ನೀರಿಗಾಗಿ ತೆರೆದ ಬಾವಿಯತ್ತ ಚೆನ್ನೈ ಚಿತ್ತ

7

ನೀರಿಗಾಗಿ ತೆರೆದ ಬಾವಿಯತ್ತ ಚೆನ್ನೈ ಚಿತ್ತ

Published:
Updated:
ನೀರಿಗಾಗಿ ತೆರೆದ ಬಾವಿಯತ್ತ ಚೆನ್ನೈ ಚಿತ್ತ

ಎಲ್ಲೆಡೆಗಳಂತೆ ಕೊಳವೆಬಾವಿಗಳ ಭರಾಟೆಯಲ್ಲಿ ಚೆನ್ನೈಯಲ್ಲೂ ತೆರೆದ ಬಾವಿ ಚರಿತ್ರೆ ಸೇರಿತ್ತು. ಆದರೆ ಅಚ್ಚರಿ ನೋಡಿ. ಎರಡು ದಶಕಗಳ ದೀರ್ಘಕಾಲಾನಂತರ ಈಗೀಗ ಚೆನ್ನೈ ತೆರೆದ ಬಾವಿಯತ್ತ ಚಿತ್ತ ಹರಿಸತೊಡಗಿದೆ. ಒಳ್ಳೆ ಯಶಸ್ಸೂ ಪಡೆಯುತ್ತಿದೆ. ಮೂವತ್ತಕ್ಕೆ ಕಮ್ಮಿಯಾಗದಷ್ಟು ಹೊಸ ಬಾವಿಗಳು ಕುಡಿಯಲು ಹಿತವಾಗುವ ನೀರು ಕೊಡತೊಡಗಿವೆ.

‘ಮನವೊಲಿಸುವುದು ಆರಂಭದಲ್ಲಿ ಬಲು ಕಷ್ಟವಾಗಿತ್ತು. ಬರ ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲೇ ಇಪ್ಪತ್ತು ಬಾವಿ ತೋಡಿದ್ದಾರೆ. ಈ ವರೆಗಿನ ಬೆಳವಣಿಗೆ ಗಮನಿಸಿದರೆ ಎರಡು-ಮೂರು ವರ್ಷಗಳಲ್ಲಿ ಇದು ಕನಿಷ್ಠ ನೂರಕ್ಕೇರುವ ಸಾಧ್ಯತೆಗಳಿವೆ’ ಎನ್ನುವುದು ಜಲತಜ್ಞ ಡಾ.ಶೇಖರ್ ರಾಘವನ್ ವಿಶ್ವಾಸ.

ಚೆನ್ನೈಯ ‘ಮಳೆ ಕೇಂದ್ರ’ದ ನಿರ್ದೇಶಕ ಶೇಖರ್ ರನ್ನು ಹತ್ತು ವರ್ಷ ಹಿಂದೆ ಒಂದು ಅಪಾರ್ಟ್‌ಮೆಂಟಿನವರು ಕರೆದರು. ಕೊಳವೆಬಾವಿಯಲ್ಲಿ ನೀರು ಬತ್ತಿರುವುದೇ ಸಮಸ್ಯೆ. ಶೇಖರ್ ಹೋದವರೇ ಆವರಣಕ್ಕೆ ಒಂದು ಸುತ್ತು ಹಾಕಿದರು. ಅಲ್ಲಿ ಒಂದು ಬಾವಿಯೂ ಇತ್ತು, ನೀರೂ ಇತ್ತು. ಕೇಳಿದರೆ ‘ಅದನ್ನು ನಾವು ಉಪಯೋಗಿಸುವುದಿಲ್ಲ’ ಎನ್ನುವ ಉತ್ತರ. ಶೇಖರ್ ಬಾಲ್ದಿ ತರಿಸಿ ನೀರೆತ್ತಿದರು. ತಾನು ಕುಡಿದು ಅಲ್ಲಿವರಿಗೂ ಕುಡಿಸಿದರು. ನೀರು ಚೆನ್ನಾಗಿತ್ತು. ‘ಬಾವಿಯ ನೀರೇ ಬಳಸಿ’ ಎಂದು ಹೇಳಿ ಹಿಂದಿರುಗಿದರು.

2005ರಿಂದ ಚೆನ್ನೈಯಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ. ಸರಕಾರದ ಈ ನಿಯಮದಿಂದಾಗಿ ನೀರಿಂಗಿಸುವ ಕೆಲಸ ವ್ಯಾಪಕವಾಗಿ ಆಗಿದೆ. 2016ರಲ್ಲಿ ‘ಮಳೆ ಕೇಂದ್ರ’ ದಕ್ಷಿಣ ಚೆನ್ನೈಯ ವಿವಿಧೆಡೆಗಳಲ್ಲಿ ಸಮೀಕ್ಷೆ ನಡೆಸಿತು. ಅದರಲ್ಲಿ ಜಲಮಟ್ಟ ಆರರಿಂದ ಎಂಟು ಮೀಟರ್ ಮೇಲೇರಿರುವುದು ತಿಳಿಯಿತು. ‘ಇಪ್ಪತ್ತು ವರ್ಷಗಳಿಂದ ಒಣಗಿದ್ದ ಬಾವಿಯಿಂದ ನೀರು ಬಳಸುತ್ತಿದ್ದೇವೆ’ ಎನ್ನುವವರೂ ಸಿಕ್ಕರು.

ಆದರೆ ಕಟ್ಟಡ ನಿರ್ಮಾಣಗಾರರ, ಚೆನ್ನೈ ನಾಗರಿಕರ ಮನಸ್ಸಿಗೆ ಕೊಳವೆಬಾವಿ ಅಂಟಿಯೇ ಇತ್ತು. ಇದು ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕುವಂಥ ಪರಿಸ್ಥಿತಿ ಅನಿಸಿತು ಶೇಖರರಿಗೆ. ಬಾವಿ ತೋಡಿಸುವ ಸಲಹೆ ಕೊಡುತ್ತಲೇ ಬಂದರು. ಆದರೆ ಜನ ನಂಬಬೇಕಲ್ಲಾ?

(ಡಾ.ಶೇಖರ್)

ವಿಶ್ವಾಸ ಹುಟ್ಟಿಸಲು ತುಂಬಾ ಹೆಣಗಬೇಕಾಯಿತು. ‘ಬಾವಿ ತೋಡಲು ಜಾಗವಿಲ್ಲ’ ಎಂದವರಿಗೆ ನಿಮ್ಮ ವಾಹನ ಓಡಾಡುವಲ್ಲೂ ಆಗಬಹುದು. ಬಾವಿಗೆ ಗೋಡೆ ಬೇಕು ಅಂತಲೇ ಇಲ್ಲ. ಅಗತ್ಯ ಬಿದ್ದರೆ ಮ್ಯಾನ್ ಹೋಲ್ ಮುಚ್ಚಳ ಇಟ್ಟು ಮುಚ್ಚಬಹುದು’ ಎಂದೆಲ್ಲಾ ಹೇಳಿ ಪ್ರೇರೇಪಿಸುತ್ತಲೇ ಇದ್ದರು.

2015ರಲ್ಲಿ ಪಶ್ಚಿಮ ಮಾಂಬಳಂನ ಗೋದಾವರಿ ಶಾಲೆಯಿಂದ ಕರೆ ಬಂತು. ಅವರು ದಿನಕ್ಕೆರಡು ಟ್ಯಾಂಕರ್ ನೀರು ತರಿಸುತ್ತಿದ್ದರು. ಬಾವಿಯ ಸಲಹೆ ಕೊಟ್ಟಾಗ ವೆಚ್ಚ ಕೇಳಿದರು. ಒಂದೂವರೆ ಲಕ್ಷ ರೂಪಾಯಿ ಎಂದಾಗ ಉತ್ಸಾಹ ಮೂಡಲಿಲ್ಲ. ವರ್ಷಕ್ಕೆ ₹50,000 ಟ್ಯಾಂಕರ್ ನೀರಿಗೇ ವೆಚ್ಚವಾಗುತ್ತಿದೆ. ಮೂರು ವರ್ಷದ ವೆಚ್ಚದಲ್ಲಿ ಸ್ವಂತ ನೀರಾಶ್ರಯ ಆದರೆ ಒಳ್ಳೆಯದಲ್ಲವೇ ಎಂದಿವರು ಪುಸಲಾಯಿಸಿದರು. ಕೊನೆಗೂ ಶಾಲೆ ಒಪ್ಪಿತು. ನೀರು ಎಷ್ಟು ಸಿಕ್ಕಿತೆಂದರೆ 23 ಅಡಿಯಿಂದ ಕೆಳಗೆ ತೋಡಲು ಆಗಲೇ ಇಲ್ಲ.

ಲ್ಲಿಂದೀಚೆಗೆ ಸುದ್ದಿ ಹಬ್ಬಿ ಈ ಬಗ್ಗೆ ಮೆಲ್ಲಮೆಲ್ಲನೆ ಒಲವು ಮೂಡುತ್ತಲಿದೆ. ಒಬ್ಬೊಬ್ಬರು ಬಾವಿ ತೋಡಿಸುವ ಮನಸ್ಸು ಮಾಡುತ್ತಿದ್ದಾರೆ.  ‘ಬಾವಿ ನೀರು ಎಂದಿಗೂ ಕೊಳವೆಬಾವಿಯದಕ್ಕಿಂತ ಉತ್ತಮ. ಏಕೆಂದರೆ ಇದರಲ್ಲಿ ಲವಣಗಳು ಕಮ್ಮಿ’ ಎಂದು ಶೇಖರ್ ಬೊಟ್ಟು ಮಾಡುತ್ತಾರೆ. ‘ಗಟ್ಟಿ ಕಲ್ಲಿನ ಮೇಲಿನ ಕಡಿಮೆ ಆಳದ ಪದರದ ನೀರು ಇದು. ಮರುಪೂರಣ ಮಾಡಲು ಸುಲಭ. ಬಗ್ಗಿ ನೋಡಿದರೆ ಸಾಕು, ತೆರೆದ ಬಾವಿ ನೀರು ಎಷ್ಟಿದೆ ಎಂದು ತಿಳಿಸುತ್ತದೆ. ನಮ್ಮ ಮುಂದಿನ ನೀರಿನ ಖರ್ಚನ್ನು ಲಭ್ಯತೆಗನುಸಾರ ಹೊಂದಿಸಲು ಸಾಧ್ಯ. ಕೊಳವೆಬಾವಿ ನೀರಿಲ್ಲ ಎಂಬ ಸುದ್ದಿ ಕೊಡುವುದು ಕೊನೆಗೆ, ಬತ್ತಿದಾಗ ಮಾತ್ರ. ಅದಕ್ಕಿಂತ ತೆರೆದ ಬಾವಿ ಹೆಚ್ಚು ಸುಸ್ಥಿರ.”

ಹಾಗೆಂದು ಶೇಖರ್ ಬಾವಿಯ ಸಲಹೆ ಕೊಡುವುದು ಕುಳಿತಲ್ಲಿಂದಲೇ ಅಲ್ಲ. ಸಂಬಂಧಪಟ್ಟವರ ಪ್ರದೇಶಕ್ಕೆ ಹೋಗಿ ಆಚೀಚೆ ಮನೆ, ಅಪಾರ್ಟ್ ಮೆಂಟುಗಳಿಗೆ ಭೇಟಿ ಕೊಡುತ್ತಾರೆ. ಹತ್ತಿರದಲ್ಲಿ ಎಲ್ಲಾದರೂ ಬಾವಿ ಇನ್ನೂ ಇದೆಯಾ, ಇದ್ದರೆ ಅದರ ನೀರಿನ ಸ್ಥಿತಿಗತಿ ಹೇಗಿದೆ ಎಂದು ಅಧ್ಯಯನ ಮಾಡುತ್ತಾರೆ. ಮನಸ್ಸಿಗೆ ಧೈರ್ಯವಾದರೆ ಮಾತ್ರ ಬಾವಿ ತೋಡಿ ಎನ್ನುತ್ತಾರೆ.

‘ಚೆನ್ನೈಯಂತೆ ರಾಜ್ಯದ, ನೆರೆರಾಜ್ಯಗಳ ಕರಾವಳಿ ನಗರಗಳಲ್ಲಿ ಇನ್ನೂ ತೆರೆದ ಬಾವಿಗಳಿಗೆ ಅವಕಾಶ ಇದೆ. ಸಿಗುವ ಮಳೆನೀರನ್ನು ಅಲ್ಲೇ ಇಂಗಿಸಿಕೊಂಡರೆ, ಒಳ್ಳೆಯ ಫಲಿತಾಂಶ ಪಡೆಯಬಹುದು” ಎನ್ನುವುದು ಅವರ ಶಿಫಾರಸು. ‘ಆಯಾಯಾ ಜಾಗದಲ್ಲಿ ಗಟ್ಟಿಕಲ್ಲಿನ ಪದರ ಎಷ್ಟು ಆಳದಲ್ಲಿದೆ ಎಂದು ವಿಚಾರಿಸಿಕೊಳ್ಳಬೇಕು. ಅದು ಬಾವಿ ಎಷ್ಟು ಆಳಕ್ಕೆ ಹೋಗಬೇಕಾದೀತು ಎನ್ನುವ ಕಲ್ಪನೆ ಕೊಟ್ಟೀತು’ ಎನ್ನುತ್ತಾರೆ.

ಬಾವಿಗಳು ಕಾಣಸಿಗದಿದ್ದರೂ ಶೇಖರ್ ಅಲ್ಲಲ್ಲಿನ ಚರಿತ್ರೆ ಕೆದಕಿನೋಡಲು ಸೂಚಿಸುತ್ತಾರೆ. ‘ಹಿಂದೆ ಅಲ್ಲಿ ಬಾವಿಗಳು ಇದ್ದರೆ ನೀರಿಂಗಿಸಿ ಕಮ್ಮಿ ಆಳದ ಜಲಧರ ಪದರವನ್ನು ಸಂತೃಪ್ತವಾಗಿಸಿಕೊಂಡು ಬಾವಿ ಮೂಲಕ ಎತ್ತಿಕೊಳ್ಳಬಹುದು’.

‘ಬಿಲ್ಡರುಗಳು ಮತ್ತು ಕೊಳವೆಬಾವಿ ಕಂಪೆನಿಗಳು ಕಡಿಮೆ ಆಳದ ಜಲಧರ ಪದರವನ್ನು ಅಲಕ್ಷಿಸುತ್ತಿದ್ದಾರೆ. ಸದ್ಯ ಈ ಪದರ ಒಣಗಿರಬಹುದು, ಆದರೆ ಅದನ್ನು ಮತ್ತೆ ಜಲದಾಯಿನಿ ಆಗಿಸಬಹುದು. ಕೊಳವೆಬಾವಿ ತೋಡುವವರೂ ತೂತಿರುವ ಕೇಸಿಂಗ್ ಪೈಪು ಹಾಕುವುದು ಒಳ್ಳೆಯದು’ ಎನ್ನುತ್ತಾರೆ.

‘ತೆರೆದ ಬಾವಿ ಭವಿಷ್ಯಕ್ಕೊಂದು ಜಲವಿಮೆ’ ಎನ್ನುವುದು ಡಾ.ಶೇಖರ್ ರಾಘವನರ ಮನದ ಮಾತು. ಚೆನ್ನೈಯಲ್ಲಿ ಕಟ್ಟಡಗಳಿಂದ ಮಾತ್ರ ನೀರಿಂಗಿಸುತ್ತಿದ್ದಾರೆ. ಆವರಣಗಳ ತೆರೆದ ಪ್ರದೇಶದಲ್ಲಿ 25ರಿಂದ 40 ಶೇಕಡಾ ಮಳೆನೀರು ಸುರಿದು ಗಟಾರಕ್ಕೆ ಹೋಗುತ್ತಿದೆ. ಇದನ್ನೂ ಇಂಗಿಸಬೇಕಿದೆ. ಬಹುಮಹಡಿ ಕಟ್ಟಡ ಕಟ್ಟುವವರು ಇರುವ ಬಾವಿಯನ್ನು ಮುಚ್ಚುವುದು ಕೆಟ್ಟ ಚಾಳಿ. ಬಾವಿಗಳನ್ನು ಉಳಿಸಬೇಕು. ದುಡುಕಿ ಮುಚ್ಚಿದವರೂ ಅದನ್ನು ಮತ್ತೆ ತೆರೆದು ಬಳಸತೊಡಗಬಹುದು.

ಇಂದುಕಾಂತ್ ರಾಗಡೆ ಮಾಲಿಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ ಅಲಾಕ್ರಿಟಿ ಫೌಂಡೇಶನ್ ಚೆನ್ನೈಯ ಜಲಸಂರಕ್ಷಣೆಯ ಹರಿಕಾರ. ಕಟ್ಟಿದ 250ರಷ್ಟು ಕಟ್ಟಡಗಳ ಹೆಚ್ಚಿನದರಲ್ಲೂ ಸಂಸ್ಥೆ ತೆರೆದ ಬಾವಿ ಉಳಿಸಿದೆ ಅಥವಾ ನಿರ್ಮಿಸಿದೆ. ಈ ದೂರದರ್ಶಿ ಕ್ರಮವನ್ನು ಈಗ ಫಲಾನುಭವಿಗಳು ಕೊಂಡಾಡುತ್ತಿದ್ದಾರೆ.

ಶೇಖರ್ ರಾಘವನ್ – 096770 43869

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry