ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿ ಬಿಂಬಿಸುವ ಜೈಗಾಂವಿನ ಜಯಗಾಥೆ

Last Updated 27 ಜೂನ್ 2017, 21:03 IST
ಅಕ್ಷರ ಗಾತ್ರ

ನಲುವತ್ತು ಅಡಿ ಆಳದ ಈ ಬಾವಿ ಮುನ್ನೂರು ಕುಟುಂಬಗಳಿಗೆ ನೀರೊದಗಿಸಬೇಕಿತ್ತು. ಆದರೆ ಪಾಪ, ಬೇಸಿಗೆ ಕಾಲಿಟ್ಟಿತೆಂದರೆ ಸಾಕು, ಸೊರಗಿ ಸೋತುಬಿಡುತ್ತಿತ್ತು.

ಬಹುದೂರದಿಂದ ಟ್ಯಾಂಕರಿನಲ್ಲಿ ನೀರು ತರುವುದು, ಈ ಬಾವಿಗೆ ತುಂಬುವುದು, ಮತ್ತೆ ಪಂಪ್ ಮಾಡಿ ನೀರಿನ ಪಡಿತರ. ಇಂಥ ದುರ್ಗತಿ ಬಂದು  ಹದಿನೈದು ವರ್ಷವಂತೂ ಆಗಿತ್ತು. ಇದು ಮಹಾರಾಷ್ಟ್ರದ ಸತಾರಾದಿಂದ ಮೂವತ್ತೈದು ಕಿಲೋಮೀಟರ್ ದೂರದ ಜೈಗಾಂವ್ ಗ್ರಾಮದ ಕತೆ.
ಜೈಗಾಂವ್ ಮಾತ್ರ ಏಕೆ ಇದು ಈ ಜಿಲ್ಲೆಯ ಗ್ರಾಮಗ್ರಾಮಗಳ ‘ದುಷ್ಕಾಲದ’ ಕತೆ. ಇಲ್ಲಿ ಇದು ಮಾಮೂಲಿ. ಆದರೆ ಜೈಗಾಂವಿನ ವಿಶೇಷ ಏನು ಗೊತ್ತೇ? ಈ ಗ್ರಾಮ ಜನಶಕ್ತಿ ಬಳಸಿ ಈ ಕಹಿ ಅಧ್ಯಾಯಕ್ಕೆ ಕೊನೆ ಹಾಡಿಬಿಟ್ಟಿದೆ, ಎಂದೆಂದಿಗೂ!

400 ಮಿಲಿಮೀಟರ್ ವಾರ್ಷಿಕ ಮಳೆಯ ಗ್ರಾಮವಿದು. ಪಾನಿ ಫೌಂಡೇಶನಿನ 2016ರ ವಾಟರ್ ಕಪ್ – 1 ಸ್ಪರ್ಧೆಯಲ್ಲಿ ಇದಕ್ಕೆ ದ್ವಿತೀಯ ಪ್ರಶಸ್ತಿ. ಜೈಗಾಂವ್ ₹30 ಪ್ರಶಸ್ತಿಯನ್ನು ಬೀಡ್ ಜಿಲ್ಲೆಯ ಖಪರ್ತೋನ್ ಗ್ರಾಮದೊಂದಿಗೆ ಹಂಚಿಕೊಂಡಿತ್ತು.ಊರವರು ‘ಗಾಂವ್ ಕೀ ಕುಂವಾ’ ಎಂದೇ ಕರೆಯುವ ಈ ಬಾವಿ ಈ ವರ್ಷ ಮೇಯಲ್ಲೂ ಒಲ್ಲೆ ಎಂದಿಲ್ಲ. ಅಷ್ಟೇ ಅಲ್ಲ ವಿಶೇಷ. ಹನ್ನೆರಡು ತಿಂಗಳ ಹಿಂದೆ ಮೂರು-ನಾಕು ಅಡಿ ನೀರಿದ್ದ ಬಾವಿಯಲ್ಲಿ ಈಗ ಓವರ್ ಫ್ಲೋ ಆಗುತ್ತಿದೆ!

‘ಬೆಳಗ್ಗೆ ಆರು ಗಂಟೆಗೆ ಬಾವಿಯಿಂದ ಓವರ್ ಹೆಡ್ ಟಾಂಕಿಗೆ ಪಂಪ್ ಮಾಡಲು ಸುರುಮಾಡುತ್ತೇವೆ. ಎರಡು ಗಂಟೆಯಲ್ಲಿ ಟಾಂಕ್ ತುಂಬುತ್ತದೆ. ಮಧ್ಯಾಹ್ನದ ಹೊತ್ತಿಗೆ ಬಾವಿಯಿಂದ ನೀರು ಹೊರಹರಿಯತೊಡಗುತ್ತದೆ’ ಎಂದು ಗ್ರಾಮ ಸರಪಂಚರಾದ ನಾಥ್ ಭಾವೂ ಕದಂ ಹೆಮ್ಮೆಯಿಂದ ಹೇಳುತ್ತಾರೆ, ‘ಶುರುವಿನಲ್ಲಿ ಇದ್ದದ್ದರಿಂದ ಓವರ್ ಫ್ಲೋ ನೀರಿನ ಪ್ರಮಾಣ ಕುಗ್ಗಿದೆ. ಆದರೂ ಇನ್ನೂ ನಿಂತಿಲ್ಲ’ ಎಂದು ಹೇಳುತ್ತಾರೆ ಅವರು.

ಸಾವಿರದ ಮುನ್ನೂರು ಜನಸಂಖ್ಯೆಯ ಈ ಗ್ರಾಮಕ್ಕೆ ತಾಲೂಕು ಕೇಂದ್ರ ಸತಾರಾದಿಂದ ನೇರ ಬಸ್ಸಿಲ್ಲ. ಕೋರೆಗಾಂವಿಗೆ (22 ಕಿ.ಮೀ) ಬಂದು ಅಲ್ಲಿಂದ ಬೇರೆ ಬಸ್ಸು ಹಿಡಿದು 12 ಕಿ.ಮೀ ಬರಬೇಕು. ಕಳೆದ ವರ್ಷ, ಅಂದರೆ ವಾಟರ್ ಕಪ್ ಒಂದರ ಸ್ಪರ್ಧಾಕಾಲದಲ್ಲಿ ಇವರು ಆದ್ಯತೆ ಕೊಟ್ಟದ್ದು ಉದ್ದನೆಯ ಸಮತಳ ಕಣಿ, ಆಳ ಸಮತಳ ಕಣಿ, ಹೊಲಗಳಲ್ಲಿ ಹಾಕುವ ಕಂಪಾರ್ಟ್ ಮೆಂಟ್  ಒಡ್ಡುಗಳ ರಚನೆಗೆ. ಮತ್ತೆ ಕೆರೆಗಳ ಹೂಳೆತ್ತುವುದಕ್ಕೆ. ‘ನಮ್ಮೂರ ಸಮಗ್ರ ಜಲಾನಯನ ಯೋಜನೆಯ ಸುಮಾರು ನಲುವತ್ತು ಶೇಕಡಾ ಕೆಲಸ ಮಾತ್ರ ಆಗಿದೆ ಎನ್ನಬಹುದು’ ಎಂದು ಅಭಿಪ್ರಾಯ ಪಡುತ್ತಾರೆ ನಾಥ್ ಕದಂ.
ಇವರೂ ಸೇರಿದಂತೆ ಗ್ರಾಮದ ನಾಲ್ವರು ಈ ವರ್ಷದ ತರಬೇತುದಾರರಾಗಿ ಆಯ್ಕೆಯಾಗಿ ಬೇರೆ  ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಒಬ್ಬರು ಶಂಕರ್ ಶಿಂಧೆ. ಸ್ಪರ್ಧೆ ಮುಗಿಯಿತೆಂದು ಇವರು ನೆಲಜಲದ ಕೆಲಸ ನಿಲ್ಲಿಸಿಲ್ಲ. ಈ ವರ್ಷವೂ ಮುಂದುವರಿಸುತ್ತಿದ್ದಾರೆ.

ಗ್ರಾಮದ ಕುಟುಂಬಸಂಖ್ಯೆ 277. ವಿಸ್ಟೀರ್ಣ 937 ಹೆಕ್ಟೇರ್. ಈ ವರ್ಷ ಹೊಸದಾಗಿ ಇನ್ನೂರು ಹೆಕ್ಟೇರ್ ಗಳಲ್ಲಿ ಆಳ ಸಮತಳ ಕಣಿ ನಿರ್ಮಿಸಿದ್ದಾರೆ.  ಯಂತ್ರಗಳ ಮೂಲಕ ಈ ಕೆಲಸ ಮಾಡಿಸಲು ಹತ್ತಿರಹತ್ತಿರ ₹ 3ಲಕ್ಷ  ಬೇಕಾಯಿತು. ಇದರಲ್ಲಿ ಹೆಚ್ಚಿನ ಭಾಗವನ್ನೂ ಊರವರೇ ಭರಿಸಿದ್ದಾರೆ. ಊರಿನಲ್ಲಿ ಎರಡು ಸಾವಿರ ಗಿಡ ನೆಟ್ಟು ಪೋಷಿಸುತ್ತಿದ್ದಾರೆ.

ಊರಿನವರಿಗೆ ಹೊಸ ಹುಮ್ಮಸ್ಸು ಬರಲು ಕುಡಿನೀರ ಸ್ವಾತಂತ್ರ್ಯ ಒಂದೇ ಕಾರಣವಲ್ಲ. ಈ ಹಿಂದೆ ಕರಟಿ ಹೋಗುತ್ತಿದ್ದ ಎರಡನೆ ಬೆಳೆ ‘ರಬ್ಬಿ’ ಈ ಸಲ ಹಾಗಾಗಲಿಲ್ಲ. ಎಲ್ಲರಿಗೂ ತೃಪ್ತಿಕರ ಬೆಳೆ ಸಿಕ್ಕಿತು. ಚಿಕ್ಕ ಮಳೆಗೂ ನೀರು ಹೊರಗೋಡುತ್ತಿದ್ದ ಗ್ರಾಮ ಮಳೆಗಾಲದಲ್ಲಿ ಈ ಬಾರಿ ಬಿದ್ದ ಮಳೆಯೆಲ್ಲವನ್ನೂ ಇಂಗಿಸಿಕೊಂಡಿತು. ‘ಎರಡನೆ ಬೆಳೆ ಮಾತ್ರವಲ್ಲ ದೀರ್ಘಕಾಲದ ಬೆಳೆಯಾದ ಶುಂಠಿ, ಕಬ್ಬೂ ಈಗ ಸೊಗಸಾಗಿ ಬೆಳೆಯುತ್ತಿದೆ. ನಮ್ಮ ಒಟ್ಟು ಕೃಷಿಕ್ಷೇತ್ರ ಆರುನೂರು ಹೆಕ್ಟೇರ್. ಇನ್ನೂರು ಹೆಕ್ಟೇರ್‌ನಲ್ಲಿ ಬೇಸಿಗೆ ಕೊನೆಯಲ್ಲೂ ಬೆಳೆ ಹಸುರಾಗಿಯೇ ಇದೆ ಎಂದರೆ ನಮ್ಮಲ್ಲಿನ ಬದಲಾವಣೆಯ ಪ್ರಮಾಣ ಊಹಿಸಿಕೊಳ್ಳಿ’ ಎನ್ನುತ್ತಾರೆ ಶಂಕರ್ ಶಿಂಧೆ.

ಇವೆಲ್ಲ ‘ಕಾಣುವ’ ಅಭ್ಯುದಯವಾದರೆ ಬರಿಗಣ್ಣಿಗೆ ಗೋಚರಿಸದ, ಸ್ವಾತಂತ್ರ್ಯಾನಂತರದ ಬಹುದೊಡ್ಡ ಸಾಧನೆಯೂ ಇಲ್ಲಿ ಆಗಿದೆ. ‘ಇಡೀ ಊರು ಎರಡು ರಾಜಕೀಯ ಪಕ್ಷಗಳ ಬೆನ್ನ ಹಿಂದೆ ಬಿದ್ದು ಎರಡು ಹೋಳಾಗಿತ್ತು. ಅಷ್ಟೇ ಏಕೆ, ನಾವು, ತರಬೇತಿಗಾಗಿ ಹೋದ ನಾಕೈದು ಮಂದಿ ಬೇರೆಬೇರೆಯಾಗಿಯೇ ಹೋದೆವು. ಪರಸ್ಪರ ಮಾತುಕತೆಯೂ ಇರಲಿಲ್ಲ. ಬರುವಾಗ ನಗುನಗುತ್ತಾ ಎಲ್ಲರೂ ಒಟ್ಟಿಗೇ ಬಂದುಬಿಟ್ಟೆವು. ಪಾನಿ ಫೌಂಡೇಶನಿನ ತರಬೇತಿ ಅಷ್ಟೊಂದು ಪವರ್ ಫುಲ್’ ಎಂದು ಶಿಂಧೆ ನಗುತ್ತಾ ನೆನೆಯುತ್ತಾರೆ. ತಮ್ಮಲ್ಲಿ ಸ್ಫುರಿಸಿದ ಒಗ್ಗಟ್ಟಿನ ಖುಷಿಯನ್ನು, ಶಕ್ತಿಯನ್ನು ತಿಳಿಸಿಕೊಟ್ಟು ಇವರು ಊರನ್ನೂ ಒಗ್ಗೂಡಿಸಲು ಶಕ್ತರಾದರು. ಶಿಂಧೆ ಅವರ ಪ್ರಕಾರ,  ‘ಈ ಮನ್ ಸಂಧಾರಣ್ (ಒಗ್ಗಟ್ಟು)  ನಮ್ಮ ಮುಂದಿನ ಜಲಸಂಧಾರಣ್ (ಜಲಸಮೃದ್ಧಿ) ಕೆಲಸಕ್ಕೆ ಗಟ್ಟಿ ಅಡಿಪಾಯ.”

ದಶಕಗಳಿಂದ ಸತತ ನೀರ ಕೊರತೆ, ಆದಾಯ ಖೋತಾ. ಇದರಿಂದಾಗಿ ಜೈಗಾಂವ್ ಹೆಚ್ಚುಕಮ್ಮಿ ಮೂವತ್ತು ಶೇಕಡಾ ಸದಸ್ಯರನ್ನು ಪುಣೆ ಮುಂಬಯಿಗೆ ಕಳೆದುಕೊಳ್ಳಬೇಕಾಯಿತು. ಪ್ರತಿ ಮನೆಯಿಂದ ಒಬ್ಬರಾದರೂ ಗುಳೆ ಹೋಗಿದ್ದಾರೆ. ‘ಈ ವರ್ಷವೇ 30 –40 ಉತ್ಸಾಹಿಗಳು ಮರಳಿ ತಮ್ಮ ಪಾಳುಬಿದ್ದ ಜಮೀನಿನಲ್ಲಿ ಕೃಷಿ ತೊಡಗಿದ್ದಾರೆ. ಮುಂದೆ ಬರಬಹುದಾದವರನ್ನು ಸೆಳೆಯಲೆಂದೇ ಹೊಸ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕೃಷಿಯಲ್ಲಿ ಪಶುಪಾಲನೆ, ಸಾವಯವ ಕ್ರಮ ಜೋಡಿಸಿಕೊಳ್ಳುವುದೂ ಇದರಲ್ಲಿ ಸೇರಿದೆ’ ಎನ್ನುತ್ತಾರೆ ಸರಪಂಚ ನಾಥ್ ಕದಂ.

ನಾಥ್ ಕದಂ – 9423878919 ( ಸಂಜೆ 7 – 8) ; ಶಂಕರ್ ಶಿಂಧೆ – 9764204913 (ಇಬ್ಬರಿಗೂ ಹಿಂದಿ ಮಾತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT