ಮಹಿಳಾ ಸಮುದಾಯ ಅಸ್ತಿತ್ವಕ್ಕೆ

7

ಮಹಿಳಾ ಸಮುದಾಯ ಅಸ್ತಿತ್ವಕ್ಕೆ

Published:
Updated:
ಮಹಿಳಾ ಸಮುದಾಯ ಅಸ್ತಿತ್ವಕ್ಕೆ

ಮೈಸೂರು: ಮಹಿಳಾ ನೌಕರರ ಸಮಗ್ರ ಅಭ್ಯುದಯವನ್ನು ಆಶಯವನ್ನಾಗಿ ಇಟ್ಟುಕೊಂಡು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇದೇ ಮೊದಲ ಬಾರಿಗೆ  ‘ಮೈಸೂರು ವಿ.ವಿ ಮಹಿಳಾ ಸಮುದಾಯ’ ಅಸ್ತಿತ್ವಕ್ಕೆ ಬಂದಿದೆ.

ವಿಶ್ವವಿದ್ಯಾನಿಲಯದ ಮಹಿಳಾ ಬೋಧಕರು, ಬೋಧಕೇತರರು, ಸಂಶೋಧನಾ ವಿದ್ಯಾರ್ಥಿಗಳು, ಗುತ್ತಿಗೆ– ಹೊರಗುತ್ತಿಗೆ ನೌಕರರು ಈ ವೇದಿಕೆಯ ಸದಸ್ಯರಾಗಿದ್ದು; ವಿ.ವಿ ಆವರಣದಲ್ಲಿ ಮಹಿಳಾಪರವಾದ ವಾತಾವರಣ ಇರುವಂತೆ ನೋಡಿಕೊಳ್ಳುವುದು, ವರ್ಷವಿಡೀ ಮಹಿಳಾಪರ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಈ ವೇದಿಕೆಯ ಆಶಯವಾಗಿದೆ.

ಇದೇ ಮೊದಲು: ವಿ.ವಿ.ಯಲ್ಲಿ ಮಹಿಳಾಪರ ಕಾರ್ಯಕ್ರಮಗಳೇನೇ ಇದ್ದರೂ ವಿವಿಧ ವಿಭಾಗಗಳಲ್ಲಿ ಆಚರಿಸಲಾಗುತ್ತಿದೆ. ಒಟ್ಟಾರೆಯಾಗಿ ವಿ.ವಿ.ಯ ಎಲ್ಲ ಮಹಿಳಾ ನೌಕರರೂ ಸೇರಿ ಕಾರ್ಯಕ್ರಮ ನಡೆಸುವ ಪರಿಪಾಠ ಇಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿ.ವಿ.ಯಲ್ಲಿ ಬಹುದಿನಗಳಿಂದ ಒಂದು ಮಹಿಳಾ ವೇದಿಕೆಯನ್ನು ಆರಂಭಿಸುವ ಚಿಂತನೆ ಇತ್ತು. ಇದೀಗ ವಿ.ವಿ.ಯ ವಿವಿಧ ವಿಭಾಗಗಳ ಮಹಿಳಾ ಉದ್ಯೋಗಿಗಳು ಆಸಕ್ತಿ ವಹಿಸಿ ಇದೇ ಮೊದಲ ಬಾರಿಗೆ ಈ ವೇದಿಕೆಯನ್ನು ಆರಂಭಿಸಿದ್ದಾರೆ.

ವಿ.ವಿ ವ್ಯಾಪ್ತಿಯ ಮಹಾರಾಜ ಕಾಲೇಜಿನಲ್ಲಿ ಇಂತಹ ಸಂಘವೊಂದು ಸೀಮಿತ ಅವಧಿಗೆ ಕಾರ್ಯನಿರ್ವಹಿಸಿದ್ದಿದೆ. ಆದರೆ, ಅದು ಕೇವಲ ಕಾಲೇಜಿನ ಸಿಬ್ಬಂದಿಗೆ ಸೀಮಿತವಾಗಿತ್ತು. ಈಗ ಆರಂಭವಾಗಿರುವ ವೇದಿಕೆಯು ಇಡೀ ವಿ.ವಿ ವ್ಯಾಪ್ತಿಗೆ ಸೇರಿದ್ದು ಮಹಿಳಾ ಸಿಬ್ಬಂದಿಯ ಧ್ವನಿಯನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.

ತಾತ್ಕಾಲಿಕ ಸಮಿತಿ ರಚನೆ: ಈ ವೇದಿಕೆಯ ಆಶಯಗಳಿಗೆ ಮಾನ್ಯತೆ ನೀಡಿರುವ ಮೈಸೂರು ವಿ.ವಿ.ಯು ವಿವಿಧ ಕಾರ್ಯಕ್ರಮಗಳನ್ನು ನಡೆಸುವಂತೆ ಹಣ ಬಿಡುಗಡೆಯನ್ನೂ ಮಾಡಿದೆ. ಆದರೆ, ಈ ವೇದಿಕೆ ಇನ್ನೂ ನೋಂದಣಿಯಾಗಿಲ್ಲ. ಈಗ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲಾಗಿದ್ದು ಸಂಚಾಲಕರ ನೇಮಕವಾಗಿದೆ.

ಮೈಸೂರು ವಿ.ವಿ.ಯ ಕಾನೂನು ಕೋಶದ ನೌಕರರಾದ ಆರೋಕ್ಯ ಜೆರ್ರಿ, ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಮೀರಾ, ಗ್ರಂಥಾಲಯ ವಿಜ್ಞಾನ ವಿಭಾಗದ ಸರಸ್ವತಿ, ವಿಜ್ಞಾನ ಭವನದ ಲಕ್ಷ್ಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೀತಿ ಶ್ರೀಮಂಧರಕುಮಾರ್‌ ಸೇರಿದಂತೆ ಅನೇಕರು ಈ ಸಮಿತಿಯ ಸದಸ್ಯರಾಗಿದ್ದಾರೆ.

‘ವೇದಿಕೆಯನ್ನು ನೋಂದಣಿ ಮಾಡುವುದೂ ಸೇರಿದಂತೆ, ಕಾರ್ಯಕ್ರಮಗಳ ಸ್ವರೂಪ ರಚನೆ ಮಾಡುವುದರ ಬಗ್ಗೆ ಈ ಸಮಿತಿ ಕಾರ್ಯನಿರ್ವಹಿಸಲಿದೆ. ವಿ.ವಿ.ಯ ಮಹಿಳಾ ಸಿಬ್ಬಂದಿಯನ್ನು ಜಾಗೃತರನ್ನಾಗಿ ಮಾಡುವುದು ನಮ್ಮ ಉದ್ದೇಶ’ ಎಂದು ಪ್ರೀತಿ ಶ್ರೀಮಂಧರಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಈಗಾಗಲೇ ವೇದಿಕೆಯು ಮಹಿಳಾಪರ ಕಾರ್ಯಕ್ರಮಗಳನ್ನು ಆರಂಭಿಸಿದೆ. ವಿಶ್ವಮಹಿಳಾ ದಿನದ ಆಚರಣೆಯಾಗಿದೆ. ಸಸಿ ನಡುವ ಕಾರ್ಯಕ್ರಮವೂ ನಡೆದಿದೆ ಎಂದರು.

ಸಮಸ್ಯೆ ಹೇಳಲು ವೇದಿಕೆ

ಮೈಸೂರು: ವಿ.ವಿ.ಯ ಮಹಿಳಾ ಸಿಬ್ಬಂದಿಯ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಸಮಿತಿಗಳು ಈಗಾಗಲೇ ವಿ.ವಿ.ಯಲ್ಲಿವೆ. ಆದರೆ, ಸಮಸ್ಯೆಗಳನ್ನು ವಿ.ವಿ.ಗೆ ಮಂಡಿಸಲು ವೇದಿಕೆಯೊಂದು ಮಹಿಳೆಯರಿಗೆ ಇರಲಿಲ್ಲ; ಸಾಂಘಿಕ ಬಲವೂ ಇರಲಿಲ್ಲ. ಈ ವೇದಿಕೆಯ ಮೂಲಕ ಕನಸು ಈಡೇರಲಿದೆ.

ಈ ವೇದಿಕೆಯ ಮೂಲಕ ಮಹಿಳಾ ಸಿಬ್ಬಂದಿಯು ತಮ್ಮೆಲ್ಲ ಸಮಸ್ಯೆಗಳನ್ನು ಮಂಡಿಸಬಹುದು. ಕೇವಲ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗದೆ ಮಹಿಳಾ ಅಭ್ಯುದಯಕ್ಕಾಗಿಯೂ ವೇದಿಕೆಯನ್ನು ಸಿಬ್ಬಂದಿಯು ಬಳಸಿಕೊಳ್ಳಬಹುದು.

 

* * 

ಈ ಸಮುದಾಯದ ನೋಂದಣಿ ಇನ್ನೂ ಆಗಬೇಕಿದೆ. ಒಳ್ಳೆಯ ಆಶಯ ಇರುವ ಕಾರ್ಯಕ್ರಮಗಳಿಗೆ ವಿ.ವಿ ಬೆಂಬಲ ನೀಡಲಾಗುವುದು

ಪ್ರೊ.ದಯಾನಂದ ಮಾನೆ

ಪ್ರಭಾರ ಕುಲಪತಿ, ಮೈಸೂರು ವಿ.ವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry