ಸಂಪುಟ ವಿಸ್ತರಣೆಗೆ ಕಸರತ್ತು: ಸಿದ್ದರಾಮಯ್ಯ–ಪರಮೇಶ್ವರ್‌ ರಹಸ್ಯ ಮಾತುಕತೆ

7

ಸಂಪುಟ ವಿಸ್ತರಣೆಗೆ ಕಸರತ್ತು: ಸಿದ್ದರಾಮಯ್ಯ–ಪರಮೇಶ್ವರ್‌ ರಹಸ್ಯ ಮಾತುಕತೆ

Published:
Updated:
ಸಂಪುಟ ವಿಸ್ತರಣೆಗೆ ಕಸರತ್ತು: ಸಿದ್ದರಾಮಯ್ಯ–ಪರಮೇಶ್ವರ್‌ ರಹಸ್ಯ ಮಾತುಕತೆ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಚುನಾವಣೆ ದೃಷ್ಟಿಯಿಂದ ಖಾತೆಗಳ ಮರುಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಜಿ. ಪರಮೇಶ್ವರ್‌ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿಗೆ ಬಂದಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭಾನುವಾರ ಮಧ್ಯಾಹ್ನ ದೆಹಲಿಗೆ ಬೀಳ್ಕೊಟ್ಟ ಬಳಿಕ ತಮ್ಮ ಆಪ್ತ ಸಿಬ್ಬಂದಿ, ಬೆಂಗಾವಲು ಪಡೆಯನ್ನು ವಾಪಸ್‌ ಕಳುಹಿಸಿದ ಉಭಯ ನಾಯಕರು ಪ್ರತ್ಯೇಕ ಕಾರಿನಲ್ಲಿ ನಿಗೂಢ ಸ್ಥಳಕ್ಕೆ ತೆರಳಿದರು. ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಸರ್ಕಾರ, ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಎಚ್.ಎಸ್‌. ಮಹದೇವ ಪ್ರಸಾದ್ ನಿಧನ ಹಾಗೂ ಎಚ್.ವೈ. ಮೇಟಿ ರಾಜೀನಾಮೆಯಿಂದ ತೆರವಾದ ಎರಡು ಸ್ಥಾನಗಳು ಸಂಪುಟದಲ್ಲಿ  ಸದ್ಯ ಖಾಲಿ ಇವೆ. ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಸಚಿವ ಸ್ಥಾನಕ್ಕೆ ಜಿ. ಪರಮೇಶ್ವರ್‌ ರಾಜೀನಾಮೆ ನೀಡಿದ್ದಾರೆ. ಅಧಿವೇಶನ ಮುಗಿಯುವವರೆಗೂ ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಸಿದ್ದರಾಮಯ್ಯ ಸೂಚಿಸಿದ್ದರು.

ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಇದೇ 21ಕ್ಕೆ ಅಧಿವೇಶನ ಕೊನೆಗೊಳ್ಳಲಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಮಾತುಕತೆ ನಡೆಸಿರುವ ಸುದ್ದಿ ತಿಳಿಯುತ್ತಲೇ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಕುತೂಹಲ ಇಮ್ಮಡಿಯಾಗಿದೆ. ಕೆಲವರು ದೆಹಲಿಗೆ ತೆರಳಿ ಲಾಬಿ ನಡೆಸಲು ಮುಂದಾಗಿದ್ದಾರೆ.

ದಿವಂಗತ ಮಹದೇವ ಪ್ರಸಾದ್‌ (ವೀರಶೈವ ಲಿಂಗಾಯತ), ಎಚ್‌.ವೈ. ಮೇಟಿ (ಕುರುಬ) ಹಾಗೂ ಪರಮೇಶ್ವರ್‌(ಪರಿಶಿಷ್ಟ ಜಾತಿ–ಬಲಗೈ) ಅವರಿಂದ ತೆರವಾಗಿರುವ ಸ್ಥಾನವನ್ನು ಅದೇ ಸಮುದಾಯದ ಶಾಸಕರಿಗೆ ನೀಡಬೇಕು ಎಂಬ ಬೇಡಿಕೆ ಪಕ್ಷದಲ್ಲಿ ಬಲವಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರ ಪೈಕಿ ಅಶೋಕ ಎಂ ಪಟ್ಟಣ, ಡಿ.ಬಿ. ಇನಾಂದಾರ, ರಾಜಶೇಖರ ಪಾಟೀಲ ಹುಮ್ನಾಬಾದ್‌, ಅಪ್ಪಾಜಿ ನಾಡಗೌಡ, ಎ.ಬಿ. ಮಾಲಕರಡ್ಡಿ ಹೆಸರು ಮುಂಚೂಣಿಯಲ್ಲಿದೆ.

ಬೆಂಗಳೂರು ನಗರ ಜಿಲ್ಲೆ ಬಿಟ್ಟರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಹಿಂದೆಲ್ಲ ಈ ಜಿಲ್ಲೆಯನ್ನು ಪ್ರತಿನಿಧಿಸುವ ಇಬ್ಬರು ಸಚಿವರು ಸರ್ಕಾರದಲ್ಲಿ ಇರುತ್ತಿದ್ದರು. ಈಗ ಒಬ್ಬರು ಮಾತ್ರ ಇದ್ದು, ಇನ್ನೊಬ್ಬರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಎದ್ದಿದೆ.

ಕುರುಬ ಸಮುದಾಯದಿಂದ ಬಿ.ಜಿ. ಗೋವಿಂದಪ್ಪ, ಸಿ.ಎಸ್‌. ಶಿವಳ್ಳಿ, ಎಂ.ಟಿ. ಬಿ. ನಾಗರಾಜ್‌, ಬಸವರಾಜ ಶಿವಣ್ಣನವರ, ಎಚ್.ಎಂ. ರೇವಣ್ಣ ಹೆಸರಿದೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಸೋಲಾಗಲು ಉಗ್ರಪ್ಪ ಜತೆಗೆ ರೇವಣ್ಣ ಕೂಡ ಕಾರಣ ಎಂಬ ಆರೋಪ ಪಕ್ಷದಲ್ಲಿ ವ್ಯಕ್ತವಾಗಿದೆ. ಇದು ರೇವಣ್ಣಗೆ ಹಿನ್ನಡೆ ಉಂಟು ಮಾಡಿದೆ ಎನ್ನಲಾಗಿದೆ.

ಬಾಗಲಕೋಟೆ ಜಿಲ್ಲೆ ಪ್ರತಿನಿಧಿಸುವ ಎಚ್.ವೈ. ಮೇಟಿ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಕುರುಬ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀಡಬೇಕು ಎಂಬ ಆಗ್ರಹ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ. ನಾಗರಾಜ್‌ ಕುರುಬ ಸಮುದಾಯಕ್ಕೆ ಸೇರಿದವರು ಎಂಬುದಕ್ಕಿಂತ

ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಆರ್ಥಿಕವಾಗಿ ಪ್ರಬಲರಾದವರು. ಗ್ರಾಮಾಂತರ ಜಿಲ್ಲೆಯಲ್ಲಿ ಬಚ್ಚೇಗೌಡರ ಪ್ರಭಾವ ಕುಗ್ಗಿಸಬೇಕಾದರೆ ನಾಗರಾಜ್‌ಗೆ ನೀಡಬೇಕು ಎಂಬ ಸಲಹೆಯೂ ವ್ಯಕ್ತವಾಗಿದೆ.

ಪರಿಶಿಷ್ಟ ಜಾತಿ–ಬಲಗೈ ಸಮುದಾಯಕ್ಕೆ ಸೇರಿದವರ ಪೈಕಿ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಮೋಟಮ್ಮ ಹೆಸರು ಪ್ರಧಾನವಾಗಿದೆ. ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು, ಅವರು ಬಿಜೆಪಿಗೆ ಸೇರಿದ್ದರಿಂದಾಗಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಮುನಿಸಿಕೊಂಡಿದೆ. ಈ ಕಾರಣಕ್ಕಾಗಿ ಸಂಪುಟ ವಿಸ್ತರಣೆಯಲ್ಲಿ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಮೂಡಿದೆ.

ಪಕ್ಷದ  ಸಾರಥ್ಯವನ್ನೇ ಪರಮೇಶ್ವರ್‌ಗೆ ನೀಡಿರುವುದರಿಂದ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ ಬೇಕಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.

**

ಚುನಾವಣೆ ಸಿದ್ಧತೆ–‘ಪ್ರಭಾವಿ’ಗಳಿಗೆ ಆಯಕಟ್ಟಿನ ಖಾತೆಗೆ ಚಿಂತನೆ

ಚುನಾವಣೆ ದೃಷ್ಟಿಯಿಂದ ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡುವ ಬಗ್ಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಅವಶ್ಯವಾದ ‘ನೆರವು’ ನೀಡುವ ಸಾಮರ್ಥ್ಯ ಇರುವವರಿಗೆ ಆಯಕಟ್ಟಿನ ಖಾತೆ ನೀಡುವುದು, ‘ಬಲಾಢ್ಯ’ರಲ್ಲದವರಿಗೆ ಸಾಮಾನ್ಯ ಖಾತೆಯನ್ನು ನೀಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಹೀಗಾಗಿ ‘ಪ್ರಭಾವಿ’ ಖಾತೆಗಳನ್ನು ಹೊಂದಿರುವ ಅನೇಕರು ಇನ್ನುಳಿದ ಅವಧಿಯಲ್ಲಿ ಸಚಿವರಾಗಿ ಮುಂದು­ವರಿದರೂ  ಆಯಕಟ್ಟಿನ ಖಾತೆಯನ್ನು ಕಳೆದುಕೊಳ್ಳುವುದು ನಿಶ್ಚಿತ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry