ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಎಫ್‌–16 ಯುದ್ಧ ವಿಮಾನ ಉತ್ಪಾದನೆಗೆ ಅಮೆರಿಕ ಸಂಸ್ಥೆಯ ಒಪ್ಪಂದ

Last Updated 19 ಜೂನ್ 2017, 20:18 IST
ಅಕ್ಷರ ಗಾತ್ರ

ಲಂಡನ್‌: ಭಾರತದಲ್ಲಿ ಅತ್ಯಾಧುನಿಕ ಎಫ್‌–16 ಬ್ಲಾಕ್‌ 70 ಯುದ್ಧವಿಮಾನಗಳನ್ನು ಜಂಟಿಯಾಗಿ ತಯಾರಿಸುವ ಸಂಬಂಧ ಟಾಟಾ ಸಮೂಹ ಮತ್ತು ಅಮೆರಿಕದ ವೈಮಾಂತರಿಕ್ಷ ದೈತ್ಯ ಸಂಸ್ಥೆ ಲಾಕ್‌ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ಸೋಮವಾರ ಒಪ್ಪಂದ ಮಾಡಿಕೊಂಡಿವೆ.

ಪ್ರಧಾನಿ ನರೇಂದ್ರ ಮೋದಿ  ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮೊದಲ ಬಾರಿಗೆ ಭೇಟಿಯಾಗುವುದಕ್ಕೂ ಮೊದಲು ಈ ಒಪ್ಪಂದಕ್ಕೆ ಸಹಿ ಬಿದ್ದಿದೆ.

ಪ್ಯಾರಿಸ್‌ ಏರ್‌ಷೋನಲ್ಲಿ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಲಿಮಿಟೆಡ್‌ (ಟಿಎಎಸ್‌ಎಲ್‌) ಮತ್ತು ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆಗಳು ಈ ಒಪ್ಪಂದದ ಘೋಷಣೆ ಮಾಡಿವೆ.
ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತದಲ್ಲೇ ತಯಾರಿಸಿ’ ಯೋಜನೆಗೆ ಉತ್ತೇಜನ ನೀಡಲಿದೆ.

ಈ ಒಪ್ಪಂದದ ಅಡಿಯಲ್ಲಿ ಲಾಕ್‌ ಹೀಡ್‌ ಸಂಸ್ಥೆ ಟೆಕ್ಸಾಸ್‌ನಲ್ಲಿರುವ ತನ್ನ ವಿಮಾನ ತಯಾರಿಕಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲಿದೆ. ಇದರಿಂದ ಅಮೆರಿಕದ ಉದ್ಯೋಗಗಳ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ರಕ್ಷಣಾ ತಂತ್ರಜ್ಞರ ಪ್ರಕಾರ ಭಾರತೀಯ ವಾಯುಸೇನೆಗೆ ಮಧ್ಯಮ ತೂಕದ ವಿಭಾಗದಲ್ಲಿ 200 ಯುದ್ಧವಿಮಾನಗಳ ಅಗತ್ಯವಿದೆ. ಈಗ ನಡೆದಿರುವ ಒಪ್ಪಂದವು ವಾಯುಪಡೆಗೆ ಬೇಕಾಗಿರುವ ಒಂದು ಎಂಜಿನ್ನಿನ  ಯುದ್ಧವಿಮಾನಗಳ ಬೇಡಿಕೆಗೆ ಅನುಗುಣವಾಗಿಯೇ ಇದೆ.

ಟಿಎಎಸ್‌ಎಲ್‌ನ ಸಿಇಒ ಸುಖರಣ್‌ ಸಿಂಗ್‌ ಮತ್ತು ಲಾಕ್‌ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ನ ಕಾರ್ಯತಂತ್ರ ಮತ್ತು ವ್ಯಾಪಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಜಾರ್ಜ್‌ ಸ್ಟ್ಯಾಂಡ್ರಿಜ್‌ ಒಪ್ಪಂದಕ್ಕೆ ಸಹಿ ಹಾಕಿದರು. ಟಾಟಾ ಸನ್ಸ್‌ನ ನಿವೃತ್ತ ಗೌರವ ಅಧ್ಯಕ್ಷ ರತನ್‌ ಟಾಟಾ, ಲಾಕ್‌ಹೀಡ್‌ ಮಾರ್ಟಿನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಓರ್ಲಾಂಡೊ ಕಾರ್ವಾಲೋ ಈ ಸಂದರ್ಭದಲ್ಲಿ ಇದ್ದರು.

ಭಾರತಕ್ಕೆ ಏನು ಲಾಭ?: ಜಗತ್ತಿನ ಅತ್ಯಂತ ದೊಡ್ಡ ರಕ್ಷಣಾ ಗುತ್ತಿಗೆದಾರ ಸಂಸ್ಥೆಯೊಂದಿಗೆ ನಡೆದಿರುವ ಈ ಒಪ್ಪಂದವು, ಅತ್ಯಾಧುನಿಕ, ಬಹು ಪಾತ್ರ ನಿರ್ವಹಿಸುವ ಮತ್ತು ಯುದ್ಧ ರಂಗದಲ್ಲಿ ಈಗಾಗಲೇ ಸಾಮರ್ಥ್ಯ ಸಾಬೀತು ಪಡಿಸಿರುವ ‘ಎಫ್‌–16 ಬ್ಲಾಕ್‌ 70’ ಯುದ್ಧವಿಮಾನಗಳ ತಯಾರಿಕೆ, ನಿರ್ವಹಣೆ ಹಾಗೂ ರಫ್ತು ಮಾಡುವ ಅವಕಾಶವನ್ನು ಭಾರತಕ್ಕೆ ನೀಡಲಿದೆ ಎಂದು ಟಾಟಾ ಕಂಪೆನಿ ಹೇಳಿಕೊಂಡಿದೆ.

**

ಎಫ್‌–16 ಹೆಗ್ಗಳಿಕೆ
* ಲಾಕ್‌ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌, ಇದುವರೆಗೆ 4,500 ಎಫ್‌–16 ಯುದ್ಧಮಾನಗಳನ್ನು ತಯಾರಿಸಿದೆ
* ಸದ್ಯ, 26 ರಾಷ್ಟ್ರಗಳಲ್ಲಿ 3,200 ಯುದ್ಧವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ
* ಈವರೆಗೆ ನಿರ್ಮಿಸಲಾಗಿರುವ ಜಗತ್ತಿನ ಅತ್ಯಂತ ಯಶಸ್ವಿ, ಬಹುಪಾತ್ರ ನಿರ್ವಹಿಸುವ ಸಾಮರ್ಥ್ಯದ ಯುದ್ಧವಿಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT