ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗದಿರಲಿ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಎಲ್ಲ ರಾಜ್ಯಗಳಲ್ಲಿಯೂ ಆಯೋಗ ರಚಿಸಲಾಗಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಉದ್ದೇಶದ ಸಂವಿಧಾನದ 123ನೇ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ.  ಈ ತಿದ್ದುಪಡಿಯ  ಉದ್ದೇಶ ಈವರೆಗೆ ಜಾರಿಯಲ್ಲಿದ್ದ ಹಿಂದುಳಿದ ವರ್ಗಗಳ ‘ರಾಷ್ಟ್ರೀಯ ಆಯೋಗದ ಕಾಯ್ದೆ– 1993’ನ್ನು ಸಂಪೂರ್ಣವಾಗಿ ಹಿಂಪಡೆಯುವುದಾಗಿದೆ.

ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಆರಂಭವಾದುದು 1993ರಲ್ಲಿ. 1992ರ ನ.16ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ. ಆ ತೀರ್ಪು ‘ಮಂಡಲ್‌ ತೀರ್ಪು’ ಎಂದೇ ಖ್ಯಾತಿ ಪಡೆದಿದೆ. ಒಂಬತ್ತು ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಸುಪ್ರೀಂ ಕೋರ್ಟ್ ಪೀಠ, ‘ಇಂದಿರಾ ಸಹಾನಿ ವಿರುದ್ಧ ಕೇಂದ್ರ ಸರ್ಕಾರ’ ಪ್ರಕರಣದಲ್ಲಿ ಈ ತೀರ್ಪು ನೀಡಿತ್ತು. ಆ ಪೈಕಿ, ಆರು ನ್ಯಾಯಮೂರ್ತಿಗಳು ಮೀಸಲಾತಿಯ ಪರ ಮತ್ತು ಮೂವರು ವಿರೋಧ ವ್ಯಕ್ತಪಡಿಸಿದ್ದರು.

ಅದರ ಅರ್ಥ, ಈ ತೀರ್ಪು ಬರುವವರೆಗೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಶಿಕ್ಷಣ ಮತ್ತು  ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ  ಮೀಸಲಾತಿ ಇರಲಿಲ್ಲ. 1980ರಲ್ಲಿ ಬಂದ ‘ಮಂಡಲ್‌ ವರದಿ’ ಹಿಂದುಳಿದ ವರ್ಗಕ್ಕೆ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿನ ಮೀಸಲಾತಿ ಕುರಿತಂತೆ ಸಂವಿಧಾನದ ಅನುಚ್ಛೇದ 15 (4) ಅಡಿ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ 16 (4)ರಲ್ಲಿ ಉಲ್ಲೇಖಗಳಿವೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಈ ಎರಡೂ ಕ್ಷೇತ್ರಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದಾಯಿತು. 1993ರಲ್ಲಿ ಉದ್ಯೋಗದಲ್ಲಿ ಮೀಸಲಾತಿ ಬಂತು. ಶೈಕ್ಷಣಿಕ ಕ್ಷೇತ್ರದಲ್ಲಿ ಜಾರಿಗೆ ಬಂದಿದ್ದು 2008ರಲ್ಲಿ.  ಅಶೋಕ ಕುಮಾರ್‌ ಠಾಕೂರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 27ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಹಾಗೆ ನೋಡಿದರೆ ಈ ಪ್ರಮಾಣ ಕಡಿಮೆಯೇ. ಯಾಕೆಂದರೆ, ಇಡೀ ದೇಶದಲ್ಲಿ ಹಿಂದುಳಿದವರ ಸಂಖ್ಯೆ ಶೇ 52ರಷ್ಟಿದೆ ಎಂದು ಮಂಡಲ್‌  ವರದಿ ಹೇಳಿದೆ. ಪರಿಶಿಷ್ಟ ಸಮುದಾಯದ ಮೀಸಲಾತಿಯೂ ಸೇರಿ ಒಟ್ಟು ಪ್ರಮಾಣ ಶೇ 50 ಮೀರಬಾರದು ಎಂಬ ಕಾರಣಕ್ಕೆ ಹಿಂದುಳಿದ ವರ್ಗದ ಮೀಸಲಾತಿ ಪ್ರಮಾಣ ಶೇ 27ಕ್ಕೆ ಮಿತಿಗೊಳಿಸಲಾಗಿತ್ತು. ಆಶ್ಚರ್ಯವೆಂದರೆ ಆ ಪ್ರಮಾಣ ಕೂಡಾ ಇನ್ನೂ ಸಿಕ್ಕಿಲ್ಲ.

ಸುಪ್ರೀಂ ಕೋರ್ಟ್‌ ತನ್ನ ಆ ತೀರ್ಪಿನಲ್ಲಿ ನಾಲ್ಕು ತಿಂಗಳ ಒಳಗೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸುವಂತೆ  ನಿರ್ದೇಶಿಸಿತ್ತು.  ಹೀಗಾಗಿ, 1992ರ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಯೋಗ ಸ್ಥಾಪನೆ ಜೊತೆಗೆ, ‘ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯ್ದೆ–1993’ ರೂಪಿಸಿದೆ. ನಂತರ ಬಹುತೇಕ ರಾಜ್ಯಗಳಲ್ಲಿ ಆಯೋಗ ರಚನೆಯಾಗಿದೆ. ಕರ್ನಾಟಕದಲ್ಲಿ 1997ರಲ್ಲಿ ಆಯೋಗ ಅಸ್ತಿತ್ವಕ್ಕೆ ಬಂತು.

ಇದೇ ಏ. 5ರಂದು ಮಂಡನೆಯಾಗಿದ್ದ ಸಂವಿಧಾನದ 123ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಕೇವಲ ಐದೇ ದಿನದಲ್ಲಿ (ಏ. 10) ಅಂಗೀಕಾರವಾಗಿದೆ.  ಅದರಲ್ಲೂ ಚರ್ಚೆಯಾಗಿದ್ದು ಬರೀ ಒಂದು ದಿನ. ಏ. 11ರಂದು  ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಆದರೆ ರಾಜ್ಯಸಭೆ ಈ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಕಳುಹಿಸಿದೆ.  ತಿದ್ದುಪಡಿಗೆ ಸಲಹೆ ನೀಡಲು ಈ ಸಮಿತಿಗೆ ಅವಕಾಶ ಇದೆ.

ಈ ತಿದ್ದುಪಡಿ ಮಸೂದೆಯನ್ನು ಸಾಂವಿಧಾನಿಕ  ಮತ್ತು ಮಂಡಲ್‌ ತೀರ್ಪಿನ ಹಿನ್ನೆಲೆಯಲ್ಲಿ ನೋಡಬೇಕು. ಸಾಂವಿಧಾನಿಕ ಸ್ಥಾನಮಾನ ನೀಡುವುದು ಒಳ್ಳೆಯದು. ಆದರೆ, ಆಯೋಗ ‘ಹೀಗೇ ಇರಬೇಕು’ ಎಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವೂ ಪಾಲನೆ ಆಗಬೇಕು.

1993ರ ಕಾಯ್ದೆಯು  ಸಂವಿಧಾನದ ಅನುಚ್ಛೇದ 340ನ್ನು ಆಧರಿಸಿದೆ. ಈ  ಕಾಯ್ದೆ ಕಲಂ 9(1)ರ ಪ್ರಕಾರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ನಿರ್ವಹಿಸುತ್ತಿದ್ದ ಮುಖ್ಯವಾದ ಕರ್ತವ್ಯಗಳು: 1. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂಬ ಮನವಿಗಳನ್ನು ಪರಿಶೀಲಿಸಿ ಶಿಫಾರಸು ಮಾಡುವುದು. 2. ಪಟ್ಟಿಯಲ್ಲಿ ಹೆಚ್ಚಾಗಿ ಸೇರ್ಪಡೆ ಆಗಿದೆ ಅಥವಾ ಕಡಿಮೆ ಅಥವಾ ಸೇರ್ಪಡೆಯೇ ಆಗಿಲ್ಲ ಎಂಬ ದೂರುಗಳ ಕುರಿತು ವಿಚಾರಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.

ಇದು ಬಹಳ ಸೀಮಿತ ವ್ಯಾಪ್ತಿ ಎಂದು ಮನಗಂಡು, ಕಾರ್ಯವ್ಯಾಪ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ತಿದ್ದುಪಡಿ ಮಸೂದೆಯ ಗಮನಾರ್ಹ ಸಂಗತಿಯೆಂದರೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅದರ ಪಟ್ಟಿ ಪ್ರಕಟಿಸುವ ಜವಾಬ್ದಾರಿಯನ್ನು ರಾಷ್ಟ್ರಪತಿಗೆ ನೀಡಲಾಗಿದೆ. ಅನುಚ್ಛೇದ 342 ಎ(2) ಪ್ರಕಾರ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಯಾವುದೇ ಜಾತಿಯನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರವನ್ನು ಸಂಸತ್ತು ಹೊಂದಿದೆ. ಸಂಬಂಧಪಟ್ಟ ರಾಜ್ಯಗಳ ರಾಜ್ಯಪಾಲರ ಜೊತೆ ಮಾತುಕತೆ ನಂತರ ರಾಷ್ಟ್ರಪತಿ ಈ ಪಟ್ಟಿಯನ್ನು  ನಿರ್ಧರಿಸುತ್ತಾರೆ. ಇಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವವರು ಯಾರು, ಅದರ ವಿಧಾನವೇನು ಎಂಬುದನ್ನು ಮಸೂದೆ ಸ್ಪಷ್ಟಪಡಿಸುತ್ತಿಲ್ಲ. ಹಿಂದುಳಿದ ವರ್ಗಗಳು ಯಾವುವು ಎನ್ನುವುದನ್ನು  ನಿರ್ಧರಿಸುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕೆಲಸವೇ?

ಅನುಚ್ಛೇದ 340 ಸಂವಿಧಾನದ ಒಂದು ಭಾಗವಾಗಿರುವವರೆಗೆ ಹಿಂದುಳಿದ ವರ್ಗಗಳನ್ನು ಅದರಿಂದ ಬೇರ್ಪಡಿಸುವುದು ಅಸಾಂವಿಧಾನಿಕ. ಅನುಚ್ಛೇದ 340 ಹಿಂದುಳಿದ ವರ್ಗಗಳ ‘ಹೃದಯ’. ಆದರೆ, ತಿದ್ದುಪಡಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಕುರಿತು ವಿಚಾರಣಾ ಅಧಿಕಾರವನ್ನು ಆಯೋಗದಿಂದ ಕಿತ್ತುಕೊಳ್ಳಲಾಗಿದೆ. ರಾಷ್ಟ್ರೀಯ ಆಯೋಗದ ಕಾರ್ಯವ್ಯಾಪ್ತಿ ಕೂಡ ಗೌಣವಾಗಿದೆ. ಹೀಗಾಗಿ, ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಆಯೋಗ ಕೇವಲ ಉಸ್ತುವಾರಿ ಕೆಲಸವನ್ನಷ್ಟೇ ಮಾಡಬೇಕಾಗುತ್ತದೆ.

ಸಂವಿಧಾನದ 123ನೇ ತಿದ್ದುಪಡಿಯಲ್ಲಿ ಅನುಚ್ಛೇದ 366 ಮತ್ತು 342ಕ್ಕೂ ತಿದ್ದುಪಡಿ ತರಲಾಗಿದೆ. ಅನುಚ್ಛೇದ 366ಕ್ಕೆ  ಉಪ ಅನುಚ್ಛೇದ 26–ಸಿ, ಅನುಚ್ಛೇದ 342ಕ್ಕೆ ಅನುಚ್ಛೇದ 342–ಎ  ಸೇರ್ಪಡೆ ಮಾಡಲಾಗಿದೆ. ಅನುಚ್ಛೇದ 366 (26-ಸಿ) ಮತ್ತು 342-ಎ ಒಟ್ಟಿಗೆ ಗಮನಿಸಿದಾಗ ಕೇಂದ್ರ ಸರ್ಕಾರ ಮಾತ್ರ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಕೇಂದ್ರ ಮೀಸಲಾತಿ ಪಟ್ಟಿಗೆ ಸಂಬಂಧಪಟ್ಟಂತೆ ಗುರುತಿಸಬೇಕಾಗುತ್ತದೆ ಎಂಬ ಅರ್ಥವನ್ನು ನೀಡುತ್ತವೆ. 

1993ರ ಕಾಯ್ದೆಯ ಸೆಕ್ಷನ್‌ 9ರ ಪ್ರಕಾರ, ಹಿಂದುಳಿದ ವರ್ಗಗಳ  ಪಟ್ಟಿಗೆ ಸೇರ್ಪಡೆ ಮಾಡಲು ನೀಡಿದ ಮನವಿ, ಹೆಚ್ಚುವರಿ ಸೇರ್ಪಡೆಯನ್ನು ಕೈಬಿಡುವ ಸಂಬಂಧದ ದೂರುಗಳನ್ನು ವಿಚಾರಣೆ ಮಾಡುವ ಅಧಿಕಾರ ಆಯೋಗಕ್ಕೆ ಇತ್ತು. ಆದರೆ ತಿದ್ದುಪಡಿಗೆ ಪ್ರಸ್ತಾಪಿಸಿದ ಅಂಶದಲ್ಲಿ ಈ ಅಧಿಕಾರ ಇಲ್ಲ. ತಿದ್ದುಪಡಿ ಮಸೂದೆಯ ಪ್ರಕಾರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇರಬೇಕಾದ ಹಿಂದುಳಿದ ವರ್ಗಗಳನ್ನು  ಸಂಸತ್ತು ನಿಗದಿಪಡಿಸುತ್ತದೆ. ರಾಷ್ಟ್ರಪತಿ ಅಧಿಸೂಚನೆ ಹೊರಡಿಸುತ್ತಾರೆ. ಅದೇ ಅಂತಿಮ.  ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ.  ಈ ಉಲ್ಲಂಘನೆಗೆ ಅವಕಾಶ ನೀಡದಂತೆ ಸಂವಿಧಾನದ 123ನೇ ತಿದ್ದುಪಡಿಯನ್ನು ಪರಿಷ್ಕರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಇಲ್ಲ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯು ವಸ್ತುನಿಷ್ಠ ಅಂಶಗಳನ್ನು ಆಧರಿಸಿ ಇರಬೇಕೇ ಹೊರತು ರಾಜಕೀಯ ಅಥವಾ ಇನ್ನಾವುದೇ ಒತ್ತಡಗಳಿಗೆ ಸಿಲುಕಬಾರದು ಎಂಬುದು ಸುಪ್ರೀಂ ಕೋರ್ಟ್ ಅಭಿಮತ. ಅಷ್ಟೇ ಅಲ್ಲ, ಆಯೋಗ ಎನ್ನುವುದು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಅರಿತ ಪರಿಣತರ ಸಂಸ್ಥೆ ಆಗಿರಬೇಕು. ಅಂತಹ ಪರಿಣತರ ವಿವರಗಳ ಬಗ್ಗೆ ಹೊಸ ತಿದ್ದುಪಡಿ ಮಸೂದೆಯಲ್ಲಿ  ಯಾವ ಸುಳಿವೂ ಇಲ್ಲ. ಇದು ಅನುಮಾನಗಳಿಗೆ ಕಾರಣವಾಗಿದೆ. ಹಳೆಯ ಕಾಯ್ದೆಯಲ್ಲಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆಗಳ ಬಗ್ಗೆ ಸ್ಪಷ್ಟ ವಿವರಗಳಿದ್ದವು. ಆಯೋಗದ ಅಧ್ಯಕ್ಷ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟಿನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಆಗಿರಬೇಕು. ಒಬ್ಬ ಸಾಮಾಜಿಕ ಸಂಶೋಧಕ ಮತ್ತು ಹಿಂದುಳಿದ ವರ್ಗದ ಬಗ್ಗೆ ಮಾಹಿತಿ ಇರುವ ಇಬ್ಬರು ಆ ತಂಡದಲ್ಲಿರಬೇಕು. ಆಯೋಗದ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ಆಗಿರಬೇಕು.

ವಿಪರ್ಯಾಸವೆಂದರೆ, ಆಯೋಗದ ಅಧ್ಯಕ್ಷ, ಸದಸ್ಯರ ಅರ್ಹತೆಗಳೇನು ಎಂಬ ಬಗ್ಗೆ ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖ ಇಲ್ಲ. ಇದು ಕಾಯ್ದೆಯಾದರೆ, ರಾಜಕೀಯ ಒತ್ತಡಗಳನ್ನು ಪರಿಗಣಿಸಿ ಆಯೋಗ ರಚನೆ ಆಗಬಹುದು ಎಂಬ ಆತಂಕ ಎದುರಾಗಿದೆ.

ಹೊಸ ಮಸೂದೆಯ ಸೆಕ್ಷನ್‌ 338 (ಬಿ) 5 ಎ ಯಿಂದ ಎಫ್‌ ವರೆಗೆ ಆಯೋಗದ ಕರ್ತವ್ಯಗಳ ಬಗ್ಗೆ ಉಲ್ಲೇಖವಿದೆ. ಅದರ ಪ್ರಕಾರ, ಯಾರಾದರೂ ದೂರು ಕೊಟ್ಟರೆ ವಿಚಾರಣೆ ಮಾಡಬಹುದು. ಹಿಂದುಳಿದ ವರ್ಗದ ಹಿತಾಸಕ್ತಿ ಕಾಪಾಡುವ ಅಂಶಗಳು ಜಾರಿ ಆಗಿವೆಯಾ ಎಂದು ಗಮನಿಸಬೇಕು. ಅರ್ಥಾತ್‌, ಇದು ಉಸ್ತುವಾರಿ ಕೆಲಸಕ್ಕೆ ಸೀಮಿತ ಎಂದು ಅರ್ಥವಲ್ಲದೆ ಇನ್ನೇನು?

ಆದರೆ ತಿದ್ದುಪಡಿ ಮಸೂದೆಯು ‘ಮುಂದೆ ರಾಷ್ಟ್ರಪತಿ ನಿಯಮಗಳನ್ನು ರಚಿಸಲಿದ್ದಾರೆ’ ಎಂದಷ್ಟೇ ಹೇಳಿದೆ.  ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಸಾಮಾನ್ಯವಾಗಿ ಒಪ್ಪಿಕೊಳ್ಳಬೇಕು.  ಒಪ್ಪದೇ ಇದ್ದ ಪಕ್ಷದಲ್ಲಿ ಸೂಕ್ತ ಕಾರಣ ಕೊಡಬೇಕು ಎಂಬ ಅಂಶ ಹಿಂದಿನ ಕಾಯ್ಕೆಯಲ್ಲಿ ಇದೆ. ತಿದ್ದುಪಡಿ ಮಸೂದೆಯಲ್ಲಿ ಇದನ್ನೂ ಕೈಬಿಡಲಾಗಿದೆ. ಈ ಅಂಶವನ್ನು  ಅಳವಡಿಸಬೇಕು. ಇಲ್ಲವಾದರೆ ಸಾಂವಿಧಾನಿಕ ಆಯೋಗದ ಶಿಫಾರಸಿನ ಪಾವಿತ್ರ್ಯ ಉಳಿಯುವುದಿಲ್ಲ. ಆಯೋಗದ ಬಗ್ಗೆ ಸಮಾಜವೂ ವಿಶ್ವಾಸ ಕಳೆದುಕೊಳ್ಳಬಹುದು.

ತಿದ್ದುಪಡಿ ಮಸೂದೆಯಲ್ಲಿರುವ ಮತ್ತೊಂದು ಮುಖ್ಯ ನ್ಯೂನತೆಯೆಂದರೆ, ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆ ಬಗ್ಗೆ ಅವಕಾಶ ಇಲ್ಲದಿರುವುದು. ಹಿಂದುಳಿದ ವರ್ಗಗಳ ಪಟ್ಟಿಯನ್ನು 10 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು ಎಂದು 1993ರ ಕಾಯ್ದೆ ಹೇಳುತ್ತದೆ.  ಯಾಕೆಂದರೆ, ಮೀಸಲಾತಿ ಎನ್ನುವಂಥದ್ದು ಶಾಶ್ವತ ಅಲ್ಲ. ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕು. ಅಂದರೆ ಸಮಾನತೆ ಎನ್ನುವಂಥದ್ದು ಗಡುವು. ಈ ಕಾರಣಕ್ಕೆ ಪರಿಷ್ಕರಣೆಗೆ ಅವಕಾಶ ನೀಡಲಾಗಿತ್ತು.  ಹಿಂದುಳಿದ ವರ್ಗಗಳ ಪಟ್ಟಿ ಪರಿಷ್ಕರಣೆ ಮಾಡುವ ಮೊದಲು ಆಯೋಗದ ಜೊತೆ ಸಮಾಲೋಚನೆ ನಡೆಸಬೇಕು ಎಂಬುದು ಹಳೆ ಕಾಯ್ದೆಯಲ್ಲಿದೆ.  ಪರಿಷ್ಕರಣೆಗೆ ಅವಕಾಶ ಇಲ್ಲದಿದ್ದಲ್ಲಿ, ಮೀಸಲಾತಿ ಉದ್ದೇಶ ಈಡೇರುವುದಿಲ್ಲ.

ಹಿಂದುಳಿದ ವರ್ಗಗಳನ್ನು  ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಬಿಡಬೇಕು. ಪ್ರತಿಯೊಂದು ಜಾತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಿ ಅವುಗಳನ್ನು ಗುರುತಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಜಾತಿ ಬೇರೊಂದು ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಆದರೆ, ಕೇಂದ್ರ ಸರ್ಕಾರವೇ ಹೇಗೆ ಗುರುತಿಸುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದನ್ನು ನೋಡಿದರೆ, ಹಿಂದುಳಿದ ವರ್ಗಗಳ ಅಧಿಕಾರವನ್ನು ಹೊಸ ಮಸೂದೆಯಲ್ಲಿ ಕಿತ್ತುಕೊಳ್ಳಲಾಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ.

ಸಂವಿಧಾನದ 123ನೇ ತಿದ್ದುಪಡಿ ಮಸೂದೆಗೆ ಸೂಕ್ತ ಬದಲಾವಣೆ ಮಾಡದಿದ್ದಲ್ಲಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ಥಾನಮಾನ ನೀಡುವ ನೆಪದಲ್ಲಿ, ಸಮಸ್ಯೆಗಳನ್ನು ಗೋಜಲುಗೊಳಿಸಿದಂತಾಗುತ್ತದೆ. ಈ ಮಸೂದೆ  ರಾಜ್ಯಸಭೆಯ  ಒಪ್ಪಿಗೆ ಪಡೆಯಬೇಕಾಗಿದೆ. ಜೊತೆಗೆ ದೇಶದ ಅರ್ಧದಷ್ಟು  ರಾಜ್ಯಗಳ ಶಾಸನಸಭೆಗಳ ಒಪ್ಪಿಗೆ ಪಡೆಯಬೇಕಾಗುತ್ತದೆ.

ಹಿಂದುಳಿದ ವರ್ಗಗಳ ನೈಜ ಸ್ಥಿತಿಗತಿ ನಿರ್ಧರಿಸಿ ಸೂಕ್ತ ಪರಿಹಾರಗಳನ್ನು ಪ್ರಾಮಾಣಿಕವಾಗಿ ನೀಡುವ ಜವಾಬ್ದಾರಿ ಈ ದೇಶದ ಮುಂದಿದೆ. ಹಿಂದುಳಿದ ಸಮುದಾಯಗಳು ತಮ್ಮ ತಪ್ಪಿಲ್ಲದೆ ಅನೇಕ ರೀತಿಯ ದಮನಕ್ಕೆ ಒಳಗಾಗಿವೆ. ಇದರ ನಿವಾರಣೆಯೇ ಸಂವಿಧಾನದ ಸ್ಪಷ್ಟ ಆಶಯ. ಇದೇ ಸಾಮಾಜಿಕ ನ್ಯಾಯ. ಆಯೋಗ ಹಿಂದುಳಿದ ವರ್ಗಗಳ ವಿಕಸನದ ಒಂದು ಮುಖ್ಯವಾದ ಸಾಧನ. ಇಂಥ ಕಾರ್ಯ ನಿರ್ವಹಿಸುವಲ್ಲಿ ಯಾವುದೇ  ಲೋಪ ಆಗದಂತೆ ಎಚ್ಚರಿಕೆ ವಹಿಸುವುದು ಅವಶ್ಯ.  ಈ ಬಗ್ಗೆ ವಿಸ್ತೃತ   ಚರ್ಚೆ ಆಗಬೇಕು.

ಲೇಖಕ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT