ಕಾರ್ಖಾನೆ ಆವರಣದೊಳಗೆ ಕಲ್ಯಾಣಿ

7
ಮಳೆ ನೀರು ಸಂಗ್ರಹಿಸಿ ಸ್ವಾವಲಂಬನೆ ಸಾಧನೆ

ಕಾರ್ಖಾನೆ ಆವರಣದೊಳಗೆ ಕಲ್ಯಾಣಿ

Published:
Updated:
ಕಾರ್ಖಾನೆ ಆವರಣದೊಳಗೆ ಕಲ್ಯಾಣಿ

ಮೈಸೂರು: ‘ಕಾರ್ಖಾನೆಯ ಕಲ್ಯಾಣಿಯಲ್ಲಿ ಮಳೆನೀರಿನ ಸಂಗ್ರಹ ಹೆಚ್ಚಿದಾಗ ಮಾತ್ರ ನಾವು ನೀರಿನ ಸ್ವಾವಲಂಬನೆ ಸಾಧಿಸಿದ್ದೇವೆ ಎಂಬ ಸಮಾಧಾನ’ ಎಂದು ಮಾತು ನಿಲ್ಲಿಸಿದರು ಶ್ರೀನಾಥ್.

ಅವರು ಮೇಟಗಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸುಪ್ರೀಂ ಪ್ಲಾಸ್ಟಿ ಸೈಜರ್ಸ್‌ ಕಾರ್ಖಾನೆ ಮಾಲೀಕರು. 1.2 ಎಕರೆಯ ಈ ಪ್ರದೇಶದಲ್ಲಿ ಶೇ 30ರಷ್ಟು ಭಾಗ ಮಾತ್ರ ಕಾರ್ಖಾನೆ ಆವರಿಸಿಕೊಂಡಿದೆ. ಊದುಬತ್ತಿಯ ಸುವಾಸನೆಗೆ ಬಳಸುವ ಡೈ ಇಥೇಲ್‌ ಹಾಗೂ ಫೈಬರ್‌ ಗ್ಲಾಸ್ ತಯಾರಿಕೆಗೆ ಬಳಸುವ ಡೈ ಮಿಥೇಲ್‌ ಎಂಬ ಕಚ್ಚಾಸಾಮಗ್ರಿ ಉತ್ಪಾದಿಸುತ್ತಾರೆ.

‘1993ರಲ್ಲಿಯೇ ಮೂರು ಸೌರ ದೀಪಗಳನ್ನು ₹ 1 ಲಕ್ಷ ವೆಚ್ಚ ಮಾಡಿ ಅಳವಡಿಸಿದ್ದೆವು. ಭದ್ರತಾ ಸಿಬ್ಬಂದಿಯ ಕೋಣೆಯಲ್ಲಿ ಸೌರ ದೀಪವಿದೆ. ಕಾರ್ಖಾನೆಯೊಳಗಿನ ಶಾಖ ಹೊರಗೆ ಹೋಗಿ ಶುದ್ಧ ಗಾಳಿ ಬರಲೆಂದು ಟರ್ಬೊ ವೆಂಟಿಲೇಟರ್‌ ಅಳವಡಿಸಿದೆವು. ಆಮೇಲೆ ಮಳೆನೀರು ಸಂಗ್ರಹಿಸಲು ಟ್ಯಾಂಕ್‌ ನಿರ್ಮಿಸಲಾಯಿತು’ ಎಂದು ಹೆಮ್ಮೆಯಿಂದ ಹೇಳಿದರು.

ಮಳೆನೀರು ಸಂಗ್ರಹಿಸುವ ಸಂಬಂಧ ಸಲಹೆ ನೀಡುವ ‘ಕಾರ್ಟ್‌’ ರವಿಕುಮಾರ್‌ ಅವರನ್ನು ಶ್ರೀನಾಥ್‌ ಪುತ್ರ ವಿಶಾಲ್‌ ಸಂಪರ್ಕಿಸಿದರು. ಭೂಮಿ ಮೇಲಿನ ನೀರು ಹರಿದು ಹೋಗದಂತೆ ತಡೆಯಬೇಕೆಂದು ಅವರು ಸಲಹೆ ನೀಡಿದರು. ಇದರ ಪರಿಣಾಮ 2008–09ರಲ್ಲಿ ಕಲ್ಯಾಣಿ ನಿರ್ಮಿಸಿದರು. ಗ್ರಾನೈಟ್‌ ಕಾರ್ಖಾನೆಗೆ ಬೇಡವಾದ ಕಲ್ಲಿನ ತುಂಡುಗಳನ್ನು ತಂದು ಜೋಡಿಸಿದರು. ಕಡಿಮೆ ಸಿಮೆಂಟ್‌ ಬಳಸಿದರು. ಕಟ್ಟಿದ ಮೊದಲ ವರ್ಷದಲ್ಲೇ 5 ಲಕ್ಷ ಲೀಟರ್‌ ನೀರು ಸಂಗ್ರಹವಾಗಿ ತುಂಬಿ ಹರಿಯಿತು. ಕಲ್ಯಾಣಿಗೆ ಹರಿದು ಬರುವ ನೀರು ಮೊದಲು ಸಿಲ್ಟ್‌ ಟ್ಯಾಂಕಿನಲ್ಲಿ ಸಂಗ್ರಹಗೊಳ್ಳುತ್ತದೆ. ಇದರಲ್ಲಿ ಕಸ, ದೂಳು, ಎಲೆ ಸಂಗ್ರಹವಾಗಿ ತುಂಬಿದ ಮೇಲೆ ಕಲ್ಯಾಣಿಗೆ ನೀರು ಹರಿದು ಹೋಗುತ್ತದೆ. ಕಲ್ಯಾಣಿಯ ನೀರನ್ನು ಕಂಡು ಗಲೀಜು ಮಾಡಬಾರದೆಂದು ಗಣಪತಿ ಮೂರ್ತಿ ಕೂರಿಸಲಾಗಿದೆ.

‘ನೀರಿಗೆ ದಾರಿ ತೋರಿದರೆ ಹರಿದು ಸಂಗ್ರಹವಾಗುತ್ತದೆ. ಕಲ್ಯಾಣಿಯಲ್ಲಿ ಸಂಗ್ರಹವಾಗುವ ನೀರನ್ನು ಬಳಸುವುದಿಲ್ಲ. ಕಾರ್ಖಾನೆಯ ತಾಪಕ್ಕಿಂತ ಇಲ್ಲಿ 2 ಡಿಗ್ರಿ ಕಡಿಮೆ ಇರುವುದರ ಜತೆಗೆ ಪರಿಸರ ಸದಾ ತಂಪಾಗಿರುತ್ತದೆ. ಇನ್ನು ಕಲ್ಯಾಣಿಯಲ್ಲಿ ನೀರು ನಿಂತ ಮೇಲೆ ಸೊಳ್ಳೆ ಉತ್ಪಾದನೆ ಸಹಜ. ಇದನ್ನು ತಡೆಯಲು ಗಪ್ಪಿಮೀನು ಹಾಕಿದೆವು. ಗಪ್ಪಿಮೀನಿಗೆ ಕಪ್ಪೆ ಬಂದವು. ಹಾವು, ನವಿಲು, ಮೊಲ, ಕಾಡುಹಂದಿ, ಮುಳ್ಳುಹಂದಿ ಬರುತ್ತವೆ. ಹೀಗೆ ನೀರಿನಿಂದ ಎಲ್ಲರೂ ಬದುಕಬೇಕು ಎನ್ನುವ ನೀತಿ ನಮ್ಮದು. ಅಲ್ಲದೆ, ಅಂತರ್ಜಲ ಹೆಚ್ಚಲಿ ಎನ್ನುವ ಉದ್ದೇಶವೂ ಇದೆ’ ಎಂದು ವಿಶಾಲ್ ಹೇಳುತ್ತಾರೆ.

‘30 ವರ್ಷಗಳ ಹಿಂದೆ ಮೈಸೂರು, ಕೆಮಿಕಲ್‌ ಉತ್ಪಾದಿಸುವ ಕೇಂದ್ರವಾಗಿರಲಿಲ್ಲ. ಜತೆಗೆ, ಕಾರ್ಖಾನೆಯೆಂದರೆ ಗಲೀಜು, ಕೆಸರು, ಪರಿಸರ ನಾಶ ಮಾಡ್ತೀವಿ ಎಂಬ ಅನಿಸಿಕೆ ಸಾಮಾನ್ಯವಾಗಿದೆ. ನಮ್ಮ ಕಾರ್ಖಾನೆ ಆವರಣದಲ್ಲಿ ಮಾವು, ತೆಂಗು, ಸೀಬೆ, ಸೀತಾಫಲ, ಹೂವಿನಗಿಡಗಳಿವೆ. ಭೂಮಿತಾಯಿ ಹೊಟ್ಟೆಗೆ ಮಳೆನೀರು ಇಂಗಿಸಿದರೆ ಸುತ್ತಲಿನ ಪರಿಸರ ತಂಪಾಗಿರುತ್ತದೆ’ ಎಂದು ಶ್ರೀನಾಥ್ ವಿವರಿಸಿದರು.

**

ಮಕ್ಕಳಿಗೆ ನೀರಿನ ಮಿತವ್ಯಯ ಕುರಿತು ಅರಿವು ಮೂಡಿಸಬೇಕು. ಯುವಕರು ನೀರು ಸಂಗ್ರಹದ ಬಗ್ಗೆ ಕುರಿತು ಅರಿಯಬೇಕು. ನೀರು ಉಳಿಸುವ, ಸಂಗ್ರಹಿಸುವ ಪ್ರಜ್ಞೆ ಹೆಚ್ಚಬೇಕು.

-ಶ್ರೀನಾಥ್‌, ಮಾಲೀಕರು

ಸುಪ್ರೀಂ ಪ್ಲಾಸ್ಟಿ ಸೈಜರ್ಸ್‌ ಕಾರ್ಖಾನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry