ಡಾಂಬರು ಕಾಣದ ಕೋತಿತೋಪು ರಸ್ತೆ

7

ಡಾಂಬರು ಕಾಣದ ಕೋತಿತೋಪು ರಸ್ತೆ

Published:
Updated:
ಡಾಂಬರು ಕಾಣದ ಕೋತಿತೋಪು ರಸ್ತೆ

ತುಮಕೂರು: ಈ ರಸ್ತೆಗಿಳಿದರೆ ತಗ್ಗು ಗಂಡಿಗಳು, ಬಾಯ್ತೆರೆದು ಅನಾಹುತ ಆಹ್ವಾನಿಸುವ ಮ್ಯಾನ್‌ಹೋಲ್‌ಗಳು ಎದ್ದುಕಾಣುತ್ತವೆ. ಇದು ನಗರದ ಕೋತಿ ತೋಪು ರಸ್ತೆಯ ಸದ್ಯದ ದುಃಸ್ಥಿತಿ. ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಹೊರಪೇಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ವಿಭಜಕದಲ್ಲಿ ಸೋಲಾರ್ ವಿದ್ಯುತ್ ದೀಪಗಳ ಸಾಲು ಇವೆ. ಈ ವಿದ್ಯುತ್ ದೀಪಗಳಲ್ಲಿ ಬೆಳಕು ಕೊಡುವುದು ಕೆಲವೇ ಕೆಲವು ಮಾತ್ರ. ಕೆಲ ಕಡೆ ಸೋಲಾರ್ ವಿದ್ಯುತ್ ದೀಪದ ಕಂಬಗಳು ನೆಲಕ್ಕುರುಳಿವೆ.

ಬೆಂಗಳೂರು ಕಡೆಯಿಂದ ಬರುವ ವಾಹನಗಳು, ತುಮಕೂರು ನಗರ ಪ್ರವೇಶಿಸದೆ, ನೇರವಾಗಿ ಶಿರಾ ಗೇಟ್‌ ಮೂಲಕ ಶ್ರೀದೇವಿ ವೈದ್ಯಕೀಯ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿ ತಲುಪಲು ಈ ರಸ್ತೆ ಬಳಸುತ್ತವೆ. ಅದೇ ರೀತಿ ಶಿರಾ ಗೇಟ್‌ನಿಂದ ಕೋತಿ ತೋಪು ಮೂಲಕ ಬೆಂಗಳೂರಿಗೆ ಹೋಗಬೇಕಾದವರು ಈ ರಸ್ತೆಯಲ್ಲಿಯೇ ಪ್ರಯಾಣಿಸುತ್ತಾರೆ.

ಬೇಗ ತಲುಪಬಹುದು ಎಂದು ಈ ರಸ್ತೆಗೆ ದೌಡಾಯಿಸಿ ಬರುವ ವಾಹನ ಸವಾರರು, ಈಗ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಅಡ್ಡಾದಿಡ್ಡಿ ರಸ್ತೆ ಉಬ್ಬುಗಳು, ಕಿತ್ತುಹೋದ ರಸ್ತೆ, ಗುಂಡಿಗಳಲ್ಲಿ ಎದ್ದು ಬಿದ್ದು ಸಾಗುವ ವಾಹನಗಳು ಸವಾರರಿಗೆ ಭಯ ಹುಟ್ಟಿಸುತ್ತವೆ.

ಬೈಕ್‌ ಸವಾರರಂತೂ ಶರವೇಗದಲ್ಲಿ ಸಾಗುವಂತೆಯೇ ಇಲ್ಲ. ಹೀಗೆ ಸಾಗಿದರೆ ಮುಗ್ಗರಿಸಿ ಬೀಳುವುದು, ಬಾಯ್ತೆರೆದ ಯಾವುದಾದರೊಂದು ಮ್ಯಾನ್‌ಹೋಲ್‌ನಲ್ಲಿ ಮುಳುಗೇಳಬೇಕಾಗುತ್ತದೆ.

ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆರು ತಿಂಗಳ ಹಿಂದೆ ಸುರಿದ ಜಲ್ಲಿಕಲ್ಲುಗಳ ರಾಶಿ ಹಾಗೆಯೇ ಇವೆ.

ಒಂದೆಡೆ ಹದಗೆಟ್ಟ ರಸ್ತೆಯ ದೂಳು, ಮತ್ತೊಂದೆಡೆ ಈ ಜಲ್ಲಿಕಲ್ಲುಗಳ ನಡುವೆ ವಾಹನಗಳು ದೂಳೆಬ್ಬಿಸಿಕೊಂಡು ಸಂಚರಿಸುತ್ತವೆ. ಇದರಿಂದ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಹಿರಿಯರು ಮತ್ತು ಮಕ್ಕಳು ಕೆಮ್ಮುತ್ತ ನರಳಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

‘ರಸ್ತೆಯ ಪಕ್ಕ ಚರಂಡಿ ಮೇಲೆ ಕಾಂಕ್ರೀಟ್ ಹಾಕಲಾಗಿದೆ. ಇದನ್ನೇ ಫುಟ್‌ಪಾತ್‌ ಎಂದು ಹೇಳುತ್ತಿದ್ದಾರೆ. ಚರಂಡಿ ಪಕ್ಕ ಬೆಳೆದ ಗಿಡಗಂಟಿಗಳು ರಸ್ತೆಗೆ ಚಾಚಿವೆ. ಅಲ್ಲದೇ ಈ ಫುಟ್‌ಪಾತ್‌ ಕೂಡಾ ಸರಾಗವಾಗಿ ನಡೆದು ಹೋಗಲು ಸಾಧ್ಯವಾಗುವಂತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಿತ್ತಿದೆ. ಇದರ ಮೇಲೆ ನಡೆದು ಹೋಗುವವರು ಚರಂಡಿಗೆ ಬೀಳುವ ಅಪಾಯವಿದೆ. ಅನೇಕ ಬಾರಿ ಚಿಕ್ಕಮಕ್ಕಳು ಬಿದ್ದಿರುವ ನಿದರ್ಶನಗಳಿವೆ’ ಎಂದು ನಿವಾಸಿ ಸುನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ ರಸ್ತೆಯಲ್ಲಿರುವ ಟ್ರಾವೆಲ್ಸ್ ಕಂಪೆನಿ ಎದುರಿನ ಮ್ಯಾನ್‌ಹೋಲ್‌ ಸದಾ ಬಾಯ್ತೆರೆದಿರುತ್ತದೆ. ದಿನಕ್ಕೆ ಒಬ್ಬರಿಲ್ಲ ಒಬ್ಬರು ಬಿದ್ದೇ ಬೀಳುತ್ತಾರೆ. ಶಾಶ್ವತವಾಗಿ ಮುಚ್ಚಳ ಹಾಕುವ ವ್ಯವಸ್ಥೆ ಮಾಡಿಲ್ಲ. ಅಕ್ಕಪಕ್ಕದ ಅಂಗಡಿಯವರೂ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಸ್ತೆಯ ಅಂಚೆ ಕಚೇರಿ ಮುಂಭಾಗದ ಫುಟ್‌ಪಾತ್‌ನ ಕಾಂಕ್ರೀಟ್ ಸಹ ಕಿತ್ತುಹೋಗಿದೆ. ತುಕ್ಕು ಹಿಡಿದಿರುವ  ಕಬ್ಬಿಣದ ಸರಳುಗಳು ಮೇಲೆದ್ದಿವೆ. ಅಂಚೆ ಕಚೇರಿಗೆ ಬರುವವರು ಸ್ವಲ್ಪ ಆಯ ತಪ್ಪಿದರೂ ಚರಂಡಿಗೆ ಬಿದ್ದು ಗಾಯಗೊಳ್ಳಬೇಕಾದ ಸ್ಥಿತಿ ಇದೆ ಎಂದು ಸಮಸ್ಯೆ ವಿವರಿಸಿದರು.

ರಸ್ತೆ ಅಭಿವೃದ್ಧಿ ಯಾವಾಗ?

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಶಿರಾ ಗೇಟ್‌ವರೆಗೆ ₹ 17 ಕೋಟಿ ಮೊತ್ತದಲ್ಲಿ ಈ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಶಂಕು ಸ್ಥಾಪನೆ ಮಾಡಿದ್ದರು. ಆದರೆ, ಈಗ ಇಷ್ಟೊಂದು ಹದಗೆಟ್ಟರೂ ಇನ್ನೂ ದುರಸ್ತಿ ಮಾಡಿಲ್ಲ. ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತದೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ.  ರಸ್ತೆಗೆ ಡಾಂಬರ್ ಕೂಡ ಹಾಕಿಲ್ಲ’ ಎಂದು ನಿವಾಸಿ ಸಾಗರ್ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry