ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ರಿಟರ್ನ್ಸ್‌ ಸಲ್ಲಿಕೆಗೆ ವಿನಾಯ್ತಿ

ಜೂನ್‌ 30ರ ಮಧ್ಯರಾತ್ರಿಯಿಂದಲೇ ಜಾರಿ– ಜೇಟ್ಲಿ ಸ್ಪಷ್ಟನೆ
Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಇದೇ 30ರ ಮಧ್ಯರಾತ್ರಿಯಿಂದಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಅಧಿಕೃತವಾಗಿ ಜಾರಿಗೆ ಬರಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

‘ಜಿಎಸ್‌ಟಿ ಮುಂದೂಡಲು ಸಮರ್ಥನೀಯ ಕಾರಣಗಳೇ ಇಲ್ಲ. ಜುಲೈ 1ರಿಂದ ಜಾರಿಗೆ ತರಲು ಮಂಡಳಿ ದೃಢ ನಿಲುವು ತಳೆದಿದೆ’ ಎಂದು ಜೇಟ್ಲಿ ಹೇಳುವ ಮೂಲಕ, ಮುಂದೂಡಿಕೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಭಾನುವಾರ ಇಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 17ನೆ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ರಿಯಾಯ್ತಿ:  ಲೆಕ್ಕಪತ್ರ  ಸಲ್ಲಿಕೆಗೆ (ರಿಟರ್ನ್ಸ್‌) ಆರಂಭದಲ್ಲಿ ಎರಡು ತಿಂಗಳ ಕಾಲಾವಕಾಶ ಸೇರಿದಂತೆ ಕೆಲವು ರಿಯಾಯ್ತಿಗಳನ್ನು ಪ್ರಕಟಿಸಲಾಗಿದೆ.

ಏ.ಸಿ ಹೋಟೆಲ್‌ಗಳ ಮೇಲಿನ ತೆರಿಗೆ ದರಗಳನ್ನು ತಗ್ಗಿಸಲಾಗಿದೆ. ದಿನದ ಕೋಣೆ ಬಾಡಿಗೆ ₹ 7,500ಕ್ಕಿಂತ ಹೆಚ್ಚಿಗೆ ಇರುವ ಹೋಟೆಲ್‌ಗಳನ್ನು ಶೇ 28ರ ತೆರಿಗೆ ದರ ವ್ಯಾಪ್ತಿಗೆ ತರಲಾಗಿದೆ. ಇದಕ್ಕೂ ಮೊದಲು ಈ ಮಿತಿ ₹ 5,000ಕ್ಕೆ ಇತ್ತು.

ಇನ್ನು ಮುಂದೆ ₹ 2,500 ರಿಂದ ₹ 7,500ರಷ್ಟು ಬಾಡಿಗೆ ವಿಧಿಸುವ ಹೋಟೆಲ್‌ಗಳು ಶೇ 18ರ ತೆರಿಗೆ ದರ ವ್ಯಾಪ್ತಿಗೆ ಬರಲಿವೆ.

ಸರ್ಕಾರ ನಿರ್ವಹಿಸುವ ಲಾಟರಿಗಳ ಮೇಲೆ ಶೇ 12 ಮತ್ತು ಸರ್ಕಾರದ ನಿಯಂತ್ರಣದಲ್ಲಿ ಇರುವ ಖಾಸಗಿ ವಲಯದ ಲಾಟರಿಗಳ ಮೇಲೆ ಶೇ 18ರಷ್ಟು ತೆರಿಗೆ ದರ ವಿಧಿಸಲು ನಿರ್ಧರಿಸಲಾಗಿದೆ.

ರಿಟರ್ನ್ಸ್‌ ಕಾಲಾವಕಾಶ ವಿಸ್ತರಣೆ: ರಿಟರ್ನ್ಸ್‌ ಸಲ್ಲಿಸಲು ಕಂಪನಿಗಳಿಗೆ ಆರಂಭದಲ್ಲಿ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ವರ್ತಕರು ಮಾರಾಟ ಲೆಕ್ಕಪತ್ರಗಳನ್ನು ಆಗಸ್ಟ್‌ 10ರ ಬದಲು ಸೆಪ್ಟೆಂಬರ್‌ 5ರಂದು ಸಲ್ಲಿಸಲು ಅನುಮತಿ ನೀಡಲಾಗಿದೆ. ಕಂಪನಿಗಳು ಆಗಸ್ಟ್‌ ತಿಂಗಳ ಮಾರಾಟ ಬೆಲೆಪಟ್ಟಿಗಳನ್ನು ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಸೆಪ್ಟೆಂಬರ್‌ 10ರ ಬದಲು ಸೆಪ್ಟೆಂಬರ್‌ 20ಕ್ಕೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಲಾಭ ನಿರ್ಬಂಧಿಸುವ, ಲೆಕ್ಕಪತ್ರ ತಪಾಸಣೆ ಕುರಿತ ನಿಯಮಗಳನ್ನು ಅಂತಿಮಗೊಳಿಸಲಾಗಿದೆ.ಸರಕು

ಗಳ  ಸಾಗಾಣಿಕೆಗೆ ಸಂಬಂಧಿಸಿದ ಇ–ವೇ ಬಿಲ್‌ ಕುರಿತು ಈ ಸಭೆಯಲ್ಲಿಯೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

‘ಇ–ವೇ ಬಿಲ್‌’ಗೆ  ಪರ್ಯಾಯ ಇಲ್ಲವೆ ತಾತ್ಕಾಲಿಕ ನಿಯಮ ಜಾರಿಯಲ್ಲಿ ಇರಲಿದೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಜಿಎಸ್‌ಟಿಗೆ ಪೂರಕವಾದ ಐ.ಟಿ ಸಿದ್ಧತೆಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು. ಮಂಡಳಿಯು ಇದೇ 30ರಂದು ಮತ್ತೆ ಸಭೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT