ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಚೊಚ್ಚಲ ಪ್ರಶಸ್ತಿ ಸಂಭ್ರಮ

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್: ಚಾಂಪಿಯನ್ ಪಟ್ಟದಿಂದ ಕೆಳಗಿಳಿದ ಭಾರತ
Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್: ಪಾಕಿಸ್ತಾನ ತಂಡವು ಮೊಟ್ಟಮೊದಲ ಚಾಂಪಿಯನ್ಸ್‌ ಟ್ರೋಫಿ ಜಯಿಸಿ ಸಂಭ್ರಮಿಸಿತು. ಕಳಪೆ ಆಟವಾಡಿದ ಭಾರತ ತಂಡವು ಹೀನಾಯ ಸೋಲನುಭವಿಸಿತು.

ಭಾನುವಾರ ಕೆನಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 180 ರನ್‌ಗಳಿಂದ ಸೋಲಿಸಿದ ಪಾಕ್ ತಂಡವು ಪ್ರಶಸ್ತಿ ಗೆದ್ದಿತು. ಆರಂಭಿಕ ಬ್ಯಾಟ್ಸ್‌ಮನ್ ಫಖ್ರ್ ಜಮಾನ್ (114; 106ಎ, 12ಬೌಂ, 3ಸಿ) ಅವರ ಶತಕದ ಬಲದಿಂದ  ಪಾಕ್ ತಂಡವು 50 ಓವರ್‌ಗಳಲ್ಲಿ  4 ವಿಕೆಟ್‌ಗಳಿಗೆ  338 ರನ್‌ಗಳನ್ನು ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ  ಭಾರತ ವು 30.3 ಓವರ್‌ಗಳಲ್ಲಿ 158 ರನ್‌ ಗಳಿಸಿ ಸರ್ವಪತನ ಕಂಡಿತು.

ಹಾರ್ದಿಕ್ ಪಾಂಡ್ಯ (76; 43ಎ, 4ಬೌಂ, 6ಸಿ), ಯುವರಾಜ್ ಸಿಂಗ್ (22 ರನ್) ಶಿಖರ್ ಧವನ್ (21 ರನ್) ಮತ್ತು ರವೀಂದ್ರ ಜಡೇಜ (15 ರನ್) ಬಿಟ್ಟರೆ ಉಳಿದವರೆಲ್ಲರೂ ಒಂದಂಕಿಗೆ ಉರುಳಿದರು.

ಇದೇ ಟೂರ್ನಿಯ ‘ಬಿ’ ಗುಂಪಿನ ಲೀಗ್‌ ಹಂತದಲ್ಲಿ ಪಾಕ್ ತಂಡವನ್ನು ಕೊಹ್ಲಿ ಬಳಗವು ಸೋಲಿಸಿತ್ತು. ಆದರೆ ಫೈನಲ್‌ನಲ್ಲಿ ತನ್ನ ನೈಜ ಸಾಮರ್ಥ್ಯ ಪಣಕ್ಕೊಡ್ಡುವಲ್ಲಿ ಎಡವಿತು. ಇದರಿಂದಾಗಿ  ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ  ಇದೇ ಮೊದಲ ಸಲ ಪಾಕ್ ತಂಡದ ಎದುರು ಸೋತಿತು.

ಬಹುತೇಕ ಯುವ ಆಟಗಾರರು ಇರುವ ಸರ್ಫರಾಜ್ ಅಹಮದ್ ನಾಯಕತ್ವದ ತಂಡವು  ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು.

(ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದ ಶಿಖರ್ ಧವನ್‌ (ಬಲ))

***

ಒಂದು ನೋಬಾಲ್‌ ಬೆಲೆ  ಶತಕ!

ಭಾರತದ ಜಸ್‌ಪ್ರೀತ್ ಬೂಮ್ರಾ ಅವರ ಒಂದು ನೋಬಾಲ್‌ನಿಂದಾಗಿ ‘ಜೀವದಾನ’ ಪಡೆದ  ಪಾಕಿಸ್ತಾನ ತಂಡದ ಫಖ್ರ್ ಜಮಾನ್ ಅವರು ಅಮೋಘ ಶತಕ ದಾಖಲಿಸಿದರು.  ಎಡಗೈ ಬ್ಯಾಟ್ಸ್‌ಮನ್ ಜಮಾನ್ ಅವರಿಗೆ ಇದು ನಾಲ್ಕನೇ ಅಂತರರಾಷ್ಟ್ರೀಯ ಏಕದಿನ  ಪಂದ್ಯ ಮತ್ತು ಚೊಚ್ಚಲ ಶತಕ.

ನಾಲ್ಕನೇ  ಓವರ್‌ನಲ್ಲಿ ಬೂಮ್ರಾ ಎಸೆತವು ಜಮಾನ್ ಬ್ಯಾಟ್‌ ಅಂಚು ಸವರಿ  ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಕೈಗವಸುಗಳಲ್ಲಿ ಬಂಧಿಯಾಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ  ಭಾರತದ ಅಭಿಮಾನಿಗಳಲ್ಲಿ ಸಂಭ್ರಮ ಅಲೆಅಲೆಯಾಗಿ ಎದ್ದಿತ್ತು. ಆದರೆ ಅಂಪೈರ್ ರಿಚರ್ಡ್ ಕೆಟಲ್‌ಬರೊ ಕೈ ಬೆರಳು ಮುಗಿಲು ತೋರಿಸುವ ಬದಲು,   ಟಿ.ವಿ. ಅಂಪೈರ್‌ಗೆ ಮನವಿ ಸಲ್ಲಿಸಿದರು. ಬೂಮ್ರಾ ಕ್ರೀಸ್‌ ಗೆರೆಯ ಹೊರಗೆ ಕಾಲಿಟ್ಟು ಎಸೆತ ಹಾಕಿದ್ದ  ವಿಡಿಯೋ ರೀಪ್ಲೆಗಳಲ್ಲಿ ಸ್ಪಷ್ಟವಾಗಿತ್ತು.  ಜಮಾನ್ ಕ್ರೀಸ್‌ಗೆ ಮರಳಿದರು. ತಮ್ಮ ಜೊತೆಗಾರ ಅಜರ್ ಅಲಿ ಜೊತೆ ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿದರು.

ಇದರಿಂದಾಗಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವ ನಾಯಕ ವಿರಾಟ್ ಕೊಹ್ಲಿ ಅವರ  ಯೋಜನೆಯು ಬುಡಮೇಲಾಯಿತು.

ಮೊದಲ ವಿಕೆಟ್ ಜೊತೆಯಾಟದಲ್ಲಿ  27 ವರ್ಷದ ಜಮಾನ್ ಮತ್ತು ಅಜರ್ ಅವರು 128 (23 ಓವರ್‌ಗಳು) ರನ್‌ಗಳನ್ನು ಸೇರಿಸಿದರು. ಆತ್ಮವಿಶ್ವಾಸಭರಿತ ಬ್ಯಾಟಿಂಗ್ ಮಾಡುತ್ತಿದ್ದ ಅಜರ್   61 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ನಂತರ ಜಮಾನ್ ಕೂಡ ಅರ್ಧಶತಕದ ಗಡಿ ದಾಟಿದರು.

ಭಾರತದ ಬೌಲರ್‌ಗಳ ಎಸೆತಗಳನ್ನು ಮುಂದಡಿ ಇಟ್ಟು ಬೌಂಡರಿಗೆ ಕಳಿಸುತ್ತಿದ್ದ ಜಮಾನ್ ಅವರ ಆಕರ್ಷಕ ಶೈಲಿ ಕ್ರಿಕೆಟ್‌ಪ್ರಿಯರ ಮನಗೆದ್ದಿತು. ಇತ್ತ ವಿರಾಟ್ ಮುಖದಲ್ಲಿ ನಿರಾಸೆಯ ನೆರಳು ಕವಿದಿತ್ತು.

ಲೆಗ್‌ ಕಟರ್, ಸ್ವಿಂಗ್ ಪರಿಣತ ಭುವನೇಶ್ವರ್ ಕುಮಾರ್, ಯಾರ್ಕರ್ ಪರಿಣತ ಜಸ್ವಪ್ರೀತ್ ಬೂಮ್ರಾ, ಆಫ್‌ಸ್ಪಿನ್ನರ್  ಆರ್. ಅಶ್ವಿನ್, ರವೀಂದ್ರ ಜಡೇಜ, ಸಾಂದರ್ಭಿಕ ಬೌಲರ್ ಕೇದಾರ್ ಜಾಧವ್ ಅವರ ಎಸೆತಗಳನ್ನು ಪಾಕ್ ಜೋಡಿಯು ಪುಡಿಗಟ್ಟಿತು. ಇದ್ದಿದ್ದರಲ್ಲಿ ಹಾರ್ದಿಕ್ ಪಾಂಡ್ಯ ಅವರೊಬ್ಬರೇ ಕಡಿಮೆ ರನ್ ನೀಡಿದರು. ಉಳಿದವರೆಲ್ಲ ದುಬಾರಿಯಾದರು. ಲಯ ಕಳೆದುಕೊಂಡಿದ್ದ ಬೌಲರ್‌ಗಳು ಇತರೆ ರನ್‌ಗಳ ಕಾಣಿಕೆಯನ್ನೂ ಭರಪೂರ ನೀಡಿದರು.

23ನೇ ಓವರ್‌ನಲ್ಲಿ  ಅವಸರದಲ್ಲಿ ಅಜರ್ ಅಲಿ ರನೌಟ್ ಆದರು. ಅದರೊಂದಿಗೆ ಅಮೋಘ ಜೊತೆಯಾಟ ಮುರಿದುಬಿದ್ದಿತು. ಆದರೆ, ರನ್‌ಗಳ ಹೊಳೆ ಹರಿಯುವುದು ಮಾತ್ರ ನಿಲ್ಲಲಿಲ್ಲ.

ಜಮಾನ್ ಮತ್ತಷ್ಟು ವೇಗವಾಗಿ ಬೌಲರ್‌ಗಳನ್ನು ದಂಡಿಸಿದರು. ಅವರ ಜೊತೆಗೂಡಿದ ಬಾಬರ್ ಅಜಮ್ (46; 52ಎ, 4ಬೌ)  ಜೊತೆಗೂಡಿ ಎರಡನೇ ವಿಕೆಟ್‌ಗೆ 72 ರನ್‌ ಸೇರಿಸಿದರು.   ಜಮಾನ್ ಅವರು ತಾವೆದುರಿಸಿದ 92ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು.

32ನೇ ಓವರ್‌ನಲ್ಲಿ ಜಮಾನ್  ಪಾಂಡ್ಯ ಎಸೆತದಲ್ಲಿ ಔಟಾದರು.  ನುಭವಿ ಆಟಗಾರ ಶೋಯಬ್ ಮಲಿಕ್ ಮತ್ತೊಮ್ಮೆ ವಿಫಲರಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ (ಔಟಾಗದೆ 57; 37ಎ, 4ಬೌಂ, 3ಸಿ)  ಅವರು ತಂಡದ ರನ್‌ ಗಳಿಕೆಗೆ ಮತ್ತಷ್ಟು ಬಲ ತುಂಬಿದರು.  

***

ಹಾರ್ದಿಕ್ ಪಾಂಡ್ಯ ಅಬ್ಬರ

ಭಾರತದ ಸೋಲಿನಲ್ಲಿಯೂ ನೆನಪಿನಲ್ಲಿ ಉಳಿದಿದ್ದು ಹಾರ್ದಿಕ್ ಪಾಂಡ್ಯ ಅವರ ದಿಟ್ಟ ಹೋರಾಟ ಮಾತ್ರ.

ತಂಡವು ಕೇವಲ 54 ರನ್‌ಗಳ  ಮೊತ್ತಕ್ಕೆ 5  ವಿಕೆಟ್‌ಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಪಾಂಡ್ಯ ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.  ಮಂಕಾಗಿ ಕುಳಿತಿದ್ದ  ಭಾರತದ ಅಭಿಮಾನಿಗಳು ಎದ್ದು ಕುಣಿಯುವಂತೆ ಮಾಡಿದರು.

(ಅರ್ಧಶತಕ ದಾಖಲಿಸಿದ ಬಳಿಕ ಹಾರ್ದಿಕ್ ಪಾಂಡ್ಯ ಕೈಎತ್ತಿದ ಕ್ಷಣ)

ಶಾದಾಬ್ ಖಾನ್ (23ನೇ ಓವರ್‌) ಅವರ ಒಂದೇ ಓವರ್‌ನಲ್ಲಿ 23 ರನ್‌ಗಳನ್ನು ಬಾರಿಸಿದರು. ಸತತ ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿ ಅದರಲ್ಲಿ ಸೇರಿದ್ದವು. ಅದರಿಂದಾಗಿ ತಂಡದ ಮೊತ್ತವು 150ರ ಗಡಿ ದಾಟಿತ್ತು. ಆದರೆ 27ನೇ ಓವರ್‌ನಲ್ಲಿ ಅವರು ರನ್‌ಔಟ್ ಆದಾಗ ನಿರೀಕ್ಷೆ ಕುಸಿದುಬಿತ್ತು.  ಅವರು ಜಡೇಜ
ಜೊತೆಗೆ ಏಳನೇ ವಿಕೆಟ್‌ಗೆ 80 ರನ್‌ ಸೇರಿಸಿದರು.

**

**

ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 180 ರನ್‌ಗಳ ಜಯ
ಪಂದ್ಯಶ್ರೇಷ್ಠ: ಫಖ್ರ್ ಜಮಾನ್ (ಪಾಕಿಸ್ತಾನ)
ಸರಣಿಶ್ರೇಷ್ಠ: ಹಸನ್ ಅಲಿ (ಪಾಕಿಸ್ತಾನ)
ಶ್ರೇಷ್ಠ ಬ್ಯಾಟ್ಸ್‌ಮನ್: ಶಿಖರ್ ಧವನ್ (ಭಾರತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT