ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷ್ ಸಂಸದರಿಗೆ ಹೃದಯಾಘಾತ ಆದೀತು!

Last Updated 1 ಜುಲೈ 2017, 9:12 IST
ಅಕ್ಷರ ಗಾತ್ರ

ಕನ್ನಡದ ಇಬ್ಬರು ಪತ್ರಕರ್ತರಿಗೆ ವಿಧಾನಸಭೆಯು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಹಕ್ಕುಬಾಧ್ಯತಾ ಸಮಿತಿಯ ಬೇಡಿಕೆ ಇದೇ ಆಗಿತ್ತು. ತನಗಿಲ್ಲದ ಅಧಿಕಾರದ ಪ್ರಯೋಗವಿದು.

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಜನ್ಮ ನೀಡಿದ್ದು ನಮ್ಮ ಸಂವಿಧಾನ. ಕಾನೂನು ರಚನೆ ಮತ್ತು ಕಾರ್ಯಾಂಗದ ಆಡಳಿತ ನಿಯಮಬದ್ಧವಾಗಿ ಇದೆಯೇ ಎಂದು ಪರಿಶೀಲಿಸುವುದು ಈ ಸಂಸ್ಥೆಗಳ ಕರ್ತವ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಸಾರ್ವಜನಿಕ ಹಿತ ಕಾಯಲು ಮಾತ್ರ ಬಳಸಬೇಕೆಂದು ಒತ್ತಿಹೇಳುವ ಅಗತ್ಯ ಇಲ್ಲ.

ತಮ್ಮ ಕರ್ತವ್ಯ ನಿರ್ವಹಣೆಗೆ ಈ ಸಂಸ್ಥೆಗಳಿಗೆ ರಕ್ಷಣೆ ಬೇಕಿರುತ್ತದೆ. ಅಂತಹ ರಕ್ಷಣೆಗಳೆಲ್ಲವನ್ನೂ ಪ್ರತ್ಯೇಕವಾಗಿ ವಿವರಿಸುವ ಕ್ರಮಕ್ಕೆ ನಮ್ಮ ಸಂವಿಧಾನ ಮುಂದಾಗಲಿಲ್ಲ. ಬದಲಿಗೆ, ಬ್ರಿಟನ್ ಸಂಸತ್ತಿನ ಕೆಳಮನೆ ಹೊಂದಿದ್ದ ಹಕ್ಕುಗಳನ್ನೇ ನಮ್ಮ ಸಂಸತ್ತು ಮತ್ತು ವಿಧಾನಸಭೆಗಳು ಹೊಂದಿರುತ್ತವೆ ಎಂದು ಹೇಳಲಾಯಿತು. ಈ ಹಕ್ಕುಗಳನ್ನು ಕಾನೂನಿನ ಮೂಲಕ ಮಾರ್ಪಾಡು ಮಾಡಿಕೊಳ್ಳಬಹುದು ಎಂದು ನಮ್ಮ ಸಂವಿಧಾನ ಹೇಳುತ್ತದೆ.

ಸಂಸತ್ತು ಮತ್ತು ವಿಧಾನಸಭೆಗಳಿಗೆ ಇರುವ ಹಕ್ಕುಗಳ ನಡುವೆ ವ್ಯತ್ಯಾಸವಿಲ್ಲ. ಇಷ್ಟಾದರೂ, ಕೆಲವು ಪ್ರಮುಖ ಹಕ್ಕುಗಳ ಬಗ್ಗೆ ಸಂವಿಧಾನದಲ್ಲಿ ವಿವರಣೆ ಇದೆ. ಶಾಸಕರಿಗೆ ಮತ್ತು ಸದನ ಸಮಿತಿಗಳಿಗೆ ಉತ್ತರಿಸುವವರಿಗೆ ಅಪರಿಮಿತ ವಾಕ್ ಸ್ವಾತಂತ್ರ್ಯ, ಅವರ ಹೇಳಿಕೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡದಂತೆ ನಿರ್ಬಂಧ, ಮಸೂದೆಗಳಿಗೆ ಮತ ಚಲಾವಣೆಗೆ ನಡೆದ ಪ್ರಕ್ರಿಯೆ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲು ನಿರ್ಬಂಧ ಇದೆ. ಸಂಸತ್ತು ಮತ್ತು ವಿಧಾನಸಭೆಗಳು ತಮ್ಮ ಪ್ರಕ್ರಿಯೆ ತಾವೇ ನಿಯಂತ್ರಿಸಿಕೊಳ್ಳಬೇಕು. ಪ್ರಕ್ರಿಯೆ ಪಾಲನೆ ಸರಿಯಯಾಗಿಲ್ಲ ಎಂದು ಕೋರ್ಟ್‌ ಮೊರೆ ಹೋಗುವಂತಿಲ್ಲ.

ಸಂಸತ್ತು ಹಾಗೂ ವಿಧಾನಸಭೆಗಳ ಹಕ್ಕುಗಳನ್ನು ಬ್ರಿಟನ್ ಸಂಸತ್ತಿನ ಹಕ್ಕುಗಳಿಗಿಂತ ಭಿನ್ನವಾಗಿಸಿಕೊಳ್ಳಲು ನಮ್ಮ ಸಂವಿಧಾನವೇ ಹೇಳಿದ್ದರೂ, ನಮ್ಮಲ್ಲಿ ಈವರೆಗೆ ಆ ಕೆಲಸ ಆಗಿಲ್ಲ. ತನಗಿಲ್ಲದ ಹಕ್ಕನ್ನು ನಮ್ಮ ವಿಧಾನಸಭೆಯು ಚಲಾಯಿಸಿದೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದ ಮೊರೆ ಹೋದರೆ, ನಮ್ಮ ಸಂವಿಧಾನ ರಚನೆಯಾದ ದಿನ ಬ್ರಿಟನ್‍ ಸಂಸತ್ತಿನ ಹಕ್ಕುಗಳ ಬಗ್ಗೆ ಲಂಡನ್ನಿನಲ್ಲಿ ಪ್ರಕಟವಾಗಿದ್ದ ಗ್ರಂಥಗಳನ್ನು ಹಿಡಿದು ನ್ಯಾಯಾಲಯ ವಿಚಾರಣೆ ಪ್ರಾರಂಭಿಸಬೇಕಾಗುತ್ತದೆ.

ನಮ್ಮಲ್ಲಿ ಆಗಿದ್ದೇನು?: ಇಬ್ಬರು ಶಾಸಕರ ವಿರುದ್ಧ ಅವಹೇಳನಕಾರಿ ಬರವಣಿಗೆ ಬರೆದ ಕಾರಣಕ್ಕಾಗಿ ಇಬ್ಬರು ಪತ್ರಕರ್ತರಿಗೆ ಶಿಕ್ಷೆ ವಿಧಿಸಲಾಗಿದೆ. ಅಂದರೆ, ಸದಸ್ಯನೊಬ್ಬನ ವಿರುದ್ಧದ ಅವಹೇಳನಕಾರಿ ಬರವಣಿಗೆಯಿಂದ ತನ್ನ ಹಕ್ಕು ಉಲ್ಲಂಘನೆಯಾಯಿತು ಎಂದು ಕರ್ನಾಟಕ ವಿಧಾನಸಭೆ ಘೋಷಿಸಿದೆ.

ಬ್ರಿಟನ್ನಿನ ಸಂಸದೀಯ ಪ್ರಕ್ರಿಯೆಗಳು ಮತ್ತು ಸದಸ್ಯರ ಸಂಸತ್ತಿನ ಒಳಗಿನ ಹಾಗೂ ಹೊರಗಿನ ಚಟುವಟಿಕೆಗಳನ್ನು ವಿಪರೀತವಾಗಿ, ಅವಹೇಳನಕಾರಿಯಾಗಿ ಮತ್ತು ಕ್ಷುಲ್ಲಕವಾಗಿ ಟೀಕಿಸುವುದು ಲಂಡನ್ ಪತ್ರಿಕೆಗಳ ಪಾಲಿಗೆ ಹಿಂದಿನಿಂದಲೂ ನಡೆದುಕೊಂಡ ಬಂದ ಅಭ್ಯಾಸ. ಅಂತಹ ಲೇಖನಗಳಿಂದ ಬ್ರಿಟನ್ ಸಂಸತ್ತಿನ ಹಕ್ಕು ಕಸಿದಂತೆ ಆಯಿತೇ ಎಂದು ಯಾರಾದರೂ ಅಲ್ಲಿನ ಸಂಸದರನ್ನು ಕೇಳಿದರೆ, ‘ನಿಮಗೆ ಬುದ್ಧಿಭ್ರಮಣೆಯಾಗಿದೆ’ ಎಂದು ಅವರು ಭಾವಿಸುತ್ತಾರೆ.

ನೂರು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಸದಸ್ಯರನ್ನು, ಹೊರಗಿನವರನ್ನು ಮಾತ್ರ ಬ್ರಿಟನ್ ಸಂಸತ್ತು ಬಂಧಿಸಿದೆ. ಆದರೆ, ಶಾಸಕನೊಬ್ಬನ ವಿರುದ್ಧ ಮಾನಹಾನಿಕರ ಲೇಖನ ಬರೆದ ಕಾರಣಕ್ಕಾಗಿ ಯಾವುದೇ ಪತ್ರಕರ್ತನ ಬಂಧನವಾದ ನಿದರ್ಶನವಿಲ್ಲ. ಬಹುತೇಕವಾಗಿ, ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಬಂಧನದ ಆದೇಶ ನೀಡಲಾಗುತ್ತದೆ. ಹೆಚ್ಚಿನ ಬಂಧನಗಳು ದಿನದ ಕಲಾಪ ಮುಗಿಯುವವರೆಗಷ್ಟೇ ಜಾರಿಯಲ್ಲಿರುತ್ತವೆ.

ಒಂದಕ್ಕಿಂತ ಹೆಚ್ಚು ದಿನಗಳಮಟ್ಟಿಗೆ ಶಿಕ್ಷೆ ವಿಧಿಸುವುದಾದರೆ, ಅದು ಚಾಲ್ತಿ ಅಧಿವೇಶನ ಮುಗಿಯುವವರೆಗೆ ಮಾತ್ರ ಎಂದು ಅಲ್ಲಿ 1839ರಲ್ಲೇ ನಿರ್ಧಾರವಾಗಿದೆ. ಹೀಗಿರುವಾಗ, ಇಲ್ಲಿ ಪತ್ರಕರ್ತರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಬ್ರಿಟನ್ ಸಂಸದರಿಗೆ ಹೃದಯಾಘಾತ ಉಂಟುಮಾಡಬಲ್ಲದು!

ವಿಧಾನಸಭೆಯ ಹಕ್ಕುಗಳನ್ನು ಸವಿಸ್ತಾರವಾಗಿ ಪಟ್ಟಿ ಮಾಡಿಲ್ಲ. ಆದರೆ, ವಿಧಾನಸಭೆಯು ತನ್ನ ಹಕ್ಕುಗಳ ಪ್ರತಿಪಾದನೆಗೆ ಕೈಗೊಂಡ ಕ್ರಮಗಳೆಲ್ಲವೂ ಊರ್ಜಿತ ಎನ್ನಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಶಿಕ್ಷೆಗೊಳಗಾದ ಪತ್ರಕರ್ತರು ಕೋರ್ಟ್‌ಗೆ ಹೋದಲ್ಲಿ, ತಾನು ವಿಧಾನಸಭೆಯ ಹಕ್ಕಿನ ರಕ್ಷಣೆಗಾಗಿ ಇಂಥ ಕ್ರಮ ಕೈಗೊಂಡೆ ಎಂದು ಸಮರ್ಥಿಸಿಕೊಳ್ಳಬೇಕಾದ ಹೊಣೆಗಾರಿಕೆ ಸಭಾಧ್ಯಕ್ಷರದ್ದಾಗಿರುತ್ತದೆ.

ಶಾಸನಸಭೆ ಸದಸ್ಯರ ವಿರುದ್ಧ ಮಾನಹಾನಿಕರ ಬರವಣಿಗೆ ತಡೆಯುವುದು ವಿಧಾನಸಭೆ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಒಂದೆಂದು ಸಭಾಧ್ಯಕ್ಷರು ನ್ಯಾಯಾಲಯದಲ್ಲಿ ಪ್ರತಿಪಾದಿಸಬೇಕು. ಈ ಹಂತದಲ್ಲಿಯೇ ಅವರು ಸೋತು ಸುಣ್ಣವಾಗುವುದರಲ್ಲಿ ಸಂದೇಹವಿಲ್ಲ.

ವಿಧಾನಸಭೆಯ ಹಕ್ಕುಗಳೆಲ್ಲವನ್ನೂ ಒಂದೆಡೆ ಪಟ್ಟಿಮಾಡಿಲ್ಲವೆಂಬ ಕಾರಣಕ್ಕೆ, ತನಗಿರುವ ಹಕ್ಕುಗಳು ಯಾವುವು ಎಂದು ವಿಧಾನಸಭೆಯೇ ತೀರ್ಮಾನಿಸಿಕೊಳ್ಳಲಿ ಎಂಬ ಮಾತನ್ನು ನ್ಯಾಯಾಲಯಗಳೂ ಹೇಳುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ತನ್ನ ಅಧಿಕಾರ ಏನು ಎಂಬುದನ್ನು ಸಂಸ್ಥೆಯೊಂದು ತಾನೇ ನಿರ್ಧರಿಸಿಕೊಳ್ಳುವುದನ್ನು ಪ್ರಜಾಪ್ರಭುತ್ವವೆಂದು ಕರೆಯಲಾಗದು. ಹಾಗೆ ಮಾಡುವುದು ಸರ್ವಾಧಿಕಾರವಾಗುತ್ತದೆ.

ಇಂಗ್ಲೆಂಡಿನ ದೊರೆಯ ಸರ್ವಾಧಿಕಾರವನ್ನು ಅಡಗಿಸಲು ಅಲ್ಲಿನ ಸಂಸತ್ತು ಶತಮಾನಗಳ ಕಾಲ ನಡೆಸಿದ ಹೋರಾಟದ ಪರಿಣಾಮವೇ ‘ಸಂಸತ್ತಿನ ಹಕ್ಕುಗಳು’. ಕಾನೂನಿನ ಹಿನ್ನೆಲೆ ಏನು ಎಂಬುದನ್ನು ಅಧ್ಯಯನ ಮಾಡಿ, ಆ ಕಾನೂನಿನ ವಿಶ್ಲೇಷಣೆಗೆ ಮುಂದಾಗಬೇಕು ಎಂದು ನಮ್ಮ ನ್ಯಾಯಶಾಸ್ತ್ರ ಹೇಳುತ್ತದೆ.

ಒಳಜಗಳ ಮತ್ತು ಅಂತರ್ಯುದ್ಧದಲ್ಲಿ ಮುಳುಗಿದ್ದ ಇಂಗ್ಲೆಂಡ್‌ ಕಡೆಗೆ ದೊರೆಯ ಸರ್ವಾಧಿಕಾರವನ್ನು ಮೊಟಕುಗೊಳಿಸಿತು. ಸಂಸತ್ತು ಅನೇಕ ನಿಯಮಗಳಿಗೆ ಒಳಪಟ್ಟಿತು.

1689ರಲ್ಲಿ ಇಂಗ್ಲೆಂಡ್‌ನಲ್ಲಿ ದೊರೆ ಮತ್ತು ಆತನ ಜನರ ಅಡಚಣೆಯಿಂದ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಂಸತ್ತು ಪಡೆದುಕೊಂಡ ಮೂಲ ಹಕ್ಕುಗಳ ಪಟ್ಟಿಯನ್ನು ‘ಬಿಲ್ ಆಫ್ ರೈಟ್ಸ್’ಎಂದು ಕರೆಯಲಾಗುತ್ತದೆ. ಅದೇ ಬ್ರಿಟನ್ ಸಂಸತ್ತಿನ ಹಕ್ಕುಗಳನ್ನು ಹುಟ್ಟುಹಾಕಿದ ಎರಡು ಪುಟಗಳ ಸಂವಿಧಾನ.

ಈ ಹಿನ್ನೆಲೆಯನ್ನು ಅರಿತು ಭಾರತ ಸಂವಿಧಾನವನ್ನು ಓದಿಕೊಂಡವರು ಯಾರು ಕರ್ನಾಟಕ ವಿಧಾನಸಭೆಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದಿಲ್ಲ.

ವ್ಯಕ್ತಿ ಇಲ್ಲವೇ ಶಾಸಕನಿಗೆ ಯಾವುದೇ ಸಾರ್ವಜನಿಕ ಹೇಳಿಕೆ ಇಲ್ಲವೇ ಬರವಣಿಗೆಯಿಂದ ಮಾನಹಾನಿಯಾದರೆ ಅದನ್ನು ಪರಿಹರಿಸಿಕೊಳ್ಳಲು ನ್ಯಾಯಾಲಯ ನೆರವಾಗುತ್ತದೆ. ಶಾಸನಸಭೆಗಳು ಬದಲಿ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸಲು ಅವಕಾಶವಿಲ್ಲ.

ಈ ಪ್ರಕರಣದಲ್ಲಿ ಶಾಸಕರಿಗೆ ನ್ಯಾಯಾಲಯದ ಮೊರೆಹೋಗಲು ಅವಕಾಶವಿತ್ತು. ಬದಲಿಗೆ, ತನಗಿಲ್ಲದ ಅಧಿಕಾರವನ್ನು ಕರ್ನಾಟಕದ ವಿಧಾನಸಭೆಯು ಚಲಾಯಿಸುವಂತೆ ಪ್ರೇರೇಪಿಸಿರುವುದು ಅಸಾಂವಿಧಾನಿಕ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT