ಷೇರಿನ ಬೆಲೆ ಏರಿಳಿತಕ್ಕೆ ರೇಟಿಂಗ್‌ ಕಾರಣ

6

ಷೇರಿನ ಬೆಲೆ ಏರಿಳಿತಕ್ಕೆ ರೇಟಿಂಗ್‌ ಕಾರಣ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ಸೂಚ್ಯಂಕಗಳ ಏರಿಳಿತಗಳನ್ನು ಗಮನಿಸಿದರೆ ಪೇಟೆಯು ದಣಿದಿದ್ದು ಸುಧಾರಿಸಿಕೊಳ್ಳಲು ಹಂಬಲಿಸುತ್ತಿದೆ ಎನ್ನಬಹುದು. ಒಂದು ದಿನ ಮಾರುತಿ ಸುಜುಕಿ ಏರಿಕೆ ಪ್ರದರ್ಶಿಸಿ ಸೂಚ್ಯಂಕದ ಏರಿಕೆಗೆ ಕಾರಣವಾದರೆ, ಮತ್ತೊಂದು ದಿನ ಡಾಕ್ಟರ್ ರೆಡ್ಡಿಸ್ ಲ್ಯಾಬ್ ಚುರುಕಾದ ಏರಿಕೆಯಿಂದ ಸೂಚ್ಯಂಕದ ಸ್ಥಿರತೆ ಕಾಯುತ್ತದೆ. 

ಗುರುವಾರ ರಿಲಯನ್ಸ್  ಇಂಡಸ್ಟ್ರೀಸ್ ಷೇರಿನ ಬೆಲೆ ಏರಿಕೆಯು ಸುಮಾರು 50 ಅಂಶಗಳಷ್ಟು ಸಂವೇದಿ ಸೂಚ್ಯಂಕದ ಏರಿಕೆಗೆ ಕಾರಣವಾದರೂ ಅಂದು ಸಂವೇದಿ ಸೂಚ್ಯಂಕ  80 ಅಂಶಗಳ ಇಳಿಕೆ ಕಂಡಿದೆ. ಒಂದೊಂದು ದಿನ ಒಂದೊಂದು ಕಂಪೆನಿಯು ಸಂವೇದಿ ಸೂಚ್ಯಂಕದ ಏರಿಕೆ ಕೊಡುಗೆ ನೀಡುತ್ತಿರುವ ಅಂಶ ಗಮನಾರ್ಹವಾಗಿದೆ.

ಮುಂದಿನ 2 ತಿಂಗಳಲ್ಲಿ ಹೆಚ್ಚಿನ ಕಂಪೆನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ಕರೆಯಲಿವೆ. ಈಗಾಗಲೇ ಲಾಭಾಂಶ ಪ್ರಕಟಿಸಿರುವ ಕಂಪೆನಿಗಳು ವಿತರಣೆಗೆ ನಿಗದಿತ ದಿನವನ್ನು ಗೊತ್ತು ಪಡಿಸಲಿರುವುದರಿಂದ ಷೇರಿನ ದರಗಳು ಉತ್ತಮ ಮಟ್ಟವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ.

ಷೇರುಪೇಟೆಯ ಸೂಕ್ಷ್ಮತೆ ಹೇಗಿದೆ ಎಂದರೆ ಒಂದು ಹೂಡಿಕೆ ಬ್ಯಾಂಕಿಂಗ್ ಸಂಸ್ಥೆ ನೀಡುವ ರೇಟಿಂಗ್ ಕಾರಣ ಷೇರಿನ ಬೆಲೆಗಳು ಏರಿಳಿತ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಅಂತಹ ರೇಟಿಂಗ್‌ಗೆ ಬಲಿಯಾದುದು ಮೈಂಡ್ ಟ್ರೀ ಷೇರು. ಅದೇ ರೀತಿ ರೇಟಿಂಗ್ ಬೆಂಬಲದಿಂದ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಏರಿಕೆ ಕಂಡಿರುವ ಕಂಪೆನಿಯಾಗಿದೆ.

ಪೇಟೆಗೆ ಹರಿದುಬರುತ್ತಿರುವ ಹಣ ಬಳಸಿಕೊಳ್ಳಲು ಹಲವಾರು ವಿಧಗಳನ್ನು ಕಂಡುಕೊಳ್ಳುವ ಯತ್ನಗಳು ನಡೆಯುತ್ತಲೇ  ಇವೆ. ಶುಕ್ರವಾರ ಆಫ್ ಷೋರ್ ಕಂಪೆನಿಗಳಾದ ಅಬಾನ್ ಆಫ್ ಷೋರ್ ಸುಮಾರು ₹20 ಕ್ಕೂ ಹೆಚ್ಚಿನ ಏರಿಕೆ ಕಂಡರೆ,  ಜಿಒಎಲ್ ಆಫ್ ಷೋರ್ ಶೇ 20 ರಷ್ಟು ಏರಿಕೆ ಕಂಡಿದೆ. ಡಾಲ್ಫಿನ್ ಆಫ್ ಷೋರ್ ಎಂಟರ್ ಪ್ರೈಸಸ್ ಸುಮಾರು ₹12 ರಷ್ಟು ಏರಿಕೆಯಿಂದ ಮಿಂಚಿದೆ. ಫಾರ್ಮಾ ವಲಯದ ದಿವೀಸ್ ಲ್ಯಾಬ್ ಈ ವಾರ ₹639 ರಿಂದ ₹664ರವರೆಗೂ ಏರಿಕೆ ಪ್ರದರ್ಶಿಸಿ ನಂತರ ₹642 ಕ್ಕೆ ಇಳಿಕೆ ಪಡೆಯಿತು. ಸಂವೇದಿ ಸೂಚ್ಯಂಕದ ಅಂಗವಾಗಿರುವ ಲುಪಿನ್ ಲಿಮಿಟೆಡ್  ಷೇರಿನ ಬೆಲೆಯೂ ₹1,108ರ ಸಮೀಪದಿಂದ ₹1,194 ರವರೆಗೂ ಏರಿಕೆ ಕಂಡು ಶುಕ್ರವಾರ ₹1,131 ರಲ್ಲಿ ವಾರಾಂತ್ಯ ಕಂಡಿದೆ.

ಷೇರುಪೇಟೆಯಲ್ಲಿರುವಂತೆ ಸರಕು ಪೇಟೆಯಲ್ಲಿ ಮೂಲಾಧಾರಿತ ವಹಿವಾಟಿಗೆ ಅನುವು ಮಾಡಿಕೊಡುವ ನಿರ್ಧಾರವನ್ನು ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತೆಗೆದುಕೊಂಡ ಕಾರಣಕ್ಕೆ ಮಲ್ಟಿ ಕಮಾಡಿಟಿಸ್ ಎಕಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಷೇರಿನ ಬೆಲೆಯು ಚುರುಕಾದ ಚಟುವಟಿಕೆಯಿಂದ ಶುಕ್ರವಾರ   ಒಂದು ತಿಂಗಳ ಗರಿಷ್ಠ ಬೆಲೆ ₹1,114ನ್ನು ತಲುಪಿದೆ. ಈ ವಲಯದ ಏಕಮಾನ್ಯ ಲಿಸ್ಟೆಡ್ ಕಂಪೆನಿ ಇದಾಗಿದೆ.

ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಷೇರಿನ ಬೆಲೆಯು ಷೇರು ಬೈಬ್ಯಾಕ್ ನಂತರ ₹286ರ ಸಮೀಪಕ್ಕೆ ಈ ವಾರ ಕುಸಿಯಿತಾದರೂ ಚೇತರಿಕೆಯು ತ್ವರಿತವಾಗಿದ್ದು ₹306ರವರೆಗೂ ಏರಿಕೆ ಕಂಡು ₹294 ರ ಸಮೀಪ ವಾರಾಂತ್ಯ ಕಂಡಿದೆ.

ನಿತಿನ್ ಫೈರ್ ಪ್ರೊಟೆಕ್ಷನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯ ಸಾಧನೆಯು ಕಳಪೆಯಾಗಿದ್ದ ಕಾರಣ ಷೇರಿನ ಬೆಲೆಯು ₹23 ರ ಸಮೀಪದಿಂದ ಸತತವಾದ ಇಳಿಕೆ ಕಂಡು ಮಂಗಳವಾರ, 13ರಂದು ಆರಂಭಿಕ ಸಮಯದಲ್ಲಿ ₹8.45ರಲ್ಲಿ ಕನಿಷ್ಠ ಅವರಣ ಮಿತಿಯಲ್ಲಿತ್ತು. ನಂತರ ಅತ್ಯಲ್ಪ ಸಮಯದಲ್ಲೇ  ಷೇರಿನ ಬೆಲೆ ಚುರಕಾದ ಏರಿಕೆಯಿಂದ ₹9.33ರ ಗರಿಷ್ಠ ಅವರಣಮಿತಿ ತಲುಪಿತು. ಇದು ಚಟುವಟಿಕೆ ನಡೆಯುತ್ತಿರುವ ರೀತಿ. ಇಲ್ಲಿ ಕಂಪೆನಿಗಳ ಸಾಧನೆ ನಗಣ್ಯ.  

ವಿಡಿಯೋಕಾನ್ ಲಿಮಿಟೆಡ್ ಕಂಪೆನಿಯು ಕಳೆದ ತ್ರೈಮಾಸಿಕದಲ್ಲಿ ಅಗಾಧವಾದ ಹಾನಿ ಅನುಭವಿಸಿದ ಕಾರಣ ಆರ್ಥಿಕ ಒತ್ತಡದಲ್ಲಿದೆ. ಒಂದು ತಿಂಗಳಿನಿಂದ ₹100 ರ ಸಮೀಪದಿಂದ ₹22 ರ ಸಮೀಪಕ್ಕೆ ಕುಸಿದಿದ್ದಲ್ಲದೆ ಷೇರುದಾರರಿಗೆ ಮಾರಾಟ ಮಾಡಲು ಅವಕಾಶ ನೀಡದೆ ದಿನನಿತ್ಯವೂ ಕನಿಷ್ಠ ಅವರಣಮಿತಿಯಲ್ಲಿ ಅಂತ್ಯಕಾಣುತ್ತಿದೆ. ಈ ಕಂಪೆನಿಯ ಷೇರುಗಳು 'ಎ' ಗುಂಪಿನಲ್ಲಿದ್ದರೂ ಖರೀದಿಸುವವರೇ ಇಲ್ಲದಂತಹ ಪರಿಸ್ಥಿತಿಯುಂಟಾಗಿದೆ.

ಇಳಿಮುಖ ವಹಿವಾಟು: ಒಟ್ಟಾರೆ  ಈ ವಾರ 205 ಅಂಶಗಳಷ್ಟು ಹಾನಿಗೊಳಗಾದ ಸಂವೇದಿ ಸೂಚ್ಯಂಕ 31,056 ಅಂಶಗಳಲ್ಲಿ ಕೊನೆಗೊಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕ 32 ಅಂಶಗಳ ಇಳಿಕೆ ಕಂಡರೆ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 118 ಅಂಶಗಳ ಏರಿಕೆ ಕಂಡಿದೆ.  ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದಿಂದ ₹2,052 ಕೋಟಿ ಮೌಲ್ಯದ ಷೇರುಗಳ ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,058 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ವಾರಾಂತ್ಯದಲ್ಲಿ ಪೇಟೆಯ ಬಂಡವಾಳ ಮೌಲ್ಯ ₹127 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು.

ಹೊಸ  ಷೇರು: ಸೆಂಟ್ರಲ್ ಡಿಪಾಜಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಸಿ ಡಿ ಎಸ್ ಎಲ್ ಲಿಮಿಟೆಡ್), ಮುಂಬೈ ಷೇರು ವಿನಿಮಯ ಕೇಂದ್ರದ ಅಂಗಸಂಸ್ಥೆಯಾಗಿದ್ದು, ಜೂನ್ 19 ರಿಂದ 21 ರವರೆಗೂ ಪ್ರತಿ ಷೇರಿಗೆ ₹145 ರಿಂದ ₹146 ರ ಅಂತರದಲ್ಲಿ ಆರಂಭಿಕ ಷೇರನ್ನು ವಿತರಿಸಲಿದೆ. ಅರ್ಜಿಯನ್ನು ಒಂದು ನೂರು ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದು.

ಜಿಟಿಪಿಎಲ್ ಹಾತ್ ವೇ ಲಿಮಿಟೆಡ್ ಕಂಪೆನಿ  ಪ್ರತಿ ಷೇರಿಗೆ ₹167 ರಿಂದ ₹170 ರ ಅಂತರದಲ್ಲಿ ಜೂನ್ 21 ರಿಂದ 23 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದ್ದು, 88 ಷೇರುಗಳ ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದು.

ಬೋನಸ್ ಷೇರು: ಪ್ಲಾಸ್ಟಿ ಬ್ಲೆಂಡ್ಸ್ ಇಂಡಿಯಾ 1:1 ರ ಅನುಪಾತದ ಬೋನಸ್ ಷೇರಿಗೆ ಜು 4 ನಿಗದಿತ ದಿನ.

ಮುಖಬೆಲೆ ಸೀಳಿಕೆ: ಅರ್ಕೊಟೆಕ್ ಲಿ. ಕಂಪೆನಿ ಷೇರಿನ ಮುಖಬೆಲೆಯನ್ನು ₹10ರಿಂದ ₹2 ಕ್ಕೆ ಸೀಳಲು ಜೂನ್ 23 ನಿಗದಿತ ದಿನವಾಗಿದೆ.

ಹೆಸರು ಬದಲಾವಣೆ: ಕ್ರೆಡಿಟ್ ಅನಾಲಿಸಿಸ್ ಅಂಡ್ ರಿಸರ್ಚ್ ಲಿಮಿಟೆಡ್ ಕಂಪೆನಿ ಹೆಸರನ್ನು ಕೇರ್ ರೇಟಿಂಗ್ಸ್ ಲಿ.  ಎಂದು ಬದಲಿಸಲಾಗಿದೆ. ಲಾಯ್ಡ್ ಎಲೆಕ್ಟ್ರಿಕ್ ಅಂಡ್ ಎಂಜಿನಿಯರಿಂಗ್ ಕಂಪೆನಿ ಹೆಸರನ್ನು ಲೀಲ್ ಎಲೆಕ್ಟ್ರಿಕಲ್ಸ್ ಲಿ. ಎಂದು ಬದಲಿಸಲಾಗಿದೆ.

**

ವಾರದ ವಿಶೇಷ

ಇದುವರೆಗೂ ವಸೂಲಿಯಾಗದ ಸಾಲದಿಂದ (ಎನ್‌ಪಿಎ) ಕೇವಲ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಪ್ರಭಾವ ಕಂಡು ಬರುತ್ತಿತ್ತು. ಈ ಕಾರಣದಿಂದ ಕೆಲವೊಮ್ಮೆ ಬ್ಯಾಂಕಿಂಗ್ ಷೇರುಗಳು ಚುರುಕಾಗಿ ಏರಿಕೆ ಕಾಣುವುದಾಗಲಿ ಕೆಲವೊಮ್ಮೆ ಭಾರಿ ಒತ್ತಡಕ್ಕೆ ಸಿಲುಕಿ ಇಳಿಕೆಯಾಗುವುದನ್ನು ಕಂಡಿದ್ದೇವೆ. ಈಗ ಈ ವಾತಾವರಣ ನಿರ್ಮಿತವಾಗಲು ಕಾರಣವಾದ ಕಂಪೆನಿಗಳು ಒತ್ತಡಕ್ಕೆ ಸಿಲುಕುವ ಸಮಯ ಬಂದಿದೆ.  ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ವಸೂಲಾಗದ ಸಾಲಗಳಿಗೆ ಕಾರಣವಾಗಿರುವ 12 ಕಂಪೆನಿಗಳ ವಿರುದ್ಧ ಇನ್ವಾಲನ್ಸಿ ಆ್ಯಂಡ್ ಬ್ಯಾಂಕ್‌ರಪ್ಟಸಿ  ಪ್ರಕಾರ ಕ್ರಮ ಜರುಗಿಸಲು  ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.

ಎಸ್ಸಾರ್ ಸ್ಟೀಲ್, ಭೂಷಣ್ ಸ್ಟೀಲ್, ಅಲೋಕ್ ಇಂಡಸ್ಟ್ರೀಸ್, ಮೋನೆಟ್ ಇಸ್ಪಾಟ್, ಜ್ಯೋತಿ ಸ್ಟ್ರಕ್ಚರ್ಸ್, ಎಲೆಕ್ಟ್ರಾಸ್ಟೀಲ್ ಸ್ಟೀಲ್  ಕಂಪೆನಿಗಳು ಈ ಪಟ್ಟಿಗೆ ಸೇರಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕಂಪೆನಿಗಳೊಂದಿಗೆ ಸಭೆ ಕರೆದಿದ್ದು ಮುಂದಿನ ದಿನಗಳಲ್ಲಿನ ಬೆಳವಣಿಗೆಗಳು ಗಮನ ಸೆಳೆಯಲಿವೆ.

ಮುಂಬೈ ಷೇರು ವಿನಿಮಯ ಕೇಂದ್ರದ ಅಂಗ ಸಂಸ್ಥೆ ಸೆಂಟ್ರಲ್ ಡಿಪಾಜಿಟರಿ ಸರ್ವಿಸಸ್, ಸೋಮವಾರದಿಂದ ತನ್ನ ಆರಂಭಿಕ ಷೇರು ವಿತರಣೆ ಆರಂಭಿಸಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್, ಜನರಲ್ ಇನ್ಶುರೆನ್ಸ್, ರಿನ್ಯೂವೆಬಲ್ ಪವರ್ ವೆಂಚರ್ಸ್, ಎಚ್ ಡಿಎಫ್‌ಸಿ ಲೈಫ್ ಮುಂತಾದ ಕಂಪೆನಿಗಳು ಐಪಿಒ ಮೂಲಕ ಪೇಟೆ ಪ್ರವೇಶಿಸಲು ಹವಣಿಸುತ್ತಿವೆ. ಕೆಲವು ಬ್ಯಾಂಕಿಂಗ್ ಕಂಪೆನಿಗಳು,  ಫಾರ್ಮಾ ಕಂಪೆನಿಗಳು ಸಹ ಅರ್ಹ ಸಾಂಸ್ಥಿಕ ವಿತರಣೆ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಯೋಜಿಸಿವೆ.

ಕೇಂದ್ರ ಸರ್ಕಾರ ಸಹ ತನ್ನ ಷೇರುವಿಕ್ರಯ ಕಾರ್ಯಕ್ರಮದಡಿ  ಕಂಪೆನಿಗಳ ಷೇರುಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ. ಇದನ್ನು ಕಾರ್ಯಗತ ಮಾಡಲು ಸೂಕ್ತ ಸಮಯಕ್ಕಾಗಿ ಕಾದಿದೆ. ಈ ಎಲ್ಲಾ ಕಾರಣಗಳಿಂದ ಪೇಟೆಯ ಏರಿಳಿತಗಳು ಯಾವ ದಿಸೆಯಲ್ಲಿ ಸಾಗಬಹುದು ಎಂಬುದು ಅಂದಿನ ತೀರ್ಮಾನ, ಪರಿಸ್ಥಿತಿ ಗಳು ತಿಳಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry