ಮಳಿಗೆಯಲ್ಲಿ ಬಟ್ಟೆ ಕದ್ದು ಸಂತೆಯಲ್ಲಿ ಮಾರುತ್ತಿದ್ದ!

7
ವಿವಿಧ ಬ್ರ್ಯಾಂಡ್‌ಗಳ ₹ 23 ಲಕ್ಷ ಮೌಲ್ಯದ ಬಟ್ಟೆ ಜಪ್ತಿ

ಮಳಿಗೆಯಲ್ಲಿ ಬಟ್ಟೆ ಕದ್ದು ಸಂತೆಯಲ್ಲಿ ಮಾರುತ್ತಿದ್ದ!

Published:
Updated:
ಮಳಿಗೆಯಲ್ಲಿ ಬಟ್ಟೆ ಕದ್ದು ಸಂತೆಯಲ್ಲಿ ಮಾರುತ್ತಿದ್ದ!

ಬೆಂಗಳೂರು: ಮಳಿಗೆಗಳ ಬೀಗ ಮುರಿದು ಪ್ರತಿಷ್ಠಿತ ಕಂಪೆನಿಗಳ ಬಟ್ಟೆಗಳನ್ನು ಕದಿಯುತ್ತಿದ್ದ ಈತ, ಅವುಗಳನ್ನು ಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಆ ಚಾಲಾಕಿ ಚೋರನೀಗ ಸಿ.ಸಿ ಟಿ.ವಿ ಕ್ಯಾಮೆರಾ ನೀಡಿದ ಸುಳಿವಿನಿಂದ ಕಾರಾಗೃಹದ ಅತಿಥಿಯಾಗಿದ್ದಾನೆ. 

‘ತುಮಕೂರಿನ ಜಗನ್ನಾಥ್ ಅಲಿಯಾಸ್ ಜಗ್ಗು ಎಂಬಾತನನ್ನು ಬಂಧಿಸಿ, ₹ 23 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದೇವೆ. ಈತ 6 ವರ್ಷಗಳ ಹಿಂದೆ ನಗರಕ್ಕೆ ಬಂದು ಸಿಂಗಸಂದ್ರದಲ್ಲಿ ನೆಲೆಸಿದ್ದ’ ಎಂದು ಭಾರತಿನಗರ ಪೊಲೀಸರು ಹೇಳಿದ್ದಾರೆ.

ಬೆಳಗಿನ ಜಾವ 3 ರಿಂದ 5 ಗಂಟೆ ನಡುವೆ ಮಾತ್ರ ಕಳ್ಳತನ ಮಾಡುವುದು ಈತನ ವಿಶೇಷ. ಹಗಲು ವೇಳೆ ತನ್ನ ಕಾರಿನಲ್ಲಿ ಸುತ್ತಾಡಿ ಮಳಿಗೆ ಗುರುತಿಸಿಕೊಳ್ಳುತ್ತಿದ್ದ ಈತ, ನಸುಕಿನಲ್ಲಿ ಅಲ್ಲಿಗೆ ಹೋಗಿ ಆಕ್ಸೆಲ್ ಬ್ಲೇಡ್‌ನಿಂದ ಬೀಗ ಕತ್ತರಿಸುತ್ತಿದ್ದ.

ಮಳಿಗೆಯ ಒಳನುಗ್ಗಿದ ಬಳಿಕ ಮೊಬೈಲ್ ಟಾರ್ಚ್‌ ಚಾಲೂ ಮಾಡಿಕೊಂಡು, ಅಡಿಡಾಸ್, ರಿಬಾಕ್, ಅಲೆನ್ ಸೋಲಿ, ಲೂಯಿ ಫಿಲಿಪ್, ಆ್ಯರೊ ಕಂಪೆನಿಗಳ ಬಟ್ಟೆಗಳನ್ನು ಹುಡುಕಿ ತೆಗೆಯುತ್ತಿದ್ದ.

ನಂತರ ತನ್ನ ಪಂಚೆಯಲ್ಲೇ ಆ ಬಟ್ಟೆಗಳನ್ನು ಗಂಟು ಕಟ್ಟಿಕೊಂಡು ಹೊರಬಂದು ಕಾರಿನಲ್ಲಿ ಪರಾರಿಯಾಗುತ್ತಿದ್ದ.

ಇದೇ ರೀತಿ ಇಂದಿರಾನಗರ ಹಾಗೂ ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯ 7 ಮಳಿಗೆಗಳಲ್ಲಿ ಕಳವು ಮಾಡಿದ ಆರೋಪಿ, ಆ ಬಟ್ಟೆಗಳನ್ನು ಸಿಂಗಸಂದ್ರ ಹಾಗೂ ತುಮಕೂರಿನ ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

**

ಸಿಕ್ಕಿಬಿದ್ದಿದ್ದು ಹೀಗೆ

ಜಗ್ಗು ಬಂಧನಕ್ಕೆ 2 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಆತ ಮಳಿಗೆಯೊಂದರ ಬೀಗ ಮುರಿಯುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತನ ಚಹರೆ ನೋಡುತ್ತಿದ್ದಂತೆಯೇ ಭಾರತಿನಗರ ಠಾಣೆಯ ಕಾನ್‌ಸ್ಟೆಬಲ್‌ವೊಬ್ಬರು, ‘ಮೊಬೈಲ್ ಟವರ್‌ಗಳ ಬ್ಯಾಟರಿ ಕದಿಯುತ್ತಿದ್ದ ಪ್ರಕರಣದಲ್ಲಿ ಈತನನ್ನು 2013ರಲ್ಲಿ ಬಂಧಿಸಿ ದ್ದೆವು’ ಎಂದು ಹೇಳಿದರು.

‘ನಂತರ ನಗರ ಅಪರಾಧ ದಾಖಲಾತಿ ಘಟಕಕ್ಕೆ ಹೋಗಿ ಆ ಪ್ರಕರಣದ ವಿವರ ತೆಗೆಸಿದಾಗ ಆರೋಪಿಯ ವಿಳಾಸ ಸಿಕ್ಕಿತು. ಸಿಂಗಸಂದ್ರದಲ್ಲೇ ಆತನನ್ನು ವಶಕ್ಕೆ ಪಡೆದೆವು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry