ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಾಂತ್ ಮುಡಿಗೆ ಪ್ರಶಸ್ತಿ

ಇಂಡೋನೆಷ್ಯಾ ಸೂಪರ್‌ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್
Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಜಕಾರ್ತಾ: ಭಾರತದ ಕಿದಂಬಿ ಶ್ರೀಕಾಂತ್ ಅವರು ಭಾನುವಾರ ಇಂಡೋನೆಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್‌ ಬ್ಯಾಡ್ಮಿಂಟನ್  ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ವಿಶ್ರಶ್ರೇಯಾಂಕದಲ್ಲಿ 22ನೇ ಸ್ಥಾನದಲ್ಲಿರುವ ಹೈದರಾಬಾದಿನ ಶ್ರೀಕಾಂತ್ ಅವರು ಫೈನಲ್‌ನಲ್ಲಿ 21–11, 21–19ರಿಂದ ಜಪಾನಿನ ಕಜುಮಾಸಾ ಸಕಾಯ್ ವಿರುದ್ಧ ಗೆದ್ದರು. ₹ 48.75 ಲಕ್ಷ  ಪ್ರಶಸ್ತಿ ಮೊತ್ತವನ್ನು ಜೇಬಿಗಿಳಿಸಿಕೊಂಡರು.

24 ವರ್ಷದ ಒಲಿಂಪಿಯನ್ ಶ್ರೀಕಾಂತ್ ಅವರಿಗೆ ಇದು ಎರಡನೇ ಸೂಪರ್ ಸಿರೀಸ್ ಕಿರೀಟವಾಗಿದೆ. 2014ರಲ್ಲಿ ಅವರು  ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು. 2015ರಲ್ಲಿ ಅವರು  ಸಿಂಗಪುರ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ರನ್ನರ್ಸ್ ಅಪ್ ಆಗಿದ್ದರು.

37 ನಿಮಿಷಗಳವರೆಗೆ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್ ಅಮೋಘ ಆಟವಾಡಿದರು. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ಶ್ರೀಕಾಂತ್ ಅವರು ಅಂಕಣದ ತುಂಬ ಚುರುಕುತನದಿಂದ ಚಲಿಸಿದರು.  ಜಪಾನ್ ಆಟಗಾರನ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದರು. 

ಮೊದಲ ಗೇಮ್‌ನಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಶ್ರೀಕಾಂತ್,  ಹತ್ತು ಪಾಯಿಂಟ್‌ಗಳ ದೊಡ್ಡ ಅಂತರದ ಜಯ ಸಾಧಿಸಿದರು. ಗೇಮ್‌ನ ಆರಂಭಿಕ ಹಂತದಲ್ಲಿ ಸಕಾಯ್ ಅವರು ಸ್ವಲ್ಪ ಮಟ್ಟಿಗೆ ಸ್ಪರ್ಧೆ ಒಡ್ಡಿದ್ದರು. ಸುಮಾರು ಒಂಬತ್ತು ಪಾಯಿಂಟ್‌ಗಳವರೆಗೂ ಸಮಬಲದ ಹೋರಾಟ ಕಂಡುಬಂದಿತ್ತು.  ಹತ್ತು ಅಂಕಗಳ ಗಡಿ ದಾಟಿದ ನಂತರ ಶ್ರೀಕಾಂತ್ ತಮ್ಮ ಆಕ್ರಮಣಶೀಲ ಆಟವನ್ನು ಇನ್ನಷ್ಟು ಚುರುಕುಗೊಳಿಸಿದರು. ಅವರ ವೇಗದ ಸ್ಮ್ಯಾಷ್‌ಗಳು, ನೆಟ್‌ ಬಳಿಯ ಡ್ರಾಪ್‌ಗಳಿಗೆ ಸಕಾಯ್ ಅವರ ಬಳಿ  ಉತ್ತರವಿರಲಿಲ್ಲ.

ಎರಡನೇ ಗೇಮ್‌ನಲ್ಲಿ ಸಕಾಯ್ ದಿಟ್ಟ ಹೋರಾಟ ಮಾಡಿದರು. ರೋಚಕತೆ ಹುಟ್ಟುಹಾಕಿದ್ದ ಗೇಮ್‌ನಲ್ಲಿ ಶ್ರೀಕಾಂತ್ ಸಾಕಷ್ಟು ಬೆವರಿಳಿಸಬೇಕಾಯಿತು. 19ನೇ  ಅಂಕದವರೆಗೂ ಅತ್ತ ಇತ್ತ ಓಲಾಡಿದ ಗೆಲುವನ್ನು ಕೊನೆಯಲ್ಲಿ ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಶ್ರೀಕಾಂತ್ ಯಶಸ್ವಿಯಾದರು. ಅದರೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿದರು.

(ಪ್ರಶಸ್ತಿ ಜಯಿಸಿದ ಸಂಭ್ರಮದಲ್ಲಿರುವ ಕಿದಂಬಿ ಶ್ರೀಕಾಂತ್‌   ಪಿಟಿಐ ಚಿತ್ರ)

**

ವಿಶ್ವ ಚಾಂಪಿಯನ್‌ಷಿಪ್‌ಗೆ ವಿಶ್ವಾಸ ವೃದ್ಧಿ

ಈ ಪ್ರಶಸ್ತಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಮೂಡಿದೆ ಎಂದು ಕಿದಂಬಿ ಶ್ರೀಕಾಂತ್ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫೈನಲ್‌ ಪಂದ್ಯವು ಅಮೋಘವಾಗಿತ್ತು. ಸಕಾಯ್ ಅವರು ಕಠಿಣ ಸ್ಪರ್ಧೆ ಒಡ್ಡಿದರು. ಎರಡನೇ ಗೇಮ್‌ನಲ್ಲಿ ಅವರು (ಜಪಾನ್ ಆಟಗಾರ)  11–6ರಿಂದ ಮುನ್ನಡೆಯಲ್ಲಿದ್ದರು.  ಆ ಹಂತದಲ್ಲಿ ನಾನು ಎದೆಗುಂದಿದ್ದರೆ ಗೇಮ್‌ನಲ್ಲಿ ಸೋಲಬೇಕಿತ್ತು. ಆದರೆ ಎದೆಗುಂದದೆ ಪ್ರಯತ್ನಿಸಿದ್ದಕ್ಕೆ ಉತ್ತಮ ಫಲ ಸಿಕ್ಕಿತು’ ಎಂದು ವಿಶ್ಲೇಷಿಸಿದರು.

‘ಮುಂದಿನ ವಾರದಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದೇನೆ.  ಆ ನಂತರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತೇನೆ. ದೈಹಿಕ ಕ್ಷಮತೆಯೂ ಉತ್ತಮವಾಗಿರುವುದರಿಂದ ಯಾವುದೇ ಚಿಂತೆ ಇಲ್ಲ. ಪರಿಪೂರ್ಣ ಆಟವಾಡುತ್ತೇನೆ’ ಎಂದರು.

ಹೋದ ವರ್ಷ ರಿಯೊ ಒಲಿಂಪಿಕ್ಸ್ ನಂತರ ಅವರು ಗಾಯಗೊಂಡು ದೀರ್ಘ ವಿಶ್ರಾಂತಿ ಪಡೆದಿದ್ದರು.

**

ಪ್ರಧಾನಿ ಅಭಿನಂದನೆ
ಕಿದಂಬಿ ಶ್ರೀಕಾಂತ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

‘ಅಭಿನಂದನೆಗಳು ಶ್ರೀಕಾಂತ್. ನಿಮ್ಮ ಸಾಧನೆಯಿಂದ ಇಡೀ ದೇಶವೇ ಹೆಮ್ಮೆ ಪಡುತ್ತಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT