ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಜತೆಗೆ ನಗರ ವಾಸಿಗಳಿಗೆ ಗುಂಡಿ ಭಾಗ್ಯ!

Last Updated 19 ಜೂನ್ 2017, 5:32 IST
ಅಕ್ಷರ ಗಾತ್ರ

ಗದಗ: 24X7 ಯೋಜನೆಯಿಂದ ನಗರದ ಕೆಲವು ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ಭಾಗ್ಯ ಲಭಿಸಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಗುಂಡಿ ಭಾಗ್ಯವೂ ಲಭಿಸಿದೆ. ಸದ್ಯ 4 ವಲಯ ಗಳಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಈ ಯೋಜನೆಯನ್ನು, ಉಳಿದ 8 ವಲಯಗಳಿಗೂ ವಿಸ್ತರಿಸಲು ಭರದಿಂದ ಕಾಮಗಾರಿ ನಡೆಯುತ್ತಿದೆ. ಇದರ ಫಲವಾಗಿ ಗುತ್ತಿಗೆದಾರರು ಸಿಕ್ಕಸಿಕ್ಕಲ್ಲಿ ಪೈಪ್‌ ಲೈನ್‌ ಅಳವಡಿಕೆಗಾಗಿ ಗುಂಡಿ ಗಳನ್ನು ತೆಗೆದು, ಮುಚ್ಚದೆ ಹಾಗೇ ಬಿಟ್ಟಿದ್ದಾರೆ.

ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕವೇ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಅಲ್ಲಿಯವರೆಗೆ ಜನರು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವ ಸಮಜಾಯಿಷಿ ಗುತ್ತಿಗೆದಾರ­ರದ್ದು. ಆದರೆ, ಮಳೆ ಸುರಿದಾಗ ತುಂಬಿಕೊಳ್ಳುವ ಈ ಗುಂಡಿಗಳು ಇಡೀ ರಸ್ತೆಯನ್ನೇ ಕೆಸರು ಗದ್ದೆಯನ್ನಾಗಿ ಮಾಡುತ್ತಿವೆ. ಮನೆಯಿಂದ ಹೊರಗೆ ಹೋಗಲು ಜನ ಪರದಾಡುತ್ತಿದ್ದಾರೆ.

ಮನೆ ಎದುರು ಗುಂಡಿಗಳು: ಸಿದ್ಧಲಿಂಗ ನಗರ, ಹುಡ್ಕೊ ಕಾಲೊನಿ, ರಾಜೀವ್ ಗಾಂಧಿ ನಗರ ಹಾಗೂ ಪಿ ಮತ್ತು ಟಿ ಕ್ವಾರ್ಟರ್ಸ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಪೈಪ್‌ ಅಳವಡಿಸಲು ಮನೆಗಳ ಎದುರು ಗುಂಡಿಗಳನ್ನು ತೆಗೆಯಲಾಗಿದೆ. ಬೆಳಿಗ್ಗೆ ಮನೆಯಿಂದ ಹೊರಗಡಿ ಇಡುವಾಗ ಎಚ್ಚರಿಕೆ ವಹಿಸದಿದ್ದರೆ ನೇರವಾಗಿ ಗುಂಡಿಯಲ್ಲಿ ಕಾಲಿಡಬೇಕು. ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ಅಗೆಯಲಾಗಿದೆ. ಸ್ವಲ್ಪ ಮಳೆಯಾದರೂ ಸಾಕು, ಇಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಗುಂಡಿ ಇದ್ದಲ್ಲಿ, ವಾಹನಗಳಿಂದ ಕೆಳಗೆ ಇಳಿದು, ಗಾಡಿಯನ್ನು  ತಳ್ಳಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಶಾಲೆಗೆ ಹೋಗುವ ಪುಟಾಣಿಗಳು ಈ ತೆಗ್ಗಿನಲ್ಲಿ ಬಿದ್ದು ಗಾಯ ಮಾಡಿ ಕೊಂಡಿದ್ದಾರೆ. ‘ಕೆಲವೆಡೆ ರಸ್ತೆ ಅಗಿದಿರುವುದರಿಂದ ಆಟೋ ರಿಕ್ಷಾ ಮನೆಯ ಬಾಗಿಲ ತನಕ ಬರುವುದಿಲ್ಲ. ಆಟೋಗಳು ಆಯಾ ಕಾಲೊನಿಯ ಮುಖ್ಯ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿವೆ. ಪ್ರತಿದಿನ ಶಾಲೆಗೆ ಮತ್ತು ಬೇರೆ ಬೇರೆ ಕೆಲಸಕ್ಕೆ ತೆರಳುವ ಜನತೆಗೆ ಇಲ್ಲಿನ ಗುಂಡಿಗಳನ್ನು ದಾಟಿ ಕೊಂಡು ಹೋಗುವುದೇ ಸವಾಲಾಗಿದೆ.

ರಾಡಿಯಾದ ರಸ್ತೆಯಲ್ಲಿ ಮಕ್ಕಳು ನಡೆದುಕೊಂಡು ಹೋಗಬೇಕು, ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಪಡುವಂತ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹುಡ್ಕೊ ಕಾಲೊನಿಯ ಅಕ್ಕಮಹಾದೇವಿ ಹಿರೇ ಮಠ, ಜಯಶ್ರೀ ಬದಿ, ಸುಮಿತ್ರ ಪಾಟೀಲ ಅಳಲು ತೋಡಿಕೊಂಡರು.

ರಾಜೀವ್ ಗಾಂಧಿ ನಗರ, ಪಂಚಾಕ್ಷರಿ ನಗರ, ವಿವೇಕಾನಂದ ಬಡಾವಣೆ, ಹುಡ್ಕೊ ಕಾಲೊನಿ, ಜವಳ ಗಲ್ಲಿ, ಗಂಗಾಪೂರ ಪೇಟೆ, ಹೊಂಬಳ ನಾಕಾ ಜನತಾ ಕಾಲೊನಿ, ಒಕ್ಕಲಗೇರಿ, ಸಿದ್ಧಲಿಂಗ ನಗರ, ಬಸವೇಶ್ವರ ನಗರ, ಗಂಗಿಮಡಿ, ಎಸ್.ಎಂ.ಕೃಷ್ಣಾ ನಗರ ಹಾಗೂ ಸಿದ್ರಾಮೇಶ್ವರ ನಗರ ಸೇರಿ ದಂತೆ ಎಲ್ಲ ಕಡೆ ಗುಂಡಿ ತೆಗೆಯಲಾಗಿದೆ. 24x7 ಪೈಪ್‌ ಲೈನ್‌ ಅಳವಡಿಕೆಗೆ ಅಗೆದಿರುವ ರಸ್ತೆಗಳನ್ನು ನಗರಸಭೆ ಗುತ್ತಿಗೆದಾರರಿಂದ ಸರಿಪಡಿಸಬೇಕು. ಸಾರ್ವಜನಿಕರಿಗೆ ಆಗಿರುವ ತೊಂದರೆ ತಪ್ಪಿಸಬೇಕು ಎನ್ನುತ್ತಾರೆ ನಗರದ ನಿವಾಸಿ ಶಾರದಾ ಸಜ್ಜನ.

* * 

ಗುಂಡಿ ಮುಚ್ಚುವಂತೆ ಗುತ್ತಿಗೆ ದಾರರಿಗೆ ಸೂಚನೆ ನೀಡ ಲಾಗಿದೆ. ಸಾರ್ವಜನಿಕ ರಿಂದ ಬಂದಿರುವ ದೂರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.
ಮನ್ಸೂರ್‌ ಅಲಿ
ನಗರಸಭೆ ಪೌರಾಯುಕ್ತ ಆಯುಕ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT