7
ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ ಎಂಬುದನ್ನು ಸಿದ್ಧಪಡಿಸಲು ಬೌದ್ಧಿಕ ಸಾಮಗ್ರಿ ಲಭ್ಯವಿದೆ

ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?

Published:
Updated:
ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?

ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಬೆಂಬಲ ವ್ಯಕ್ತಪಡಿಸಿದ್ದು ಭಿನ್ನ ಭಿನ್ನ ಪ್ರತಿಕ್ರಿಯೆಗಳಿಗೆ ಅವಕಾಶ ಕಲ್ಪಿಸಿದೆ. ಅದು ಮುಂಬರುವ ಚುನಾವಣೆಗೆ ಲಿಂಗಾಯತರನ್ನು ಒಲಿಸುವ ತಂತ್ರವೆಂಬುದು ಕೆಲವರ ವ್ಯಾಖ್ಯಾನ. ಡಾ. ಚಿದಾನಂದ ಮೂರ್ತಿಅವರಂಥವರು ಅದನ್ನು ವಿರೋಧಿಸಿದ್ದಾರೆ.

ಮಲ್ಲೇಪುರಂ ವೆಂಕಟೇಶ್ ಅವರು ವೀರಶೈವರ ‘ಸಿದ್ಧಾಂತ ಶಿಖಾಮಣಿ’ ಎಂಬ ಗ್ರಂಥವು ಆನ್ವಯಿಕ ಗ್ರಂಥವೆಂದು ಹೇಳಿದ್ದಾರೆ. ಅದರರ್ಥವೇನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಈ ಕೆಲವು ಗೊಂದಲಗಳ ವಿಶ್ಲೇಷಣೆ ಇಲ್ಲಿದೆ.

ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಘೋಷಿಸಬೇಕೆಂಬ ಬೇಡಿಕೆ ಹಳೆಯದು. ಅದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು  ತಮಿಳುನಾಡಿನ ಲಿಂಗಾಯತರೂ ಅದರಲ್ಲಿ ಭಾಗಿಗಳು. ಬಸವ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ಆದೇಶವನ್ನು 2002ರಲ್ಲಿ ಮೊದಲು ಪ್ರಕಟಿಸಿದ್ದು ಮಹಾರಾಷ್ಟ್ರ ಸರ್ಕಾರ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕುವ 2017ರ ಆದೇಶವೂ ಅದೇ ರಾಜ್ಯದ್ದು. ಈಗ ಸಿದ್ದರಾಮಯ್ಯನವರ ಭರವಸೆಯಿಂದ ಅವರೆಲ್ಲ ಕರ್ನಾಟಕದತ್ತ ನೋಡುತ್ತಿದ್ದಾರೆ.

ದಶವಾರ್ಷಿಕ ಜನಗಣತಿಯಲ್ಲಿ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಲಿಂಗಾಯತ ಸಂಘಟನೆಗಳು ಅನೇಕ ಸಲ ವಿನಂತಿಸಿಕೊಂಡಿವೆ. ಲಿಂಗಾಯತವು ಹಿಂದೂ ಧರ್ಮದ ಒಂದು ಪಂಥವೇ ಹೊರತು ಪ್ರತ್ಯೇಕ ಧರ್ಮವಲ್ಲವೆಂದು ಜನಗಣತಿ ಆಯುಕ್ತರು ಉತ್ತರಿಸಿದ್ದಾರೆ. ಹಾಗಾದರೆ ‘ಪಂಥ’ಕ್ಕೂ ‘ಧರ್ಮ’ಕ್ಕೂ ಇರುವ ಅಂತರವೇನು, ಲಿಂಗಾಯತವು ಸ್ವತಂತ್ರ ಧರ್ಮವಾಗಿದ್ದರೆ, ಅದು  ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನವಾಗಿದೆ, ಮತ್ತು ‘ಧರ್ಮ’ ಎನಿಸಿಕೊಳ್ಳಲು ಇರಬೇಕಾದ ಮೂಲ ಲಕ್ಷಣಗಳೇನು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಈ  ಪ್ರಶ್ನೆಗಳಿಗೆ  ಸಮರ್ಥವಾಗಿ ಈವರೆಗೆ ಉತ್ತರಿಸಲಾಗಿಲ್ಲ. ಅದೇ ವಿಫಲತೆಗೆ ಕಾರಣವಾಗಿದೆ. ಅದಕ್ಕೆ ಆಳವಾದ ಶಾಸ್ತ್ರೀಯ ಅಧ್ಯಯನ ಅಗತ್ಯ. ಕೇವಲ ರಾಜಕೀಯ ಪ್ರಭಾವ ಸಾಕಾಗದು.

ಸಂವಿಧಾನ ರಚನಾ ಸಭೆಯಲ್ಲಿಯೇ ಲಿಂಗಾಯತ ಧರ್ಮದ ಬಗ್ಗೆ ಪ್ರಸ್ತಾಪವಾಗಿತ್ತು. ‘ಹಿಂದೂ ಧರ್ಮ’ದ ವ್ಯಾಖ್ಯಾನ ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತು ನಡೆದ ಸುದೀರ್ಘ ಚರ್ಚೆಗಳಲ್ಲಿ ಮದ್ರಾಸಿನ ಪ್ರತಿನಿಧಿ ಕೆ.ಸಂಥಾನಮ್ ಹಾಗೂ ನಾಲ್ಕುಜನ ಲಿಂಗಾಯತ ಸದಸ್ಯರಾದ ಮುಂಬೈ ರಾಜ್ಯದ ಪ್ರತಿನಿಧಿ ಎಸ್. ನಿಜಲಿಂಗಪ್ಪ, ಮೈಸೂರಿನ ಪ್ರತಿನಿಧಿ ಎಚ್.ಸಿದ್ಧವೀರಪ್ಪ, ಭಾರತೀಯ ರಾಜರ ಪ್ರತಿನಿಧಿಯಾಗಿದ್ದ ರಾಮದುರ್ಗದ ಬಿ.ಎನ್. ಮುನವಳ್ಳಿ ಮತ್ತು ಮಹಾರಾಷ್ಟ್ರದ ಲಿಂಗಾಯತ ನಾಯಕ ರತ್ನಪ್ಪ ಕುಂಬಾರ ಆ ಚರ್ಚೆಯಲ್ಲಿ ಮಂಡಿಸಿದ ಅಂಶಗಳು ಪ್ರತ್ಯೇಕ ಧರ್ಮದ ಬೇಡಿಕೆಗೆ ಈಗಲೂ ಸಮಂಜಸವಾಗಿವೆ.

ಹಿಂದೂ ವಿವಾಹ ಕಾಯ್ದೆ ಮತ್ತು ಇತರ ಮೂರು ಹಿಂದೂ ಕೌಟುಂಬಿಕ ಕಾನೂನುಗಳಲ್ಲಿ ‘ಹಿಂದೂ’ ಎಂಬ ಪದದ ವ್ಯಾಖ್ಯಾನವಿದೆ. ಅದರಲ್ಲಿ ‘ವೀರಶೈವ ಅಥವಾ ಲಿಂಗಾಯತ, ಬೌದ್ಧ, ಜೈನ, ಸಿಖ್’ ಧರ್ಮಗಳನ್ನು ವಿಶೇಷವಾಗಿ ಹೆಸರಿಸಿ ಹಿಂದೂ ಧರ್ಮದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಆ ನಾಲ್ಕೂ ಧರ್ಮಗಳು ಪ್ರತ್ಯೇಕ ಧರ್ಮಗಳೆಂದು ಆಗಿನ ಕಾನೂನು ತಜ್ಞರು ತಿಳಿದಿದ್ದರು ಎಂಬುದು ಅದರಿಂದ ಸ್ಪಷ್ಟವಾಗುತ್ತದೆ.

ಭಾರತೀಯರಲ್ಲಿ ‘ರಾಷ್ಟ್ರೀಯ ಪರಿಕಲ್ಪನೆ’ ಮೂಡಿಸುವುದು ಅಂದಿನ ರಾಷ್ಟ್ರ ನಾಯಕರ  ಆದ್ಯತೆಯಾಗಿತ್ತು. ಅದನ್ನು ಕೆ.ಎಂ.ಮುನ್ಷಿ ಮತ್ತು ಸರ್ದಾರ ವಲ್ಲಭಭಾಯಿ ಪಟೇಲರು ಸಂವಿಧಾನ ರಚನಾ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಧರ್ಮದ ಆಧಾರದ ಮೇಲೆ ವಿಭಜನೆಗೊಂಡ ದೇಶದಲ್ಲಿ  ಅಲ್ಪಸಂಖ್ಯಾತರನ್ನು ಬಿಟ್ಟು ಬಹುಸಂಖ್ಯಾತರಾದ ಹಿಂದೂ ಮತ್ತು ಹಿಂದೂಯೇತರ ಭಾರತೀಯ ಧರ್ಮಗಳ ಜನರು ಹಿಂದೂ ಎಂದು ಗುರುತಿಸಿಕೊಂಡರೆ ದೇಶದ ಏಕತೆಗೆ ಸಹಾಯವಾಗುತ್ತದೆ ಎಂಬ ನಂಬಿಕೆ ಆ ವ್ಯಾಖ್ಯಾನದ ಹಿಂದಿದೆ.

ಆದರೆ ಈಗ ಕಾಲ  ಬದಲಾಗಿದೆ. ಎಲ್ಲಾ ಧರ್ಮಗಳ ಜನರನ್ನು, ಅವರಾಡುವ ಭಾಷೆ, ತಿನ್ನುವ ಆಹಾರ, ಉಡುವ ತೊಡುಗೆ, ಜೀವನ ಶೈಲಿಗಳನ್ನೂ ಬದಲಿಸಿ ‘ಹಿಂದೂಕರಣ’ಗೊಳಿಸುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಆದ್ದರಿಂದ 1950ರ ದಶಕದಲ್ಲಿ ‘ಹಿಂದೂ’ ಎನಿಸಿಕೊಳ್ಳಲು ಹಿಂಜರಿಯದ ಇತರರು ಈಗ ತಮ್ಮ ಅಸ್ಮಿತೆ ಕಾಯ್ದುಕೊಳ್ಳಲು ತಯಾರಾಗುತ್ತಿದ್ದಾರೆ.

ರಾಷ್ಟ್ರೀಯ ಭಾವೈಕ್ಯತೆಗಾಗಿ ಧಾರ್ಮಿಕ ಸ್ವರೂಪದ ಕೌಟುಂಬಿಕ ಕಾನೂನುಗಳನ್ನು ರದ್ದುಪಡಿಸುವ ಬದಲು ಹಿಂದೂ ಕಾನೂನನ್ನು ಆಧುನೀಕರಣಗೊಳಿಸಲಾಯಿತು. ತಮ್ಮ ಉದ್ದೇಶಕ್ಕೆ ಹೆಚ್ಚು ಸಹಾಯವಾಗಬಲ್ಲ ಏಕರೂಪದ ನಾಗರಿಕ ಸಂಹಿತೆಯನ್ನು ರೂಪಿಸಲು ಅಂದಿನ ನಮ್ಮ ನಾಯಕರಿಗೆ ಸಾಧ್ಯವಾಗಲಿಲ್ಲ. ಇಂದಿಗೂ ಸಾಧ್ಯವಾಗಿಲ್ಲ. ಆದರೆ ಆಗಿನ ನಾಯಕರು ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ ಏಕತೆಯ ಹೆಸರಿನಲ್ಲಿ ಭಾರತದಲ್ಲಿ ಹುಟ್ಟಿದ ‘ಹಿಂದೂಯೇತರ’ ಧರ್ಮಗಳ ಅಸ್ತಿತ್ವವನ್ನು ಅಲ್ಲಗಳೆದು ಅವನ್ನು ‘ಹಿಂದೂ’ದಲ್ಲಿ ಸುಲಭವಾಗಿ ಸೇರಿಸಿಬಿಟ್ಟರು!

ವಿಪರ್ಯಾಸವೆಂದರೆ, ಹಿಂದೂ ಕೌಟುಂಬಿಕ ಕಾನೂನುಗಳನ್ನು ಹಿಂದೂಯೇತರ ಭಾರತೀಯ ಧರ್ಮಗಳ  ಅನುಯಾಯಿಗಳ ಮೇಲೆ ಹೇರಿದ ನಂತರವೂ ಅವರಿಗೆ ಧಾರ್ಮಿಕ ಸ್ವಾತಂತ್ರ್ಯ ಇದೆಯೆಂದು ಹೇಳುವುದು ವ್ಯಂಗ್ಯವಲ್ಲವೇ? ಲಿಂಗಾಯತ, ಬೌದ್ಧ, ಜೈನ, ಸಿಖ್ ಧರ್ಮಗಳು ಹಿಂದೂ ಧರ್ಮದ ವಿರುದ್ಧ ಸಿಡಿದೆದ್ದ ಧರ್ಮಗಳು. ಆದ್ದರಿಂದ ಅವು ಹಿಂದೂ ಹೇಗಾಗುತ್ತವೆ?  ಬೌದ್ಧ ಧರ್ಮ ಭಾರತದಿಂದ ಪಲಾಯನಗೈದು ಚೀನಾ, ಕೊರಿಯಾ, ಜಪಾನ್, ವಿಯೆಟ್ನಾಂ, ಕಾಂಬೋಡಿಯ, ಶ್ರೀಲಂಕಾ, ಥಾಯ್ಲೆಂಡ್‌ನಂತಹ ದೇಶಗಳಲ್ಲಿ ಪ್ರಮುಖ ಧರ್ಮವಾಗಿದೆ. ಹಾಗಾದರೆ, ಆ ದೇಶಗಳು ಹಿಂದೂ ರಾಷ್ಟ್ರಗಳೇ?

‘ಸ್ವಾಮಿನಾರಾಯಣ ಪಂಥ’ವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವ ಸಲುವಾಗಿ ನಡೆದ ವ್ಯಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯ ಅವರ ವಿನಂತಿಯನ್ನು ಮಾನ್ಯ ಮಾಡಲಿಲ್ಲ. ಆ ಪ್ರಕರಣದ ತೀರ್ಪಿನ ಸುದೀರ್ಘ ಚರ್ಚೆ ಇಲ್ಲಿ ಸಮಂಜಸವಾಗಿದೆ. ಅದರಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ‘ಹಿಂದೂ ಜೀವನಕ್ರಮ’ ಪುಸ್ತಕದ ಮಾತನ್ನು ಉದ್ಧರಿಸಲಾಗಿದೆ.

ಡಾ. ರಾಧಾಕೃಷ್ಣನ್ ಅವರು, ‘ಬಸವನು ಲಿಂಗಾಯತ ಧರ್ಮವನ್ನು ಸ್ಥಾಪಿಸಿದನು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕೊನೆಯಲ್ಲಿ ಬೌದ್ಧ, ಜೈನ, ಸಿಖ್ ಧರ್ಮಗಳೊಂದಿಗೆ ಲಿಂಗಾಯತವೂ ಹಿಂದೂ ಧರ್ಮದ ಒಂದು ‘ಪಂಥ’ವೆಂದು ಅಭಿಪ್ರಾಯಪಟ್ಟಿದ್ದಾರೆ. ಅದು ಹಿಂದೂ ಜೀವನಕ್ರಮಕ್ಕೆ ಸಂಬಂಧಿಸಿದ್ದೇ ಹೊರತು ಧರ್ಮದ ವಿಶ್ಲೇಷಣೆಗಲ್ಲ ಮತ್ತು ಆ ಅಭಿಪ್ರಾಯವನ್ನು ಹಿಂದೂ ಧರ್ಮದ ಕಟ್ಟಾಭಿಮಾನಿಯೊಬ್ಬರ ಪೂರ್ವಗ್ರಹ ಪೀಡಿತ ಅಭಿಪ್ರಾಯವೆಂದೇ ತಿಳಿಯಬಹುದು.

ಶಾಸ್ತ್ರೀಯವಾಗಿಯೇ ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ;  ಅದೊಂದು ಸ್ವತಂತ್ರ ಧರ್ಮವೆಂದು  ಧಾರಾಳವಾಗಿ ಸಿದ್ಧಪಡಿಸಲು ಸೂಕ್ತ ಬೌದ್ಧಿಕ ಸಾಮಗ್ರಿ ಲಭ್ಯವಿದೆ. ಅಂಥ ತಜ್ಞರೂ ಇದ್ದಾರೆ. ಅವರ ಸಹಾಯದಿಂದ ಲಿಂಗಾಯತ ದರ್ಶನ, ತತ್ವಶಾಸ್ತ್ರ, ಇತಿಹಾಸ,  ಧಾರ್ಮಿಕ ನಂಬಿಕೆಗಳು, ಆಚರಣೆಗಳು, ವಿಧಿ ವಿಧಾನಗಳು, ಧರ್ಮ ಗುರುಗಳು, ಧಾರ್ಮಿಕ ಲಾಂಛನಗಳು, ಧಾರ್ಮಿಕ ಸ್ಥಳಗಳ ಬಗ್ಗೆ ಪರಿಣಾಮಕಾರಿ ವಾದವನ್ನು ಜನಗಣತಿ ಆಯುಕ್ತರ ಮುಂದೆ 2021ರ ಜನಗಣತಿಗಿಂತ ಮೊದಲೇ ಮಂಡಿಸಬೇಕಾಗಿದೆ. ಅದನ್ನು ಅವರು ಒಪ್ಪದಿದ್ದರೆ ಸರ್ವೋಚ್ಚ ನ್ಯಾಯಾಲಯವೇ ಮುಂದಿನ ದಾರಿ.

ಆದರೆ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಸಾಕಾರಗೊಳಿಸಿಕೊಳ್ಳಲು ಲಿಂಗಾಯತರಲ್ಲಿಯೇ ಅನೇಕ ಭಿನ್ನಾಭಿಪ್ರಾಯಗಳಿವೆ, ಪಂಗಡಗಳಿವೆ, ಆಂತರಿಕ ವೈರುಧ್ಯಗಳಿವೆ. ಪ್ರತಿಯೊಂದು ಲಿಂಗಾಯತ ಉಪಜಾತಿಗೂ ಒಬ್ಬೊಬ್ಬ ಧರ್ಮಗುರು ಇತ್ತೀಚೆಗೆ ಹುಟ್ಟಿಕೊಂಡಿದ್ದಾರೆ. ಅವರವರಲ್ಲಿಯೇ ಸಾಕಷ್ಟು ಪೈಪೋಟಿ, ವೈಮನಸ್ಸು ಮತ್ತು ಗುಂಪುಗಾರಿಕೆಗಳಿವೆ. ಅವೇ ಈಗ ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಸಿದ್ಧ ಮಾಡುವ ಸುಲಭ ಪ್ರಯತ್ನದಲ್ಲಿ ದೊಡ್ಡ ಬಂಡೆಗಲ್ಲಾಗಬಹುದು.

ಸುಮಾರು 900 ವರ್ಷಗಳ ಹಿಂದೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ವೈದಿಕ ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು. ಅದು ವರ್ಣಾಶ್ರಮ ಧರ್ಮವನ್ನು ತಿರಸ್ಕರಿಸುತ್ತದೆ. ಹೆಣ್ಣು-ಗಂಡು, ಜಾತಿ ತಾರತಮ್ಯ ಹೋಗಲಾಡಿಸಿ ಸಮಾನತೆ ಸಾರಿದೆ. ಕರ್ಮ ಸಿದ್ಧಾಂತ ತಿರಸ್ಕರಿಸಿ ಕಾಯಕಕ್ಕೆ ಮಹತ್ವ ನೀಡಿ ಕೆಳವರ್ಗದ  ಸಮುದಾಯಗಳ ಅಭ್ಯುದಯಕ್ಕೆ ನಾಂದಿ ಹಾಡಿದೆ. ಅವರೆಲ್ಲರನ್ನೂ ಒಳಗೊಂಡ ಪ್ರಥಮ ಧರ್ಮ ಸಂಸತ್ತನ್ನು ಸ್ಥಾಪಿಸಿದ ಹೆಗ್ಗಳಿಕೆ ಲಿಂಗಾಯತ ಧರ್ಮದ್ದು.

ಅದು ಪುನರ್ಜನ್ಮ ತಿರಸ್ಕರಿಸಿ, ಇಹಲೋಕ-ಪರಲೋಕದ ನಂಬಿಕೆಯನ್ನು ಬುಡಮೇಲು ಮಾಡಿದೆ. ಮಂದಿರ ಸ್ಥಾಪಿತ ವಿಗ್ರಹ ಪೂಜೆಯನ್ನು ಬದಲಿಸಿ ಇಷ್ಟಲಿಂಗದ ಮೂಲಕ ಪುರೋಹಿತಶಾಹಿಯ ಬೆನ್ನುಮೂಳೆ ಮುರಿದಿದೆ. ವೇದ ಆಗಮಗಳ ಯಜಮಾನಿಕೆಯನ್ನು ಬದಿಗಿಟ್ಟು ಶರಣರ ಲೋಕಾನುಭವದ ವಚನ ಸಾಹಿತ್ಯಕ್ಕೆ ಪ್ರಾಧಾನ್ಯ ನೀಡಿದೆ.  ಪಾಮರರಿಗೆ ಅರ್ಥವಾಗದ ಸಂಸ್ಕೃತವನ್ನು ಬದಿಗಿರಿಸಿ ಅಚ್ಚಕನ್ನಡ ಬೆಳೆಸಿದೆ.

ದಾಸೋಹದ ಮೂಲಕ ಸಾಮಾಜಿಕ ಮಹತ್ವ ಎತ್ತಿ ಹಿಡಿದಿದೆ. ಬಹುದೇವೋಪಾಸನೆಯನ್ನು ತಿರಸ್ಕರಿಸಿ ಏಕದೇವೋಪಾಸನೆಗೆ ಒತ್ತು ನೀಡಿದೆ. ಆದ್ದರಿಂದಲೇ ಬಸವನನ್ನು ಇಂದು ಮಹಾ ಮಾನವತಾವಾದಿ ಎಂದು ಜಾಗತಿಕವಾಗಿಯೂ ಗುರುತಿಸಲಾಗಿದೆ. ಅವನ ತತ್ವಗಳಿಗೆ ಮನ್ನಣೆ ನೀಡಿದ ನಮ್ಮ ಸಂಸತ್ತು ಬಸವನ ಮೂರ್ತಿಯನ್ನು ತನ್ನ ಆವರಣದಲ್ಲಿ ಸ್ಥಾಪಿಸಿದೆ.

ಲಿಂಗಾಯತದ ಹಿನ್ನೆಲೆ ಹೀಗಿದ್ದರೂ ಅದನ್ನು ಮತ್ತೆ ತಿರುಚಿ ಹಿಂದೂಕರಣಗೊಳಿಸುವ ಪ್ರಯತ್ನಗಳನ್ನು  ಲಿಂಗಾಯತ ಧರ್ಮದ ಒಂದು ಪಂಗಡವೇ ಮಾಡುತ್ತಿದೆ. ‘ವೀರಶೈವ’ ಪದ ಪ್ರಯೋಗವೇ ಅದಕ್ಕೊಂದು ಉದಾಹರಣೆ. ವೀರಶೈವವು ಹಿಂದೂ ಶೈವಿಸಮ್‌ನ ಒಂದು ಶಾಖೆಎಂದು ಸಾಧಿಸುವುದು ಅದರ ಉದ್ದೇಶ. ಉತ್ತರ ಕರ್ನಾಟಕದ ಲಿಂಗಾಯತರಿಗೆ ವೀರಶೈವ ಎಂಬ ಪದ ಅರ್ಥವಾಗುವುದಿಲ್ಲ. ಅದು ದಕ್ಷಿಣ ಕರ್ನಾಟಕದ ಕೆಲವು ಮಠಾಧೀಶರು ಮತ್ತು ಪ್ರತಿಷ್ಠಿತ ಲಿಂಗಾಯತರು ತಾವೂ ಬ್ರಾಹ್ಮಣರೆಂದು ಅಥವಾ ಅವರಿಗಿಂತ ಕಡಿಮೆಯಲ್ಲವೆಂದು ತೋರಿಸಿಕೊಳ್ಳಲು 1930-40ರ ದಶಕಗಳಲ್ಲಿ ಮಾಡಿದ ಪ್ರಯತ್ನವಷ್ಟೆ.

ನೂರು ವರ್ಷಗಳಿಂದೀಚೆಗೆ ಕೆಲವು ಲಿಂಗಾಯತ ಸ್ವಾಮಿಗಳು ಸಂಸ್ಕೃತ ಶಾಲೆಗಳನ್ನು ತೆರೆದರು. ಆ ಮೂಲಕ  ಹಿಂದೂ ಪ್ರಭಾವವು ಲಿಂಗಾಯತದೊಳಗೆ ನುಸುಳುವಂತೆ ಮಾಡಿದ್ದಾರೆ. ಕಾಶಿಗೆ ಹೋಗಿ ಹಿಂದೂ ಧಾರ್ಮಿಕ ಗ್ರಂಥ ಕಲಿಯತೊಡಗಿದರು. ‘ವೇದಮೂರ್ತಿ’ ‘ವೇದಬ್ರಹ್ಮ’, ‘ಷಟ್‌ಸ್ಥಲಬ್ರಹ್ಮ’ ಇತ್ಯಾದಿ ಬಿರುದುಗಳನ್ನು ತಮ್ಮ ಹೆಸರಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಅವರೇ ವೀರಶೈವ ಧರ್ಮವು ಹಿಂದೂ ಧರ್ಮದ  ಭಾಗವೆಂದು ಹೇಳುತ್ತಾ ವೇದ ಆಗಮ ಉಪನಿಷತ್ತುಗಳ ಪಾರಮ್ಯ ಒಪ್ಪಿಕೊಳ್ಳುವವರು.

ಅವರೇ ಬಸವ ಸ್ಥಾಪಿತ ಧರ್ಮವನ್ನು ತಾವೇ ಸ್ಥಾಪಿಸಿದ್ದೇವೆಂದು ಹೇಳಿಕೊಳ್ಳುತ್ತಾ ಅದಕ್ಕೆ ಆಧಾರವೆಂಬಂತೆ ‘ಸಿದ್ಧಾಂತ ಶಿಖಾಮಣಿ’ಯೆಂಬ ನಿರಾಧಾರಿತ ಇತ್ತೀಚಿನ ಗ್ರಂಥವನ್ನು ಲಿಂಗಾಯತಕ್ಕೆ  ಅನ್ವಯಿಸುವ ಪ್ರಯತ್ನದಲ್ಲಿರುವವರು. ಡಾ.ಚಿದಾನಂದ ಮೂರ್ತಿಗಳು ಅವರ ಓರ್ವ ಪ್ರಶ್ನಾರ್ಹ ನಾಯಕರು. ಸಿದ್ಧಾಂತ ಶಿಖಾಮಣಿಯು 14ನೇ ಶತಮಾನದ ಕೃತಿಯೆಂದು ಅವರೇ ಸಂಶೋಧನಾತ್ಮಕವಾಗಿ ಆಗ ಬರೆದು ಈಗ ಅದು ತಪ್ಪು ಎಂದು ವಾದಿಸುವುದು ಅವರ ಬುದ್ಧಿವಂತಿಕೆಯ ಲಕ್ಷಣ!

ಬಸವ ಯುಗದ ಶರಣರ ವಿಚಾರಗಳಿಗೆ ಮಾರುಹೋಗಿ ಲಿಂಗಾಯತಕ್ಕೆ ಬಂದ ಆಂಧ್ರ ಪ್ರದೇಶದ ಕೆಲ ಆರಾಧ್ಯ ಬ್ರಾಹ್ಮಣರು ವಿಜಯನಗರದ ಸಂಗಮ ವಂಶದ ಆಡಳಿತದಲ್ಲಿ ಬಲಾಢ್ಯರಾದರು. ತಮ್ಮ ಮೂಲಬ್ರಾಹ್ಮಣ್ಯವನ್ನು ಬಿಡದೆ, ಲಿಂಗಾಯತವನ್ನೂ ಸಂಪೂರ್ಣವಾಗಿ ಪಾಲಿಸದೆ  ಸಾಮಾಜಿಕ ಸಂಧಿಕಾಲದಲ್ಲಿ ಹಿಂದೂ ಧರ್ಮದೊಂದಿಗಿನ ತಿಕ್ಕಾಟ ಬದಿಗಿಟ್ಟು ಅದರೊಂದಿಗೆ ಕೆಲವು ಸಂಧಾನಗಳನ್ನು ಮಾಡಿಕೊಂಡರು.

ಆಗ ತಯಾರಾದ ‘ಸಿದ್ಧಾಂತ ಶಿಖಾಮಣಿ’ಯು  ಡಾ. ಮಲ್ಲೇಪುರಂ ಹೇಳಿದಂತೆ ನಿಜವಾಗಿಯೂ ಸಮನ್ವಯ ಗ್ರಂಥ! ತಮ್ಮದೇ ಕೆಲವು ಪೀಠಗಳನ್ನು ಕಟ್ಟಿಕೊಂಡು ಲಿಂಗಾಯತವನ್ನು ಹಾದಿತಪ್ಪಿಸುತ್ತ ಬಂದಿದ್ದಾರೆ. ಲಿಂಗಾಯತವು ಪ್ರಬಲವಾದರೆ ಅವರ ಅಸ್ತಿತ್ವವೇ ಅಳಿದುಹೋಗುತ್ತದೆಯೆಂಬ ಅಳುಕು ಅವರನ್ನು ಧೃತಿಗೆಡಿಸಿದೆ.

ಲಿಂಗಾಯತವು ಸ್ವತಂತ್ರ ಧರ್ಮವೆಂಬ ಪರಿಗಣನೆಗೆ ಅವರು ವಿರೋಧವನ್ನು ಒಡ್ಡೇಒಡ್ಡುತ್ತಾರೆ. ಅವರ ಕುತಂತ್ರ, ಢೋಂಗಿತನವನ್ನೂ ಮೀರಿ ನಿಲ್ಲುವ ಶಕ್ತಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಅಥವಾ ಬಸವ ಸಮಿತಿಗೆ ಅಥವಾ ಇನ್ನಾವುದೇ ಲಿಂಗಾಯತ ಸಂಘಟನೆಗೆ ಇದೆಯೇ? ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಲಿಂಗಾಯತರು ಉಪಯೋಗಿಸುವರೇ ಅಥವಾ ಆಂತರಿಕ ತಿಕ್ಕಾಟದಿಂದ ವಿಫಲಗೊಳಿಸುವರೇ  ಎಂಬುದನ್ನು ಕಾಯ್ದು ನೋಡಬೇಕಿದೆ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry