ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕೂನ್‌ಗುನ್ಯಾಕ್ಕೆ ಸ್ವದೇಶಿ ಲಸಿಕೆ?

ವೈದ್ಯಕೀಯ ಪ್ರಯೋಗದ ಹಂತದಲ್ಲಿ ‘ಚಿಕ್‌ವಿ’
Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಚಿಕೂನ್‌ ಗುನ್ಯಾಕ್ಕೆ ಲಸಿಕೆಯನ್ನು ಬಹುತೇಕ ಅಭಿವೃದ್ಧಿಪಡಿಸಿದ್ದೇವೆ ಎಂದು ಹೈದರಾಬಾದ್‌ನ ‘ಭಾರತ್ ಬಯೋಟೆಕ್’ ಸಂಸ್ಥೆ ಹೇಳಿಕೊಂಡಿದೆ. ಆದರೆ, ಮಾನವರ ಮೇಲೆ ಪ್ರಯೋಗ ನಡೆಸಲು ಸ್ವಯಂಸೇವಕರು ಸಿಗದ ಕಾರಣ, ಈ ಲಸಿಕೆಯ ಅಂತಿಮ ಹಂತದ ಪರೀಕ್ಷೆ ನಡೆಸಲು ತೊಡಕಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

‘ಈ ರೋಗದ ನಿವಾರಣೆಗೆ ಜಗತ್ತಿನಲ್ಲಿ ಯಾವುದೇ ಲಸಿಕೆ, ಔಷಧಿ ಇಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಘೋಷಿಸಿತ್ತು. ಈ ರೋಗದಿಂದಾಗುವ ಪರಿಣಾಮಗಳಿಗೆ ಮಾತ್ರ ಈಗ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು, ರೋಗದ ನಿವಾರಣೆಗೆ ಅಲ್ಲ. ಹೀಗಾಗಿ ಭಾರತ್ ಬಯೊಟೆಕ್‌ನ ವಿಜ್ಞಾನಿಗಳ  ಸಂಶೋಧನೆ ಮಹತ್ವ  ಪಡೆದುಕೊಂಡಿದೆ.

‘ಈ ಲಸಿಕೆಗೆ ‘ಚಿಕ್‌ವಿ’ (ಸಿಎಚ್‌ಐಕೆವಿ) ಎಂದು ಹೆಸರಿಡಲಾಗಿದೆ. ಪ್ರಾಣಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ಅದು ಯಶಸ್ವಿಯಾಗಿದೆ. ಚಿಕ್‌ವಿಯಿಂದ ಯಾವುದೇ ತೊಂದರೆ ಇಲ್ಲ ಮತ್ತು ಇದು ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ ಎಂಬುದು ಈ ಪ್ರಯೋಗಗಳಲ್ಲಿ ದೃಢಪಟ್ಟಿದೆ’ ಎಂದು ಭಾರತ್ ಬಯೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಎಲ್ಲಾ ಹೇಳಿದ್ದಾರೆ.

‘ಮನುಷ್ಯರ ಮೇಲೆ ಪ್ರಯೋಗ ನಡೆಸಲು ಅನುಮತಿ ಪಡೆದುಕೊಳ್ಳುವುದು ಕಷ್ಟದ ಕೆಲಸ. ಆ ತೊಡಕೂ ವರ್ಷದ ಹಿಂದೆಯೇ ನಿವಾರಣೆಯಾಗಿದೆ. ಆದರೆ ಪ್ರಯೋಗಕ್ಕೆ ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರೇ ದೊರೆಯುತ್ತಿಲ್ಲ. ಹೀಗಾಗಿ ಸಂಶೋಧನೆ ನಿಧಾನಗತಿಯಲ್ಲಿ ನಡೆಯುತ್ತಿದೆ.

ಇನ್ನೂ ವಿಳಂಬವಾಗದೆ, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಕೆಲವಾರು ವರ್ಷಗಳಲ್ಲಿ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ’ ಎಂದು  ಅವರು ಹೇಳಿದ್ದಾರೆ. ಮಕ್ಕಳನ್ನು ಕಾಡುವ ಅತಿಸಾರಕ್ಕೆ ರೋಟಾ ವೈರಸ್ ಲಸಿಕೆಯನ್ನು ಇದೇ ಕಂಪೆನಿ ಅಭಿವೃದ್ಧಿಪಡಿಸಿತ್ತು.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಎಲ್ಲೆಡೆ ಅದರ ಕಾರ್ಯಕ್ರಮದ ಅಡಿ ನೀಡುತ್ತಿರುವ ಪ್ರತಿ ಮೂರು ರೋಟಾ ವೈರಸ್ ಲಸಿಕೆಗಳಲ್ಲಿ ಒಂದು ಲಸಿಕೆ ಭಾರತದಲ್ಲಿ ತಯಾರಾಗಿರುತ್ತದೆ.

**

ಅಂಕಿಅಂಶ

64,000: 2016ರಲ್ಲಿ ದಾಖಲಾದ ಚಿಕೂನ್ ಗುನ್ಯಾ ಪ್ರಕರಣಗಳು

7,000: 2017ರಲ್ಲಿ ಈವರೆಗೆ ದಾಖಲಾಗಿದ  ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT