ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಣ್ಣದ ಕೊಡೆಗಳು

Last Updated 19 ಜೂನ್ 2017, 5:59 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಮಳೆಯಿಂದ ರಕ್ಷಣೆ ನೀಡುವ ರೇನ್‌ಕೋಟ್‌, ಕೊಡೆಗಳು ಹಾಗೂ ಪ್ಲಾಸ್ಟಿಕ್‌ ಹೊದಿಕೆಗಳು ನಗರದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇವುಗಳ ವ್ಯಾಪಾರ ಬಿರುಸುಗೊಂಡಿದೆ.

ನಗರದ ಗಾಂಧಿ ಮಾರುಕಟ್ಟೆ, ಜನತಾ ಬಜಾರ್‌, ಸುಭಾಷ್‌ ವೃತ್ತ, ಗ್ರೀನ್‌ಸ್ಟ್ರೀಟ್‌ನ ಅಂಗಡಿಗಳು ಹಾಗೂ ಬೀದಿಬದಿಯಲ್ಲಿ ಸಾಲಾಗಿ ಜೋಡಿಸಿಟ್ಟ ಬಣ್ಣ ಬಣ್ಣದ ಕೊಡೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ನಗರದಲ್ಲಿ ಕಳೆದ ಒಂದು ವಾರದಿಂದ ಮಳೆ ಬೀಳುತ್ತಿದ್ದು, ಕೆಲವೊಮ್ಮೆ ರಭಸವಾಗಿ ಸುರಿಯುತ್ತಿದೆ.

ಹೀಗಾಗಿ ಇಲ್ಲಿನ ಜನರು ರೇನ್‌ಕೋಟ್‌ ಅಥವಾ ಕೊಡೆ ಇಲ್ಲದೇ ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮೂಲೆ ಸೇರಿದ್ದ ಕೊಡೆಗಳು ಹೊರಬಂದು ಮಳೆಯ ಹನಿಗಳಿಗೆ ಗರಿಬಿಚ್ಚಿವೆ. ಇನ್ನು ಕೆಲವರು ಹೊಸ ಕೊಡೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಕೊಡೆಗಳಿಗೆ ಹೆಚ್ಚಿದ ಬೇಡಿಕೆ: ಮಳೆಗಾಲ ಆರಂಭವಾಗಿರುವುದರಿಂದ ಸಾಮಾನ್ಯ ವಾಗಿ ಕೊಡೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅಂಗಡಿಗಳಲ್ಲಿ ಬ್ರ್ಯಾಂಡೆಂಡ್‌ ಕೊಡೆಗಳು ಮಾತ್ರ ಲಭ್ಯವಿದ್ದರೆ, ಬೀದಿಬದಿಯಲ್ಲಿ ಸ್ವಲ್ಪ ಕಡಿಮೆ ದರದ ಕೊಡೆಗಳು ಮಾರಾಟಕ್ಕಿವೆ. ಗ್ರಾಹಕರನ್ನು ಸೆಳೆಯಲು ಕಂಪೆನಿ ಗಳು ತರಹೇವಾರಿ ಕೊಡೆಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಮಹಿಳೆಯರು ವ್ಯಾನಿಟಿ ಬ್ಯಾಗಿನಲ್ಲಿ ಮಡಚಿಡ ಬಹುದಾದ ಕೊಡೆಗಳು, ಮಕ್ಕಳಿಗಾಗಿ ಚಿಕ್ಕ ಹಾಗೂ ಹಗುರವಾದ ಕೊಡೆಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿವೆ.

‘ಮಳೆಗಾಲದಲ್ಲಿ ಮನೆಯಿಂದ ಆಚೆ ಬರಬೇಕೆಂದರೆ ಕೊಡೆ ಅವಶ್ಯ. ಕಳೆದ ವರ್ಷ ₹ 150 ಕೊಟ್ಟು ಕೊಡೆ ಖರೀದಿಸಿದ್ದೆ. ಆದರೆ ಅದರ ತಂತಿ ಮುರಿದು ಹೋಗಿದೆ. ಅದನ್ನು ದುರಸ್ತಿ   ಮಾಡಿಸುವ ಗೋಜಿಗೆ ಹೋಗದೇ ಹೊಸ ಖರೀದಿ ಮಾಡಲು ಬಂದಿದ್ದೇನೆ. ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಕೊಡೆಗಳು ಉತ್ತಮವಾಗಿವೆ’ ಎನ್ನುತ್ತಾರೆ ಕಾಜುಬಾಗದ ವಿನುತಾ.

‘ಕೊಡೆಗಳ ವ್ಯಾಪಾರ ಜೋರಾಗಿ ಸಾಗಿದೆ. ಭಾನುವಾರ ಒಂದೇ ದಿನ ಸುಮಾರು 100ಕ್ಕೂ ಅಧಿಕ ಕೊಡೆಗಳು ಮಾರಾಟವಾದರೆ, ಉಳಿದ ದಿನಗಳಲ್ಲಿ ನಿತ್ಯ 50–80 ಕೊಡೆಗಳು ಬಿಕರಿಯಾ ಗುತ್ತವೆ. ಸಿರಿವಂತರು ಬ್ರ್ಯಾಂಡೆಂಡ್‌ ಕೊಡೆ ಖರೀದಿಸಿದರೆ, ಮಧ್ಯಮ ಹಾಗೂ ಬಡವರು ನಮ್ಮ ಬಳಿ ಬಂದು ಕೊಡೆಗಳನ್ನು ಖರೀದಿಸುತ್ತಾರೆ’ ಎನ್ನುತ್ತಾರೆ ಕೊಡೆ ವ್ಯಾಪಾರಿ ಮಲ್ಲು.

‘ಕೊಡೆಗಳನ್ನು ಮುಂಬೈ ಹಾಗೂ ಹುಬ್ಬಳ್ಳಿಯಿಂದ ತಂದಿದ್ದೇನೆ. ಒಂದು ಕೊಡೆಗೆ ₹ 150 ರಿಂದ ₹ 250 ವರೆಗೂ ದರವಿದೆ. ಗ್ರಾಹಕರನ್ನು ಕೊಡೆಯನ್ನು ಬಿಚ್ಚಿ ನೋಡಿ ತಮಗಿಷ್ಟವಾದುದನ್ನು ಕೊಂಡೊಯ್ಯುತ್ತಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT