ಫೈನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

7

ಫೈನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

Published:
Updated:
ಫೈನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

ಸಿಡ್ನಿ: ಅಮೋಘ ಲಯದಲ್ಲಿರುವ ಭಾರತದ ಕೆ. ಶ್ರೀಕಾಂತ್‌ ಅವರು ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಶ್ರೀಕಾಂತ್‌ 21–10, 21–14ರ ಗೇಮ್‌ಗಳಿಂದ ಚೀನಾದ ಶಿ ಯೂಕಿ ಅವರನ್ನು ಪರಾಭವಗೊಳಿಸಿದರು.

ಈ ಮೂಲಕ ಭಾರತದ ಆಟಗಾರ ಸತತ ಮೂರು ಸೂಪರ್‌ ಸರಣಿ ಟೂರ್ನಿ ಗಳಲ್ಲಿ ಫೈನಲ್‌ ಪ್ರವೇಶಿಸಿದ  ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆ

ತಮ್ಮ ದಾಗಿಸಿಕೊಂಡರು. ಇಂಡೊನೇಷ್ಯಾದ ಸೋನಿ ದ್ವಿ ಕೊಂಕೊರೊ, ಮಲೇಷ್ಯಾದ ಲೀ ಚೊಂಗ್‌ ವೀ, ಚೀನಾದ ಲಿನ್‌ ಡಾನ್‌ ಮತ್ತು ಚೆನ್‌ ಲಾಂಗ್‌ ಅವರು ಮೊದಲು ಈ ಸಾಧನೆ ಮಾಡಿದ್ದರು.

ಶ್ರೀಕಾಂತ್ ಅವರು ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಸಿಂಗಪುರ ಓಪನ್‌ ಮತ್ತು ಈ ತಿಂಗಳ ಆರಂಭದಲ್ಲಿ ಜರುಗಿದ್ದ ಇಂಡೊನೇಷ್ಯಾ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದರು.

ಇಂಡೊನೇಷ್ಯಾ ಟೂರ್ನಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದ ಶ್ರೀಕಾಂತ್ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಪರಾಕ್ರಮ ಮೆರೆದಿದ್ದರು.

ಬಲಿಷ್ಠರ ವಿರುದ್ಧ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ ಮೊದಲ ಗೇಮ್‌ನ ಆರಂಭದಿಂದಲೇ ಆಕ್ರಮಣ ಕಾರಿ ಆಟಕ್ಕೆ ಅಣಿಯಾದರು.  ಚುರುಕಿನ ಸರ್ವ್‌ ಹಾಗೂ ಆಕರ್ಷಕ ಹಿಂಗೈ ಹೊಡೆತಗಳಿಂದ ಎದುರಾಳಿಯನ್ನು ಕಂಗೆಡಿಸಿದ ಅವರು 9–6ರ ಮುನ್ನಡೆ ಪಡೆದರು. ಆ ನಂತರವೂ ಶ್ರೀಕಾಂತ್‌ ಆಟ ರಂಗೇರಿತು. ಮಿಂಚಿನ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಂಗಳದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದ ಅವರು ಲೀಲಾಜಾಲವಾಗಿ ಪಾಯಿಂಟ್ಸ್‌ ಹೆಕ್ಕಿ 11–7ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲೂ ಭಾರತದ ಆಟಗಾರ ಗುಣಮಟ್ಟದ ಆಟ ಆಡಿದರು. ಚೀನಾದ ಶಿ ಯೂಕಿ, ನೆಟ್‌ನಿಂದ ಬಹಳ ಹಿಂದೆ ನಿಂತು ಆಡುವುದನ್ನು ಗಮನಿಸಿದ ಶ್ರೀಕಾಂತ್‌ ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ತಂತ್ರ ಅನುಸರಿಸಿದರು. ಭಾರತದ ಆಟಗಾರ ಬಾರಿಸಿದ ಷಟಲ್‌ ಹಿಂತಿರುಗಿಸಲು ಯೂಕಿ ಪ್ರಯಾಸ ಪಟ್ಟರು. ಇದರೊಂದಿಗೆ ಸುಲಭವಾಗಿ ಪಾಯಿಂಟ್ಸ್‌ ಬೇಟೆಯಾಡಿದ  24 ವರ್ಷದ ಭಾರತದ ಆಟಗಾರ ಮುನ್ನಡೆ ಯನ್ನು 16–9ಕ್ಕೆ ಹೆಚ್ಚಿಸಿಕೊಂಡು ಗೇಮ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು.

ಶ್ರೀಕಾಂತ್‌, ಶೀಘ್ರವೇ ಮುನ್ನಡೆ ಗಳಿಸಿದ್ದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಚೀನಾದ ಆಟಗಾರ  ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಭಾರತದ ಆಟಗಾರ  ನಿರಾಯಾಸವಾಗಿ ಗೇಮ್‌ ಗೆದ್ದುಕೊಂಡರು.

ಆರಂಭಿಕ ಹಿನ್ನಡೆಯಿಂದ ಶಿ ಯೂಕಿ ಎದೆಗುಂದಲಿಲ್ಲ. ಎರಡನೇ ಗೇಮ್‌ನ ಶುರುವಿನಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಅವರು ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು. ಆದರೆ ಶ್ರೀಕಾಂತ್‌ ಇದಕ್ಕೆ ಅವಕಾಶ ನೀಡಲಿಲ್ಲ. ದೀರ್ಘ ರ್‍ಯಾಲಿಯಿಂದ ಕೂಡಿದ್ದ ಹೋರಾಟದಲ್ಲಿ ಇಬ್ಬರೂ ಜಿದ್ದಿಗೆ ಬಿದ್ದವರ ಹಾಗೆ ಸೆಣಸಿದರು. ಹೀಗಾಗಿ    6–6 ರಲ್ಲಿ ಸಮಬಲ ಕಂಡುಬಂತು.

ಈ ಹಂತದಲ್ಲಿ ಶ್ರೀಕಾಂತ್‌ ಭಿನ್ನ ರಣತಂತ್ರ ಹೆಣೆದು ಆಡಿದರು. ಹಿಂಗೈ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು 15–8ರ ಮುನ್ನಡೆ ತಮ್ಮದಾಗಿಸಿ ಕೊಂಡರು. ಈ ಹಂತದಲ್ಲಿ ಮೂರು ಪಾಯಿಂಟ್ಸ್‌ ಕಲೆಹಾಕಿದ ಶಿ ಯೂಕಿ ಹಿನ್ನಡೆಯನ್ನು 11–16ಕ್ಕೆ ತಗ್ಗಿಸಿಕೊಂಡರು.

ಇದರಿಂದ ಶ್ರೀಕಾಂತ್‌ ಎಳ್ಳಷ್ಟು ಅಂಜಲಿಲ್ಲ. ನಿರಾತಂಕವಾಗಿ ಆಡಿದ ಅವರು 19–13ರ ಮುನ್ನಡೆ ಪಡೆದು ಗೆಲುವಿನ ಹಾದಿ ಸುಗಮ ಮಾಡಿ ಕೊಂಡರು.

ಇಷ್ಟಾದರೂ ಶಿ ಯೂಕಿ, ಛಲಬಿಡದೆ ಹೋರಾಡಿದರು. ಎದುರಾಳಿಯ ಪ್ರಬಲ ಪೈಪೋಟಿಯ ನಡುವೆಯೂ ಶ್ರೀಕಾಂತ್‌ ಎರಡು ಪಾಯಿಂಟ್ಸ್‌ ಸಂಗ್ರಹಿಸಿ ಗೆಲುವಿನ ತೋರಣ ಕಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry