ಪಡಿತರ ಅಂಗಡಿ ಮುಂದೆ ಮೋದಿ ಚಿತ್ರ ಹಾಕಿ

7
‘ಬಿಜೆಪಿ ನಡಿಗೆ–ದಲಿತರೆಡೆಗೆ’ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಒತ್ತಾಯ

ಪಡಿತರ ಅಂಗಡಿ ಮುಂದೆ ಮೋದಿ ಚಿತ್ರ ಹಾಕಿ

Published:
Updated:
ಪಡಿತರ ಅಂಗಡಿ ಮುಂದೆ ಮೋದಿ ಚಿತ್ರ ಹಾಕಿ

ಶಿವಮೊಗ್ಗ: ಕೇಂದ್ರ ಸರ್ಕಾರ ದುಬಾರಿ ಬೆಲೆ ತೆತ್ತು ಪಡಿತರ ಅಕ್ಕಿ. ಗೋಧಿ ಖರೀದಿಸಿ, ರಾಜ್ಯಕ್ಕೆ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ. ಹಾಗಾಗಿ, ರಾಜ್ಯದ ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮುಂದೆ ಫ್ಲೆಕ್ಸ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ   ಭಾವಚಿತ್ರ ಹಾಕಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒತ್ತಾಯಿಸಿದರು.

ಬಿಜೆಪಿ ಜನಸಂಪರ್ಕ ಅಭಿಯಾನದ ಅಂಗವಾಗಿ ಆಯನೂರು ಸಮೀಪದ ಸಿರಿಗೆರೆಯಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ‘ಬಿಜೆಪಿ ನಡಿಗೆ ದಲಿತರ ಕಡೆಗೆ’ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಒಂದು ಕೆ.ಜಿ. ಅಕ್ಕಿಗೆ ₹ 30, ಒಂದು ಕೆ.ಜಿ ಗೋಧಿಗೆ ₹ 22 ನೀಡಿ ಭಾರಿ ಪ್ರಮಾಣದಲ್ಲಿ ಖರೀದಿಸುವ ಕೇಂದ್ರ ಸರ್ಕಾರ, ರಾಜ್ಯಕ್ಕೆ ಅತ್ಯಂತ ಕಡಿಮೆ ದರಕ್ಕೆ ನೀಡುತ್ತಿದೆ. ಒಂದು ಕೆ.ಜಿ. ಅಕ್ಕಿಗೆ ₹ 3 ಹಾಗೂ ಒಂದು ಕೆ.ಜಿ. ಗೋಧಿಗೆ 2 ಮಾತ್ರ ರಾಜ್ಯ ಸರ್ಕಾರ ನೀಡುತ್ತಿದೆ. ಹೀಗಿದ್ದರೂ ಅನ್ನಭಾಗ್ಯ ಯೋಜನೆಯಲ್ಲಿ ಕೇವಲ ಮುಖ್ಯಮಂತ್ರಿ ಭಾವಚಿತ್ರ ಬಳಸಲಾಗುತ್ತಿದೆ. ಇದು ಸಲ್ಲದು. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೂ ಪ್ರಧಾನಿ ಭಾವಚಿತ್ರ ಹಾಕಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡರ ಗರೀಬಿ ಹಠಾವೋ: 50 ವರ್ಷ ದೇಶ  ಆಳಿದ ಕಾಂಗ್ರೆಸ್‌ ‘ಗರೀಬಿ ಹಠಾವೋ’ ಘೋಷಣೆ ಮಾಡಿತ್ತು. ಆದರೆ, ಜನರ ಬಡತನ ನಿವಾರಣೆಯಾಗಿಲ್ಲ. ಬದಲಿಗೆ ಕಾಂಗ್ರೆಸ್ ಮುಖಂಡರ ಬಡತನ ನಿವಾರಣೆಯಾಗಿದೆ ಎಂದು ಕುಟುಕಿದರು.

ಕಾರ್ಯಕರ್ತರಲ್ಲೂ ಜಾತ್ಯತೀತ ಮನೋಭಾವ: ದಲಿತರ ಕೇರಿಗಳಿಗೆ ಭೇಟಿ ನೀಡಿ, ಅವರ ಕಷ್ಟ ಸುಖ ವಿಚಾರಿಸುತ್ತಿರುವುದರ ಹಿಂದೆ ಯಾವುದೇ ನಾಟಕೀಯ ನಡೆ ಇಲ್ಲ. ಭೇಟಿಯಿಂದ ಅವರ ಸ್ಥಿತಿಗತಿ ತಿಳಿಯುತ್ತದೆ. ಪಕ್ಷದ ಕಾರ್ಯಕರ್ತರೂ ಇಂತಹ ಭೇಟಿಗಳ ಮೂಲಕ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಲು ‘ಬಿಜೆಪಿ ನಡಿಗೆ’ ಸಹಕಾರಿ ಎಂದು ವಿಶ್ಲೇಷಿಸಿದರು.

ಕೇಂದ್ರ ಸರ್ಕಾರ ಬಡವರು, ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿ ಸಾಕಷ್ಟು ಯೋಜನೆ ರೂಪಿಸಿದೆ. ಉಜ್ವಲ ಯೋಜನೆ ಮೂಲಕ ರಾಜ್ಯದ 36 ಲಕ್ಷ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುತ್ತಿದೆ.

ರಸಗೊಬ್ಬರ ಸಬ್ಸಿಡಿ, ಫಸಲ್‌ ಬಿಮಾ ಮತ್ತಿತರ ಯೋಜನೆ ಮೂಲಕ ರೈತರಿಗೆ ನೆರವಾಗುತ್ತಿದೆ. ಎಲ್ಲ ಸೌಲಭ್ಯಗಳನ್ನೂ ಅರ್ಹರಿಗೆ ತಲುಪಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಪ್ರವಾಸ ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ,  ಬರ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಯಡಿಯೂರಪ್ಪ ಅವರಲ್ಲಿ 12ನೇ ಶತಮಾನದ ಬಸವಣ್ಣ ಅವರ ಮಾನವೀಯತೆಯ ಅಂತಃಕರಣವಿದೆ. ರಾಜ್ಯದ ದೇವದಾಸಿ ಯರಿಗೆ ಇತಿಹಾಸದಲ್ಲೇ ಮೊದಲ ಬಾರಿ ಮಾಸಾಶನ ನೀಡಿದ್ದರು. ಅಂತಹ ವ್ಯಕ್ತಿಯ ದಲಿತರ ಕೇರಿ ಭೇಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸು ತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದ ಆಯನೂರು ಮಂಜುನಾಥ್‌, ಶಾಸಕ ಬಿ.ವೈ. ರಾಘವೇಂದ್ರ, ಮುಖಂಡರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ,   ಬೇಳೂರು ಗೋಪಾಲಕೃಷ್ಣ, ಬಿ.ಸ್ವಾಮಿರಾವ್, ಭಾರತಿಶೆಟ್ಟಿ,  ಬಿ.ಜಿ.ಪುಟ್ಟಸ್ವಾಮಿ, ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ  ಉಪಸ್ಥಿತರಿದ್ದರು.

***

ದಲಿತ ಕೇರಿಯ ತಿಂಡಿಗೂ ಮೊದಲು...

ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರಿಗೆ ಭಾನುವಾರ ಬೆಳಿಗ್ಗೆ ಛಲವಾದಿ ಸಮುದಾಯದ ಏಳು ಮನೆಗಳಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಏಳು ಮನೆಗಳಲ್ಲಿ ಯಾರ ಮನೆಗೆ ಯಡಿಯೂರಪ್ಪ ಬರುತ್ತಾರೆ ಎನ್ನುವ ವಿಷಯ ಕೊನೆ ಕ್ಷಣದವರೆಗೆ ಗೌಪ್ಯವಾಗಿ ಇಟ್ಟಿದ್ದರು.  ಕೊನೆಗೆ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ನಾರಾಯಣಸ್ವಾಮಿ ಅವರ ಚಿಕ್ಕಪ್ಪ ದಿವಂಗತ ಲಕ್ಕೊಳ್ಳಿ ಗೋಪಾಲಪ್ಪ ಅವರ ಮಗ ಶ್ರೀನಿವಾಸ್‌–ಗೀತಾ ದಂಪತಿ ಮನೆಯಲ್ಲಿ ಒಂದೂಮುಕ್ಕಾಲು ಗಂಟೆ ತಡವಾಗಿ ಉಪಾಹಾರ ಸೇವಿಸಿದರು.

ಗೋಪಾಲಪ್ಪ ಅವರಿಗೆ ಶ್ರೀನಿವಾಸ್‌, ನಲ್ಲೇಶ್ ಇಬ್ಬರು ಮಕ್ಕಳು. ಈ ಕುಟುಂಬಕ್ಕೆ ಇರುವುದು 2 ಎಕರೆ ಜಮೀನು. ನಲ್ಲೇಶ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿದರೆ, ಶ್ರೀನಿವಾಸ ವ್ಯವಸಾಯ ನಂಬಿ ಕೊಂಡಿದ್ದು, ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಮಗಳ ಶಿಕ್ಷಣಕ್ಕೂ ಹಣವಿಲ್ಲ: ಶಾಸಕ ರಾಘವೇಂದ್ರ ಸೇರಿದಂತೆ ಇತರೆ ಮುಖಂಡರು ಉಪಾಹಾರ ಸೇವಿಸಿದ ಪಾರ್ವತಮ್ಮ–ಪರಮೇಶ್ವರಪ್ಪ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಒಬ್ಬ ಪುತ್ರಿ ಪೂಜಾ ದ್ವಿತೀಯ ಪಿಯು ಪಾಸಾಗಿದ್ದರೂ, ಹಣದ ಸಮಸ್ಯೆ ಕಾರಣ ಓದು ಬಿಡಿಸಿದ್ದಾರೆ.

ಗೌರಮ್ಮ–ಉದಯಪ್ಪ ಅವರ ಕುಟುಂಬದಲ್ಲಿ ಐದು ಜನ ಸಹೋದರರು ಇದ್ದಾರೆ. ಉದಯಪ್ಪ ಮಾತ್ರ ಬಿಜೆಪಿ ಕಾರ್ಯಕರ್ತ. ಉಳಿದ ಎಲ್ಲರೂ ಕಾಂಗ್ರೆಸ್ ಬೆಂಬಲಿಗರು. ಪಕ್ಷದ ಮುಖಂಡರನ್ನು ಹೊರತುಪಡಿಸಿದರೆ ಉಳಿದ ಎಲ್ಲರಿಗೂ ಲಿಂಗಾಯತ ಸಮು ದಾಯದ ವಿಶ್ವನಾಥ್  ಮನೆಯಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

***

‘ಕಾಂಗ್ರೆಸ್‌ಗೆ ನೈತಿಕತೆ ಇಲ್ಲ’

ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳಾವಕಾಶ ನೀಡದ, ಬಾಬು ಜಗಜೀವನ್‌ ರಾಂ ಪ್ರಧಾನಿ ಯಾಗುವುದನ್ನು ತಪ್ಪಿಸಿದ ಕಾಂಗ್ರೆಸ್‌ಗೆ ಬಿಜೆಪಿ ಟೀಕಿಸುವ ನೈತಿಕತೆ ಇಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ಅಂಬೇಡ್ಕರ್ ಹುಟ್ಟಿದ ಊರು, ಓದಿದ ಶಾಲೆ, ಸಮಾಧಿ ಸ್ಥಳವನ್ನು ಪುಣ್ಯಕ್ಷೇತ್ರಗಳಾಗಿ ಅಭಿವೃದ್ಧಿ ಪಡಿಸಲು ಮೋದಿ ನಿರ್ಧರಿಸಿದ್ದಾರೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry