‘ಎಚ್‌ಎಎಲ್‌ ದೇವಸ್ಥಾನವಿದ್ದಂತೆ’

7

‘ಎಚ್‌ಎಎಲ್‌ ದೇವಸ್ಥಾನವಿದ್ದಂತೆ’

Published:
Updated:
‘ಎಚ್‌ಎಎಲ್‌ ದೇವಸ್ಥಾನವಿದ್ದಂತೆ’

ನನ್ನ ಹೆಸರು ಸು.ಜಗದೀಶ್‌. ಹುಟ್ಟೂರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಿಟ್ಟಿಗಾನಹಳ್ಳಿ. ಬಂಗಾರಪೇಟೆಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮುಗಿಸಿದೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ (IIIE) ಕೋರ್ಸ್‌ ಮಾಡಿದೆ.

ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರಬೇಕಾಯಿತು. ಆರಂಭದಲ್ಲಿ ಕೆಲ ಕಾರ್ಖಾನೆಗಳಲ್ಲಿ ಸಿಕ್ಕ ಸಣ್ಣಪುಟ್ಟ ಕೆಲಸ ಮಾಡಿದೆ. 1999ರಲ್ಲಿ  ಎಚ್‌ಎಎಲ್‌ನಲ್ಲಿ ಅರ್ಜಿ ಆಹ್ವಾನಿಸಿದಾಗ ಅರ್ಜಿ ಹಾಕಿ ಆಯ್ಕೆಯೂ ಆದೆ. ಒಂದು ವರ್ಷ ತರಬೇತಿ ಪಡೆದೆ. ಬಾಹ್ಯಾಕಾಶ ವಿಭಾಗಕ್ಕೆ ಪರಿವೀಕ್ಷಕನಾಗಿ ಸೇರಿಕೊಂಡೆ. ಈಗ ಗುಣಮಟ್ಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಉಪಗ್ರಹ ಉಡಾವಣಾ ವಾಹನದ ಬಿಡಿ ಭಾಗಗಳು ಹಾಗೂ ಜೋಡಣೆ ಭಾಗಗಳನ್ನು ತಯಾರಿಸುವ ಕೆಲಸ ಇಲ್ಲಿ ನಡೆಯುತ್ತದೆ. ಅಸೆಂಬ್ಲಿ, ಸಬ್‌ ಅಸೆಂಬ್ಲಿಯನ್ನೂ ಇಲ್ಲಿಯೇ ಮಾಡುವುದು. ತಯಾರಾದ ಯಂತ್ರಗಳನ್ನು ಪರೀಕ್ಷಿಸುವ ಕೆಲಸ ನನ್ನದು. ಕೋಆರ್ಡಿನೇಟಿಂಗ್‌ ಮೆಷರಿಂಗ್‌ ಮಷಿನ್‌ (ಸಿಎಂಎಂ) ಬಿಡಿಭಾಗಗಳನ್ನು ನಿಖರವಾಗಿ ಪರೀಕ್ಷಿಸುತ್ತದೆ.

ಕೈಯಲ್ಲಿ ಪರೀಕ್ಷಿಸಿದರೆ ಕೆಲವೊಮ್ಮೆ ಸೂಕ್ಷ್ಮ ಸಮಸ್ಯೆಗಳು ಗೊತ್ತಾಗುವುದಿಲ್ಲ. ಹಾಗಾಗಿ ಯಂತ್ರಗಳನ್ನು ಬಳಸುತ್ತೇವೆ. ಒಮ್ಮೆ ಓಕೆ ಮಾಡಿದರೆ ಮುಗಿಯಿತು. ಆದ್ದರಿಂದ ಜಾಗ್ರತೆಯಿಂದ ಯಂತ್ರಗಳನ್ನು ಪರೀಕ್ಷಿಸಬೇಕಾಗುತ್ತದೆ.

ಪಿಎಸ್‌ಎಲ್‌ವಿ (ಪೋಲಾರ್ ಉಪಗ್ರಹ ಉಡಾವಣಾ ವಾಹನ), ಜಿಎಸ್‌ಎಲ್‌ವಿ (ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ) ಹಾಗೂ ಮಾರ್ಕ್‌2 ವಾಹನಗಳನ್ನು ತಾಯಾರಿಸಿದ್ದೇವೆ. ಈಗ ಹೆಚ್ಚು ಉಪಗ್ರಹಗಳನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯದ ಮಾರ್ಕ್‌ 3 ವಾಹನವನ್ನು ತಯಾರಿಸಲಾಗುತ್ತಿದೆ.

ಇಲ್ಲಿ ತಯಾರಾದ ವಾಹನಗಳ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ತಮಿಳುನಾಡಿನ ಶ್ರೀಹರಿಕೋಟಾದಲ್ಲಿ  ಉಪಗ್ರಹಗಳನ್ನು ಉಡಾವಣೆ ಮಾಡುತ್ತದೆ. ದೇಶಕ್ಕೆ ಸಂಬಂಧಪಟ್ಟ ಎಲ್ಲಾ ಉಪಗ್ರಹಗಳನ್ನು ಇಲ್ಲಿ ತಯಾರಾದ ವಾಹನದಲ್ಲೇ ಉಡಾವಣೆ ಮಾಡುವುದು.

ಬೃಹತ್‌ ಲಾರಿಗಳಲ್ಲಿ ಬಿಡಿ ಭಾಗಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಜೋಡಿಸಲಾಗುತ್ತದೆ. ಉಪಗ್ರಹದ ಉಷ್ಣಾಂಶ ಕವಚವೂ ಇಲ್ಲಿಯೇ ತಯಾರಾಗುತ್ತದೆ. ಇಂಥ ಪ್ರತಿಷ್ಠಿತ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ.

ನಮ್ಮ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಅವರ ಜೀವನ ಪಾಠ ನನ್ನ ಬದುಕಿಗೆ ದಾರಿದೀಪವಾಯಿತು. ನನ್ನ ಹೆಂಡತಿ ಗೃಹಿಣಿ. ಒಬ್ಬ ಮಗಳಿದ್ದಾಳೆ. ಬನ್ನೇರುಘಟ್ಟದಲ್ಲಿ ವಾಸವಾಗಿದ್ದೇನೆ.

ಏರೋಸ್ಪೇಸ್‌ ಕನ್ನಡ ಸಂಘ ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತೇವೆ. ನಾಟಕ ಪ್ರದರ್ಶನ ಹಮ್ಮಿಕೊಳ್ಳುತ್ತೇವೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ. ಅನ್ನ ಕೊಡುತ್ತಿರುವ ಎಚ್‌ಎಎಲ್‌ ನಮಗೆ ದೇವಸ್ಥಾನವಿದ್ದಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry