ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲಿನ ತುಂಬೆಲ್ಲಾ ಜನವೋ ಜನ

*ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗೆ ಪಯಣ *ಮೊದಲ ದಿನವೇ ರೋಮಾಂಚನ
Last Updated 18 ಜೂನ್ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ಅಬ್ಬಾ.. ಏನಪ್ಪಾ.. ಇಷ್ಟೊಂದು ಜನ! ಒಳಗೆ ಕಾಲಿಡಲಿಕ್ಕೂ ಜಾಗ ಇಲ್ಲ...!

ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದ ನಡುವೆ ಭಾನುವಾರ  ಸಂಚರಿಸಿದ ಅನೇಕರ ಬಾಯಿಂದ ಹೊರಟ ಉದ್ಘಾರವಿದು.

ಶನಿವಾರ  ಲೋಕಾರ್ಪಣೆಗೊಂಡ ಈ ಮಾರ್ಗದಲ್ಲಿ ಸಂಜೆ 4 ಗಂಟೆಯ ಬಳಿಕ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಮಾರ್ಗದ ಮೊದಲ ರೈಲಿನಲ್ಲಿ ಸಂಚರಿಸಲು ಕೆಲವರು ಮಧ್ಯಾಹ್ನ 3 ಗಂಟೆಯಿಂದಲೇ  ನಿಲ್ದಾಣಗಳಲ್ಲಿ ಕಾದು ಕುಳಿತಿದ್ದರು.  ಸಂಜೆ 4 ಗಂಟೆಗೆ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿಯತ್ತ ಹೊರಟ ಮೊದಲ ರೈಲು ಭರ್ತಿ ಆಗಿರಲಿಲ್ಲ. ನಂತರದ ರೈಲುಗಳು ಕ್ರಮೇಣ ಜನರಿಂದ ಗಿಜಿಗುಡಲಾರಂಭಿಸಿದವು. ಸಂಜೆ 4.30 ಆಗುವಾಗ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಹಾಗೂ ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ರೈಲುಗಳೆಲ್ಲಾ ಭರ್ತಿಯಾಗಿದ್ದವು. ಪ್ರಯಾಣಿಕರು ಬೋಗಿ ಒಳಗೆ ಪ್ರವೇಶಿಸಲೂ ಸಾಧ್ಯವಾಗದಷ್ಟು ದಟ್ಟಣೆ ಇತ್ತು. ಪ್ರಯಾಣಿಕರು ನಿಲ್ದಾಣದಲ್ಲಿ ಇಳಿಯಲೂ  ಹರಸಾಹಸ ಪಡಬೇಕಾಯಿತು.

(ಮೆಟ್ರೊದಲ್ಲಿ ಸಾಗುವಾಗ ಪ್ರಯಾಣಿಕರು ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡರು)

ಗೊಂದಲದ ಗೂಡಾದ ಕೆಂಪೇಗೌಡ ನಿಲ್ದಾಣ: ಕೆಂಪೇಗೌಡ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಉತ್ತರ– ದಕ್ಷಿಣ ಹಾಗೂ ಪೂರ್ವ ಪಶ್ಚಿಮ ಕಾರಿಡಾರ್‌ ನಡುವೆ ಮಾರ್ಗ ಬದಲಾಯಿಸಬೇಕಾದ ಪ್ರಯಾಣಿಕರು ಸಾಕಷ್ಟು ಗೊಂದಲ ಅನುಭವಿಸಿದರು. ಇಲ್ಲಿ ಬಂದಿಳಿದ ಬಹುತೇಕ ಪ್ರಯಾಣಿಕರಿಗೆ ದಿಕ್ಕುತಪ್ಪಿದ ಅನುಭವವಾಗುತ್ತಿತ್ತು. ಅವರಿಗೆ ಮಾರ್ಗದರ್ಶನ ಮಾಡಲು  ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆಲವು ಪ್ರಯಾಣಿಕರಂತೂ ರೈಲು ಯಾವ ನಿಲ್ದಾಣದತ್ತ ಸಾಗುತ್ತಿದೆ ಎಂಬ ಬಗ್ಗೆ  ಸಹ ಪ್ರಯಾಣಿಕರಲ್ಲಿ ಪದೇ ಪದೇ ವಿಚಾರಿಸಿ ಮನದಟ್ಟು ಮಾಡಿಕೊಳ್ಳುತ್ತಿದ್ದರು.

ಮೊದಲ ದಿನ ಮೋಜಿನ ಪಯಣ: ರಜಾದಿನವಾದ ಕಾರಣ ಅನೇಕ ಮಂದಿ ಈ ಮಾರ್ಗದ ಮೆಟ್ರೊ ಪಯಣದ ಮೋಜನ್ನು ಅನುಭವಿಸುವ  ಸಲುವಾಗಿಯೇ ರೈಲು ಹತ್ತಿದ್ದರು.

ಸಂಪಿಗೆ ರಸ್ತೆಯ ಬಳಿ ಸುರಂಗದೊಳಗೆ ಇಳಿದು, ನ್ಯಾಷನಲ್‌ ಕಾಲೇಜು ಬಳಿ ಮೇಲಕ್ಕೆ ಬಂದ ರೈಲು ನಂತರ ಓರೆ ಕೋರೆ ಹಾದಿಯ ಹಾವಿನಂತೆ  ಚಲಿಸಿತು. ಲಾಲ್‌ಬಾಗ್‌ನಿಂದ ಆರ್‌.ವಿ ರಸ್ತೆ ನಿಲ್ದಾಣದ ಮಧ್ಯೆ ಇರುವ ಹಸಿರು ಹೊದಿಕೆಯ ನಡುವೆ   ತುಂತುರು ಮಳೆ ಹನಿಗಳ  ಸಿಂಚನದ ನಡುವೆ  ರೈಲು ಸಾಗಿತು.

ರೈಲು ಪ್ರತಿ ನಿಲ್ದಾಣದಲ್ಲಿ ನಿಂತು, ನಂತರ ಶರವೇಗದಲ್ಲಿ ಮುಂದುವರಿಯುವಾಗ  ಪ್ರಯಾಣಿಕರು ಖುಷಿಯಿಂದ ಕೇಕೆ ಹಾಕಿದರು. ರೈಲು ಸುರಂಗ ಹೊಕ್ಕುವಾಗ ಹಾಗೂ ಸುರಂಗದಿಂದ ಹೊರ ಬರುವಾಗ ಕೇಕೆ ಸದ್ದು ಇಮ್ಮಡಿಗೊಳ್ಳುತ್ತಿತ್ತು. ಕೆಲವು ಪುಟಾಣಿಗಳಂತೂ ಕುಪ್ಪಳಿದವು.

ಸುರಂಗದ ನಿಲ್ದಾಣ: ಸಂಪಿಗೆರಸ್ತೆ– ನ್ಯಾಷನಲ್‌ ಕಾಲೇಜು  ನಡುವಿನ ಸುರಂಗಮಾರ್ಗದಲ್ಲಿರುವ ಚಿಕ್ಕಪೇಟೆ ನಿಲ್ದಾಣದ ಮೂರು ಪ್ರವೇಶದ್ವಾರಗಳ ಪೈಕಿ ಒಂದು ದ್ವಾರವನ್ನು ಮಾತ್ರ ಭಾನುವಾರ ತೆರೆಯಲಾಗಿದೆ. ಕೆ.ಆರ್‌.ಮಾರುಕಟ್ಟೆ ನಿಲ್ದಾಣಗಳಲ್ಲಿ ಐದು ಪ್ರವೇಶದ್ವಾರಗಳಿದ್ದು, ಈ ಪೈಕಿ ಮೂರು ದ್ವಾರಗಳನ್ನು ತೆರೆಯಲಾಗಿದೆ. ಉಳಿದ ದ್ವಾರಗಳ ಕಾಮಗಾರಿ ಇನ್ನೂ ಬಾಕಿ ಇದೆ.

ಎಂ.ಡಿ. ಜೊತೆ ಸ್ವಂತಿ: ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಸಲುವಾಗಿ ಕೆಂಪೇಗೌಡ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು  ಖರೋಲ ಅವರನ್ನು ಅಭಿನಂದಿಸಿದರು. ಕೆಲವರು ಅವರ ಜೊತೆ ಸ್ವಂತಿ (ಸೆಲ್ಫಿ) ತೆಗೆಸಿಕೊಂಡರು.

(ಮೊದಲ ದಿನದ ಮೆಟ್ರೊ ಪಯಣವನ್ನು ಮಕ್ಕಳು ಕುಣಿದು–ಕುಪ್ಪಳಿಸಿ ಆಸ್ವಾದಿಸಿದರು)

**

ಗಳಿಕೆ ₹ 1 ಕೋಟಿ ದಾಟುವ ನಿರೀಕ್ಷೆ
‘ಮೊದಲ ಹಂತ ಪೂರ್ಣಗೊಂಡ ಬಳಿಕ ನಿತ್ಯ ಸರಾಸರಿ 5 ಲಕ್ಷ ಮಂದಿ ಪ್ರಯಾಣಿಸುತ್ತಾರೆ ಎಂಬ ನಿರೀಕ್ಷೆ ಇಟ್ಟಿಕೊಂಡಿದ್ದೇವೆ. ಇದುವರೆಗೆ ಟಿಕೆಟ್‌ ಮಾರಾಟದ ಮೂಲಕ ನಮ್ಮ ದೈನಂದಿನ ಸರಾಸರಿ ಆದಾಯ ₹ 35 ಲಕ್ಷ ಇತ್ತು. ಇದು ಇನ್ನು ಕೆಲವೇ ದಿನಗಳಲ್ಲಿ ₹ 1 ಕೋಟಿ ದಾಟಬಹುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಆಶಾವಾದ ವ್ಯಕ್ತಪಡಿಸಿದರು.

**

ಪತ್ನಿ ಮೆಟ್ರೊದಲ್ಲಿ, ಪತಿ ನಿಲ್ದಾಣದಲ್ಲಿ...!

ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರಿಂದ ಪತಿ ಹಾಗೂ ಪತ್ನಿ ಬೇರೆ ಬೇರೆ ರೈಲಿನಲ್ಲಿ ಪ್ರಯಾಣಿಸಬೇಕಾಗಿ ಬಂದ ಪ್ರಸಂಗ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ನಡೆಯಿತು.

ಜೆ.ಪಿ.ನಗರದ ನಿವಾಸಿ ಜೆ.ಪಿ.ಪಾಂಡೆ– ಪ್ರಿಯಾಂಕಾ ದಂಪತಿ ಕೆಂಪೇಗೌಡ ನಿಲ್ದಾಣಕ್ಕೆ ಬಂದಿದ್ದರು. ಅವರು ಅಲ್ಲಿಂದ ಸಂಪಿಗೆ ರಸ್ತೆ ನಿಲ್ದಾಣಕ್ಕೆ ಹೋಗಬೇಕಿತ್ತು. ರೈಲು ತುಂಬಿ ತುಳುಕಿದ್ದರೂ ಪ್ರಿಯಾಂಕ ಅವರು ಬೋಗಿಯ ಒಳಗೆ ಹತ್ತಿದರು. ನಿರಂಜನ್‌ ಬೋಗಿಯ ಒಳಗೆ ಪ್ರವೇಶಿಸುವ ಮುನ್ನವೇ ರೈಲು ಹೊರಟಿತು. ಹಾಗಾಗಿ ಅವರು ಮತ್ತೊಂದು ರೈಲಿನಲ್ಲಿ ಹೋಗಬೇಕಾಯಿತು.

**

60,593 ಮಂದಿ ಸಂಚಾರ
ಉತ್ತರ–ದಕ್ಷಿಣ ಕಾರಿಡಾರ್‌ನ ನಾಗಸಂದ್ರ–ಯಲಚೇನಹಳ್ಳಿ  ಮಾರ್ಗದಲ್ಲಿ ಭಾನುವಾರ ಸಂಜೆ 4 ಗಂಟೆಯಿಂದ ರಾತ್ರಿ 11ರವರೆಗೆ 60,593 ಮಂದಿ ಸಂಚರಿಸಿದರು.

ಅದೇ ಅವಧಿಯಲ್ಲಿ ಪೂರ್ವ–ಪಶ್ಚಿಮ ಹಾಗೂ ಉತ್ತರ–ದಕ್ಷಿಣ ಎರಡೂ ಕಾರಿಡಾರ್‌ ಮಾರ್ಗಗಳಲ್ಲಿ 1.17 ಲಕ್ಷ ಮಂದಿ ಪ್ರಯಾಣಿಸಿದರು. ಇದೇ ಮೊದಲ ಬಾರಿಗೆ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ರಾತ್ರಿ 11ರವರೆಗೆ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿತ್ತು. ರಾತ್ರಿ 10 ಗಂಟೆಯಿಂದ 11ರವರೆಗೆ 3,709 ಮಂದಿ ಸಂಚರಿಸಿದರು.

**

ಯಲಚೇನಹಳ್ಳಿ ನಿಲ್ದಾಣದಲ್ಲಿ ನೂಕುನುಗ್ಗಲು

ದಕ್ಷಿಣದ ತುತ್ತ ತುದಿಯ ಯಲಚೇನಹಳ್ಳಿ ನಿಲ್ದಾಣದಲ್ಲಿ ಜನ 4 ಗಂಟೆಗೆ ಮುನ್ನವೇ ಸಾಲುಗಟ್ಟಿ ನಿಂತಿದ್ದರು. ಅಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಮಾತ್ರ ಟಿಕೆಟ್‌ ನೀಡಲಾಗಿತ್ತು. ಪ್ರಯಾಣಿಕರು ಗಲಾಟೆ ಮಾಡಲಾರಂಭಿಸಿದರು.

ಮೊದಲ ರೈಲಿನಲ್ಲಿ ಮೆಜೆಸ್ಟಿಕ್‌ ನಿಲ್ದಾಣದಿಂದ ಯಲಚೇನಹಳ್ಳಿಗೆ  ಪ್ರಯಾಣಿಸಿದ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್ ಖರೋಲ ಅವರು ಅಲ್ಲಿನ ಪರಿಸ್ಥಿತಿ ಕಂಡು  ದಂಗಾದರು. ತಕ್ಷಣವೇ ಇನ್ನೂ ನಾಲ್ಕು ಕೌಂಟರ್‌ಗಳಲ್ಲಿ ಟಿಕೆಟ್‌ ವಿತರಿಸಲು ವ್ಯವಸ್ಥೆ ಮಾಡುವಂತೆ ನಿಲ್ದಾಣದ ಸಿಬ್ಬಂದಿಗೆ ಸೂಚಿಸಿದರು. ಇನ್ನಷ್ಟು ಕೌಂಟರ್‌ಗಳಲ್ಲಿ ಟಿಕೆಟ್‌ ನೀಡಲು ಆರಂಭಿಸಿದ ಬಳಿಕ  ಪರಿಸ್ಥಿತಿ ತಿಳಿಗೊಂಡಿತು.

**

.

ಪ್ರಯಾಣಿಕರ ರೋಮಾಂಚನ ಕಂಡು ಖುಷಿಯಾಗುತ್ತಿದೆ. ಭಾರತ –ಪಾಕಿಸ್ತಾನ ಕ್ರಿಕೆಟ್‌ ಪಂದ್ಯವಿದ್ದ ಕಾರಣ ಹೆಚ್ಚು ಮಂದಿ ಪ್ರಯಾಣಿಸಲಿಕ್ಕಿಲ್ಲ ಎಂದು ಭಾವಿಸಿದ್ದೆ. ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ
-ಪ್ರದೀಪ್‌ ಸಿಂಗ್‌ ಖರೋಲ,
ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

**

‘ಮೆಟ್ರೊ ಭಾಗ್ಯ’ ತಂದ ಪುಳಕ

ಬೆಂಗಳೂರು: ನಗರದ ದಕ್ಷಿಣದ ತುತ್ತ ತುದಿಯ  ನಿಲ್ದಾಣವಾದ ಯಲಚೇನಹಳ್ಳಿವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗಿದ್ದು ನಗರದ ನಿವಾಸಿಗಳ ಪುಳಕಕ್ಕೆ ಕಾರಣವಾಗಿದೆ.

ದಶಕಗಳಿಂದ ಎದುರು ನೋಡುತ್ತಿದ್ದ ಮೆಟ್ರೊ ಸೇವೆ ಕೊನೆಗೂ ಸಾಕಾರಗೊಂಡ ಸಂಭ್ರಮವನ್ನು ಕೆಲವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು. ಅವರ ಅಭಿಪ್ರಾಯಗಳು ಇಲ್ಲಿವೆ.

**

‘4 ವರ್ಷಗಳಿಂದ ಕಾಯುತ್ತಿದ್ದೆವು’
ಈ ಭಾಗಕ್ಕೂ ಮೆಟ್ರೊ ಬರುತ್ತದೆ ಎಂದು ನಾಲ್ಕು  ವರ್ಷಗಳಿಂದ ಕಾಯುತ್ತಿದ್ದೆವು. ನಮ್ಮ ನಿರೀಕ್ಷೆ ಕೊನೆಗೂ ಈಡೇರಿದೆ. ಸಂಚಾರ ದಟ್ಟಣೆ ವೇಳೆ ರಸ್ತೆಯ ನಡುವೆ ತಾಸುಗಟ್ಟಲೆ ಸಿಕ್ಕಿ ಹಾಕಿಕೊಳ್ಳುವ ಫಜೀತಿಯಿಂದ ಕೊನೆಗೂ ಮುಕ್ತಿ ಸಿಕ್ಕಿದೆ.
-ಸೀತಾಲಕ್ಷ್ಮಿ ನಾಗರಾಜ್‌, ಆರ್‌.ವಿ.ರಸ್ತೆ  ನಿಲ್ದಾಣ ಬಳಿಯ ನಿವಾಸಿ

**

‘ಮಗಳ ಮನೆಗೆ ತಲುಪಲು ಅನುಕೂಲ’
ಮಗಳ ಮನೆ ಬನಶಂಕರಿಯಲ್ಲಿದೆ.  ಮೆಜೆಸ್ಟಿಕ್‌ನಿಂದ ಇಲ್ಲಿಗೆ ಬರಲು ತುಂಬಾ ಅನುಕೂಲವಾಗಿದೆ. ಮೊನ್ನೆ ತಾನೆ ಬೆಂಗಳೂರಿಗೆ ಬಂದಿದ್ದೆ. ಈ ಹಿಂದೆ ಮೆಜೆಸ್ಟಿಕ್‌ನಿಂದ ಬನಶಂಕರಿ ತಲುಪಲು ಕೆಲವೊಮ್ಮೆ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದುದೂ ಉಂಟು. ಈಗ 20 ನಿಮಿಷದೊಳಗೆ ತಲುಪಬಹುದು
-ಕಾಶಿನಾಥ್‌, ಧಾರವಾಡ

(ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕಾದು ನಿಂತಿದ್ದ ಪ್ರಯಾಣಿಕರು)

‘ಒಂದೂವರೆ ತಾಸು ಉಳಿಯಿತು’
ನಾನು ಶ್ರೀಶ್ರೀ ರವಿಶಂಕರ ಗುರೂಜಿ ಆಶ್ರಮಕ್ಕೆ ಆಗಾಗ ಹೋಗುತ್ತಿರುತ್ತೇನೆ. ಈ ಹಿಂದೆ ಅಲ್ಲಿಗೆ ತಲುಪಲು ಮೂರು ಬಸ್‌ಗಳನ್ನು ಬದಲಾಯಿಸಬೇಕಾಗುತ್ತಿತ್ತು.   ಯಲಚೇನಹಳ್ಳಿವರೆಗೆ ಮೆಟ್ರೊದಲ್ಲಿ ಪ್ರಯಾಣಿಸಿ ನಂತರ ಬಸ್ಸಿನಲ್ಲಿ ಹೋದರೆ ನನಗೆ ಒಂದೂವರೆ ತಾಸು ಉಳಿತಾಯವಾಗುತ್ತದೆ.
-ವಿವೇಕ್‌, ಮಲ್ಲೇಶ್ವರ

**

ಮೆಟ್ರೊ ಪ್ರಯಾಣ ಅದ್ಭುತ
ಮೆಟ್ರೊ ಪ್ರಯಾಣ ಅದ್ಭುತವಾಗಿದೆ. ನಾನಂತೂ ಪುಳಕಗೊಂಡೆ. ಕನಕಪುರ–ಬೆಂಗಳೂರಿನ ನಡುವಿನ ಪ್ರಯಾಣದ ಅವಧಿಯನ್ನೂ ಇದು ಕಡಿಮೆ ಮಾಡುತ್ತದೆ
-ನಿಶ್ಚಿತ್‌, ವಿದ್ಯಾರ್ಥಿ ಕನಕಪುರ

**

ನಮಗಂತೂ ತುಂಬಾ ಅನುಕೂಲ

ಮೆಟ್ರೊ ಸಂಪರ್ಕದಿಂದ ದಕ್ಷಿಣ ಭಾಗದ ಜನರಿಗೆ ತುಂಬಾ ಅನುಕೂಲ. ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ನಮ್ಮ ಮನೆಗೆ ಎರಡೂವರೆ ಕಿ.ಮೀ. ದೂರ. ಆ ನಿಲ್ದಾಣ ತಲುಪಿದರೆ ನಗರದ ನಾಲ್ಕೂ ದಿಕ್ಕುಗಳಿಗೂ ಮೆಟ್ರೊದಲ್ಲಿ ಪ್ರಯಾಣಿಸಬಹುದು
-ಮೀರಾ, ಪದ್ಮನಾಭನಗರ

**

‘ಪ್ರಯಾಣ ದರ ಹೆಚ್ಚಳ ಬೇಡವಿತ್ತು’
ಮೆಟ್ರೊ ಪ್ರಯಾಣ ದರ ಹೆಚ್ಚಳ ಮಾಡಬಾರದಿತ್ತು. ಒಂದು ಆರು ತಿಂಗಳು ಹಿಂದಿನ ದರವನ್ನೇ ಉಳಿಸಿಕೊಳ್ಳಬೇಕಿತ್ತು. ಮೆಟ್ರೊ ಮಧ್ಯಮವರ್ಗಕ್ಕೆ ತುಸು ದುಬಾರಿ
–ಎಂ.ಎಲ್‌.ತಿಪ್ಪಾ ರೆಡ್ಡಿ, ಮಹಾಲಕ್ಷ್ಮಿ ಬಡಾವಣೆ

**

‘ಬೈಕ್‌ಗಿಂತ ಮೆಟ್ರೊ ದುಬಾರಿ’
ನಾನು ಮಲ್ಲೇಶ್ವರದ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿ. ಇಷ್ಟು ದಿನ ಜೆ.ಪಿ.ನಗರದ ಮನೆಯಿಂದ ಕಚೇರಿಗೆ ಬೈಕ್‌ನಲ್ಲಿ ಹೋಗುತ್ತಿದ್ದೆ. ಪೆಟ್ರೋಲ್‌ಗೆ ದಿನಕ್ಕೆ ₹ 50 ರೂ ವೆಚ್ಚವಾಗುತ್ತಿತ್ತು. ಮೆಟ್ರೊದಲ್ಲಿ ಬಂದರೆ  ಟಿಕೆಟ್‌ಗೆ ₹ 70 ವೆಚ್ಚವಾಗುತ್ತದೆ. ಆದರೆ, ನನಗೆ ಒಂದು ತಾಸು ಸಮಯ ಉಳಿತಾಯವಾಗುತ್ತದೆ. ಹಾಗಾಗಿ ಮೆಟ್ರೊ ತುಸು ದುಬಾರಿ ಎನಿಸಿದರೂ ಅದರಲ್ಲೇ ಪ್ರಯಾಣಿಸಲು ನಿರ್ಧರಿಸಿದ್ದೇನೆ. ನಿಗಮದವರು ಪ್ರಯಾಣ ದರವನ್ನು ಹೆಚ್ಚಿಸಬಾರದಿತ್ತು
-ನಿರಂಜನ ಪಾಂಡೆ, ಜೆ.ಪಿ.ನಗರ

(ಯಲಚೇನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಗಾಗಿ  ಸಾಲುಗಟ್ಟಿ ನಿಂತಿರುವ  ಪ್ರಯಾಣಿಕರು)

ಬಸ್‌ನಲ್ಲಿ 2 ತಾಸು, ಮೆಟ್ರೊಗೆ 25 ನಿಮಿಷ
ನಾನು ಹಾಗೂ ನಮ್ಮ ಮನೆಯವರು ಶಿಕ್ಷಕರಾಗಿದ್ದೇವೆ. ನಮ್ಮ ಸಂಬಂಧಿಕರ ಮನೆ ಇಸ್ರೋ ಬಡಾವಣೆಯಲ್ಲಿದೆ. ಇಲ್ಲಿಗೆ ತಲುಪಲು ನಮಗೆ 2 ತಾಸು ಬೇಕಾಗುತ್ತಿತ್ತು. ಮೆಟ್ರೊ ಬಂದ ಬಳಿಕ ನಾವು ಕೇವಲ 25 ನಿಮಿಷದಲ್ಲಿ ತಲುಪಬಹುದು.
-ಲತಾ– ನಾಗರಾಜ್‌ ದಂಪತಿ, ರಾಜಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT