ಐದು ಶ್ರೀಗಂಧದ ಮರ ಕಳವು

7
ಹೊಸದುರ್ಗ: ಭಗೀರಥ ಗುರುಪೀಠದ ಆವರಣದಲ್ಲಿ ದುಷ್ಕರ್ಮಿಗಳ ಕೃತ್ಯ

ಐದು ಶ್ರೀಗಂಧದ ಮರ ಕಳವು

Published:
Updated:
ಐದು ಶ್ರೀಗಂಧದ ಮರ ಕಳವು

ಹೊಸದುರ್ಗ:  ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ದುಷ್ಕರ್ಮಿಗಳು ಭಾನುವಾರ ಬೆಳಗಿನಜಾವ ಐದು ಶ್ರೀಗಂಧ ಮರಗಳನ್ನು ಕಡಿದು ಸಾಗಿಸಿದ್ದಾರೆ.

ಚಿನ್ಮೂಲಾದ್ರಿ ಶಿಲಾಪುರಿ ಸಂಸ್ಥಾನ ಮಠದ 13ನೇ ಸ್ವಾಮೀಜಿಯಾದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಪಟ್ಟಾಭಿಷೇಕದ ನೆನಪಿಗಾಗಿ ಮಠದ ಆವರಣದಲ್ಲಿ ನೂರಾರು ಶ್ರೀಗಂಧದ ಗಿಡಗಳನ್ನು ನೆಡಲಾಗಿತ್ತು. ಅವುಗಳ ಪೋಷಣೆಗೆ ಶ್ರೀಗಳು ವಿಶೇಷ ಕಾಳಜಿ ವಹಿಸಿದ್ದರು.

ಹದಿನೈದು ವರ್ಷಗಳಿಂದ ಬೆಳೆಸಿದ್ದ 15 ಶ್ರೀಗಂಧ ಮರಗಳನ್ನು ಕಿಡಿಗೇಡಿಗಳು ಕಳೆದ ವರ್ಷ ಕಡಿದು ಕಳವು ಮಾಡಿದ್ದರು. ಕಿಡಿಗೇಡಿಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು. ಬಾಕಿ ಉಳಿದಿರುವ ಮರಗಳಿಗೆ ರಕ್ಷಣೆ ನೀಡಬೇಕು ಎಂದು ಅರಣ್ಯ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದೆವು. ಆದರೆ, ಸಂಬಂಧಪಟ್ಟ ಇಲಾಖೆ ಸ್ಪಂದಿಸಿಲ್ಲ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಆರ್‌.ಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶ್ರೀಗಂಧದ ಮರಗಳಿಂದ ಶ್ರೀಮಠಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಮರಗಳ್ಳತನದಿಂದ ಪುರುಷೋತ್ತಮಾನಂದಪುರಿ ಸ್ವಾಮೀಜಿಗೆ ಬೇಸರವಾಗಿದೆ. ಈಗಲಾದರೂ ದುಷ್ಕರ್ಮಿಗಳನ್ನು ಪತ್ತೆ ಮಾಡದಿದ್ದರೆ ತಾಲ್ಲೂಕು ಕಚೇರಿ ಹಾಗೂ ಪೊಲೀಸ್‌ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮೂರ್ತಿ ಎಚ್ಚರಿಸಿದ್ದಾರೆ.

ಆಯುರ್ವೇದ ಸಸ್ಯವನ: ಮಠದ ಆವರಣದಲ್ಲಿ ಶ್ರೀಗಂಧ, ಬೇವು, ಅರಳಿ, ಹಲಸು, ಮಾವು, ಬಸವನಪಾದ, ನೀಲಗಿರಿ, ಹುಣಸೆ ಮರಗಳ ಜತೆಗೆ ಆಯುರ್ವೇದ ಸಸ್ಯವನ ನಿರ್ಮಿಸಲು ಉದ್ದೇಶಿಸಲಾಗಿದೆ. ಹೀಗಾಗಿ ನಾಗಸಂಪಿಗೆ, ಕದಂಬ, ಬಿಲ್ವ, ಸಂಪಿಗೆ, ಈಶ್ವರಿ, ಕಾಂಚನಾರ, ಮಾಪೀಯಾ, ದಾರುಹರಿ ಪ್ರಸನ್ನ, ಜುಮ್ಮ, ನಿರ್ವಿಷ, ರೊಹಿರ್ತ, ದೊಡ್ಡಪತ್ರೆ, ಶಾಲಾಪರ್ಣ, ಅಮೃತಬಳ್ಳಿ ವಾಸ, ಮಂತುಳಿ ಸೇರಿ ಹಲವು ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ. ರಕ್ತಚಂದನ ಸಸಿ ನೆಡಲೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಶಾಲಾಕ್ಷಿ ನಟರಾಜು ತಿಳಿಸಿದರು.

ರಕ್ಷಣೆಗೆ ಮನವಿ: ಅಧಿಕಾರಿಗಳು ಮರ ಬೆಳೆಸುವವರಿಗೆ ಪ್ರೋತ್ಸಾಹ ಹಾಗೂ ರಕ್ಷಣೆ ಕೊಡುತ್ತಿಲ್ಲ. ಮಠದಲ್ಲಿ ಬೆಳೆಸಿರುವ ಶ್ರೀಗಂಧದ ಮರಗಳನ್ನೂ ದುಷ್ಕರ್ಮಿಗಳು ದೋಚುತ್ತಿದ್ದಾರೆ.

ಇನ್ನು ಸಾಮಾನ್ಯ ರೈತರ ಗತಿ ಏನಾಗಬೇಕು? ಇಂಥ ಪ್ರಕರಣ ಮರುಕಳಿಸದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗದ ಡಿಸಿಆರ್‌ಬಿಯ ಡಿವೈಎಸ್‌ಪಿ ನಾಗರಾಜು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಉಪ್ಪಾರ ಸಮಾಜದ ಪದ್ಮಾನಂದ್‌, ಗೋವಿಂದಸ್ವಾಮಿ, ಅರಣ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ, ರಮೇಶ್‌, ಓಂಕಾರಮೂರ್ತಿ, ರಾಜಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

***

ಶ್ರೀಗಂಧ ಮರ ಕಳ್ಳತನದಿಂದ ಆಗಿರುವ ಲಕ್ಷಾಂತರ ರೂಪಾಯಿ ನಷ್ಟವನ್ನು ಸರ್ಕಾರ ಭರಿಸಿಕೊಡಲು ಕ್ರಮ ಕೈಗೊಳ್ಳಬೇಕು

– ಪುರುಷೋತ್ತಮಾನಂದಪುರಿ ಸ್ವಾಮೀಜಿ

***

ಕಳವಾದ ಶ್ರೀಗಂಧದ ಮೌಲ್ಯ ನಿರ್ಧರಿಸಲು ಶಿವಮೊಗ್ಗದ ಗಂಧದಕೋಟೆಗೆ ಸ್ಯಾಂಪಲ್‌ ಕಳುಹಿಸುತ್ತೇವೆ. ಕಿಡಿಗೇಡಿಗಳ ಪತ್ತೆ ಮಾಡಲಾಗುವುದು

– ರಾಮಚಂದ್ರಪ್ಪ, ಸಹಾಯಕ ಅರಣ್ಯ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry