ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗೆದಷ್ಟು ಮುಗಿಯದ ಕಸದ ರಾಶಿ

ಕೆಂಚಮಲ್ಲಪ್ಪನ ಹೊಂಡಕ್ಕೆ ಕಾಯಕಲ್ಪ, ಮುಂದುವರಿದ ‘ಕ್ಲೀನ್ ಹೊಂಡ’ ಅಭಿಯಾನ
Last Updated 19 ಜೂನ್ 2017, 6:02 IST
ಅಕ್ಷರ ಗಾತ್ರ

ಚಿತ್ರದುರ್ಗ:  ಎಷ್ಟು ಗುಡಿಸಿ ಹಾಕಿದರೂ ಕಸ ಖಾಲಿಯಾಗುತ್ತಿಲ್ಲ. ಎಷ್ಟು ಪುಟ್ಟಿ ಹೂಳು ತೆಗೆದರೂ ಹೊಂಡ ಬರಿದಾಗು ತ್ತಿಲ್ಲ. ತೆಂಗಿನ ಕಾಯಿ ರಾಶಿ, ಟೈರು, ಟ್ಯೂಬು, ಪ್ಲಾಸ್ಟಿಕ್ ಚೊಂಬು, ಲೋಟ... ಛೇ ಹೊಂಡದಿಂದ ತೆಗೆದಷ್ಟೂ ಮುಗಿಯದಷ್ಟು ಕಸ.. ಕಸ.. ಕಸ... !

ನಗರಸಭೆಯ ’ಕ್ಲೀನ್ ಹೊಂಡ’ ಅಭಿಯಾನದಲ್ಲಿ ಭಾನುವಾರ ಪೌರಕಾರ್ಮಿಕರು ಎಲ್‌ಐಸಿ ಕಚೇರಿ ಪಕ್ಕದ ಕೆಂಚಮಲ್ಲಪ್ಪನ ಹೊಂಡದ ಹೂಳು ತೆಗೆಯುವಾಗ ಒಂದು ಹಂತದಲ್ಲಿ ಅದೊರಳಗಿನ ಕಸದ ರಾಶಿ ಕಂಡು ಹೀಗೆ ರೋಸಿ ಹೋದರು. ಅಷ್ಟು ದೊಡ್ಡ ಪ್ರಮಾಣದಲ್ಲಿ ನಗರದ ನಾಗರಿಕರು ತಮ್ಮ ಮನೆಯ ಅಂಗಳದ ಕಸವನ್ನು ಹೊಂಡದಲ್ಲಿ ತುಂಬಿಸಿದ್ದರು.

ಬೆಳಿಗ್ಗೆ 8.30ಗೆ 80ಕ್ಕೂ ಹೆಚ್ಚು ಪೌರಕಾರ್ಮಿಕರು ಕೆಂಚಮಲ್ಲಪ್ಪನ ಹೊಂಡ ಸ್ವಚ್ಛಗೊಳಿಸಲು ಆರಂಭಿಸಿ ದರು. ಇದಕ್ಕೂ ಮುನ್ನ ಹೊಂಡದ ತಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿದ್ದ ಕೊಳಚೆ ನೀರನ್ನು ಮೋಟಾರ್ ಸಹಾಯದಿಂದ ಹೊರ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಎರಡು ತಂಡಗಳು ಎರಡು ಮೂಲೆಗಳಲ್ಲಿ ಸಾಲುಗಟ್ಟಿ ನಿಂತು, ಹೊಂಡದ ಸುತ್ತಲಿನ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿರು. ಮೆಟ್ಟಿಲುಗಳ ಮೇಲೆ, ಮೂಲೆಗಳಲ್ಲಿ ಸಂಗ್ರಹವಾಗಿದ್ದ ಮಣ್ಣು, ಕಸ ತೆಗೆದು ಹೊರ ಹಾಕಿದರು. ಆದರೆ, ಹೊಂಡದ ತಳಭಾಗದಲ್ಲಿ ಸಂಗ್ರಹವಾ ಗಿದ್ದ ಕಸದ ರಾಶಿಯ ವಿಲೇವಾರಿ ಕಾರ್ಮಿಕರಿಗೆ ಸವಾಲಾಯಿತು.

ಇಬ್ಬರು ಕಾರ್ಮಿಕರು, ತಳಭಾಗದಲ್ಲಿ ಎರಡು ಬದಿಯಲ್ಲಿ ನಿಂತು ಉದ್ದನೆಯ ಕೋಲಿನ ಸಲಿಕೆ ಯಿಂದ, ಹೂಳು ಎಳೆಯಲು ಪ್ರಯತ್ನಿಸಿದರು. ಆದರೆ, ನೀರು ಖಾಲಿಯಾಗದೇ ಹೂಳು ತೆಗೆಯುವುದು ಅಸಾಧ್ಯ ಎನ್ನಿಸಿತು. ತಕ್ಷಣ, ಹಿಂದಿನ ದಿನ ಇಳಿಸಿದ್ದ ಮೋಟಾರ್ ಮೇಲೆತ್ತಿ, ಸ್ವಚ್ಛಗೊಳಿಸಿ, ಪುನಃ ಹೊಂಡದೊಳಗೆ ಇಳಿಸಿ ನೀರು ಎತ್ತಿ ಹೊರ ಹಾಕುವ ಕಾರ್ಯ ಆರಂಭವಾಯಿತು. ಅಲ್ಲಿವ ರೆಗೂ ಹೊಂಡದ ಉಳಿದ ಭಾಗದ ಸ್ವಚ್ಛತಾ ಕಾರ್ಯ ಮುಂದುವರಿಯಿತು.

ಸ್ವಚ್ಛತಾ ಕಾರ್ಯದ ಬಳಿ ಹಾಜರಿದ್ದ ನಗರಸಭೆ ಅಧ್ಯಕ್ಷ  ಎಚ್.ಎನ್. ಮಂಜುನಾಥ ಗೊಪ್ಪೆ  ‘ಪ್ರಜಾವಾಣಿ’ ಜತೆ ಮಾತನಾಡಿ, ‘ಎಷ್ಟೇ ಘೋಷಣಾ ಫಲಕಗಳನ್ನು ಹಾಕಿಸಿದರೂ, ಜನರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಟ್ಟಿಲ್ಲ. ಹೀಗಾಗಿಯೇ ಇಂಥ ಹೊಂಡಗಳು ಕಸದ ತೊಟ್ಟಿಯಾಗಿವೆ. ನಾವೇನೋ ಸ್ವಚ್ಛ ಮಾಡಿಸುತ್ತೇವೆ. ನಾಗರಿಕರು ಅದನ್ನು ಶುಚಿಯಾಗಿಟ್ಟುಕೊಂಡರೆ, ಅದೇ ಅವರು ಸ್ವಚ್ಛತಾ ಅಭಿಯಾನಕ್ಕೆ ಸಲ್ಲಿಸುವ ದೊಡ್ಡ ಗೌರವ’ ಎಂದು ಮಾರ್ಮಿಕವಾಗಿ ನುಡಿದರು.

ನಗರಸಭಾ ಸದಸ್ಯ ರಾಘವೇಂದ್ರ, ‘ಕೆಂಚಮಲ್ಲಪನ ಹೊಂಡದ ತುಂಬಾ ತೆಂಗಿನ ಕಾಯಿಗಳ ರಾಶಿ ಇವೆ. ಮನೆಯ ತೊಲೆಗೆ ಮಂತ್ರಿಸಿ ಕಟ್ಟಿರುತ್ತಾರಲ್ಲಾ, ಅದೇ ತೆಂಗಿನ ಕಾಯಿಗಳು. ಅರ್ಚಕರು ಹೇಳ್ತಾರೆ ಎಂದು ಎಲ್ಲ ಕಾಯಿ, ಹೂವು ತಂದು ಈ ಬಾವಿಗೆ ಹಾಕುತ್ತಾರೆ. ಅದಕ್ಕೆ ಈ ಹೊಂಡದಲ್ಲಿ ಇಷ್ಟೊಂದು ಕಸ ತುಂಬಿದೆ’ ಎಂದರು.

‘ಮೊದಲು ಇದೇ ಹೊಂಡಕ್ಕೆ ರಾಜಕಾಲುವೆ (ಮಳೆ ನೀರು) ಬಿಡಲಾಗುತ್ತಿತ್ತು. ಆ ಮಳೆ ನೀರಿನ ಕಾಲುವೆಯಲ್ಲಿ ನಗರದ ಕೊಳಚೆ ನೀರು ಹರಿಯುತ್ತಾ, ಅದು ಹೊಂಡಕ್ಕೆ ಸೇರುತ್ತಿತ್ತು. ಅದನ್ನು ಈಗ ಸ್ಥಗಿತಗೊಳಿಸಲಾಗಿದೆ’ ಎನ್ನುತ್ತಾ ಕಾಲುವೆ ಬಂದ್ ಮಾಡಿರುವುದನ್ನು ತೋರಿಸಿದರು.

‘ಹೊಂಡಕ್ಕೆ ಎಲ್ಲಿಂದ ನೀರು ತುಂಬಿಸಬೇಕೆಂದು ಪರಿಶೀಲಿಸಬೇಕು’ ಎಂದರು. ಆರೋಗ್ಯ ನಿರೀಕ್ಷಕ ರಾಘವೇಂದ್ರ, ‘ಸ್ವಚ್ಛಗೊಳಿಸಿರುವ ಎಲ್ಲ ಹೊಂಡಗಳಿಗೆ ಐದಾರು ಅಡಿ ಎತ್ತರಕ್ಕೆ ವೈರ್‌ ‘ಮೆಷ್’ ಹಾಕಿಸದಿದ್ದರೆ ಜನರು ಮತ್ತೆ ಕಸ ಹಾಕ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇಷ್ಟೆಲ್ಲ ಮಾತನಾಡುತ್ತಿದ್ದಾಗ, ಕಾರ್ಮಿಕರ ಒಂದು ತಂಡ, ನೀರಿನಲ್ಲಿ ಮುಳುಗಿದ್ದ ಮೋಟಾರ್ ಎತ್ತಿ, ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ಕರೆಂಟ್ ಸೌಕರ್ಯ ಪಡೆದು, ಕೊಳಚೆ ನೀರು ಖಾಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿತು. ಒಟ್ಟಾರೆ, ಪೌರ ಕಾರ್ಮಿಕರ ತಂಡ ಬಿಡುವಿಲ್ಲದೇ ಕೆಂಚಮಲ್ಲಪ್ಪನ ಹೊಂಡದ ಸ್ವಚ್ಛತೆಯಲ್ಲಿ ನಿರತವಾಗಿತ್ತು.

***
‘ಮುಕ್ತಿಧಾಮ ಸಮೀಪದ ಕೆಂಚೇಶ್ವರ ಹೊಂಡಕ್ಕೆ ಸ್ವಲ್ಪ ನೀರು ಬಂದಿದೆ. ಸಂತೆಹೊಂಡದಲ್ಲೂ ಮಳೆ ನೀರು ಸಂಗ್ರಹವಾಗಿದೆ’
– ಎಚ್. ಎನ್‌.ಮಂಜುನಾಥ ಗೊಪ್ಪೆ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT