ಪ್ರಧಾನಿಗೆ ಅಧ್ಯಯನ ವರದಿ ತಲುಪಿಸಿ

7

ಪ್ರಧಾನಿಗೆ ಅಧ್ಯಯನ ವರದಿ ತಲುಪಿಸಿ

Published:
Updated:

ಯಲ್ಲಾಪುರ: ‘ಕೈಗಾ ಅಣು ಸ್ಥಾವರದಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಿಲ್ಲ ಎಂದು ಪ್ರತಿಪಾದಿಸುವ ಅಲ್ಲಿನ ಅಧಿಕಾರಿಗಳು ನಿವೃತ್ತಿಯ ನಂತರ ಅಣು ಸ್ಥಾವರದ ಸುತ್ತಲಿನ ಪ್ರದೇಶದಲ್ಲಿಯೇ ಜಮೀನು ಖರೀದಿಸಿ ಉಳಿದುಕೊಳ್ಳಲಿ’ ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸವಾಲೆಸೆದರು.

ನಗರದಲ್ಲಿ ಭಾನುವಾರ ನಡೆದ ಪರಿಸರ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕೈಗಾದಲ್ಲಿ 5 ಮತ್ತು 6ನೇ ಘಟಕ ವಿಸ್ತರಣೆಗೆ ವಿರೋಧ ಪ್ರಕಟಗೊಂಡ ಮೇಲೆ ಅಲ್ಲಿನ ಅಧಿಕಾರಿಗಳು ಮಠಕ್ಕೆ ಬಂದು ಕೈಗಾ ಸುತ್ತಮುತ್ತ ನಡೆಸಿರುವ ಆರೋಗ್ಯ ಸಮೀಕ್ಷೆಯ ವರದಿ ನೀಡಿದರು. 2015ರ ಜೂನ್‌ನಲ್ಲಿ ಸಲ್ಲಿಕೆಯಾಗಿರುವ ಈ ವರದಿ ಏಕಪಕ್ಷೀಯವಾಗಿದೆ’ ಎಂದರು.

ಈ ವರದಿಯನ್ವಯ ಎಲ್ಲ ಕಡೆಗಳಲ್ಲಿ ಒಂದು ಲಕ್ಷಕ್ಕೆ 300ರ ಅನುಪಾತದಲ್ಲಿ ಕ್ಯಾನ್ಸರ್ ರೋಗಿಗಳು ಇದ್ದರೆ ಕೈಗಾ ಸುತ್ತ ಈ ಅನುಪಾತ ಲಕ್ಷಕ್ಕೆ 330ರಷ್ಟಿದೆ. ಈ ಭಾಗದಲ್ಲಿ ಶೇ 40ರಷ್ಟು ಜನರು ತಿನ್ನುವವರಿದ್ದಾರೆ. ಅದಕ್ಕಾಗಿ ಕ್ಯಾನ್ಸರ್ ಪ್ರಮಾಣ ಹೆಚ್ಚಿದೆ ಎಂಬುದು ಕೈಗಾ ಪ್ರಮುಖರು ನೀಡುವ ವಿವರಣೆ. ಹಾಗಿದ್ದರೆ ಜಿಲ್ಲೆಯ ಉಳಿದ ಕಡೆಗಳಲ್ಲೂ ತಂಬಾಕು ತಿನ್ನುವವರು ಇದ್ದಾರೆ. ಅಲ್ಲಿ ಯಾಕೆ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿಲ್ಲ’ ಎಂದು ಅವರು ಪ್ರಶ್ನಿಸಿದರು.

ಮೋದಿಗೆ ವರದಿ ತಲುಪಿಸಿ: ‘ಕೈಗಾ ಅಣು ವಿದ್ಯುತ್ ಘಟಕದಿಂದ ಉಂಟಾಗುತ್ತಿರುವ ದುಷ್ಪರಿಣಾಮದ ಬಗೆಗೆ ವಾಸ್ತವಾ­ಂಶದ ಮೇಲೆ ತಜ್ಞರು ಸಂಗ್ರಹಿಸಿದ 25 ವರ್ಷಗಳ ಅಧ್ಯಯನ ವರದಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಲುಪಿಸಿದರೆ ಅವರು ಅದನ್ನು ಒಪ್ಪಬಹುದು’ ಎಂದು ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಸಲಹೆ ಮಾಡಿದರು.

‘ನೀರನ್ನು ಹಿಡಿದಿಟ್ಟುಕೊಳ್ಳುವ ಮಲೆನಾಡಿ­ನಲ್ಲಿಯೇ ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗಿದೆ. ಮೂನೌಕಾನೆಲೆಯ ಸಮೀಪದಲ್ಲಿಯೇ ಅಣು ಸ್ಥಾವರ ನಿರ್ಮಿಸಿರುವುದು ಎಷ್ಟು ಸರಿ ? ಗ್ರಾಮ ಪಂಚಾಯ್ತಿಗಳು ಅಣು ಸ್ಥಾವರದ ವಿರುದ್ಧ ನಿರ್ಣಯ ಸ್ವೀಕರಿಸಿವೆ. ಅವರಿಗಿರುವ ಜ್ಞಾನ ಕೈಗಾದ ಅಧಿಕಾರಿಗಳಿಗೆ ಇಲ್ಲದಾಯಿತೇ ? ಜಿಲ್ಲೆಯ ಜನಪ್ರತಿನಿಧಿಗಳು ಐದು ವರ್ಷದ ತಮ್ಮ ಅಧಿಕಾರಾವಧಿಯ ಬಗ್ಗೆ ಯೋಚಿಸದೇ ದೀರ್ಘಕಾಲೀನ ಪರಿಣಾಮದ ಬಗ್ಗೆ ಯೋಚಿಸಬೇಕು’ ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರೊ. ಬಿ.ಎಂ. ಕುಮಾರಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಇದ್ದರು. ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಸ್ವಾಗತಿಸಿದರು. ಕೇಶವ ಕೊರ್ಸೆ ಅವರು ನಾಗೇಶ ಹೆಗಡೆ ಕಳುಹಿಸಿದ್ದ ಪತ್ರ ಓದಿದರು. ರವಿ ಭಟ್ ವಡ್ರಮನೆ ನಿರೂಪಿಸಿದರು. ಬಿ.ಜಿ. ಹೆಗಡೆ ಗೇರಾಳ ವಂದಿಸಿದರು. ಸಮಾವೇಶದಲ್ಲಿ ಸೇರಿದ್ದ ಜನರ ಸಹಿ ಸಂಗ್ರಹಿಸಿ ಪ್ರಧಾನಮಂತ್ರಿಗೆ ಕಳುಹಿಸಲು ನಿರ್ಧರಿಸಲಾಯಿತು.

ಸಂವಾದ ಕಾರ್ಯಕ್ರಮ

ಉತ್ತರ ಕನ್ನಡದಲ್ಲಿರುವ ಜಲ ವಿದ್ಯುತ್ ಯೋಜನೆಗಳು, ಕೈಗಾದಲ್ಲಿ ಈಗಾಗಲೇ ಇರುವ ನಾಲ್ಕು ರಿಯಾಕ್ಟರ್‌ಗಳಿಂದ ಆಗಿರುವ ಪರಿಸರ ಪರಿಣಾಮವನ್ನು ಬಿಂಬಿಸಿ 5, 6ನೇ ಘಟಕ ವಿಸ್ತರಣೆ ಬೇಡವೆಂದು ಪ್ರತಿಪಾದಿಸಬಹುದು.

ವಿಷ್ಣು ಕಾಮತ್, ಅವಿನಾಶ್ ಸಂಸ್ಥೆ ಮುಖ್ಯಸ್ಥ ಕೈಗಾ ವಿಸ್ತರಣೆಗೆ ತಜ್ಞರೊಂದಿಗೆ ಸಮಾಲೋಚಿಸಿ ಸಾಧಕ ಬಾಧಕ ಚರ್ಚಿಸಬೇಕು. ಅಧಿಕಾರಿಗಳು, ವಿಜ್ಞಾನಿಗಳ ನಡುವೆ ಸಮನ್ವಯ ಇರಬೇಕು. ಕೈಗಾ ವಿಷಯದಲ್ಲಿ ಜಿಲ್ಲೆಯ ಜನರ ಜೊತೆಗೆ ಸದಾ ಇರುತ್ತೇನೆ.

ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅಣು ವಿದ್ಯುತ್ ಉತ್ಪಾದನೆಯ ಬಗ್ಗೆ ವಿಜ್ಞಾನಿಗಳ ನಡುವೆಯೇ ಗೊಂದಲವಿದೆ. ಈ ವಿಷಯ ಜನರಿಗೆ ಸ್ಪಷ್ಟವಾಗಬೇಕು. ಶ್ರೀಗಳ ಮಾರ್ಗದರ್ಶನದಂತೆ ಮುಂದಿನ ಹೆಜ್ಜೆ ಇಡಲಾಗುವುದು.

ಶಿವರಾಮ ಹೆಬ್ಬಾರ, ಶಾಸಕ ಜಿಲ್ಲೆಯ ಜನರನ್ನು ಕತ್ತಲೆಯಲ್ಲಿಟ್ಟು ಮಾಡಹೊರಟಿರುವ ಕೈಗಾ ಘಟಕ ವಿಸ್ತರಣೆ ಬೇಡವೇ ಬೇಡ. ಅನಂತ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ

* * 

ಸಮಾವೇಶದ ನಿರ್ಣಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಆಯಾ ಹಂತದ ಜನಪ್ರತಿನಿಧಿಗಳು ನಿರ್ವಹಿಸಬೇಕು

ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸ್ವರ್ಣವಲ್ಲಿ ಮಠಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry