ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಯಾದರೂ ತಪ್ಪದ ಸಂಚಾರ ಸಮಸ್ಯೆ

Last Updated 19 ಜೂನ್ 2017, 6:09 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ವಿವಿಧೆಡೆ ರಸ್ತೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಯಾಗುವ ಬದಲಿಗೆ ಮತ್ತಷ್ಟು ತೊಂದರೆಗಳೇ ಕಾಣಿಸಿಕೊಳ್ಳುತ್ತಿವೆ!
ಮಹಾನಗರದ ರಸ್ತೆ ವಿಸ್ತರಣೆಗೆ ನಾಗರಿಕರು ಜಾಗ ಬಿಟ್ಟುಕೊಟ್ಟಿದ್ದಾರೆ. ಆದ್ದರಿಂದಲೇ ಮಹಾನಗರ ಪಾಲಿಕೆಯು ತನ್ನ ಉದ್ದೇಶಿತ ಯೋಜನೆಯನ್ನು ಸುಲಭವಾಗಿ ಕಾರ್ಯಗತಗೊಳಿಸುತ್ತಿದೆ.

ರಸ್ತೆಗಳು ವಿಸ್ತರಣೆಯಾದರೆ ಸುಗಮ ಸಂಚಾರಕ್ಕೆ ಅನುಕೂಲ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪಾಲಿಕೆ ಹಾಗೂ ಪೊಲೀಸರ ನಿರ್ಲಕ್ಷ್ಯದ ಪರಿಣಾಮ ನಗರದಲ್ಲಿ ಸಂಚಾರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ನಗರದ ಬಹುತೇಕ ಕಡೆಗಳಲ್ಲಿ, ಅದರಲ್ಲೂ ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳಲ್ಲಿರುವ ಬಹುಮಹಡಿ ಕಟ್ಟಡಗಳ ನೆಲಮಾಳಿಗೆಗಳನ್ನು (ಸೆಲ್ಲರ್‌) ಖಾಲಿ ಮಾಡಿಸಿ, ಅಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಬೇಕಾದ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡುತ್ತಿಲ್ಲ.

ಕಟ್ಟಡದವರು ಸೆಲ್ಲಾರ್‌ಗಳನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ನಿಂತಿಲ್ಲ. ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆಗೆ ನೀಡಿರುವುದೂ ಇದೆ! ಇದರಿಂದಾಗಿ, ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸುವ ಅನಿವಾರ್ಯ ಸಾರ್ವಜನಿಕರಿಗಾಗಿದೆ.ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ತೊಡಕಾಗಿದೆ. ಇದರಿಂದ ರಸ್ತೆ ವಿಸ್ತರಣೆ ಮಾಡಿದ ಪ್ರಮುಖ ಉದ್ದೇಶವೇ ಈಡೇರಿಕೆಯಾಗುತ್ತಿಲ್ಲ.

ಪ್ರಯೋಜನವಾಗಿಲ್ಲ: ವಾಣಿಜ್ಯ ಉದ್ದೇ ಶಕ್ಕೆ ನಿರ್ಮಿಸ­ಲಾದ ಕಟ್ಟಡಗಳ ನೆಲಮಾಳಿಗೆಯನ್ನು ಅವರ ಉದ್ದೇಶದ ಹೊರತಾದ ಕಾರ್ಯಗಳಿಗೆ ಬಳಕೆಯಾಗುವಂತೆ ಕಟ್ಟಡದ ಮೂಲ ನಕ್ಷೆಗಳನ್ನೇ ತಿದ್ದಲಾಗುತ್ತದೆ ಎಂಬ ದೂರುಗಳು ಕೇಳಿಬಂದಿವೆ.

ಬಹುಮಹಡಿ ಕಟ್ಟಡಗಳ ನೆಲಮಾಳಿಗೆಗಳನ್ನು ಅಂಗಡಿ, ಹೋಟೆಲ್‌, ವಾಣಿಜ್ಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಅನೇಕ ವಿಷಯಗಳು ಈಗಾಗಲೇ ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದರೂ ಪ್ರಯೋಜನವಾಗಿಲ್ಲ. ಇದು ಕಾನೂನು ಉಲ್ಲಂಘನೆಗೆ ಪ್ರೇರಣೆ ನೀಡುವಂತಿದೆ.

ಮಹಾನಗರ ಪಾಲಿಕೆಯು ಕೆಲ ವರ್ಷಗಳಿಂದ ಬಹುಮಹಡಿ ಕಟ್ಟಡಗಳ ನೆಲಮಾಳಿಗೆಯನ್ನು ವಾಹನಗಳ ಪಾರ್ಕ್‌ಗೆ ಮೀಸಲಿಡಬೇಕು ಎಂದು ಆದೇಶ, ಸೂಚನೆಗಳನ್ನು ನೀಡಿದೆ. ನೆಲಮಾಳಿಗೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಕೂಡದು ಎಂದು ಎಚ್ಚರಿಕೆ ನೋಟಿಸ್‌ ಕೂಡ ನೀಡಿದೆ. ಆದರೆ, ಕಟ್ಟಡಗಳ ಮಾಲೀಕರು ಇದಕ್ಕೆ ಕಾಸಿನ ಬೆಲೆಯನ್ನೂ ಕೊಟ್ಟಿಲ್ಲ. ಕಳೆದ ಗುರುವಾರ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಭೆ ನಡೆಸಿದರೂ, ಇಂಥ ಅತಿಕ್ರಮಗಳ ತೆರವಿನ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದ್ದಾರೆ.

ವಿಸ್ತರಣೆ ಮಾಡಿರುವ ರಸ್ತೆಗಳಲ್ಲೂ ಏಕಮುಖ ಸಂಚಾರ ವ್ಯವಸ್ಥೆಯೇ ಇದೆ. ಗಣಪತಿ ಗಲ್ಲಿ, ರಾಮದೇವಗಲ್ಲಿ, ಕಿರ್ಲೋಸ್ಕರ್‌ ರಸ್ತೆ, ಪೋರ್ಟ್‌ ರೋಡ್‌, ಕಡೋಲ್ಕರ್‌ ರಸ್ತೆ,  ಮೇದಾರ ಗಲ್ಲಿಗಳಲ್ಲಿ ಈಗಲೂ ಏಕಮುಖ ಸಂಚಾರವೇ ಅನಿವಾರ್ಯವಾಗಿದೆ. 

* * 

ಪಾಲಿಕೆ, ಬುಡಾ ವ್ಯಾಪ್ತಿಯಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಗೆ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಸಂಚಾರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು
ಶಶಿಧರ ಕುರೇರ
ಆಯುಕ್ತರು, ಮಹಾನಗರಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT