ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ, ಇಳಕಲ್‌ನಲ್ಲಿ ಮಳೆ; ಮನೆಗೆ ನುಗ್ಗಿದ ನೀರು

Last Updated 19 ಜೂನ್ 2017, 6:20 IST
ಅಕ್ಷರ ಗಾತ್ರ

ಇಳಕಲ್: ಶನಿವಾರ ಸಂಜೆ ಸತತ 4 ಗಂಟೆ ಸುರಿದ ಮಳೆಯಿಂದ ನಗರದ ಗೌಳೇರಗುಡಿಯಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಹಿರೇಹಳ್ಳದ ನೀರು ನುಗ್ಗಿ ನಾಗರಿಕರು ಸಂಕಷ್ಟಕ್ಕೆ ಸಿಲುಕಿದರು. ತಡರಾತ್ರಿ ಕಾಲೊನಿಗೆ ಭೇಟಿ ನೀಡಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ತಾಲ್ಲೂಕಾಡಳಿತಕ್ಕೆ ಗಂಜಿ ಕೇಂದ್ರ ಆರಂಭಿಸಲು ಸೂಚನೆ ನೀಡಿದರು. ಬಡ ನೇಕಾರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ದಿನಬಳಕೆ ವಸ್ತು, ಕೈಮಗ್ಗ, ವಿದ್ಯುತ್‌ ಮಗ್ಗ, ನೂಲು ಹಾಗೂ ನೇಕಾರಿಕೆಗೆ ಸಂಬಂಧಿಸಿದ ವಸ್ತು ಹಾಳಾಗಿವೆ. ಮಕ್ಕಳು, ವೃದ್ಧರು ತೀವ್ರ ತೊಂದರೆಗೆ ಒಳಗಾದರು. ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ ಕಾರಣ ಕತ್ತಲಲ್ಲಿ ಜನರು ಪರದಾಡುತ್ತಿರುವುದು ಕಂಡು ಬಂತು.

ಶಾಸಕ ಕಾಶಪ್ಪನವರು ತಹಶೀಲ್ದಾರ್‌ ಸುಭಾಸ ಸಂಪಗಾವಿ, ಪೌರಾಯುಕ್ತ ಅರವಿಂದ ಜಮಖಂಡಿ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸುವಂತೆ ಹಾಗೂ ನಾಗರಿಕರಿಗೆ ನೆರವಿಗೆ ಕೂಡಲೇ ಹೆಚ್ಚಿನ ಸಂಖ್ಯೆ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಿದರು.

ತ್ಯಾಜ್ಯ, ಅತಿಕ್ರಮಣದಿಂದ ನುಗ್ಗಿದ ಮಳೆ ನೀರು:  ಭಾನುವಾರ ಬೆಳಿಗ್ಗೆ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಗೌಳೇರಗುಡಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ‘ಹಿರೇಹಳ್ಳದಲ್ಲಿ ಗ್ರಾನೈಟ್, ಕಟ್ಟಡಗಳ ತ್ಯಾಜ್ಯ ಸುರಿದಿರುವುದು, ಇಟ್ಟಿಗೆ ಭಟ್ಟಿಯವರು ಹಳ್ಳವನ್ನು ಅತಿಕ್ರಮಿಸಿರುವುದು ಹಾಗೂ ಹಳ್ಳದಲ್ಲಿ ಬೆಳೆದಿರುವ ಮುಳ್ಳುಕಂಟಿ’ ಕಾರಣ ನಿವಾಸಿಗಳು ದೂರಿದರು.

ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಮುಳ್ಳುಕಂಟಿ ತಗೆಸಬೇಕು ಎಂದು ಉಪವಿಭಾಗಾಧಿಕಾರಿ ಸೂಚಿಸಿದರು. ಸಿದ್ದಪ್ಪ ಮಡಿವಾಳರ, ಮಾರುತಿ ಸರೋದೆ, ನರಸಪ್ಪ ಭೋಗಂ, ಮಲ್ಲಿಕಾರ್ಜುನ ಧೋತ್ರೆ, ಬಾಲಪ್ಪ ಘಟ್ನೂರ, ಚನ್ನಮ್ಮ ಬಂಡಿ, ರಾಮಣ್ಣ ಚಿಲ್ಲಾಳ ಅವರ ಮನೆಗಳಲ್ಲಿ ಮಗ್ಗಗಳು ಮಳೆ ನೀರಿನಿಂದ ಹಾಳಾಗಿರುವುದು ಕಂಡು ಬಂತು.

‘ಉತ್ತಮ ಮನೆ ಕಟ್ಟಿಕೊಳ್ಳಲು ವಾಜಪೇಯಿ ವಸತಿ ಯೋಜನೆಯಡಿ ಹಣಕಾಸಿನ ನೆರವು ನೀಡಲಾಗುವುದು. ನಗರಸಭೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ’ ಉಪವಿಭಾಗಾಧಿಕಾರಿ ಸೋಮನಾಳ ಸೂಚಿಸಿದರು.

ತಹಶೀಲ್ದಾರ್‌ ಸುಭಾಸ ಸಂಪಗಾವಿ ಮಾತನಾಡಿ ‘ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಉಂಟಾದ ಹಾನಿಯ ಪ್ರಮಾಣವನ್ನು ಸಮೀಕ್ಷೆ ಮಾಡಲಾಗುತ್ತಿದೆ. ನಿಯಮಾನುಸಾರ ಸಾಧ್ಯವಿರುವ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಬೆಳೆಗೆ, ಶೆಡ್‌ಗೆ ನುಗ್ಗಿದ ಮಳೆ ನೀರು
ಬಾದಾಮಿ:  ತಾಲ್ಲೂಕಿನ ಕುಳಗೇರಿ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಗುಡುಗು ಸಿಡಿಲಿನ ಆರ್ಭಟದೊಂದಿದೆ ಎರಡು ಗಂಟೆಕಾಲ ಧಾರಾಕಾರ ಮಳೆಯು ಸುರಿಯಿತು. ಹಳ್ಳ ಕೊಳ್ಳಗಳು ತುಂಬಿ ಹರಿದವು. ಸೇತುವೆ ನಿರ್ಮಾಣ ಕಾಮಗಾರಿಯಿಂದ ದೇಶಿ ಹಳ್ಳದ ನೀರು  ಬೆಳೆಗೆ ಮತ್ತು ಭೀಮಪ್ಪ ದ್ಯಾವನಗೌಡರ ಎಂಬುವರ ಶೆಡ್‌ಗೆ ನುಗ್ಗಿದೆ. ಭೀಮಪ್ಪ ಎಂಬುವರ ಶೆಡ್‌ನಲ್ಲಿದ್ದ  ಜೋಳ ಮತ್ತು ಈರುಳ್ಳಿ ಚೀಲಗಳಿಗೆ ಹಾನಿಯಾದವು. ಕುಳಗೇರಿ ಕ್ರಾಸ್‌, ಖಾನಾಪುರ, ಹಾಗನೂರ, ಗೋವನಕೊಪ್ಪ, ವಡವಟ್ಟಿ, ಸೋಮನಕೊಪ್ಪ, ನರಸಾಪುರ, ಬೆಳವಲಕೊಪ್ಪ, ಕಳಸದಲ್ಲಿ ಉತ್ತಮ ಮಳೆಯಾಗಿದೆ.

ಮುಧೋಳ, ಸಾವಳಗಿಯಲ್ಲಿ ಮಳೆ
ಮುಧೋಳ: ನಗರದಲ್ಲಿ ಭಾನುವಾರ ಸುಮಾರು 45 ನಿಮಿಷ  ಸಾಧಾರಣ ಮಳೆ ಆಯಿತು.  ಭೂಮಿ ಹದಮಾಡಿಕೊಂಡು  ಕಾಯುತ್ತಿದ್ದವರಿಗೆ ವರುಣ ಸಂತಸ ಉಂಟು ಮಾಡಿದನು.
ಸಾವಳಗಿಯಲ್ಲಿ ದಾಖಲೆ ಮಳೆ ಗ್ರಾಮದಲ್ಲಿ  ಶನಿವಾರ 121 ಮೀ.ಮಿ ಮಳೆ ದಾಖಲಾಗಿದೆ.  ಗ್ರಾಮದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ. ತೆಲಸಂಗ ರಸ್ತೆಯ ಮಾರ್ಗದ ರಾಜೀಸಾಬ ಅತ್ತಾರ ಅವರ ಮನೆ ಗೋಡೆ ಕುಸಿದಿದೆ. ಮಹೇಶ ಯಾದವ ಅವರ ಮನೆಗೆ ನೀರು ನುಗ್ಗಿದೆ.  ಎಸ್ಸಿ ಮತ್ತು ಎಸಟಿ ಬಾಲಕರ ವಸತಿ ನಿಲಯ ಆವರಣ, ಗರಡಿ ಮನೆ ಆವರಣದಲ್ಲಿ ಮಳೆ ನೀರು ಆವರಿಸಿತ್ತು.

ಸಿಡಿಲು ಬಡಿದು ವ್ಯಕ್ತಿ ಸಾವು
ಬಾದಾಮಿ:  ಇಲ್ಲಿನ ಜಯನಗರದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ಸೆಂಟ್ರಿಂಗ್‌ ಕಾರ್ಮಿಕ ಮೃತಪಟ್ಟಿದ್ದಾರೆ. ಪಟ್ಟಣದ ನಿವಾಸಿ ಮಹ್ಮದಸಾಬ್‌ ಚೌಧರಿ (30) ಮೃತರು. ಜಯನಗರದಲ್ಲಿ ಅಡಕಿ ಎಂಬವರ ಮನೆಯ ಕೆಲಸಕ್ಕೆ ಹೋದಾಗ ಮಳೆ ಬಂದಿದೆ.  ಮಹ್ಮದ್‌ಸಾಬ್‌ ಮನೆ ಛಾವಣಿ ಮೇಲೆ ತಗಡು ಇಡಲು ಹೋದಾಗ  ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT