7

ಪರಿಸ್ಥಿತಿಯ ಸದ್ಬಳಕೆಯೇ ಜಾಣ ನಡೆ

ಕೆ. ಜಿ. ಕೃಪಾಲ್
Published:
Updated:
ಪರಿಸ್ಥಿತಿಯ ಸದ್ಬಳಕೆಯೇ ಜಾಣ ನಡೆ

ಷೇರಿನ ದರಗಳು ಉತ್ತುಂಗದಲ್ಲಿರುವಾಗ, ನಿರೀಕ್ಷೆಗೂ ಮೀರಿದ ಲಾಭ ಗಳಿಕೆಯನ್ನು ಪೇಟೆ ಒದಗಿಸಿದಾಗ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗ. ಇದಕ್ಕೆ ಕೇಂದ್ರ ಸರ್ಕಾರದ ಕ್ರಮವು ಉತ್ತಮ ಉದಾಹರಣೆಯಾಗಿದೆ.

ಈ ವಾರ ಕೇಂದ್ರ ಸರ್ಕಾರ, ಲಾರ್ಸನ್ ಅಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಕಂಪೆನಿಯಲ್ಲಿ ಹೊಂದಿರುವ 2.37 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹1,742 ರಲ್ಲಿ ಮಾರಾಟ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಲ್‌ಐಸಿ ಈ ಷೇರುಗಳನ್ನು ಖರೀದಿಸಿವೆ.

ಜುಲೈ 13ರಂದು ಎಲ್‌ಆ್ಯಂಡ್‌ಟಿ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ ನಿಗದಿತ ದಿನವಾಗಿದ್ದರೂ ಸಹ ಈ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಿರುವುದು ಸಂದರ್ಭದ ಅವಕಾಶವನ್ನು ಪಡೆದುಕೊಳ್ಳುವ ಉತ್ತಮ ಕಾರ್ಯವಾಗಿದೆ.

ಗುರುವಾರ ದಿನದ ಮಧ್ಯಂತರದವರೆಗೂ ಏರಿಕೆಯಲ್ಲಿದ್ದು ಆ ಸಂದರ್ಭದಲ್ಲಿ ಸಂವೇದಿ ಸೂಚ್ಯಂಕ 31,523 ರವರೆಗೂ ಜಿಗಿದು ಸಾರ್ವಕಾಲಿಕ ದಾಖಲೆ ಕಂಡಿತಾದರೂ ಸ್ಥಿರತೆ ಕಾಣದೆ ಹೆಚ್ಚಿನ ಮಾರಾಟದ ಒತ್ತಡಕ್ಕೊಳಗಾಗಿ 31,291 ಅಂಶಗಳಿಗೆ ಕುಸಿಯಿತು. ಈ ಕುಸಿತವು ಎಷ್ಟು ಆಘಾತಕಾರಿಯಾಗಿತ್ತೆಂದರೆ ಪ್ರಮುಖ ಕಂಪೆನಿಗಳಾದ ಕೋಲ್ ಇಂಡಿಯಾ, ಒಎನ್‌ಜಿಸಿ, ಲುಪಿನ್‌ಗಳು ವಾರ್ಷಿಕ ಕನಿಷ್ಠಕ್ಕೆ ತಲುಪಿದ್ದವು.

ಅಂದು ಸರ್ಕಾರಿ ವಲಯದ ಕಂಪೆನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಚೆನ್ನೈ ಪೆಟ್ರೋಲಿಯಂ, ಗೇಲ್ ಇಂಡಿಯಾ,  ಆರ್‌ಇಸಿ, ಆಯಿಲ್ ಇಂಡಿಯಾ ಕಂಪೆನಿಗಳು ಹೆಚ್ಚಿನ ಮಾರಾಟದ ಒತ್ತಡಕ್ಕೊಳಗಾದವು. 

ಎವರೆಸ್ಟ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಗಳವಾರ ₹ 421.60 ರ ವಾರ್ಷಿಕ ಗರಿಷ್ಠ ತಲುಪಿ   ನಂತರ ಕುಸಿಯಿತು.

ಕಳೆದ ಒಂದು ತಿಂಗಳಲ್ಲಿ ಷೇರಿನ ಬೆಲೆಯೂ ₹263 ರ ಸಮೀಪದಿಂದ ₹422 ರವರೆಗೂ ಜಿಗಿತ ಕಂಡಿರುವುದು ಪೇಟೆಯು ಸಾಗುತ್ತಿರುವ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ. 2015ರ ಜುಲೈನಲ್ಲಿ ಷೇರಿನ ಬೆಲೆಯು ₹400 ನ್ನು ಕಂಡಿದ್ದು ಮತ್ತೆ ಆ ಬೆಲೆ ತಲುಪಲು ಸುಮಾರು ಎರಡುವರ್ಷ ಸಮಯ ತೆಗೆದು ಕೊಂಡಿದೆ. ಪ್ರತಿ ಷೇರಿಗೆ ₹1ರಂತೆ ಲಾಭಾಂಶ ವಿತರಿಸಲು ಜುಲೈ 17ನಿಗದಿತ ದಿನವಾಗಿರುವ ಕಾರಣ ಷೇರಿನ ಬೆಲೆ ಚುರುಕಾಗಿರಬಹುದಾದರೂ ಲಾಭದ ನಗದೀಕರಣಕ್ಕೆ ಹೆಚ್ಚು ಆದ್ಯತೆ ನೀಡುವುದು ಸೂಕ್ತ.

ಇದುವರೆಗೂ ವರ್ಣರಂಜಿತವಾಗಿ ವಿವರಿಸಲ್ಪಟ್ಟು ಏಕಮುಖವಾಗಿ ಏರಿಕೆ ಕಂಡಿದ್ದ ಗೃಹ ನಿರ್ಮಾಣ ಕಂಪೆನಿಗಳು ಶುಕ್ರವಾರ  ದಿಢೀರನೆ ದಿಸೆ ಬದಲಿಸಿವೆ. ₹2 ರ ಮುಖಬೆಲೆಯ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ₹10 ರ ಮುಖಬೆಲೆಯ ಕ್ಯಾನ್ ಫಿನ್ ಹೋಮ್ಸ್,  ರೆಪಕೋ ಹೋಮ್ ಫೈನಾನ್ಸ್, ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಗಳು ಸಹ ಭಾರಿ ಕುಸಿತಕ್ಕೊಳಗಾದವು.

23 ರಂದು ಕ್ಯಾನ್ ಫಿನ್ ಹೋಮ್ಸ್ ಷೇರಿನ ಮುಖಬೆಲೆಯನ್ನು ಸೀಳುವ ಕಾರ್ಯಸೂಚಿ ಹೊಂದಿದ್ದರೂ ಷೇರಿನ ಬೆಲೆಯು ಮಾರಾಟದ ಒತ್ತಡಕ್ಕೊಳಗಾಯಿತು. ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ ಇತ್ತೀಚಿನ ದಿನಗಳಲ್ಲಿ ಈ ವಲಯದ ಷೇರುಗಳ ಬೆಲೆಗಳು ಭಾರಿ ಏರಿಕೆಗೊಳಗಾಗಿದ್ದು ಲಾಭದ ನಗದೀಕರಣದಿಂದಾಗಿ ಈ ಕುಸಿತ ಕಂಡಿರುವುದು.

ಕ್ಯಾನ್ ಫಿನ್ ಹೋಮ್ಸ್ ಕಂಪೆನಿಯು ಷೇರಿನ ಬೆಲೆಯು ₹2,093  ರವರೆಗೂ ಇಳಿಕೆ ಕಂಡಿದ್ದು, ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ನಿರ್ಧರಿಸಿದ ಪ್ರಕಟಣೆ ಹೊರಬರುತ್ತಿದ್ದಂತೆಯೇ ಷೇರಿನ ಬೆಲೆಯು ₹3,210ರ ಸಮೀಪಕ್ಕೆ ಜಿಗಿದು ನಂತರ ₹3182 ರ ಸಮೀಪಕ್ಕೆ ಹಿಂದಿರುಗಿತು.

ಮುಂದಿನ ದಿನಗಳಲ್ಲಿ ಜೆಬಿ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯು 12.50 ಲಕ್ಷ ಷೇರುಗಳನ್ನು ಪ್ರತಿ ಷೇರಿಗೆ ₹400ರಂತೆ  ಹಾಗೂ ಎಂಜಿನಿಯರ್ಸ್‌ ಇಂಡಿಯಾ ಕಂಪೆನಿ ಪ್ರತಿ ಷೇರಿಗೆ ₹157ರಂತೆ ಷೇರು ಮರಳಿ ಪಡೆಯುವ ಯೋಜನೆ ಹೊಂದಿವೆ. ಎಂಜಿನಿಯರ್ಸ್‌ ಇಂಡಿಯಾ ಕಂಪೆನಿ ಷೇರು ಮರಳಿ ಪಡೆಯುವ ಬೆಲೆಯು ಆಕರ್ಷಕವಲ್ಲದ ಕಾರಣ ಪೇಟೆಯ ದರವು ಹೆಚ್ಚು ವ್ಯತ್ಯಾಸ ತೋರುತ್ತಿಲ್ಲ. ಆದರೆ  ಜೆಬಿ ಕೆಮಿಕಲ್ಸ್ ಅಂಡ್ ಫಾರ್ಮಾಸುಟಿಕಲ್ಸ್ ಕಂಪೆನಿ ಷೇರು ₹335ರ ಸಮೀಪವಿದ್ದು ಮರಳಿ ಪಡೆಯುವ ದರ ₹ 400 ಆಕರ್ಷಕವಾಗಿದೆ.

ಪೇಟೆಯು ಎಷ್ಟು ಚಟುವಟಿಕೆಯಿಂದ ಕೂಡಿದೆ ಎಂದರೆ  ಬುಧವಾರ ₹217ರ ಸಮೀಪವಿದ್ದ ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಕಂಪೆನಿಯ ಷೇರು ಗುರುವಾರ ₹173ರ ಸಮೀಪಕ್ಕೆ ಕುಸಿದು ಅಂದೇ ₹191 ರ ಸಮೀಪಕ್ಕೆ ಜಿಗಿತ ಕಂಡಿತು. ₹204 ರ ಸಮೀಪ ವಾರಾಂತ್ಯ ಕಂಡಿತು.  ಕೇವಲ ಎರಡೇ ದಿನಗಳಲ್ಲಿ ₹217 ರ ಸಮೀಪದಿಂದ ₹173 ಕ್ಕೆ ಕುಸಿದು ನಂತರ ₹204 ಕ್ಕೆ ಚೇತರಿಕೆ ಕಂಡಿರುವುದು ಪೇಟೆ ಕಲ್ಪಿಸಿಕೊಡುವ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 81 ಅಂಶಗಳ  ಏರಿಕೆ ಕಂಡಿದೆ. ಆದರೆ, ಮಧ್ಯಮ ಶ್ರೇಣಿ ಸೂಚ್ಯಂಕ 223 ಅಂಶಗಳ ಹಾಗೂ   ಕೆಳಮಧ್ಯಮ ಶ್ರೇಣಿ ಸೂಚ್ಯಂಕ 285 ಅಂಶಗಳ ಇಳಿಕೆ ಕಂಡು ವಿಭಿನ್ನತೆ ಪ್ರದರ್ಶಿಸಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು 253 ಕೋಟಿ ರೂಪಾಯಿಗಳ ಷೇರುಗಳನ್ನು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,375 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯ ₹127 ಲಕ್ಷ ಕೋಟಿಯಿಂದ ₹ 126 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಹೊಸ ಷೇರು: ಇತ್ತೀಚಿಗೆ ಪ್ರತಿ ಷೇರಿಗೆ ₹257 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಕಂಪೆನಿಯ ಹೊಸ ಷೇರುಗಳು 27 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು:

* ಪೆಟ್ರೋನೆಟ್ ಎಲ್ಎನ್‌ಜಿ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಜುಲೈ 4 ನಿಗದಿತ ದಿನ.

* ಜಯಂತ್ ಆಗ್ರೊ ಆರ್ಗಾನಿಕ್ಸ್ ಲಿ. ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಅಂಚೆ ಮತದಾನದ ಮೂಲಕ ಷೇರುದಾರರು ಸಮ್ಮತಿಸಲಿದ್ದಾರೆ.

ಮುಖಬೆಲೆ ಸೀಳಿಕೆ: ಕ್ಯಾನ್ ಫಿನ್ ಹೋಮ್ಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ.

ಕಂಪೆನಿಗಳ ವಿಲೀನ: ಬಿರ್ಲಾ ಸಮೂಹ ಕಂಪೆನಿ ಆದಿತ್ಯ ಬಿರ್ಲಾ ನುವೊ ಲಿಮಿಟೆಡ್ ಕಂಪೆನಿಯನ್ನು ಗ್ರಾಸಿಮ್ ಲಿಮಿಟೆಡ್‌ನಲ್ಲಿ ವಿಲೀನಗೊಳ್ಳಲು ಜುಲೈ 6 ನಿಗದಿತ ದಿನ. ಪ್ರತಿ ಹತ್ತು ಆದಿತ್ಯ ಬಿರ್ಲಾ ನುವೊ ಲಿಮಿಟೆಡ್ ಷೇರುಗಳಿಗೆ 15 ಗ್ರಾಸಿಮ್ ಷೇರು ನೀಡುವ ಮೂಲಕ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಷೇರುಪೇಟೆಯ ಸೂಚ್ಯಂಕಗಳು ಉತ್ತುಂಗದಲ್ಲಿವೆ. ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯು ಕ್ಷೀಣಗೊಂಡಿದ್ದರೂ ಸಹ ಸೂಚ್ಯಂಕಗಳು ನಾಗಾಲೋಟದಲ್ಲಿ ಏರುತ್ತಿರುವುದು ಸೋಜಿಗದ ಅಂಶವಾಗಿದೆ. ಷೇರಿನ ಬೆಲೆಗಳು ಏರಿಕೆ ಕಾಣಲು ಸ್ಥಳೀಯ ಹೂಡಿಕೆ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಈ ಸಂಸ್ಥೆಗಳ ಮೂಲಕ ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಪ್ರಭಾವವು ಪೇಟೆಯನ್ನು ಉತ್ಸಾಹಭರಿತವನ್ನಾಗಿ ಮಾಡಿವೆ. 

ಈ ವಾತಾವರಣದಲ್ಲಿ ಕಂಪೆನಿಗಳ ಅರ್ಹತೆ ಮತ್ತು ಯೋಗ್ಯತೆ ಆಧಾರಿತ ಬೆಲೆಗಳ ಮೇಲೆ ಹೂಡಿಕೆಗೆ ನಿರ್ಧರಿಸುವುದು ಅಗತ್ಯ.  ಮತ್ತೊಂದು ಪ್ರಮುಖ ಅಂಶವೆಂದರೆ ಕೇಂದ್ರ ಸರ್ಕಾರವು ತನ್ನ, ಏಪ್ರಿಲ್ 21, 2017ರ ಗೆಜೆಟ್ ನೋಟಿಫಿಕೇಷನ್‌ನಲ್ಲಿ ಇಂಡಿಯನ್ ಟ್ರಸ್ಟ್ ಆ್ಯಕ್ಟ್ 1882, ಸೆಕ್ಷನ್ 20ರ ಪ್ರಕಾರ ಷೇರುಪೇಟೆಗಳಲ್ಲಿ ಟ್ರಸ್ಟ್ ನಿಧಿಯನ್ನು ಹೂಡಿಕೆ ಮಾಡಲು ಅನುಮತಿ ನೀಡಿದೆ. ಆದರೆ, ಆ ಹೂಡಿಕೆಯು ಲಿಸ್ಟಿಂಗ್ ಆಗಿರುವ ಮತ್ತು ಕಂಪೆನಿಯ ಬಂಡವಾಳೀಕರಣ ಮೌಲ್ಯವು  ₹5,000 ಕೋಟಿ ರೂಪಾಯಿಗಳಿಗೂ ಹೆಚ್ಚಿದ್ದಲ್ಲಿ ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪೇಟೆಯ ನಿಯಂತ್ರಕ ‘ಸೆಬಿ’ ನಿಯಂತ್ರಣಕ್ಕೊಳಪಟ್ಟಿರುವ ಮ್ಯೂಚುವಲ್ ಫಂಡ್ ಯುನಿಟ್ ಗಳಲ್ಲಿಯೂ ಹೂಡಿಕೆ ಮಾಡಬಹುದಾಗಿದೆ. ಆ ಯೋಜನೆಯಲ್ಲಿ ಶೇ65 ಕ್ಕೂ ಹೆಚ್ಚಿನ ಷೇರುಗಳು ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟಿಂಗ್ ಆಗಿರುವುದು ಕಡ್ಡಾಯವಾಗಿದೆ. ಸಂವೇದಿ ಸೂಚ್ಯಂಕ ಅಥವಾ ನಿಫ್ಟಿ ಆಧಾರಿತ ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್‌ಗಳಲ್ಲಿಯೂ ಟ್ರಸ್ಟ್ ಹಣವನ್ನು ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಎಲ್ಲಾ ಅಂಶಗಳು ಪೇಟೆಯಲ್ಲಿ ಉತ್ತಮ ಕಂಪೆನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿವೆ.  ಅಗ್ರಮಾನ್ಯ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆಯು ಅಲ್ಪಮಟ್ಟಿನ ಸುರಕ್ಷತೆಯೊಂದಿಗೆ, ಕಾರ್ಪೊರೇಟ್ ಫಲಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಷೇರಿನ ಬೆಲೆಗಳು ಏರಿಕೆ ಕಂಡಾಗ ಲಾಭಗಳಿಕೆಯು ಆಗುವುದು.

ಅವಶ್ಯಕತೆಯಿದ್ದಾಗ, ಅವಕಾಶ ದೊರೆತಾಗ ಸುಲಭವಾಗಿ ಆ ಷೇರುಗಳಿಂದ ನಿರ್ಗಮಿಸಿ, ತ್ವರಿತವಾಗಿ ನಗದೀಕರಿಸಿಕೊಂಡು ಹಣ ಪಡೆಯಬಹುದು. ಈ ಸವಲತ್ತು 'ರೆಡಿ ಲಿಕ್ವಿಡಿಟಿ' ಯು ಬೇರೆ ಯಾವ ಹೂಡಿಕೆಗಳಲ್ಲೂ ದೊರೆಯದು.  ಈ ಕಾರಣದಿಂದಲೂ ಷೇರುಪೇಟೆಗಳತ್ತ ಹಣದ ಹೊಳೆ ಹರಿದುಬರುತ್ತಿದೆ. ಬೇಡಿಕೆ ಹೆಚ್ಚಾಗಿ ಷೇರಿನ ದರಗಳು ಗಗನಕ್ಕೇರಿವೆ.

ಸದ್ಯ ಸರ್ಕಾರಿ ವಲಯದ ಕೋಲ್ ಇಂಡಿಯಾ, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಗೇಲ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಆಯಿಲ್ ಇಂಡಿಯಾ, ಒಎನ್‌ಜಿಸಿ ಕಂಪೆನಿಗಳು ಕುಸಿತದಲ್ಲಿದ್ದು, ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry