ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಹುದ್ದೆಗೆ ರಾಜಕೀಯ ವ್ಯಕ್ತಿ: ಎಸ್‌.ಪಿ ಒಲವು

ಬೆಂಬಲ ಸಂಬಂಧ ಮುಲಾಯಂ–ಅಖಿಲೇಶ್‌ ಭಿನ್ನ ನಿಲುವು *ಪಕ್ಷದಲ್ಲಿ ಮತ್ತೊಂದು ರಾಜಕೀಯ ಸಂಘರ್ಷ ಸಾಧ್ಯತೆ
Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಗೆ ರಾಜಕೀಯೇತರ ವ್ಯಕ್ತಿಗಿಂತ ರಾಜಕೀಯ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಸಮಾಜವಾದಿ ಪಕ್ಷ ಭಾನುವಾರ ಬಿಜೆಪಿಗೆ ಸಲಹೆ ಮಾಡಿದೆ. 

ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧ ತಮ್ಮನ್ನು ಸಂಪರ್ಕಿಸಿದ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರಿಗೆ ಸಮಾಜವಾದಿ ಪಕ್ಷದ ನಾಯಕರಾದ ರಾಮ್‌ ಗೋಪಾಲ್‌ ಯಾದವ್‌ ಮತ್ತು ನರೇಶ್‌ ಅಗರ್‌ವಾಲ್‌ ಪಕ್ಷದ ನಿಲುವು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ನಡುವೆ ರಾಷ್ಟ್ರಪತಿ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ವಿಷಯ ಮತ್ತೊಮ್ಮೆ ಸಮಾಜವಾದಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣ ಕಂಡು ಬರುತ್ತಿದೆ.

ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌ ತಳೆದಿರುವ ವಿಭಿನ್ನ ನಿಲುವು ಪಕ್ಷದಲ್ಲಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ದಾರಿ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಯಾವುದೇ ಕಾರಣಕ್ಕೂ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ’ ಎಂದು ಅಖಿಲೇಶ್‌ ಸ್ಪಷ್ಟಪಡಿಸಿದ್ದಾರೆ. ಆದರೆ, ಮುಲಾಯಂ   ಅವರು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಬಿಜೆಪಿ ನಾಯಕರಾದ ರಾಜನಾಥ್‌ ಸಿಂಗ್‌ ಮತ್ತು ವೆಂಕಯ್ಯ ನಾಯ್ಡು ಅವರಿಗೆ ಮುಲಾಯಂ ಈಗಾಗಲೆ ಮಾತನ್ನೂ  ಕೊಟ್ಟಿದ್ದಾರೆ
ಎನ್ನಲಾಗಿದೆ.

ಬಿಜೆಪಿಯ ಮಿತ್ರಪಕ್ಷವಾದ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಮತ್ತು ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್‌ ಕೂಡ ನಾಯ್ಡು ಅವರಿಗೆ ಬೆಂಬಲದ ಭರವಸೆ ನೀಡಿದ್ದಾರೆ. 

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತೃಣಮೂಲ ಕಾಂಗ್ರೆಸ್‌ ಮತ್ತು ಬಿಜು ಜನತಾದಳ (ಬಿಜೆಡಿ) ನಾಯಕರ ಜತೆ ಮಾತುಕತೆ ನಡೆಸಿದ್ದಾರೆ.
ಠಾಕ್ರೆ – ಅಮಿತ್‌ ಷಾ ಭೇಟಿ: ಮುಂಬೈನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ  ಅವರು ಭಾನುವಾರ  ಬೆಳಿಗ್ಗೆ ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ.

ಬಾಂದ್ರಾದ ಠಾಕ್ರೆ ನಿವಾಸ ‘ಮಾತೋಶ್ರೀ’ಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೊಂದಿಗೆ ತೆರಳಿದ ಷಾ,  75 ನಿಮಿಷ  ಮಾತುಕತೆ ನಡೆಸಿದರು.
ಎನ್‌ಡಿಎದ ರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಮುನ್ನ ಮಿತ್ರ ಪಕ್ಷಗಳ ಸಲಹೆ ಪಡೆಯಲಾಗುವುದು ಎಂದು ಷಾ ಹೇಳಿದ್ದಾರೆ.

ಶಿವಸೇನೆಯು ರಾಷ್ಟ್ರಪತಿ ಅಭ್ಯರ್ಥಿಗೆ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್‌.ಸ್ವಾಮಿನಾಥನ್‌ ಅವರ ಹೆಸರನ್ನು ಪರಿಗಣಿಸುವಂತೆ ಸಲಹೆ ನೀಡಿತ್ತು.

ಕಳೆದ ಎರಡು ರಾಷ್ಟ್ರಪತಿ ಚುನಾವಣೆಗಳಲ್ಲಿ ಕ್ರಮವಾಗಿ ಯುಪಿಎ ಅಭ್ಯರ್ಥಿಗಳಾಗಿದ್ದ ಪ್ರತಿಭಾ ಪಾಟೀಲ್‌ ಮತ್ತು ಪ್ರಣವ್‌ ಮುಖರ್ಜಿ ಅವರನ್ನು ಶಿವಸೇನೆ ಬೆಂಬಲಿಸಿತ್ತು.

ಎಎಪಿ ಏಕಾಂಗಿ!: ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಕಸರತ್ತು ತೀವ್ರವಾಗಿರುವಾಗ ಇತ್ತ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಏಕಾಂಗಿತನ ಕಾಡತೊಡಗಿದೆ.

ಒಮ್ಮತದ ಆಯ್ಕೆಗೆ ಎನ್‌ಡಿಎ ರಚಿಸಿದ ಮೂವರು ಸದಸ್ಯರ ಸಮಿತಿಯಾಗಲಿ ಇಲ್ಲವೇ ವಿರೋಧ ಪಕ್ಷಗಳಾಗಲಿ ಇದುವರೆಗೂ ಎಎಪಿ ನಾಯಕರನ್ನು ಸಂಪರ್ಕಿಸದಿರುವುದು ಪಕ್ಷದ ನಾಯಕತ್ವದ ಮುಜುಗರಕ್ಕೆ ಕಾರಣವಾಗಿದೆ. 

‘ಬೆಂಬಲ ಕೋರಿ ಇದುವರೆಗೂ ಯಾವೊಂದು ರಾಜಕೀಯ ಪಕ್ಷವಾಗಲಿ, ನಾಯಕರಾಗಲಿ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಎಎಪಿ ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ, ಎಎಪಿಯಿಂದ ಅಂತರ ಕಾಯ್ದುಕೊಳ್ಳುತ್ತಿವೆ.

ಈ ಮೊದಲು ಎಎಪಿ ನಾಯಕರು ಜೆಡಿಯುನ ಶರದ್‌ ಯಾದವ್‌, ಸಿಪಿಎಂನ ಸೀತಾರಾಂ ಯೆಚೂರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದರು.

ಸದ್ಯಕ್ಕೆ ಎಎಪಿ, ರಾಷ್ಟ್ರಪತಿ ಅಭ್ಯರ್ಥಿ ಕುರಿತು ಯಾವುದೇ ಮಹತ್ವದ  ನಿರ್ಧಾರ   ತೆಗೆದುಕೊಂಡಿಲ್ಲ. ವಿರೋಧ ಪಕ್ಷಗಳು ಹೆಸರನ್ನು ಅಂತಿಮಗೊಳಿಸಲಿ ಎಂಬ ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದೆ.

**

ಎರಡು  ಬಣ್ಣಗಳಲ್ಲಿ  ಮತಪತ್ರ

ರಾಷ್ಟ್ರಪತಿ ಚುನಾವಣೆಗೆ ಎರಡು ಬಣ್ಣಗಳ ಮತ ಪತ್ರಗಳನ್ನು ಮುದ್ರಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ. ಸಂಸತ್ ಸದಸ್ಯರಿಗೆ ಹಸಿರು ಬಣ್ಣ ಮತ್ತು ಶಾಸಕರಿಗೆ ನಸುಗೆಂಪಿನ ಮತಪತ್ರಗಳನ್ನು ಮುದ್ರಿಸಲಾಗುತ್ತದೆ.

ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜುಲೈ 1ರ ಸಂಜೆಯವರೆಗೆ ಯಾರೂ ನಾಮ ಪತ್ರವನ್ನು ವಾಪಸ್ ಪಡೆಯದಿದ್ದರೆ ನಂತರ ಆಯೋಗವು ಮತಪತ್ರ ಮುದ್ರಿಸುವ ಕಾರ್ಯ ಆರಂಭಿಸಲಿದೆ. ಶಾಸಕರು ಪ್ರತಿನಿಧಿಸುವ ಜನಸಂಖ್ಯೆಯ ಆಧಾರದ ಮೇಲೆ ಅವರ ಮತ ಮೌಲ್ಯ ನಿರ್ಧಾರವಾಗುತ್ತದೆ. ಸಂಸದನ ಮತ ಮೌಲ್ಯ 708 ಎಂದು ನಿಗದಿಪಡಿಸಲಾಗಿದೆ. ಆದ್ದರಿಂದ ಮತ ಎಣಿಕೆ ಸುಲಭವಾಗಿಸಲು ಎರಡು ಬಣ್ಣಗಳ ಮತಪತ್ರ ಮುದ್ರಿಸಲಾಗುತ್ತದೆ. ಮತದಾನದ ನಂತರ ಮತಪೆಟ್ಟಿಗೆಗಳನ್ನು ಎಣಿಕೆಗಾಗಿ ದೆಹಲಿಗೆ ಒಯ್ಯಲಾಗುತ್ತದೆ.

ಸಮಾನುಪಾತ ಪ್ರಾತಿನಿಧ್ಯದ ಪ್ರಕಾರ ರಾಷ್ಟ್ರಪತಿ ಅವರನ್ನು ಆಯ್ಕೆ ಮಾಡಲಾಗುತ್ತದೆ. 4,120 ಶಾಸಕರು ಮತ್ತು 776 ಸಂಸದರು (ಆಯ್ಕೆಯಾದ) ಸೇರಿ ಒಟ್ಟು 4,896 ಮತದಾರರಿದ್ದಾರೆ.

ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸಗಡ, ಉತ್ತರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್‌, ಮಧ್ಯಪ್ರದೇಶ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್, ರಾಜಸ್ತಾನ, ಉತ್ತರಾಖಂಡ ಮತ್ತು ನವದೆಹಲಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮತಪತ್ರ ಮುದ್ರಿಸಲಾಗುತ್ತದೆ.

ಆಂಧ್ರಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಪಂಜಾಬ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಪಶ್ಚಿಮಬಂಗಾಳ  ರಾಜ್ಯಗಳಿಗೆ ಇಂಗ್ಲಿಷ್ ಮತ್ತು ಆಯಾ ರಾಜ್ಯ ಭಾಷೆಗಳಲ್ಲಿ ಮತಪತ್ರಗಳನ್ನು ಮುದ್ರಿಸಲಾಗುತ್ತದೆ.

ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಬಳಸಲಾದ ಶಾಯಿ  ಬಗ್ಗೆ ವಿವಾದ ಉಂಟಾಗಿದ್ದರಿಂದ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾರರಿಗೆ ವಿಶೇಷ ಪೆನ್‌ನ್ನು ಮತದಾನದ ವೇಳೆ ಚುನಾವಣಾ ಅಧಿಕಾರಿಗಳು ನೀಡಲಿದ್ದಾರೆ. ಈ ಪೆನ್ನನ್ನೇ ಬಳಸಿ ಅವರು ಮತದ ಗುರುತು  ಹಾಕಬೇಕು.

**

ಡಿಜಿಟಲ್ ಪಾವತಿ ಅನ್ವಯಿಸದು

ನೋಟು ರದ್ದತಿಯ ನಂತರ ಡಿಜಿಟಲ್ ಪಾವತಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದರೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಅಧಿಕಾರಿಗಳಿಗೆ ಠೇವಣಿಗಾಗಿ ₹ 15 ಸಾವಿರ ನಗದನ್ನು ಪಾವತಿಸಬೇಕು.

ಚುನಾವಣಾ ಅಧಿಕಾರಿ ಪಕ್ಕದಲ್ಲಿ ಕುಳಿತುಕೊಳ್ಳುವ ಬ್ಯಾಂಕ್ ಅಧಿಕಾರಿಯೊಬ್ಬರು ಹಣವನ್ನು ಎಣಿಸಿ ಎಲ್ಲವೂ ಸರಿಯಾಗಿ ಇದೆಯೇ ಎಂದು ಪರಿಶೀಲಿಸಬೇಕು ಎಂದು ನಿಯಮ ಹೇಳುತ್ತದೆ. ಅಭ್ಯರ್ಥಿ ನೇರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹೋಗಿ ಹಣ ಪಾವತಿಸಿ ರಸೀದಿ ಪಡೆದು ಅದನ್ನು ನಾಮಪತ್ರಕ್ಕೆ ಲಗತ್ತಿಸಬಹುದಾಗಿದೆ.

ಇದುವರೆಗೆ 15 ಜನ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಸರಿಯಾದ ದಾಖಲೆ ಲಗತ್ತಿಸಿಲ್ಲ ಎಂಬ ಕಾರಣಕ್ಕೆ ಏಳು ನಾಮಪತ್ರಗಳನ್ನು ಅನರ್ಹಗೊಳಿಸಲಾಗಿದೆ.

***

ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸಮಾಜವಾದಿ ಪಕ್ಷ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ
–ಅಖಿಲೇಶ್‌ ಯಾದವ್‌,
ಸಮಾಜವಾದಿ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT