್ದು ಈ ನಗರ.

ವಿಜಯಾ ಬ್ಯಾಂಕ್‌ನ ಕೆ.ಜಿ. ರಸ್ತೆ, ಶಾಂತಿನಗರದ ಶಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಗ್ರಾಹಕರೊಂದಿಗೆ ನೇರ ಸಂಪರ್ಕವಿರುತ್ತಿತ್ತು. ಈಗ ಬ್ಯಾಂಕಿನ ಸಿಬ್ಬಂದಿಗೆ ಗ್ರಾಹಕರಿಗಿಂತ ಕಂಪ್ಯೂಟರ್ ಜತೆಯೇ ಹೆಚ್ಚು ಒಡನಾಟ. ಆದರೆ ಆಗ ಹಾಗಿರಲಿಲ್ಲ. ಅದಕ್ಕಾಗಿ, ಈಗಲೂ ಹಳೆಯ ಗ್ರಾಹಕರು ಸಿಕ್ಕರೆ ನನ್ನನ್ನು ಗುರುತಿಸಿ ಮಾತನಾಡುತ್ತಾರೆ. ಆ ಬಾಂಧವ್ಯ ಹಾಗಿತ್ತು. ಆಗ ರಾಷ್ಟ್ರೀಕೃತ ಬ್ಯಾಂಕುಗಳು ಬಿಟ್ಟರೆ ಖಾಸಗಿ ಬ್ಯಾಂಕ್‌ಗಳು ಅಷ್ಟಾಗಿ ಇರಲಿಲ್ಲ.

ಪತಿ ಬಿ.ಎ. ಪ್ರಭಾಕರ ರೈ ಕೂಡಾ  ಆಗ ಬ್ಯಾಂಕ್ ಉದ್ಯೋಗಿ. ಇಬ್ಬರಿಗೂ ವರ್ಗಾವಣೆಯ ಸುತ್ತಾಟವಿತ್ತು. ಇರಲೊಂದು ನೆಲೆ ಬೇಕೆಂದು ಬ್ಯಾಂಕಿನಿಂದ ಸಾಲ ಪಡೆದು ಶಾಂತಿನಗರದಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟಿದೆವು. ಆಗ ಕೇವಲ ₹ 20 ಸಾವಿರಕ್ಕೆ ಸೈಟು ಸಿಕ್ಕಿತ್ತು. ಎರಡಂತಸ್ತಿನ ಮನೆಗೆ ಖರ್ಚಾಗಿದ್ದು ₹ 2 ಲಕ್ಷ. ಈಗ  ಕೋಟಿ ರೂಪಾಯಿ ಕೊಟ್ಟರೂ ಅಲ್ಲಿ ನಿವೇಶನ ಸಿಗುವುದಿಲ್ಲ ಬಿಡಿ.

ಬೆಂಗಳೂರು ಈಗ ಅಷ್ಟೊಂದು ದುಬಾರಿಯಾಗಿಬಿಟ್ಟಿದೆ.ನಾವು ಮನೆ ಕಟ್ಟಿದ್ದ ಜಾಗ ಮೊದಲು ಗದ್ದೆಯಾಗಿತ್ತು. ಆಗ ಅಲ್ಲಿ ಸುತ್ತಮುತ್ತ ಮನೆಗಳೇ ಇರಲಿಲ್ಲ. ನಾಲ್ಕು ಅಡಿ ಅಗೆದರೆ ಸಾಕು ನೀರು ಸಿಗುತ್ತಿತ್ತು. ನಮ್ಮ ಮನೆ ಕಟ್ಟಲು ಬಳಸಿದ್ದು ಹಾಗೇ ಅಗೆದು ತೆಗೆದ ಬಾವಿಯ ನೀರನ್ನೇ. ನಾವು ಮನೆ ಕಟ್ಟಿಸಿದ ಹತ್ತು ವರ್ಷದೊಳಗೆ ಸುತ್ತಮುತ್ತ ಎಲ್ಲಾ ಸೈಟುಗಳಲ್ಲೂ ಮನೆಗಳು ಬಂದವು. ಅಲ್ಲಲ್ಲಿ ಅಂಗಡಿಗಳೂ ಬಂದವು.

ನಾವು ವಾಸವಿದ್ದ ಶಾಂತಿನಗರದ ಅಕ್ಕಿತಿಮ್ಮನಹಳ್ಳಿ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಣ್ಣು, ತರಕಾರಿ ಮಾರುವ ತಮಿಳರು ಕಷ್ಟಪಟ್ಟು ಹಿಂದಿ ಕಲಿತಾದರೂ ಬಟ್ಲರ್ ಹಿಂದಿ ಮಾತನಾಡುತ್ತಾರೆ. ಆದರೆ, ಕನ್ನಡ ಮಾತನಾಡುವ ಪ್ರಯತ್ನವಂತೂ ಮಾಡುವುದಿಲ್ಲ.

ಶಾಂತಿನಗರದ ಈಗಿನ ಹಾಕಿ ಕ್ರೀಡಾಂಗಣ ಆಗ ಖಾಲಿ ಮೈದಾನವಾಗಿತ್ತು. ನಮ್ಮ ಮಕ್ಕಳೆಲ್ಲಾ ಅಲ್ಲಿ ಹೋಗಿ ಆಡುತ್ತಿದ್ದರು. ಈಗ ಮೊಮ್ಮಕ್ಕಳಿಗೆ ಆಡಲು ಸ್ಥಳವೇ ಇಲ್ಲ. ಬರೀ ಮೊಬೈಲ್, ವಿಡಿಯೊ ಗೇಮ್‌ಗಳಲ್ಲೇ ಆಡುವಂತಾಗಿದೆ.

40 ವರ್ಷಗಳಲ್ಲಿ ಇಡೀ ಬೆಂಗಳೂರು ಬಹಳ ಬದಲಾಗಿದೆ. 70ರ ದಶಕದಲ್ಲಿ ಇಲ್ಲಿಗೆ ನಾವು ಬಂದಾಗ ಇದ್ದಂತಹ ಪ್ರಶಾಂತ ವಾತಾವರಣ, ಎಲ್ಲೆಡೆ ಕಂಗೊಳಿಸುತ್ತಿದ್ದ ದಟ್ಟ ಹಸಿರು ಮರಗಳು, ಮೇ ಬಂತೆಂದರೆ ಸಾಕು ಕೆಂಪು ಬಣ್ಣದ ಓಕುಳಿ ಚೆಲ್ಲುವ ಗುಲ್‌ಮೊಹರಿನ ಮರಗಳು ಎಲ್ಲವೂ ಮಾಯವಾಗಿಬಿಟ್ಟಿವೆ. ಆಗ ನಮ್ಮ ಡಬಲ್ ರೋಡ್ ಎಷ್ಟೊಂದು ಚೆನ್ನಾಗಿತ್ತೆಂದರೆ, ಲಾಲ್‌ಬಾಗ್ ತನಕ ಕಣ್ಮುಚ್ಚಿಕೊಂಡು ಹೋಗಬಹುದಾದಷ್ಟು ಖಾಲಿಯಾಗಿರುತ್ತಿತ್ತು.

ಶಾಂತಿನಗರದ ಮನೆಯಿಂದ ಲಾಲ್‌ಬಾಗ್‌ಗೆ ನಾನು ಮತ್ತು ಪತಿ ಜತೆಗೆ ಬೆಳಗಿನ ವಾಕಿಂಗ್‌ಗೆ ಹೋಗುತ್ತಿದ್ದೆವು. ಲಾಲ್‌ಬಾಗ್ ಕೆರೆ ಪಕ್ಕ ಓಡಾಡುವುದೇ ಸೊಗಸು. ವಾಯುವಿಹಾರಕ್ಕೆ ಹೋಗುತ್ತಿದ್ದಾಗ ವಿಚಾರವಾದಿ ಎಚ್.ನರಸಿಂಹಯ್ಯ ಅವರು ಸಿಗುತ್ತಿದ್ದರು.  ನಿರ್ದೇಶಕ ಟಿ.ಎನ್.ಸೀತಾರಾಂ ಮತ್ತು ಅವರ ಜತೆಗೊಂದು ಗುಂಪು ಲಾಲ್‌ಬಾಗ್‌ಗೆ ವಾಯುವಿಹಾರಕ್ಕೆ ಬರುತ್ತಿತ್ತು. ‘ಫಣಿಯಮ್ಮ’ ಖ್ಯಾತಿಯ ನಟಿ ಎಲ್.ವಿ. ಶಾರದಾ ಆಗಾಗ ಬರುತ್ತಿದ್ದರು.

ಈಗ ಇಡೀ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಎದ್ದುನಿಂತಿರುವ ಬಹುಮಹಡಿ ಕಟ್ಟಡಗಳೇ ಕಾಣಿಸುತ್ತವೆ. ಸಣ್ಣ ಸಣ್ಣ ಅಂಗಡಿಗಳು ಮಾಯವಾಗಿ  ದೊಡ್ಡದೊಡ್ಡ ಮಾಲ್‌ಗಳು ಬಂದಿವೆ. ಸದಾ ರಿಪೇರಿಯಾಗುತ್ತಿರುವ ರಸ್ತೆಗಳು, ಬೆಂಗಳೂರಿನ ಹಿಂದಿನ ಸೌಂದರ್ಯವನ್ನೇ ಮಾಯವಾಗುವಂತೆ ಮಾಡಿವೆ. ‘ನಮ್ಮ ಮೆಟ್ರೊ’ ರೈಲು ಮಾರ್ಗ ನಿರ್ಮಿಸುವ ಸಲುವಾಗಿ ಅರ್ಧಕ್ಕರ್ಧ ಬೆಂಗಳೂರೇ ಬಾಂಬು ಹಾಕಿ ಹಾಳುಗೆಡವಿದ ನಗರದಂತಾಗಿದೆ.  ರಸ್ತೆಯ ಇಕ್ಕೆಲಗಳಲ್ಲೂ ಮರಗಳಿದ್ದಾಗ ಏರ್‌ ಕಂಡೀಷನ್ ನಗರವಾಗಿದ್ದ ಬೆಂಗಳೂರು ಮರಗಳನ್ನು ಉರುಳಿಸಿ, ಬಿಸಿಯೇರುತ್ತಿರುವ ನಗರವಾಗಿದೆ.

ಹಿಂದೆ ಎಂ.ಜಿ. ರಸ್ತೆಯಲ್ಲಿ ಸುತ್ತಾಡುವುದೆಂದರೆ ಎಷ್ಟೊಂದು ಖುಷಿ ಇರುತ್ತಿತ್ತು. ಆಗೆಲ್ಲಾ ‘ಲೇಕ್‌ವ್ಯೂ’ ಐಸ್ ಕ್ರೀಂ ಪಾರ್ಲರಿನಲ್ಲಿ ಐಸ್‌ಕ್ರೀಂ ತಿಂದು ಬರುವುದರಲ್ಲಿ ಬಹಳ ಮಜವಿರುತ್ತಿತ್ತು.  ಎಲ್ಲೆಲ್ಲಿಂದಲೋ ಅಲ್ಲಿಗೆ ಜನರು ಬರುತ್ತಿದ್ದರು. ಒಂದೆರಡು ಬಾರಿ ನಟ ಶಂಕರ್‌ನಾಗ್ ತಮ್ಮ ಕುಟುಂಬದೊಂದಿಗೆ ‘ಲೇಕ್‌ ವ್ಯೂ’ಗೆ ಬಂದಿದ್ದನ್ನು ನೋಡಿದ್ದು ನನಗೆ ಚೆನ್ನಾಗಿ ನೆನಪಿದೆ. ಎಷ್ಟೋ ಸಲ ಯಾರನ್ನಾದರೂ ಭೇಟಿಯಾಗಬೇಕಿದ್ದರೆ ಅಲ್ಲೇ ಬರಲು ಹೇಳುವುದೂ ಇತ್ತು.

ಆಗಿನ ಎಂಟಿಆರ್‌ ಹೋಟೆಲ್‌ನಲ್ಲಿ ತುಪ್ಪದ ವಾಸನೆಯೇ ತುಂಬಿರುತ್ತಿತ್ತು. ಬೆಳ್ಳಿತಟ್ಟೆಯಲ್ಲಿ ತಿಂಡಿ ಕೊಡುತ್ತಿದ್ದರು. ಏರ್‌ಲೈನ್ಸ್‌ ಹೋಟೆಲ್‌ ಕೂಡಾ  ಪ್ರಸಿದ್ಧಿಯಾಗಿತ್ತು. ಅಲ್ಲಿನ ಬಾಸುಂದಿ ತುಂಬಾ ರುಚಿ. ಅದನ್ನು ತಿನ್ನಲೆಂದೇ ಅಲ್ಲಿಗೆ ಹೋಗುತ್ತಿದ್ದೆ.

ಶಾಪಿಂಗ್‌ಗೆ ಕಮರ್ಷಿಯಲ್ ಸ್ಟ್ರೀಟ್‌ಗೆ ಹೋಗುತ್ತಿದ್ದೆ. ಸ್ನೇಹಿತೆಯರು, ಅಕ್ಕ ತಂಗಿಯರೆಲ್ಲ ವಿಂಡೊ ಶಾಪಿಂಗ್ ಮಾಡುತ್ತಿದ್ದೆವು. ಚಿತ್ರಕಲಾ ಪರಿಷತ್‌ನಲ್ಲಿ ಈಗಿನಷ್ಟು ಮೇಳಗಳು ಆಗುತ್ತಿರಲಿಲ್ಲ. ಈಗೀಗ ಅಲ್ಲಿ ಚಿತ್ರಕಲಾ ಪ್ರದರ್ಶನಕ್ಕಿಂತ ಮೇಳಗಳೇ ಜಾಸ್ತಿಯಾಗಿವೆ. ಪರಿಷತ್ತಿನ ಒಳಗೆ ಮೇಳ ಮಾಡಲು ಅವಕಾಶ ಕೊಡುವ ಬದಲು ಆವರಣದಲ್ಲಿ ನೀಡಬೇಕು.

1974ರಲ್ಲಿ ನನ್ನ ಮೊದಲ ಕಾದಂಬರಿ ‘ಪ್ರಜಾಮತ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಆ ಪತ್ರಿಕೆಯ ಸಂಪಾದಕ ಮ.ನ.ಮೂರ್ತಿ ಅವರು ನನ್ನನ್ನು ಹುಡುಕಿಕೊಂಡು ಬ್ಯಾಂಕಿಗೆ ಬಂದು ಭೇಟಿ ಮಾಡಿದ್ದನ್ನು ಮರೆಯಲಾಗದು.

ಡಾ.ಅನುಪಮಾ ನಿರಂಜನ ಅವರ ‘ನೆನಪು ಸಿಹಿ–ಕಹಿ’ ಲೇಖನ ಮಾಲಿಕೆ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅದನ್ನು ಓದಿ ಅನುಪಮಾ ಅವರನ್ನು ಭೇಟಿ ಮಾಡಿದ್ದೆ. ನಾನೂ ಸೇರಿದಂತೆ ಅನೇಕ ಲೇಖಕಿಯರಿಗೆ ಅವರು ಪ್ರೋತ್ಸಾಹ ಕೊಡುತ್ತಿದ್ದರು. ಎಂ.ಕೆ. ಇಂದಿರಾ ಆತ್ಮೀಯವಾಗಿದ್ದರು. ಸುನಂದಮ್ಮ, ಎಚ್.ಎಸ್. ಪಾರ್ವತಿ, ಡಾ.ನಿರುಪಮಾ, ನಾಗಮಣಿ ಎಸ್. ರಾವ್, ಪ್ರೊ.ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್. ರಾಘವೇಂದ್ರರಾವ್,  ಜಿ.ಎಸ್. ಶಿವರುದ್ರಪ್ಪ, ವಿಜಯಲಕ್ಷ್ಮೀ, ಪ್ರೊ.ಶಾಂತಕುಮಾರಿ, ಕೆ.ಆರ್.ಸಂಧ್ಯಾರೆಡ್ಡಿ ಹೀಗೆ ಅನೇಕರ ಒಡನಾಟ ಈ ನಗರದಿಂದಾಗಿ ದೊರೆಯಿತು.

2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದೆ. ಇದು ವಿಭಿನ್ನ ಅನುಭವ ನೀಡಿತು. ಸಂಘದ ಕಾರ್ಯ ಚಟುವಟಿಕೆಗಳೆಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯುತ್ತಿದ್ದರಿಂದ ಪರಿಷತ್ತಿನೊಂದಿಗೆ ನಿಕಟ ಸಂಪರ್ಕವಾಯಿತು. ಜಿ. ನಾರಾಯಣ ಮತ್ತು
ಚಿ.ಶ್ರೀನಿವಾಸರಾಜು ನಮ್ಮ ಸಂಘಕ್ಕೆ ಪ್ರೋತ್ಸಾಹ ನೀಡುತ್ತಿದ್ದರು.

ಆಗಿನ ಹಿರಿಯ ಲೇಖಕಿಯರು ಯುವ ಲೇಖಕಿಯರ ಪ್ರತಿಭೆ ಗುರುತಿಸಿ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಈಗ ಅಂಥ ವಾತಾವರಣ ಇಲ್ಲ. ಎಲ್ಲರೂ ತಮ್ಮ ತಮ್ಮ ಸ್ವಾರ್ಥದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮದೇ ಗುಂಪುಗಳನ್ನು  ಕಟ್ಟಿಕೊಂಡಿದ್ದಾರೆ. ಸಂಘಟಿತ ಮನೋಭಾವ ಇಲ್ಲ. ಈಗೀಗ ನಗರದಲ್ಲಿರುವ ಸಾಹಿತ್ಯ ಸಂಘ, ಪರಿಷತ್‌ಗಳಲ್ಲಿ ರಾಜಕೀಯವೇ ಮೇಲುಗೈ ಸಾಧಿಸುತ್ತಿದೆ.

ಆಗೆಲ್ಲಾ ಇಡೀ ಬೆಂಗಳೂರಿನಲ್ಲಿ ಯಾರ ಮನೆಗೆ ಹೋಗಬೇಕಾದರೂ ಸುಲಭವಾಗಿ ಹೋಗಿಬರಬಹುದಿತ್ತು. ಈಗಿನಷ್ಟು ಸಂಚಾರ ದಟ್ಟಣೆ ಇರುತ್ತಿರಲಿಲ್ಲ. ಈಗ ನೆಂಟರಿಷ್ಟರ ಮನೆಗೆ ಹೋಗಿ ಬರುವುದು ಹೆಚ್ಚುಕಮ್ಮಿ ನಿಂತೇ ಹೋಗಿದೆ. ಬೆಂಗಳೂರಿನ ಚಂದವೇ ಕಳೆದುಹೋಗಿದೆ. ಮನೆಯಿಂದ ಹೊರಗೆ ಹೋಗುವ ಉತ್ಸಾಹವೂ ಕುಂದಿದೆ.

ದಕ್ಷಿಣ ಕನ್ನಡದವಳಾಗಿದ್ದರಿಂದ ಆರಂಭದಲ್ಲಿ ಈ ನಗರದವರು ಹೊರಗಿನವಳಾಗಿಯೇ ಗುರುತಿಸುತ್ತಿದ್ದರು. ಆದರೆ ಸಾಹಿತ್ಯಕ–ಸಾಂಸ್ಕೃತಿಕ ಚಟುವಟಿಕೆಗಳಿಂದ ಇಲ್ಲಿನವಳೇ ಆಗಿಬಿಟ್ಟೆ. ಈಗ ನನ್ನ ತವರಿಗೆ ನಾನು ಹೊರಗಿನವಳು!

ಪರಿಚಯ
*ಜನನ: ಮೇ 23, 1945, ಉಡುಪಿ
*ಶಿಕ್ಷಣ: ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
*ಉದ್ಯೋಗ: ವಿಜಯಾ ಬ್ಯಾಂಕ್‌   ಅಧಿಕಾರಿ. 1999ರಲ್ಲಿ ಸ್ವಯಂ ನಿವೃತ್ತಿ.
*ಪತಿ: ಬಿ.ಎ.ಪ್ರಭಾಕರ ರೈ
*ಮಕ್ಕಳು: ಸಾತ್ವಿಕ್, ಸುಭಾಷ್
*ಬರವಣಿಗೆ: ಕಾದಂಬರಿ, ಸಣ್ಣಕತೆ, ಕವನ, ವ್ಯಕ್ತಿ ಚಿತ್ರಣ, ವೈಚಾರಿಕ ಮತ್ತು ಲಘು ಲೇಖನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry