ಭಾರತ ತಂಡಕ್ಕೆ ಹ್ಯಾಟ್ರಿಕ್‌ ಜಯದ ಸವಿ : ಭಾವನ ನಿಧನದ ಆಘಾತದ ನಡುವೆಯೂ ಮಿಂಚಿದ ಸುನಿಲ್‌

7
ಪಾಕಿಸ್ತಾನ ಎದುರು ಜಯ ಗಳಿಸಿದ ಮನ್‌ಪ್ರೀತ್‌ ಸಿಂಗ್ ಬಳಗ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ

ಭಾರತ ತಂಡಕ್ಕೆ ಹ್ಯಾಟ್ರಿಕ್‌ ಜಯದ ಸವಿ : ಭಾವನ ನಿಧನದ ಆಘಾತದ ನಡುವೆಯೂ ಮಿಂಚಿದ ಸುನಿಲ್‌

Published:
Updated:
ಭಾರತ ತಂಡಕ್ಕೆ ಹ್ಯಾಟ್ರಿಕ್‌ ಜಯದ ಸವಿ : ಭಾವನ ನಿಧನದ ಆಘಾತದ ನಡುವೆಯೂ ಮಿಂಚಿದ ಸುನಿಲ್‌

ಲಂಡನ್‌: ಅತ್ಯುತ್ತಮವಾಗಿ ಆಡಿದ ಭಾರತ ತಂಡದವರು ವಿಶ್ವ ಹಾಕಿ ಸೆಮಿಫೈನಲ್ ಲೀಗ್‌ನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಇಲ್ಲಿನ ಲೀ ವ್ಯಾಲಿ ಹಾಕಿ ಅಂಡ್‌ ಟೆನಿಸ್ ಸೆಂಟರ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 7–1 ಗೋಲು ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತು. ಈ ಮೂಲಕ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತು. ಟೂರ್ನಿಯಲ್ಲಿ ಇದು ಭಾರತದ ಹ್ಯಾಟ್ರಿಕ್‌ ಜಯ.

ಆರಂಭದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ತಲ್ವಿಂದರ್ ಸಿಂಗ್‌ ತಲಾ ಎರಡು ಗೋಲು ಗಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಿದರು. ನಂತರ ಆಕಾಶ್‌ದೀಪ್‌ ಮತ್ತು ಪ್ರದೀಪ್‌ ಕ್ರಮವಾಗಿ ಎರಡು ಮತ್ತು ಒಂದು ಗೋಲು ಗಳಿಸಿದರು. ಮಹಮ್ಮದ್ ಉಮರ್ ಬುಟ್ಟಾ ಪಾಕಿಸ್ತಾನ ಪರ ಏಕೈಕ ಗೋಲು ಗಳಿಸಿದರು.

ಮೊದಲ ಕ್ವಾರ್ಟರ್‌ನ ಹತ್ತು ನಿಮಿಷ ಕಾಲ ಪಾಕಿಸ್ತಾನ ಮೇಲುಗೈ ಸಾಧಿಸಿತು. ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಆ ತಂಡಕ್ಕೆ ಲಭಿಸಿತು. ಆದರೆ ಚೆಂಡು ಗೋಲುಪೆಟ್ಟಿಗೆ ಸೇರಲಿಲ್ಲ. ಭಾರತಕ್ಕೆ 13ನೇ ನಿಮಿಷದಲ್ಲಿ ಲಭಿಸಿದ ಅವಕಾಶ ಗೋಲಾಗಿ ಪರಿವರ್ತನೆಗೊಂಡಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸುಲಭವಾಗಿ ಗೋಲಾಗಿ ಪರಿವರ್ತಿಸಿದ ಡ್ರ್ಯಾಗ್‌ ಫ್ಲಿಕ್ಕರ್‌ ಹರ್ಮನ್‌ ಪ್ರೀತ್ ಸಿಂಗ್‌ ಎದುರಾಳಿಗೆ ಮೊದಲ ಆಘಾತ ನೀಡಿದರು. ನಾಲ್ಕು ನಿಮಿಷಗಳ ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಗೋಲು ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಸಿಂಗ್‌ ಹೊಡೆದ ಚೆಂಡನ್ನು ಪಾಕಿಸ್ತಾನದ ಅಮ್ಜದ್‌ ಅಲಿ ತಡೆದರು.

ಆದರೆ 21ನೇ ನಿಮಿಷದಲ್ಲಿ ತಲ್ವಿಂದರ್ ಸಿಂಗ್‌ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಸತ್‌ಬೀರ್‌ ಸಿಂಗ್‌ ಮತ್ತು ಎಸ್‌.ವಿ. ಸುನಿಲ್ ನೀಡಿದ ಪಾಸ್‌ ಪಡೆದು ಅವರು ಗೋಲು ಗಳಿಸಿದರು. ಮೂರು ನಿಮಿಷಗಳ ಅಂತರದಲ್ಲಿ ಮತ್ತೊಂದು ಗೋಲು ಗಳಿಸಿದ ಅವರು ಪಾಕಿಸ್ತಾನದ ಆತಂಕವನ್ನು ಹೆಚ್ಚಿಸಿದರು. 3–0 ಮುನ್ನಡೆಯೊಂದಿಗೆ ಮೊದಲಾರ್ಧ ಮುಗಿಸಿದ ಭಾರತದ ಆಟಗಾರರಿಗೆ ಉತ್ತರಾರ್ಧದಲ್ಲಿ ಒತ್ತಡವಿರಲಿಲ್ಲ. ಹರ್ಮನ್‌ ಪ್ರೀತ್‌ 33ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿತ್ತರು.

ಆಕಾಶ್‌ದೀಪ್‌ ಮತ್ತು ಪ್ರದೀಪ್‌ ಕ್ರಮವಾಗಿ 47 ಮತ್ತು 49ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಆಗ ಅಸಹಾಯಕ ಸ್ಥಿತಿಗೆ ತಲುಪಿದಂತೆ ಕಂಡುಬಂದ ಪಾಕಿಸ್ತಾನಕ್ಕೆ ಮಹಮ್ಮದ್ ಉಮರ್‌ ಬುಟ್ಟಾ ಸಮಾಧಾನಕರ ಗೋಲು ತಂದಿತ್ತರು. ಆಕಾಶ್‌ದೀಪ್‌ ಸಿಂಗ್‌ 59ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿ ಮಿಂಚಿದರು.

ಭಾರತದ ಮುಂದಿನ ಪಂದ್ಯ ಜೂನ್‌ 20ರಂದು ನೆದರ್ಲೆಂಡ್ಸ್ ವಿರುದ್ಧ ನಡೆಯಲಿದೆ. ಪಾಕಿಸ್ತಾನದ ಕೊನೆಯ ಪಂದ್ಯ ಸ್ಕಾಟ್ಲೆಂಡ್‌ ವಿರುದ್ಧ ಸೋಮವಾರ ನಡೆಯಲಿದೆ.

ಸುನಿಲ್‌ಗೆ ಭಾವನ ನಿಧನದ ಆಘಾತ

ಭಾರತ ತಂಡದ ಆಟಗಾರ ಎಸ್‌.ವಿ. ಸುನಿಲ್ ಅವರ ಅಕ್ಕನ ಗಂಡ ಗಣೇಶ್ ಆಚಾರ್ (46) ಅವರು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಮಧ್ಯಾಹ್ನವೇ ಸುನಿಲ್ ಅವರಿಗೆ ತಮ್ಮ ಭಾವನ ಸುದ್ದಿ ತಿಳಿದಿತ್ತು. ಈ ಒತ್ತಡದ ನಡುವೆಯೂ ಮಹತ್ವದ ಪಂದ್ಯದಲ್ಲಿ ಉತ್ತಮವಾಗಿ ಆಡಿದರು.

2009ರಲ್ಲಿ ಅಜ್ಲನ್ ಶಾ ಹಾಕಿ ಟೂರ್ನಿಯ ಫೈನಲ್‌ ಸಂದರ್ಭದಲ್ಲಿ ಸುನಿಲ್ ಅವರ ತಂದೆ ಸಾವನ್ನಪ್ಪಿದ್ದರು. ಆಗಲೂ ಸುನಿಲ್ ಅಮೋಘವಾಗಿ ಆಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.

**

ಕಪ್ಪು ಪಟ್ಟಿ ಧರಿಸಿ ಆಟ

ಲಂಡನ್‌: ಭಾರತ ಸೇನೆಯ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಭಾರತದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿ ಆಡಿದರು. ತಂಡದ ನೆರವು ಸಿಬ್ಬಂದಿ ಕೂಡ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದರು.

ಆಟಗಾರರು ಸಾಮಾಜಿಕ ತಾಣಗಳಲ್ಲೂ ಹುತಾತ್ಮರನ್ನು ನೆನಪಿಸಿಕೊಂಡಿದ್ದರು. ಕಳೆದ ವರ್ಷ ನಡೆದ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ

ವನ್ನು ಮಣಿಸಿದ ನಂತರ ಆ ಗೆಲುವನ್ನು ತಂಡದ ನಾಯಕ ಶ್ರೀಜೇಶ್‌ ಸೈನಿಕರಿಗೆ ಅರ್ಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry