ಪೋರ್ಚುಗಲ್: ಬೃಹತ್ ಕಾಳ್ಗಿಚ್ಚಿಗೆ 62 ಮಂದಿ ಬಲಿ

ಪೆನೆಲಾ: ಮಧ್ಯ ಪೋರ್ಚುಗಲ್‌ನಲ್ಲಿ ಬೃಹತ್ ಕಾಳ್ಗಿಚ್ಚಿಗೆ ಸುಮಾರು 62 ಮಂದಿ ಆಹುತಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹುತೇಕರು ಕಾರುಗಳಲ್ಲಿ ಸಾಗುವಾಗ ತಮ್ಮನ್ನು ಸುತ್ತುವರಿದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಒಳಗೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಕೆಲವರು ದಟ್ಟ ಹೊಗೆಯಿಂದ ಸಾವಿಗೀಡಾಗಿದ್ದಾರೆ.
ಪೆಡ್ರೊಗಾವ್ ಗ್ರ್ಯಾಂಡ್ ಎಂಬ ಪ್ರದೇಶಕ್ಕೆ ಸಮೀಪದ ಕಣಿವೆಯಲ್ಲಿ ಶನಿವಾರ ಮಧ್ಯಾಹ್ನ ಕಾಣಿಸಿಕೊಂಡ ಕಾಳ್ಗಿಚ್ಚು, ಕ್ಷಿಪ್ರಗತಿಯಲ್ಲಿ ಸಾವಿರಾರು ಕಿಲೊ ಮೀಟರ್‌ವರೆಗೆ ವ್ಯಾಪಿಸಿದೆ. ಬೆಂಕಿ ನಂದಿಸಲು 300 ಅಗ್ನಿಶಾಮಕ ವಾಹನ, 900 ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಬೆಂಕಿಯ ಜ್ವಾಲೆ ನಾಲ್ಕು ದಿಕ್ಕುಗಳಿಂದ ವೇಗವಾಗಿ ಹಬ್ಬುತ್ತಿದ್ದು, ಹತ್ತಿರದ ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ.
‘ಇತ್ತೀಚಿನ ವರ್ಷಗಳಲ್ಲಿಯೇ ದೇಶ ಕಂಡ ಅತ್ಯಂತ ದೊಡ್ಡ ಕಾಳ್ಗಿಚ್ಚು ದುರಂತ ಇದು’ ಎಂದು ಪ್ರಧಾನಿ ಆ್ಯಂಟೊನಿಯೊ ಕೋಸ್ಟಾ ಹೇಳಿದ್ದಾರೆ.
ಫ್ರಾನ್ಸ್ ಮೂರು ಹಾಗೂ ಸ್ಪೇನ್ ಎರಡು ಅಗ್ನಿಶಾಮಕ ವಿಮಾನಗಳನ್ನು ಒದಗಿಸಿವೆ. ಐರೋಪ್ಯ ಒಕ್ಕೂಟ ಸಹ ಇಂತಹ ವಿಮಾನಗಳನ್ನು ಒದಗಿಸಲು ಮುಂದೆ ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.