ಗಿನ್ನಿಸ್ ದಾಖಲೆಗೆ ಶೀರ್ಷಾಸನ

7

ಗಿನ್ನಿಸ್ ದಾಖಲೆಗೆ ಶೀರ್ಷಾಸನ

Published:
Updated:
ಗಿನ್ನಿಸ್ ದಾಖಲೆಗೆ ಶೀರ್ಷಾಸನ

ಬೆಂಗಳೂರು:  ಸದಾ ರಾಜಕೀಯ, ಆಡಳಿತ ಚಟುವಟಿಕೆಗಳ ತಾಣ, ರಾಜಕಾರಣಿಗಳು, ಅವರ ಹಿಂಬಾಲಕರು, ಅಧಿಕಾರಿಗಳಿಂದಲೇ ಗಿಜಿಗುಟ್ಟುವ ವಿಧಾನಸೌಧದ ಆವರಣದಲ್ಲಿ ಭಾನುವಾರ ಭಿನ್ನ ವಾತಾವರಣ ಇತ್ತು. ಓಂಕಾರ ನಾದ,  ಶೀರ್ಷಾಸನದ ದೃಶ್ಯಗಳೇ ಅಲ್ಲಿ  ತುಂಬಿದ್ದವು.

ಸೂರ್ಯ ಕಿರಣಗಳು  ಹೊರಹೊಮ್ಮುವ ಹೊತ್ತಿಗೆ ಯೋಗಪಟುಗಳು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಜಮಾಯಿಸಿದ್ದರು. ಸಾಮೂಹಿಕವಾಗಿ ಶೀರ್ಷಾಸನ ಮಾಡಿ ಗಿನ್ನಿಸ್ ದಾಖಲೆಯನ್ನೂ ಬರೆದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯೋಗ ಗಂಗೋತ್ರಿ ಟ್ರಸ್ಟ್ ಸಹಯೋಗದೊಂದಿಗೆ ‘ಗಿನ್ನಿಸ್ ದಾಖಲೆಗಾಗಿ  ಶೀರ್ಷಾಸನ’ ಏರ್ಪಡಿಸಲಾಗಿತ್ತು.

ಸುಮಾರು 1,800 ಯೋಗಪಟುಗಳು ಬೆಳಿಗ್ಗೆ 8ರಿಂದ 8.10ರೊಳಗೆ 30 ಸೆಕೆಂಡ್‌ವರೆಗೆ ಶೀರ್ಷಾಸನ ಹಾಕಿದ್ದರು. ಪ್ರತಿ 50 ಯೋಗಪಟುಗಳಿಗೆ ಒಬ್ಬ ತರಬೇತುದಾರ ಮಾರ್ಗದರ್ಶನ ಮಾಡುತ್ತಿದ್ದರು.

2016ರ ಡಿಸೆಂಬರ್‌ನಲ್ಲಿ ಚೆನ್ನೈನ ಮರೀನಾ ಬೀಚ್‌ನಲ್ಲಿ 648 ಯೋಗಪಟುಗಳು ಶೀರ್ಷಾಸನ ಹಾಕಿದ್ದು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಇಂದಿನ ಯೋಗ ಹಳೆಯ ದಾಖಲೆಯನ್ನು ಮುರಿದಿದೆ.

‘ಗಿನ್ನಿಸ್ ದಾಖಲೆಗಾಗಿ ನಡೆಸಿದ ಶೀರ್ಷಾಸನ ಯೋಗ ಕಾರ್ಯಕ್ರಮದ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಇದನ್ನು ಗಿನ್ನಿಸ್ ಸಂಸ್ಥೆಗೆ ಕಳುಹಿಸಲಾಗುವುದು’ ಎಂದು ಯೋಗ ಗಂಗೋತ್ರಿ ಟ್ರಸ್ಟ್‌ ಸ್ಥಾಪಕ ಆರಾಧ್ಯ ಹೇಳಿದರು.

ಶೀರ್ಷಾಸನದಲ್ಲಿ ಪರಿಣತಿ ಪಡೆದ ಯೋಗಪಟುಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಪತಂಜಲಿ, ಆರ್ಟ್‌ ಆಫ್‌ ಲಿವಿಂಗ್‌ ಸೇರಿದಂತೆ ಬೆಂಗಳೂರಿನ ಅನೇಕ ಯೋಗ ಸಂಸ್ಥೆಗಳ ಸದಸ್ಯರ ಜೊತೆಗೆ ಮೈಸೂರು, ತುಮಕೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಂದಲೂ ಯೋಗಪಟುಗಳು ಬಂದಿದ್ದರು. ಹೈದರಾಬಾದ್‌ನಿಂದ 250 ಜನರು ಇದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದರು ಎಂದು ವಿವರಿಸಿದರು.

ಸಚಿವರಿಂದ ಚಾಲನೆ: ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಅವಶ್ಯಕ. ವಿಧಾನಸೌಧದ ಮುಂಭಾಗ ಇಷ್ಟು ಬೃಹತ್ ಸಂಖ್ಯೆಯಲ್ಲಿ ಜನರು ಸೇರಿ ಯೋಗ ಮಾಡಿರುವುದು ಮತ್ತು ಅದನ್ನು ಗಿನ್ನಿಸ್ ದಾಖಲೆಗೆ ಸೇರಿಸುತ್ತಿರುವುದು ಶ್ಲಾಘನೀಯ ಕೆಲಸ’ ಎಂದು ಅವರು ಬಣ್ಣಿಸಿದರು.

ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಯೋಗಪಟುಗಳನ್ನು ಅಭಿನಂದಿಸಿದರು.

ಯೋಗ ದಿನ ಜಾಗೃತಿ

‘ಜೂನ್ 21ರಂದು ವಿಶ್ವ ಯೋಗ ದಿನ ನಡೆಯುಲಿದೆ. ಇದಕ್ಕೆ ಪೂರ್ವಭಾವಿಯಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಾಕಥಾನ್ ನಡೆಸುವುದು ಸಾಮಾನ್ಯ. ಆದರೆ, ನಾವು ಗಿನ್ನಿಸ್ ದಾಖಲೆ ನಿರ್ಮಿಸುವ ಮೂಲಕ ಯೋಗ ದಿನದ ಜಾಗೃತಿ ಮೂಡಿಸುವ ಯತ್ನ ಮಾಡಿದ್ದೇವೆ’ ಎಂದು ಆರಾಧ್ಯ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry