ಮನೆಯೊಳಗೆ ಕೊಳವೆಯಲ್ಲೇ ಬಂತು ಅನಿಲ

7
ಸಿಎನ್‌ಜಿ– ಪಿಎನ್‌ಜಿ ವಿತರಣಾ ಯೋಜನೆಗೆ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಚಾಲನೆ

ಮನೆಯೊಳಗೆ ಕೊಳವೆಯಲ್ಲೇ ಬಂತು ಅನಿಲ

Published:
Updated:
ಮನೆಯೊಳಗೆ ಕೊಳವೆಯಲ್ಲೇ ಬಂತು ಅನಿಲ

ಬೆಂಗಳೂರು: ಭಾರತೀಯ ಅನಿಲ ಪ್ರಾಧಿಕಾರವು (ಗೇಲ್‌) ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಅನಿಲ ವಿತರಣಾ ಯೋಜನೆಯನ್ನು ಉದ್ಘಾಟಿಸಲಾಯಿತು.

ಕೊಳವೆ ನೈಸರ್ಗಿಕ ಅನಿಲ (ಪಿಎನ್‌ಜಿ) ಸೌಲಭ್ಯ ಪಡೆದ ಮನೆಯಲ್ಲಿ ಮಹಿಳೆಯೊಬ್ಬರು ಒಲೆ ಹಚ್ಚಿದರು. ಲಗ್ಗೆರೆಯ ಪ್ರೇಮ್‌ನಗರದಲ್ಲಿ ಸ್ಥಾಪಿಸಿರುವ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಕೇಂದ್ರದಲ್ಲಿ ವಾಹನಕ್ಕೆ ಇಂಧನ ತುಂಬಿಸಿಕೊಂಡರು. ಇದನ್ನು ಕಾರ್ಯಕ್ರಮದಲ್ಲಿ ನೇರ ಪ್ರಸಾರ ಮಾಡಲಾಯಿತು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ ಹಾಗೂ ಆನೇಕಲ್‌ ಪ್ರದೇಶಗಳ ಮನೆಗಳಿಗೆ ಅನಿಲ ಪೂರೈಕೆ ಮಾಡಲಾಗುತ್ತದೆ.

ಇದರಿಂದ ಅಡುಗೆ ಅನಿಲವನ್ನು ಮುಂಗಡವಾಗಿ ಬುಕ್‌ ಮಾಡುವುದು, ಮುಂಗಡ ಹಣ ಪಾವತಿಸುವುದು, ಮುಂಚಿತವಾಗಿಯೇ ಸಿಲಿಂಡರ್‌ ತಂದಿಟ್ಟುಕೊಳ್ಳುವ ಕಿರಿಕಿರಿ ತಪ್ಪಲಿದೆ. ಮನೆಯಲ್ಲಿ ಬಳಕೆ ಮಾಡುವ ಅನಿಲದ ಆಧಾರದ ಮೇಲೆ ಎರಡು ತಿಂಗಳಿಗೊಮ್ಮೆ ಬಿಲ್‌ ಬರುತ್ತದೆ.

ನಗರದಲ್ಲಿ 60 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಾಹನಗಳಿಗೆ ಕಡಿಮೆ ದರದಲ್ಲಿ ಇಂಧನ ಪೂರೈಸುವ ಉದ್ದೇಶವನ್ನು ಗೇಲ್‌ ಹೊಂದಿದೆ. ಒಂದು ಲೀಟರ್‌ ಪೆಟ್ರೋಲ್‌ ಬಳಕೆಯಿಂದ ಸಿಗುವ ಮೈಲೇಜ್‌ಗಿಂತ ಶೇ 50ರಷ್ಟು ಹೆಚ್ಚು ಮೈಲೇಜ್‌ ಸಿಎನ್‌ಜಿ ಬಳಕೆಯಿಂದ ಸಿಗಲಿದೆ.

ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ‘ರಾಜ್ಯದಲ್ಲೇ ಮೊದಲ ಬಾರಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುತ್ತಿದೆ. ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 4,000 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ‘ಅನಿಲದ ಒತ್ತಡವನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸಣ್ಣ ಕೊಳವೆಗಳಲ್ಲಿ ಅನಿಲ ಪೂರೈಸುವುದರಿಂದ ಒತ್ತಡ ಹೆಚ್ಚಾಗಿ ಅನಿಲ ಸೋರಿಕೆ ಆಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಸಂಸದ ಪಿ.ಸಿ. ಮೋಹನ್‌, ‘ವರ್ಷಕ್ಕೆ ಇಂತಿಷ್ಟೇ ಅಡುಗೆ ಅನಿಲದ ಸಿಲಿಂಡರ್‌ ಪಡೆಯಬೇಕು ಎಂಬ ಮಿತಿಯನ್ನು ರದ್ದುಗೊಳಿಸಲಾಗಿದೆ. ಎಷ್ಟು ಸಿಲಿಂಡರ್‌ ಬೇಕಾದರೂ ಪಡೆಯಬಹುದು. 70 ವರ್ಷಗಳಲ್ಲಿ ಆಗದೇ ಇರುವಂತಹ ಅಭಿವೃದ್ಧಿ ಕೆಲಸಗಳು 3 ವರ್ಷಗಳಲ್ಲಿ ಆಗಿವೆ’ ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಆ, ‘ಈ ಪಿಎನ್‌ಜಿ ಪರಿಸರಸ್ನೇಹಿಯಾಗಿದೆ. ನಗರದ ಎಲ್ಲ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕು. ಇದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ’ ಎಂದರು.

**

ಹೂಡಿಕೆಗೆ ರಷ್ಯಾ ಕಂಪೆನಿ ಆಸಕ್ತಿ

ರಷ್ಯಾದ ಕಂಪೆನಿಯೊಂದು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ₹1,300 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಭಾರತ್‌ ಪೆಟ್ರೋಲಿಯಂ ಹಾಗೂ ರಿಲಯನ್ಸ್‌ ಸಂಸ್ಥೆಗಳು ಸಗಟು ತೈಲ ಮಾರುಕಟ್ಟೆಯಲ್ಲಿ ₹600 ಕೋಟಿ ಹೂಡಿಕೆ ಮಾಡಲಿವೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು.

‘ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಂಪೆನಿಗಳು ಪೆಟ್ರೋಲ್‌, ಡೀಸೆಲ್‌ ಜತೆಗೆ ಸಿಎನ್‌ಜಿ ಪೂರೈಕೆ ಮಾಡಲಿವೆ’ ಎಂದರು.

‘ಡೀಸೆಲ್‌ ಆಧಾರಿತವಾಗಿ ನಡೆಯುವ ಕೈಗಾರಿಕೆಗಳಲ್ಲಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡಬೇಕು. ಸಾರಿಗೆ ಕ್ಷೇತ್ರದಲ್ಲಿ ಅನಿಲ ಬಳಕೆಗೆ ಉತ್ತೇಜನ ನೀಡಬೇಕು’ ಎಂದರು.

ಆ್ಯಪ್‌ ಬಿಡುಗಡೆ

ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಯಿತು. ಬಳಕೆ ಮಾಡಿದ ಇಂಧನದ ಪ್ರಮಾಣ, ಶುಲ್ಕದ ಮಾಹಿತಿಯನ್ನು ಆ್ಯಪ್‌ನಿಂದ ತಿಳಿಯಬಹುದು. ಹತ್ತಿರದ ಸಿಎನ್‌ಜಿ ಕೇಂದ್ರಗಳನ್ನು ಪತ್ತೆ ಮಾಡಬಹುದು. ತುರ್ತು ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ.

**

ಯೋಜನೆಯ ವೈಶಿಷ್ಟ್ಯಗಳು

* 1.06 ಕೋಟಿ ನಿವಾಸಿಗಳಿಗೆ ಪ್ರಯೋಜನ

* ಬಸ್‌, ಕಾರು, ಆಟೊ, ದ್ವಿಚಕ್ರ ವಾಹನಗಳಿಗೆ ಕಡಿಮೆ ವೆಚ್ಚದಲ್ಲಿ ಇಂಧನ ಪೂರೈಕೆ

* ಕೈಗಾರಿಕೆಗಳು ಹಾಗೂ ವಾಣಿಜ್ಯ ಘಟಕಗಳಿಗೆ ಅನಿಯಮಿತವಾಗಿ ಇಂಧನ ಪೂರೈಕೆ

* ಸುಮನಹಳ್ಳಿ, ಹೆಣ್ಣೂರು ಮತ್ತು ಪೀಣ್ಯದ ಬಿಎಂಟಿಸಿ ಬಸ್‌ ಡಿಪೊಗಳಲ್ಲಿ ಸಿಎನ್‌ಜಿ ಕೇಂದ್ರಗಳ ಸ್ಥಾಪನೆ

* ಮಾಲಿನ್ಯರಹಿತ ಪರಿಸರ, ಆರೋಗ್ಯಕರ ಜೀವನವನ್ನು ಖಚಿತಪಡಿಸುತ್ತದೆ

* ಯುವಕ–ಯುವತಿಯರಿಗೆ ಉದ್ಯೋಗಾವಕಾಶ

**

4,395ಕಿ.ಮೀ

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ವ್ಯಾಪಿಸಿರುವ ನೈಸರ್ಗಿಕ ಅನಿಲ ಕೊಳವೆ ಮಾರ್ಗದ ವಿಸ್ತೀರ್ಣ

₹6,283ಕೋಟಿ

ಯೋಜನೆಯ ಒಟ್ಟು ವೆಚ್ಚ

23,300

ನಗರದಲ್ಲಿ ಪಿಎನ್‌ಜಿ ಸಂಪರ್ಕ ಹೊಂದಿರುವ ಮನೆಗಳು

3,000

ಈಗಾಗಲೇ ಪಿಎನ್‌ಜಿ ಬಳಕೆ ಮಾಡುತ್ತಿರುವ ಮನೆಗಳು

1.32ಲಕ್ಷ

ಐದು ವರ್ಷಗಳಲ್ಲಿ ಅನಿಲ ಸಂಪರ್ಕ ಪಡೆಯಲಿರುವ ಮನೆಗಳು

60

ಐದು ವರ್ಷಗಳಲ್ಲಿ ನಗರದಲ್ಲಿ ಸ್ಥಾಪನೆಯಾಗಲಿರುವ ಸಿಎನ್‌ಜಿ ಕೇಂದ್ರಗಳು

₹5,800

ಪಿಎನ್‌ಜಿ ಸಂಪರ್ಕದ ಶುಲ್ಕ

**

ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಾಹನಗಳಿಗೆ ಡೀಸೆಲ್‌ ಬದಲು ಸಿಎನ್‌ಜಿ ಬಳಸಬೇಕು. ಡೀಸೆಲ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

–ಅನಂತಕುಮಾರ್‌, ಕೇಂದ್ರ ಸಚಿವ

**

ಎಷ್ಟು ದರ?

ಪ್ರತಿ ಘನ ಮೀಟರ್‌ ಪಿಎನ್‌ಜಿಗೆ: ₹22

ಒಂದು ಕೆ.ಜಿ. ಸಿಎನ್‌ಜಿಗೆ: ₹44

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry