ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಕಾರ್ಮಿಕನ ಸಾವು

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ/ಬಳ್ಳಾರಿ: ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯ ಕೆಲವೆಡೆ ಭಾನುವಾರ ಬಿರುಸಿನ ಮಳೆಯಾಗಿದ್ದು, ಬಾದಾಮಿಯಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಮಹ್ಮದ್‌ಸಾಬ್‌ ಅಲ್ಲಾಸಾಬ್‌ ಚೌಧರಿ (30) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಇಳಕಲ್ಲಿನ ಗೌಳೇರಗುಂಡಿಯಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ.

ಬಾದಾಮಿ ತಾಲ್ಲೂಕಿನ ಕುಳಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುಡುಗು ಸಹಿತ ಎರಡು ತಾಸುಗಳವರೆಗೆ ಧಾರಾಕಾರ ಮಳೆಯಾಗಿದೆ. ದೊಡ್ಡ ಮಳೆಯಿಂದ ಹಳ್ಳಗಳು ತುಂಬಿ ಹರಿದಿದ್ದು, ದೇಶಿ ಹಳ್ಳದ ನೀರು ಕುಳಗೇರಿ ಸಮೀಪದ ಹೊಲಕ್ಕೆ ನುಗ್ಗಿದೆ. 

ಹುನಗುಂದ ಹಾಗೂ ಕೆರೂರಿನಲ್ಲಿಯೂ ಉತ್ತಮ ಮಳೆಯಾಗಿದೆ.

ಗಂಜಿ ಕೇಂದ್ರ: ಇಳಕಲ್‌ನಲ್ಲಿ ಶನಿವಾರ ಸಂಜೆಯಿಂದ ನಾಲ್ಕು ತಾಸುಗಳವರೆಗೆ ಧಾರಾಕಾರ ಮಳೆಯಾಗಿದ್ದರಿಂದ ಅಲ್ಲಿನ ಗೌಳೇರಗುಂಡಿಯ 60 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬಹುತೇಕ ನೇಕಾರರೇ ಇರುವ ಈ ಬಡಾವಣೆಯಲ್ಲಿ ಮಗ್ಗಗಳು ಹಾಗೂ ದಿನಬಳಕೆಯ ವಸ್ತುಗಳು ಹಾಳಾಗಿವೆ. ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಪರದಾಡಿದರು. ಸಂತ್ರಸ್ತರಿಗೆ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ.

ಬಳ್ಳಾರಿ ನಗರ ಹಾಗೂ ಸುತ್ತಮುತ್ತ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ.

ಜನಜೀವನಕ್ಕೆ ತೊಂದರೆ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಭಾನುವಾರ ಭಾರಿ ಮಳೆ ಸುರಿದ ಪರಿಣಾಮ ಜನಜೀವನದ ಮೇಲೆ ಪರಿಣಾಮ ಬೀರಿತು.

ಬಹುತೇಕ ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ಕಾರ್ಯ ಸ್ಥಗಿತಗೊಂಡರೆ, ನಗರ ಮತ್ತು ಪಟ್ಟಣ ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು.

ಸೇಡಂ ತಾಲ್ಲೂಕಿನ ಹಲವೆಡೆ 5ಗಂಟೆ ನಿರಂತರ ಮಳೆ ಸುರಿದ ಕಾರಣ ನಾಲಾ, ಚರಂಡಿಗಳು, ಚಿಕ್ಕ ಕೆರೆಗಳು ತುಂಬಿ ಹರಿದವು. ಕಾಗಿಣಾ ನದಿಯ ನೀರಿನ ಹರಿವಿನಲ್ಲೂ ಏರಿಕೆಯಾಗಿದೆ.

ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ್‌ ಗ್ರಾಮದ ಭೋವಿ ವಡ್ಡರ ಬಡಾವಣೆಯ ಕೆಲ ಮನೆಗಳಿಗೆ ಹಾಗೂ ಮುಖ್ಯ ಬೀದಿಯಲ್ಲಿ ನೀರು ನುಗ್ಗಿತು. ಅಲ್ಲದೆ, ಹೊಲಗಳಲ್ಲಿ ಪ್ರವಾಹ ಉಂಟಾಗಿ ಬದುಗಳು ಕೊಚ್ಚಿಕೊಂಡು ಹೋಗಿವೆ. ಕಲ್ಲೂರು ರೋಡ್‌ ಮೇಲ್ಭಾಗದಲ್ಲಿರುವ ಸೋಮಲಿಂಗದಳ್ಳಿ, ಚಿಕ್ಕಲಿಂಗದಳ್ಳಿ, ಶಾದಿಪುರ ಸುತ್ತ ಮುತ್ತ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT