ಪ್ಲಾಸ್ಟಿಕ್‌ ಬಾಟಲಿಗಳ ಔಷಧಿಯಲ್ಲಿ ವಿಷಕಾರಿ ಅಂಶ

7

ಪ್ಲಾಸ್ಟಿಕ್‌ ಬಾಟಲಿಗಳ ಔಷಧಿಯಲ್ಲಿ ವಿಷಕಾರಿ ಅಂಶ

Published:
Updated:
ಪ್ಲಾಸ್ಟಿಕ್‌ ಬಾಟಲಿಗಳ ಔಷಧಿಯಲ್ಲಿ ವಿಷಕಾರಿ ಅಂಶ

ನವದೆಹಲಿ: ಪ್ಲಾಸ್ಟಿಕ್‌ ಬಾಟಲಿಗಳಲ್ಲಿರುವ ದ್ರವರೂಪದ ಔಷಧಿಗಳಲ್ಲಿ  ಪ್ಲಾಸ್ಟಿಕ್‌ ಅಂಶ ಸೇರಲು ಸಾಧ್ಯವೇ ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ಸೂಚಿಸಿದೆ.

ಈ ಸೂಚನೆಯ ಹಿನ್ನೆಲೆಯಲ್ಲಿ ಐಸಿಎಂಆರ್‌ ಈ  ಹೊಣೆಯನ್ನು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಗೆ (ನ್ಯಾಶನಲ್‌ ಇನ್‌ಸ್ಟಿಟ್ಯೂಶನ್‌ ಆಫ್‌ ನ್ಯೂಟ್ರಿಶನ್‌)  ವಹಿಸಿದೆ.

ದ್ರವರೂಪದ ಔಷಧಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ (ಪೆಟ್‌ ಬಾಟಲ್‌–ಪ್ಲಾಸ್ಟಿಕ್‌ ಆ್ಯಂಡ್‌ ಪಾಲಿ ಈಥಲಿನ್‌ ಟೆರೆಪ್ಥಲೇಟ್‌)   ಸಂಗ್ರಹಿಸಿ ಇಡದಂತೆ ಮತ್ತು ಮಾರಾಟ ಮಾಡದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಕರಡು ನಿರ್ದೇಶನ ನೀಡಿ ಎರಡೂವರೆ ವರ್ಷ ಸಂದಿದೆ.

ಜನರ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ ಬಾಟಲಿ ಬದಲು ಗಾಜಿನ ಬಾಟಲಿಗಳಲ್ಲಿ ಮಾತ್ರ ಔಷಧ ಸಂಗ್ರಹಿಸಿ ಮಾರಾಟ ಮಾಡುವಂತೆ ಔಷಧಿ ವಲಯಕ್ಕೆ ಸಚಿವಾಲಯ ನಿರ್ದೇಶನ ನೀಡಿತ್ತು.

ವಿಷಕಾರಿ ಅಂಶ ಪತ್ತೆ:  2016ರ ಮೇ ತಿಂಗಳಲ್ಲಿ  ಅಖಿಲ ಭಾರತ ಸಾರ್ವಜನಿಕ ಸ್ವಚ್ಛತಾ ಮತ್ತು ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಕೆಮ್ಮಿನ ಔಷಧಿ ಮತ್ತು ಇತರ ಸಿರಪ್‌ಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಲ್ಲಿಯ  ಸೀಸ ಹಾಗೂ ಇನ್ನಿತರ ವಿಷಕಾರಿ ಅಂಶಗಳು ಪತ್ತೆಯಾಗಿದ್ದವು.

ಪ್ಲಾಸ್ಟಿಕ್‌ ಬಾಟಲಿಯಲ್ಲಿ ದ್ರವರೂಪದ ಔಷಧ ಮಾರಾಟವನ್ನು ನಿಷೇಧಿಸುವಂತೆ  ಶಿಫಾರಸು ಮಾಡಲಾಗಿತ್ತು. ಔಷಧಗಳ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ)  ಕೂಡ ಈ ಶಿಫಾರಸಿಗೆ ಅಧಿಕೃತ ಮುದ್ರೆ ಒತ್ತಿತ್ತು.

ವೈಜ್ಞಾನಿಕ ಆಧಾರ ಇಲ್ಲ: ಇದಕ್ಕೂ ಮೊದಲು, ಅಂದರೆ 2016ರ ಮಾರ್ಚ್‌ನಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಂ.ಕೆ. ಭಾನ್‌ ನೇತೃತ್ವದ ಸಮಿತಿ ಇದಕ್ಕೆ ವ್ಯತಿರಿಕ್ತವಾದ ವರದಿ ನೀಡಿತ್ತು.

ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಸಂಗ್ರಹಿಸಿದ ಔಷಧಗಳಲ್ಲಿ ವಿಷಕಾರಿ ಅಂಶ ಸೇರಿಕೊಂಡಿರುತ್ತದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ  ನಿರ್ದಿಷ್ಟ ಆಧಾರವಿಲ್ಲ ಎಂದು ಭಾನ್‌ ಸಮಿತಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಸಲ್ಲಿಸಿತ್ತು.

ಯಾವುದೆಲ್ಲ ಅಪಾಯಕಾರಿ?

ತಾಪಮಾನ ಹೆಚ್ಚಿದಂತೆಲ್ಲ ಪ್ಲಾಸ್ಟಿಕ್‌ ಬಾಟಲಿಗಳಲ್ಲಿಯ ವಿಷಕಾರಿ ರಾಸಾಯನಿಕ ಅಂಶಗಳಾದ ಸೀಸ, ಆ್ಯಂಟಿಮೋನಿ, ಕ್ರೋಮಿಯಂ, ಡೈ ಪ್ಥಾಲೇಟ್‌ (2–ಈಥೇಲ್‌–ಡಿಇಎಚ್‌ಪಿ)  ಔಷಧ ಸೇರುವ ಸಾಧ್ಯತೆ ಹೆಚ್ಚುತ್ತದೆ ಎಂದು ಅಧ್ಯಯನ ಹೇಳಿತ್ತು. ಔಷಧಗಳಿಗೆ, ಅದರಲ್ಲೂ ಮಕ್ಕಳು ಮತ್ತು ವೃದ್ಧರಿಗೆ ನೀಡುವ ಔಷಧಗಳ ಸಂಗ್ರಹ ಮತ್ತು ಮಾರಾಟಕ್ಕೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಾಟಲಿ ಉಪಯೋಗಿಸಬಾರದು ಎಂದು ಡಿಟಿಎಬಿ ತಾಕೀತು ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry