ಯಾವುದು ಹೊಸದಲ್ಲ ಹೇಳು...

7

ಯಾವುದು ಹೊಸದಲ್ಲ ಹೇಳು...

Published:
Updated:
ಯಾವುದು ಹೊಸದಲ್ಲ ಹೇಳು...

1998ರಲ್ಲಿ ಮಂಗಳೂರಿನಿಂದ ಹೈದರಾಬಾದ್‌ಗೆ ಹೋಗುವ ಬಸ್ಸಿನಲ್ಲಿ,‘ಜೋಪಡಿ ಮನೆ, ಕೂಲಿ ಮಾಡಿ ಕಾಲೇಜಿಗೆ ಹೋಗಬೇಕಾದ ಫೈನಲ್ ಬಿ.ಎ. ಹುಡುಗನನ್ನು ಸೆಕೆಂಡ್ ಬಿ.ಎ.ಹುಡುಗಿ ಇಷ್ಟಪಡಲು ಕಾರಣವಾದ ಅದೇನನ್ನು ನನ್ನಲ್ಲಿ ಕಂಡೆ?’ಎಂದು ಕೇಳಿದಾಗ ಪ್ರಮೀಳಾ ಕೊಟ್ಟ ಉತ್ತರ ನಗು. ‘ನಿನ್ನ ಪ್ರಾಮಾಣಿಕ ನಗು ನನ್ನನ್ನು ಸೆರೆ ಹಿಡಿಯಿತು’ ಎಂದಿದ್ದಳು. ನಕ್ಕೆ. ನಗುವಿನೊಳಗಿನ ಉತ್ತರಗಳು ಅವಳಿಗೆ ಗೊತ್ತಿದ್ದದ್ದೇ. ಡ್ರೈವರ್ ಗಕ್ಕನೆ ಬ್ರೇಕ್ ಹಾಕಿದಾಗ ಮುಖ ಎದುರಿನ ಸರಳಿಗೆ ಬಡಿಯುವುದರಲ್ಲಿತ್ತು. ಏನೋ ಹೇಳಬಯಸಿದ್ದ ನಾನು ಈ ಸಂದರ್ಭವನ್ನು ಬಳಸಿಕೊಂಡು,‘ಬಸ್ಸೇನಾದರೂ ಹೊಂಡಕ್ಕೆ ಬಿದ್ದು ನಾನು ಸತ್ತು ನೀನು ಉಳಿದರೆ ನೀನು ಬೇರೆ ಮದುವೆ ಮಾಡಿಕೊಳ್ಳಬೇಕು’ ಎಂದೆ. ತಕ್ಷಣ ಗಂಭೀರವಾದ ಪ್ರಮೀಳಾ ‘ನೀನು ಹೀಗೆ ವಾರೆ ಗುಣಾಕಾರ ಹಾಕಬೇಡ. ನಾನು ಸತ್ತರೆ ನಿನಗೆ ಹೇಗೆ ಬೇರೆ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಹಾಗೇ ನನಗೂ ಸಾಧ್ಯವಿಲ್ಲ. ಆದರೆ ಬದುಕುತ್ತೇನೆ ಮಾತ್ರ’ ಎಂದಳು.

‘ಎಂಥ ಕರ್ಮ ನಿನ್ನದು, ಹೀಗೆ ಗ್ಯಾಪ್ ಕೊಟ್ಟು ಕುಳಿತುಕೊಳ್ಳುವುದಾದರೆ ಸುಳ್ಳು ಹೇಳಿ ಫ್ರೆಂಡ್ಸ್‌ನೆಲ್ಲ ನಿನ್ನೆಯೇ ಕಾನ್ಫರೆನ್ಸಿಗೆ ಕಳಿಸಿ ನಾವಿಬ್ಬರೇ ಬರಬೇಕಿತ್ತಾ?’ ಎಂದಳು ಪ್ರಮೀಳಾ. ಹೆಣ್ಣು ಎಂದರೆ ಅಜ್ಜಿಯಾಗಿ ಮತ್ತು ಅಮ್ಮನಾಗಿ ಮಾತ್ರ ನನಗೆ ಅನುಭವ. ಮೈ ತಾಗಿಸಿ ಕುಳಿತುಕೊಳ್ಳುವ ಆಸೆಯೇನೊ ಬಲವಾಗಿತ್ತು. ಆಹ್ವಾನ ಸಿಕ್ಕಾಗ ಆಸೆ ಇನ್ನೂ ಬೆಳೆಯಿತು. ಆದರೆ ಭಯ. ಹಿತವಾದ ಸಂಕಟ. ಆಗ ಇಂದಿನ ಲೋಕಲ್ ರೋಮಿಯೋ ಸ್ಕ್ವಾಡ್ ನವರಂತಲ್ಲವಾದರೂ ತನ್ನ ಎಡಬದಿಯ ಸೀಟ್ ನಲ್ಲಿದ್ದ ನಮ್ಮ ಬಳಿ ಡ್ರೈವರ್,‘ಓಡೆಗ್ ಪೋಪುನೆ?’ (ಎಲ್ಲಿಗೆ ಹೋಗುವುದು?) ಎಂದು ಮಾತು ತೆಗೆದು ಏಕಾಂತಕ್ಕೆ ಭಂಗ ತಂದ. ನಾವೂ ಸುಮ್ಮನಾದೆವು.

ಮರುದಿನ ಸಿಕಂದರಾಬಾದ್ ಗೆ ಹೋಗಿದ್ದಾಯಿತು. ಇಷ್ಟವಿಲ್ಲದಿದ್ದರೂ ಕಾನ್ಫರೆನ್ಸ್‌ನಲ್ಲಿ ಕುಳಿತದ್ದೂ ಆಯಿತು. ಆದರೆ ಮೊದಲೇ ಪ್ಲ್ಯಾನ್ ಮಾಡಿದ್ದಂತೆ ಸ್ನೇಹಿತರ ಬಳಿ ಮತ್ತೊಂದು ಸುಳ್ಳು ಹೇಳಿ ಅದೇ ರಾತ್ರಿ ಹಂಪಿಗೆ ಹೊರಟೆವು.

ಹೊಸಪೇಟೆ ಬಸ್ ಸ್ಟ್ಯಾಂಡ್‌ನಲ್ಲಿ ಇಳಿದಾಗ ರಾತ್ರಿ ಮೂರರ ಜಾವ. ಬೆಳಗ್ಗೆ ಆರೂವರೆವರೆಗೆ ಅಲ್ಲೇ ಮಂಪರು. ಹಾಗೂ ಹೀಗೂ ಫ್ರೆಶ್ ಆಗಿ ಹಂಪಿಗೆ ಹೋದೆವು.

ಹಂಪಿಯನ್ನು ನಾವಿಬ್ಬರೂ ಅದೇ ಮೊದಲು ನೋಡಿದ್ದು. ಹಂಪಿಯಲ್ಲಿ ಇಳಿಯುತ್ತಿದ್ದಂತೆ ನೋಡಿದ ಮೊದಲ ದೃಶ್ಯ ಮಹಾಸಾಮ್ರಾಜ್ಯದ ಪಳೆಯುಳಿಕೆಯಂತೆ ಭಿಕ್ಷುಕರು. ಅಲ್ಲೇ ಇದ್ದ ಒಬ್ಬ ಅನೌಪಚಾರಿಕ ಗೈಡ್ ಅನ್ನು ಕರೆದುಕೊಂಡು ವಿರೂಪಾಕ್ಷ ದೇವಾಲಯದ ಒಳ ಹೊಕ್ಕೆವು. ಗೈಡ್ ಕಿಂಡಿಯಲ್ಲಿ ಸೂರ್ಯನ ಬೆಳಕು ಬೀಳುವುದನ್ನು ವಿವರಿಸುತ್ತಿದ್ದರು. ನಾನು,‘ಬಾ ಕಿಂಡಿ ನೋಡುವಾ’ ಎಂದೆ. ‘ಇದು ದೇವ ಸ್ಥಾನ’ ಎಂದಳು. ‘ವಿರೂಪಾಕ್ಷನೂ ವಿಶಾಲಾಕ್ಷಿಯೂ ಮಾಡಿದ್ದು ಇದನ್ನೇ. ಮೊದಲು ಅವರು ಅನಾದಿ ಪ್ರೇಮಿಗಳು. ಆಮೇಲೆ ಜಗನ್ಮಾತಾ ಪಿತರಾದ ಅನಾದಿ ದಂಪತಿಗಳು’ ಎಂದೆ. ಕಿಂಡಿಯ ಬಳಿ ಕೊಂಚ ಕತ್ತಲೆ. ಆಕೆ ಮೆಲ್ಲಗೆ ಹೊಡೆದು ನಕ್ಕಳು.

ಅಲ್ಲಿಂದ ಮುಂದೆ ‘ಇಲ್ಲಿ ಮುತ್ತು ರತ್ನಗಳನ್ನೆಲ್ಲ ಮಾರುತ್ತಿದ್ದರು’ ಎಂದು ಗೈಡ್ ರಾಜಬೀದಿಯಲ್ಲಿ ಕರೆದುಕೊಂಡು ಯಾವುದೋ ಸರೋವರದ ಬಳಿಗೆ ಕರೆದೊಯ್ದ. ನಾವು ಗೈಡ್ ಅನ್ನು ಕೊಂಚ ವಿಶ್ರಾಂತಿಗೆ ಕಳಿಸಿ ಸರೋವರದ ಸಮೀಪ ಜನರಿಲ್ಲದ ಸ್ಥಳಕ್ಕೆ ಹೋಗಿ ಕುಳಿತೆವು. ‘ಈ ಸರೋವರ ನೋಡು ಎಷ್ಟು ನಿರ್ಮಲವಾಗಿದೆ. ನಾವು ಕಲಕಿದ ನೀರಿನಂತಿದ್ದೇವೆ. ನಾವೂ ಯಾವಾಗ ಹೀಗೆ ಸ್ವಚ್ಛ ನೀರಿನಂತಾಗುವುದು?’ ಎಂದಳು ಪ್ರಮೀಳಾ. ‘ಆಗದಿದ್ದರೆ ಆಗಿಸಬೇಕು. ನನ್ನ ಕಡೆಯಿಂದ ಅಂಥ ಸಮಸ್ಯೆ ಆಗಲಿಕ್ಕಿಲ್ಲ. ನನ್ನ ಅಪ್ಪ ಅಮ್ಮ ಅವರ ಕಿತ್ತಾಟಗಳಲ್ಲೆ ಹೈರಾಣಾಗಿ ಜೀವನ ತಳ್ಳುತ್ತಿದ್ದಾರೆ. ಅವರನ್ನು ಒಪ್ಪಿಸಬಲ್ಲೆ. ತಲೆಕೆಡಿಸಿಕೊಳ್ಳಬೇಕಾದಂಥ ಬಂಧುಗಳೂ ಇಲ್ಲ. ಜಾತಿ, ಸಮುದಾಯ ಸಮಸ್ಯೆ ಅಲ್ಲ. ಅಡುಗೆಗೆ ಹೋಗುವ ಬ್ರಾಹ್ಮಣರೇ ಬ್ರಾಹ್ಮಣರಲ್ಲಿ ಅಸ್ಪೃಶ್ಯರಂತಿರುವಾಗ ಕೂಲಿಗೆ ಹೋಗುವ ಬ್ರಾಹ್ಮಣ ಕುಟುಂಬವನ್ನು ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲ. ಬೀದಿಯಲ್ಲಿ ನಾಯಿಗಳು ಏನಾದರೂ ಮಾಡುತ್ತಿದ್ದರೆ ನಾವು ಗಂಭೀರವಾಗಿ ತಗೊಳ್ತೇವಾ? ಹಾಗೇ ನಮ್ಮ ಕುಟುಂಬ ಕೂಡ. ಆದರೆ ನಿಮ್ಮದು ಹಾಗಲ್ಲ. ಕೃಷಿ-ಕೂಲಿ ಮಾಡುವ ಗೌಡರಿಗೆ ಸಾಮಾಜಿಕ ಪರಿಗಣನೆಯಂತೂ ಇದೆ. ನಿಮ್ಮಲ್ಲಿಂದ ಸಮಸ್ಯೆ ಬರಲೂಬಹುದು. ನೋಡುವ, ಏನಾದರೂ ಮಾಡುವ. ಆ ಚಿಂತೆಯಲ್ಲಿ ಈ ಸರೋವರದ ಸೌಂದರ್ಯವನ್ನು ನೋಡದಿರುವುದು ಬೇಡ’ ಎಂದೆ. ಜಿಗಿಯುವ ಮೀನುಗಳು ಖುಷಿ ಕೊಟ್ಟವು. ಅದೇ ಉತ್ಸಾಹದಲ್ಲಿ ಮಾತಂಗ ಪರ್ವತ ಏರಲು ಹೊರಟೆವು.

ನಮ್ಮ ಗೈಡ್ ಬಳಿ ಮಾತಂಗ ಪರ್ವತವನ್ನು ಏರೋಣವೆಂದು ಯಾರೂ ಅಂದಿರಲಿಲ್ಲವಂತೆ. ಇವರಿಗೇನೊ ಹುಚ್ಚು ಎಂದುಕೊಂಡಿರಬೇಕು. ಆದರೂ ನಮ್ಮೊಂದಿಗೆ ಬಂದ. ಪರ್ವತ ಏರುವಾಗ ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಜಿಗಿಯುವಲ್ಲೆಲ್ಲ ಅಗತ್ಯ ಇಲ್ಲದಿದ್ದರೂ ಕೈಹಿಡಿದುಕೊಳ್ಳಲಿಕ್ಕೆಲ್ಲ ಆಗುತ್ತದೆ, ಇದೊಂದು ಲಾಭ. 'ಪರ್ವತವನ್ನು ಮುಕ್ಕಾಲು ಭಾಗ ಕ್ರಮಿಸಿದಾಗ ಅಲ್ಲೊಂದು ಕಲ್ಲಿನ ಗುಹೆ ಸಿಗುತ್ತದೆ. ಗುಹೆಯ ಒಳಗೆ ತುಂಬಾ ತಂಪು. ಅದು ಹನುಮಂತ ಇದ್ದ ಗುಹೆ’ ಎಂದು ಗೈಡ್ ಹೇಳಿದ. ನಮಗಿಬ್ಬರಿಗೂ ನಗು ತಡೆಯಲು ಆಗಲಿಲ್ಲ. ಕಲಿಯುಗದ ಬ್ರಹ್ಮನೂ ಅಖಂಡ ಬ್ರಹ್ಮಚಾರಿಯೂ ಆದ ಹನುಮಂತನ ಗುಹೆಗೆ ಪ್ರೇಮಿಗಳ ಪ್ರವೇಶ! ತಂದಿದ್ದ ತಿಂಡಿಗಳನ್ನು ಗೈಡ್‌ಗೂ ಕೊಟ್ಟು, ನಾವೂ ತಿಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಪ್ರಯಾಣ ಮುಂದುವರಿಸಿದೆವು. ಪರ್ವತದ ತುತ್ತ ತುದಿಯಲ್ಲಿ ಒಂದು ಮಂಟಪ ಇದೆ. ಅಲ್ಲಿಂದ ತುಂಬಾ ದೂರದವರೆಗೂ ಕಾಣುತ್ತದೆ. ವಿಜಯನಗರದ ಕಾಲದಲ್ಲಿ ಆ ಮಂಟಪದಲ್ಲಿ ಸೈನಿಕರು ಇದ್ದು ದೂರದಲ್ಲಿ ಶತ್ರುಗಳು ಕಂಡರೆ ಕಹಳೆ ಊದಿ ಎಚ್ಚರಿಸುತ್ತಿದ್ದರಂತೆ. ಪರ್ವತದ ಈ ತುದಿಗೇರಿದ್ದರ ನೆನಪಾಗಿ ಇರಲಿ ಎಂದು ನಾನು ತಂದಿದ್ದ ಗೆಳೆಯನ ಕ್ಯಾಮೆರಾದಲ್ಲಿ ಇಬ್ಬರೂ ಕಲ್ಲಿನ ಮೇಲೆ ಕುಳಿತು ಗೈಡ್ ಕೈಯಲ್ಲಿ ಒಂದು ಫೊಟೊ ತೆಗೆಸಿಕೊಂಡೆವು.

ಗಮ್ಮತ್ತಾದದ್ದು ವಿಜಯ ವಿಠಲ ದೇವಾಲಯದಲ್ಲಿ. ಗೈಡ್ ಸಪ್ತಸ್ವರ ಬರುವ ಕಲ್ಲಿನ ಕಂಬವನ್ನು ಮೀಟಿ ತೋರಿಸಿದ. ಆಗ ನಾನು ಉತ್ಸಾಹದಿಂದ ಪ್ರಮೀಳಾಳತ್ತ ನೋಡಿ,‘ಮೀಟಿದರೆ ಒಳ್ಳೆಯ ನಾದ ಬರುತ್ತದೆ’ಎಂದೆ. ಅವಳೂ ಅಷ್ಟೆ ಮಾರ್ಮಿಕವಾಗಿ,‘ಬಸವಣ್ಣನ ಬಳಿ ಅಲ್ಲಮಪ್ರಭು, ನೀನು ಮಾಡುತ್ತಿರುವುದು ಸರಿ ಬಸವಣ್ಣಾ, ಆದರೆ ಅದಕ್ಕಿನ್ನೂ ಕಾಲ ಪಕ್ವಗೊಂಡಿಲ್ಲ ಎಂದಿದ್ದನಂತೆ’ ಎಂದಳು. ನಮ್ಮ ಈ ಕೋಡ್‌ವರ್ಡ್‌ ಭಾಷೆ ಗೈಡ್‌ಗೆ ವಿಚಿತ್ರವೆನಿಸಿ,‘ಏನು? ಏನದು?’ ಎಂದು ಕೇಳಿದರು. ‘ಏನಿಲ್ಲ. ಹೋಗೋಣ’ ಎಂದೆವು ನಾವು. ಅವರಿಗೆ ಕುತೂಹಲ. ‘ಏನೆಂದು ಹೇಳಿದರೆ ನನಗೆ ಗೊತ್ತಿದ್ದರೆ ವಿವರಿಸುತ್ತೇನೆ’ ಎಂದರು. ‘ಏನೆಂದು ಸರಿಯಾಗಿ ನಮಗೇ ಗೊತ್ತಿಲ್ಲ ಸ್ವಾಮಿ, ಬಿಟ್ಟುಬಿಡಿ’ ಎಂದೆ.

ಕಮಲ ಮಹಲ್. ಹಿಂದೂ ಮುಸ್ಲಿಂ ವಾಸ್ತು ಶಿಲ್ಪದ ಸಮನ್ವಯ. ಅಲ್ಲಿ ಕುಳಿತೆವು. ಕೆಳಗೆ ಬಿದ್ದಿದ್ದ ನಾಲ್ಕು ಕಲ್ಲುಗಳನ್ನು ಪ್ರಮೀಳಾ ಎತ್ತಿಕೊಂಡಳು. ಬಾಲ್ಯದ ಕಲ್ಲಾಟದ ನೆನಪಾಗಿ ನಾಲ್ಕು ಕಲ್ಲು ಹಾರಿಸಿದೆವು. ‘ಇಲ್ಲಿ ರಾಣಿಯರು ಸ್ನಾನ ಮಾಡಿ ಬಟ್ಟೆ ಬದಲಾಯಿಸುತ್ತಿದ್ದರು’ ಎಂದೆಲ್ಲ ಗೈಡ್ ಹೇಳಿದ. ಪ್ರಮೀಳಾ ನನ್ನ ಕಿವಿಯಲ್ಲಿ,‘ರಾಣಿಯರು ಬಟ್ಟೆ ಬದಲಾಯಿಸುವಾಗ ರಾಜರು ಇಲ್ಲೆ ನೋಡುತ್ತಿದ್ದರು’ ಎಂದು ಕಣ್ಣು ಮಿಟುಕಿಸಿದಳು.

ಅದಾಗಲೇ ಸಂಜೆಯಾಗತೊಡಗಿತ್ತು. ಗೈಡ್ ಅನ್ನು ಕಳಿಸಿ ಸಾಸಿವೆ ಕಾಳು ಗಣೇಶ, ಕಡಲೆ ಕಾಳು ಗಣೇಶ, ಆನೆಗಳ ಲಾಯವನ್ನೆಲ್ಲ ನೋಡಿದೆವು. ನಿಜವಾಗಿ ನಮಗೆ ಏನೂ ಅರ್ಥ ಆಗಿರಲಿಲ್ಲ. ನೋಡಿದೆವು ಅಷ್ಟೆ. ನಂತರ ಅಲ್ಲೇ ಪಕ್ಕದಲ್ಲಿ ಒಂದು ಕಬ್ಬಿನ ಗದ್ದೆಗೆ ಹೋದೆವು. ನಾಳೆ ಬೆಳಗಾದರೆ ನಾವು ಅಗಲುತ್ತೇವೆ ಎಂಬ ವಿಷಾದ ಇಬ್ಬರಲ್ಲೂ ಮೇಲೇಳತೊಡಗಿತ್ತು. ಮುಂದೆ ಇವಳು ನನಗೆ ಸಿಗದಿದ್ದರೆ ಎಂಬ ಭಾವದಲ್ಲಿ ಪ್ರಮೀಳಾಳನ್ನು ಕೂರಿಸಿ, ನಿಲ್ಲಿಸಿ ವಿವಿಧ ಹಾವ ಭಾವಗಳಲ್ಲಿ ಎಪ್ಪತ್ತೆಂಬತ್ತು ಫೊಟೊ ತೆಗೆದೆ. ಆಮೇಲೆ ಹೊಸಪೇಟೆಗೆ ಹಿಂದಿರುಗಿ ಮಂಗಳೂರು ಬಸ್ಸಿಗೆ ಹೊರಟೆವು.

ಬಸ್ಸು ಶಿವಮೊಗ್ಗ ಮಾರ್ಗವಾಗಿ ಬಂತು. ಸುತ್ತ ಕತ್ತಲು. ತಂಗಾಳಿ. ಮನಸು ಹಸಿರಾಗಿತ್ತು. ಹಸಿಯಾಗಿತ್ತು. ಮುಂದಿನ ಚರ್ಚೆ ‘ನಾನ್-ವೆಜ್’ ಐಟಮ್‌ಗಳು. ಹೆಣ್ಣಿನ ದೇಹಭಾಗಗಳ ಬಗ್ಗೆ ನಾನು ಕೇಳಿ ತಿಳಿದುಕೊಂಡೆ. ಗಂಡಿನ ಅಂಗಾಂಗಗಳ ಬಗ್ಗೆ ಅವಳು ಕೇಳಿ ತಿಳಿದುಕೊಂಡಳು.

ಎರಡು ರಾತ್ರಿ ನಿದ್ದೆ ಇಲ್ಲದೆ ಇಬ್ಬರಿಗೂ ಆಯಾಸ. ಶಿವಮೊಗ್ಗದಿಂದ ಕೊಟ್ಟಿಗೆಹಾರದವರೆಗೆ ನಾನು ಅವಳ ಮಡಿಲಲ್ಲಿ ನಿದ್ರಿಸಿದೆ. ಕೊಟ್ಟಿಗೆಹಾರದಿಂದ ಅವಳು ನನ್ನ ಮಡಿಲಲ್ಲಿ ಮಲಗಿದಳು. ಹತ್ತೊಂಬತ್ತು ವರ್ಷಗಳ ನಂತರ ಈಗ ಪ್ರತೀ ದಿನ ಅದೇ ಚಾರ್ಮಾಡಿ-ಬೆಳ್ತಂಗಡಿ ಮಾರ್ಗದಲ್ಲಿ ಸಂಚರಿಸುವಾಗ ಆ ನೆನಪು ಮುದ ನೀಡುತ್ತದೆ.

***

ನಂತರದ ಹಾದಿ: ಪ್ರಮೀಳಾ ತನ್ನ ಮನೆಯಿಂದ ಹೊರಬರಬೇಕಾಗಿ ಬಂದಾಗ ನಾನು ಅವಳನ್ನು ಚೊಕ್ಕಾಡಿಯಿಂದ, ಆಗ ಅಮ್ಮ ಇದ್ದ ಕಾರ್ಕಳಕ್ಕೆ ಕರೆದುಕೊಂಡು ಹೊರಟೆ. ದಾರಿಯುದ್ದಕ್ಕೂ ಅಳುತ್ತಿದ್ದಳು. ಏನೆಂದು ಸಮಾಧಾನಪಡಿಸಲಿ. ನನಗೇ ನೆಲೆಯಿಲ್ಲ. ಮದುವೆ ಆಗಿಲ್ಲ. ಯಾರ ಮನೆಯಲ್ಲಿ ಬಿಡಲಿ. ಅನಾರೋಗ್ಯಪೀಡಿತರಾದ ಅಪ್ಪನಿಗೂ ಅಮ್ಮನಿಗೂ ಸರಿ ಬರುವುದಿಲ್ಲ. ಅಪ್ಪನನ್ನು ಅಮ್ಮನೊಂದಿಗೆ ಬಿಡುವಂತಿಲ್ಲ. ನಾನಾಗ ಬಿ.ಎಡ್. ಸೇರಿಕೊಂಡಿದ್ದೆ. ಹಾಗಾಗಿ ಕೆಲಸಕ್ಕೆ ಹೋಗುವಂತೆಯೂ ಇಲ್ಲ. ಈ ಗೊಂದಲ, ನೋವು ವಿಷಾದಗಳಲ್ಲೇ ಕಾರ್ಕಳ ತಲುಪಿದೆವು. ಅಮ್ಮ ಪ್ರಮೀಳಾಳಿಗೆ ಒಂದು ಮನೆ ಕೆಲಸ ಕೊಡಿಸಿದರು. ನಂತರ ಅವಳು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ನನಗೆ ಬಿ.ಎಡ್. ಪೂರ್ಣಗೊಳಿಸಲು ಹಣ ಕೊಟ್ಟಳು. ಅವಳು ಬಿ.ಎಡ್. ಮಾಡುವಾಗ ನಾನು ಹಣ ಕೊಟ್ಟೆ. 2003ರಲ್ಲಿ ಪ್ರೇಮದ ಪಯಣ ಮುಗಿದು ಮದುವೆ ಮಾಡಿಕೊಂಡೆವು. 2004ರಲ್ಲಿ ಮಗಳು ಹುಟ್ಟಿದಳು. ಮದುವೆಯ ನಂತರ ಒಂದು ದಿನ ‘ನಿನ್ನನ್ನಿನ್ನು ನೀವು ಎಂದು ಕರೆಯಲೇ ನಾನು?’ ಎಂದು ಕೇಳಿದಳು.‘ಇದೆಂತದು ಹೊಸ ವರಸೆ. ಮದುವೆ ಸಮಾಜಕ್ಕೆ ಅಷ್ಟೆ. ನಾವು ಗೆಳೆಯ ಗೆಳತಿಯರೇ. ಗೆಳೆತನ ನಮ್ಮಿಂದ ಹೋದ ದಿನ ಡೈವೋರ್ಸ್ ಮಾಡ್ಕೊಂಡ್ಬಿಡೋಣ. ಗೆಳೆತನ ಇಲ್ಲದ ದಾಂಪತ್ಯವನ್ನು ಉಳಿಸಿಕೊಳ್ಳಬಾರದು. ಆದ್ದರಿಂದ ನನ್ನನ್ನು ನೀನು ಅಂತಾನೆ ಕರಿ’ ಎಂದೆ.

ಹಳೆಯ ಮಧುರ ನೆನಪಿನ ಮೆಲುಕಾಗಿರುವ, ಹಂಪಿ ಪ್ರವಾಸದ ಪರಿಣಾಮವಾಗಿ ಪ್ರಮೀಳಾ ಬರೆದ ಅವಳ ಕವನ ಸಂಕಲನದ ಕವಿತೆಯೊಂದರ ಸಾಲುಗಳಿಂದ ಈ ಪ್ರವಾಸದ ನೆನಪನ್ನು ಮುಚ್ಚುತ್ತೇನೆ.

ಯಾವುದು ಹೊಸದಲ್ಲ ಹೇಳು

ಪ್ರೀತಿ ಹುಟ್ಟಿದ ಮೇಲೆ

ಬರಡು ನೆಲದ ತುಂಬಾ ಹತ್ತು ಹನಿ ಬಿದ್ದ ಮೇಲೆ

ಏಕತಾನದ ಜಗದಿ ಏಕಾಂಗಿ ಇರುಳುಗಳ ಪರದೆ ಹರಿದ ಮೇಲೆ

ಕಣ್ಣ ಕೊಳದ ನೀಲಿ ಹರಹಲ್ಲಿ

ನೂರು ನಕ್ಷತ್ರ ಹೊಳೆದ ಮೇಲೆ

ನನ್ನ ನಿನ್ನ ನಡುವೆ

ಯಾವುದು ಹೊಸದಲ್ಲ ಹೇಳು

ಪ್ರೀತಿ ಹುಟ್ಟಿದಾ ಮೇಲೆ.

***

ಗುರಿ ಕೃತಕ, ಯಾನ ಸಹಜ

1997ರಲ್ಲಿ ನಾನು ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಸೆಕೆಂಡ್ ಬಿ.ಎ. ಓದುತ್ತಿದ್ದೆ. ಆಗ ಫಸ್ಟ್ ಬಿ.ಎ. ಓದುತ್ತಿದ್ದ ಗೆಳೆಯ ರವಿಚಂದ್ರ ಎಂಬವರು ನನ್ನ ಪಾಡಿಗೆ ಇದ್ದ ನನ್ನನ್ನು ಜೂನಿಯರ್ ಜೇಸೀಸ್ ಅಧ್ಯಕ್ಷ ಮಾಡಿದರು. ಆಗ ನನಗೆ ಕಾರ್ಯದರ್ಶಿಯಾದವಳು ಪ್ರಮೀಳಾ. ಆದರೆ ಆಕೆ ಹೊಸಬಳೇನೂ ಅಲ್ಲ. ನನ್ನ ಮನೆ ಚೊಕ್ಕಾಡಿಯಿಂದ ಸ್ವಲ್ಪ ಮುಂದೆ ಇದ್ದರೆ ಆಕೆಯ ಮನೆ ನಮ್ಮ ಮನೆಯಿಂದ ಎರಡು ಕಿ.ಮೀ. ಮುಂದೆ ಸಂಕೇಶ ಎಂಬಲ್ಲಿತ್ತು. ನಾವಿಬ್ಬರೂ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಓದಿದವರು. ನಾನು ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗ ಆಕೆ ಎಂಟನೆಯ ತರಗತಿಯಲ್ಲಿದ್ದಳು. ಕಾಲೇಜಿಗೆ ಹೋಗುವಾಗ ಹೋಗುತ್ತಿದ್ದುದು ಒಂದೇ ಬಸ್ ನಲ್ಲಿ. ಅವಳು ಸುಳ್ಯದ ಶಾರದಾ ಕಾಲೇಜಿನಲ್ಲಿ ಓದುತ್ತಿದ್ದಳು. ಅವರ ಮನೆಯಲ್ಲೂ ನನ್ನ ಬಗ್ಗೆ ವಿಶ್ವಾಸ ಇತ್ತು.

 ಪ್ರಾರಂಭದಲ್ಲಿ ಪ್ರಮೀಳಾ, ‘ನಾವು ಬೆರೆಯವರಿಗೆ ಆದರ್ಶವಾಗೋಣ’ ಎಂದಿದ್ದಳು. ನಾನು, ‘ಗುರಿಯನ್ನು ನಂಬುವುದಿಲ್ಲ. ಗುರಿ ಕೃತಕ. ಯಾನ ಸಹಜ. ಗುರಿಯೇ ಇಲ್ಲದ ಭೂಮಿ, ನೀರು, ಗಾಳಿ ಎಲ್ಲಕ್ಕೂ ಯಾನ ಇದೆ. ನಮ್ಮ ಯಾನದ ಕೊನೆಯಲ್ಲಿ ಒಂದು ಸಾರ್ಥಕ ಭಾವ ಕೇವಲ ನಮ್ಮಿಬ್ಬರಿಗೆ ಉಳಿದರೆ ಸಾಕು. ಯಾರಿಗೂ ಆದರ್ಶರಾಗಬೇಕೆಂದು ನನಗಿಲ್ಲ’ಎಂದಿದ್ದೆ.

ಮಾವ-ಅತ್ತೆಗೆ ಮದುವೆ ಮಾಡಬೇಕಾದ ಹೆಣ್ಣು ಮಕ್ಕಳಿದ್ದರು. ಜವಾಬ್ದಾರಿಯ ಕಾರಣಗಳಿದ್ದುದರಿಂದ ನಾವಿಬ್ಬರೂ ಎಚ್ಚರದಿಂದಿದ್ದ ದಿನಗಳವು. ಏನಿದ್ದರೂ ಔಪಚಾರಿಕ ಮಾತುಕತೆ ಅಷ್ಟೆ. ಆದರೆ ಮನಸು ಕೇಳುವುದಿಲ್ಲ. ಖಾಸಗಿ ಕ್ಷಣಗಳನ್ನು ಕಳೆಯುವ ತುಡಿತ ಜೋರಾಗಿತ್ತು. ಅದೇ ಸಂದರ್ಭಕ್ಕೆ ಸಿಕಂದರಾಬಾದ್‌ನಲ್ಲಿ ಜೇಸೀಸ್‌ನ ರಾಷ್ಟ್ರೀಯ ಸಮ್ಮೇಳನ ಇತ್ತು. ಹೋಗಲು ಹಣವೂ ಇರಲಿಲ್ಲ. ಮನಸೂ ಇರಲಿಲ್ಲ. ಆದರೆ ಏನಾದರೂ ಪ್ಲ್ಯಾನ್ ಮಾಡಿ ಹೋದರೆ ಬರುವಾಗ ಗೆಳೆಯರನ್ನು ಹೇಗಾದರೂ ತಪ್ಪಿಸಿ ಇಬ್ಬರೇ ಬಂದರೆ ಹಂಪಿಗೆ ಹೋಗಿ ಬರುವುದೆಂದು ಯೋಜನೆ ರೂಪಿಸಿದೆವು. ಆಮೇಲೆ ಹೋಗುವಾಗಲೂ ಸ್ನೇಹಿತರನ್ನು ತಪ್ಪಿಸಿಯೆ ಹೋಗುವುದೆಂದು ಆ ಯೋಜನೆ ಪರಿಷ್ಕೃತವಾಯಿತು. ಆಗ ಪಡೆದ ಅಪೂರ್ವ ಅನುಭವಗಳು ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry