ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿಯ ಮೇಲೆ ವಿಶೇಷಾಧಿಕಾರದ ಬ್ರಹ್ಮಾಸ್ತ್ರ

Last Updated 1 ಜುಲೈ 2017, 9:13 IST
ಅಕ್ಷರ ಗಾತ್ರ

ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವಾಗುವಂತೆ ಶಾಸಕರು-ಸಂಸದರಿಗೆ ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಸಂವಿಧಾನ ನೀಡಿರುವ ಕೆಲವು ಹಕ್ಕುಗಳು ಮತ್ತು ರಕ್ಷಣಾಕ್ರಮಗಳನ್ನು ಸಂಸದೀಯ ವಿಶೇಷಾಧಿಕಾರಗಳು ಎಂದು ಕರೆಯಲಾಗುತ್ತದೆ.

ಈ ಹಕ್ಕುಗಳು ಮತ್ತು ರಕ್ಷಣಾ ಕ್ರಮಗಳ ಉಲ್ಲಂಘನೆ ಅಥವಾ ಅನಾದರಣೆ ಹಕ್ಕುಚ್ಯುತಿ ಎನಿಸಿಕೊಂಡು ಶಿಕ್ಷಾರ್ಹ ಆಗುತ್ತದೆ. ಸಂಸದರು ಮತ್ತು ಸಂಸತ್ತನ್ನು ಹೀಗಳೆದ ಸಾಮಾನ್ಯ ಹೇಳಿಕೆಗಳೂ ಹಕ್ಕುಚ್ಯುತಿಯಾಗಲಿವೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಸಂವಿಧಾನದ 105 (3)ನೇ ವಿಧಿಯಿಂದ  ಸಂಸತ್ತಿನ ಉಭಯ ಸದನಗಳಿಗೆ ಇಂತಹ ಅಧಿಕಾರ ದತ್ತವಾಗಿದೆ. ಈ ಪರಿಕಲ್ಪನೆಯ ಮೂಲ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್.

ತಾನು ಅತಿಮುಖ್ಯವೆಂಬುದಾಗಿ ತನ್ನ ಕುರಿತು ಶಾಸನಸಭೆಯ ಅತಿರಂಜಿತ ತಿಳಿವಳಿಕೆ, ಜನತಾಂತ್ರಿಕ ತತ್ವಗಳ ಅರಿವಿನ ಕೊರತೆ ಹಾಗೂ ಟೀಕೆ ಟಿಪ್ಪಣಿಗಳ ಕುರಿತ ಅಸಹನೆಯೇ ಶಾಸಕಾಂಗ ಮತ್ತು ಸಮೂಹ ಮಾಧ್ಯಮಗಳ ನಡುವಣ ಈ ತಿಕ್ಕಾಟದ ಮೂಲ ಕಾರಣ ಎನ್ನುತ್ತಾರೆ ತಜ್ಞರು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಶಾಸನಸಭೆಗಳ ಈ ಪ್ರವೃತ್ತಿಗೆ ಕಡಿವಾಣ ಹಾಕದೆ ಹೋಗಿದ್ದರೆ ಪತ್ರಕರ್ತರು ದೀರ್ಘಕಾಲ ಜೈಲುವಾಸ ಅನುಭವಿಸಬೇಕಿತ್ತು.ಸಂಸದರು-ಶಾಸಕರ ಸಾಮೂಹಿಕ

ಮತ್ತು ವ್ಯಕ್ತಿಗತ ವಿಶೇಷಾಧಿಕಾರಗಳನ್ನು ಉದ್ದೇಶಪೂರ್ವಕವಾಗಿಯೇ ಪಟ್ಟಿ ಮಾಡಿಲ್ಲ. ಅವುಗಳದು ಅಂತ್ಯವಿಲ್ಲದ ವ್ಯಾಪ್ತಿ. ಸದನಗಳು ತಮಗೆ ತೋಚಿದಂತೆ ವ್ಯಾಖ್ಯಾನ ಮಾಡುವ ಅಧಿಕಾರ ಉಳಿಸಿಕೊಂಡಿವೆ. ಕೆಲವು ಅಧಿಕಾರಗಳನ್ನು ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದು:
ಸಭಾಧ್ಯಕ್ಷರ ಅನುಮತಿಯಿಲ್ಲದೆ ಸಂಸತ್ತು ಅಥವಾ ಶಾಸನಸಭೆಗಳ ಆವರಣದಲ್ಲಿ ಸಂಸದರು- ಶಾಸಕರನ್ನು ಒಳಗೊಂಡಂತೆ ಯಾರನ್ನೂ ಬಂಧಿಸುವಂತಿಲ್ಲ. ಸದನಗಳ ಅಥವಾ ಅವುಗಳ ಸಮಿತಿಗಳ ಕಲಾಪಗಳ ಕುರಿತು ನ್ಯಾಯಾಲಯಗಳು ವಿಚಾರಣೆ ನಡೆಸುವಂತಿಲ್ಲ.

ಸದಸ್ಯರ ಬಂಧನ, ಶಿಕ್ಷೆ, ಬಿಡುಗಡೆ ಕುರಿತ ಎಲ್ಲ ಮಾಹಿತಿಯನ್ನು ಕೋರುವ ಅಧಿಕಾರ ಸದನಕ್ಕೆ ಉಂಟು. ಹಕ್ಕುಚ್ಯುತಿಗಾಗಿ ಸದಸ್ಯರು ಮತ್ತು ಸದನದ ಹೊರಗಿನವರನ್ನು ಅಮಾನತು, ಉಚ್ಚಾಟನೆ, ವಾಗ್ದಂಡನೆ, ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಕಲಾಪ ಕುರಿತ ನಿಯಮಗಳನ್ನು ತಾನೇ  ರೂಪಿಸಿಕೊಳ್ಳಬಹುದು. ಮುಖ್ಯವಿಷಯಗಳ ಕುರಿತು ಗೋಪ್ಯ ಬೈಠಕ್ ನಡೆಸಬಹುದು. ವರದಿಗಳು, ಕಲಾಪಗಳು ಹಾಗೂ ಚರ್ಚೆಗಳನ್ನು ತಾನು ಪ್ರಕಟಿಸಬಹುದು ಮತ್ತು ಇತರರು ಅವುಗಳನ್ನು ಪ್ರಕಟಿಸದಂತೆ ತಡೆಹಿಡಿಯಬಹುದು.

ಸಂಸದರು, ಶಾಸಕರನ್ನು ಅಧಿವೇಶನಗಳ ಸಂದರ್ಭದಲ್ಲಿ ಬಂಧಿಸುವಂತಿಲ್ಲ. ಅಧಿವೇಶನಕ್ಕೆ 40 ದಿನಗಳ ಮುನ್ನ ಮತ್ತು ಅಧಿವೇಶನ ಮುಕ್ತಾಯದ ನಂತರದ 40 ದಿನಗಳ ಕಾಲ ಬಂಧಿಸಲಾಗದು. ಈ ವಿಶೇಷಾಧಿಕಾರ ಸಿವಿಲ್ ಕೇಸುಗಳಿಗೆ ಅನ್ವಯವಾಗುವುದೇ ವಿನಾ ಕ್ರಿಮಿನಲ್ ಕೇಸುಗಳಿಗೆ ಅಲ್ಲ. ಸದಸ್ಯರಿಗೆ ಸದನದ ಒಳಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯ ಉಂಟು.

ಇಲ್ಲಿ ಆಡಿದ ಮಾತುಗಳಿಗಾಗಿ ಮತ್ತು ನೀಡಿದ ಮತಕ್ಕಾಗಿ ಅವರನ್ನು ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸುವುದು ಸಾಧ್ಯವಿಲ್ಲ. ಈ ಸ್ವಾತಂತ್ರ್ಯವು ಸಂಸದೀಯ ಕಲಾಪದ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ. ಸಂಸತ್, ಶಾಸನಸಭೆ ಅಧಿವೇಶನದ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯಲು ನಿರಾಕರಿಸುವ ಅವಕಾಶ ಸದಸ್ಯರಿಗೆ ಉಂಟು.

ಶಾಸಕಾಂಗ, ಸಮೂಹ ಮಾಧ್ಯಮ ಹಾಗೂ ನ್ಯಾಯಾಂಗದ ನಡುವಣ ತಿಕ್ಕಾಟದ ಪ್ರಮುಖ ಪ್ರಕರಣ ನಡೆದದ್ದು 1952ರಲ್ಲಿ. ಉತ್ತರಪ್ರದೇಶದ ಸ್ಪೀಕರ್ ಆದೇಶದ ಮೇರೆಗೆ ‘ಬ್ಲಿಟ್ಜ್’ ವಾರಪತ್ರಿಕೆಯ ಸಂಪಾದಕ ದಿನ್ಶಾ ಹೋಮಿ ಮಿಸ್ತ್ರಿ ಅವರನ್ನು ಬಂಧಿಸಲಾಯಿತು. ಸ್ಪೀಕರ್  ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಆರೋಪ ಹೊತ್ತಿದ್ದರು ಮಿಸ್ತ್ರಿ.

ವಾರದೊಪ್ಪತ್ತು  ಜೈಲಿನಲ್ಲಿದ್ದ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಯಿತು. 1980ರ ದಶಕದಲ್ಲಿ ಆಂಧ್ರಪ್ರದೇಶದ ವಿಧಾನಪರಿಷತ್ತು ‘ಈನಾಡು’ ಸಂಪಾದಕ ರಾಮೋಜಿ ರಾವ್ ಬಂಧನಕ್ಕೆ ನೀಡಿದ ಆದೇಶವನ್ನು ಪಾಲಿಸಕೂಡದೆಂದು ಹೈದರಾಬಾದಿನ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು.

1964ರಲ್ಲಿ ಶಾಸಕರೊಬ್ಬರ ಕುರಿತು ಅವಹೇಳನಕಾರಿ ಕರಪತ್ರ ಪ್ರಕಟಿಸಿದರೆಂಬ ಆರೋಪದ ಮೇರೆಗೆ ಜೈಲಿಗೆ ಹೋಗಬೇಕಾದ ಕೇಶವ್ ಸಿಂಗ್, ಕೋರ್ಟ್ ಮೊರೆ ಹೋದರು. ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

ಕೇಶವ್ ಸಿಂಗ್, ಆತನ ಪರವಾಗಿ ವಾದಿಸಿದ ವಕೀಲ ಹಾಗೂ ಆತನ ಬಿಡುಗಡೆಯ ಆದೇಶ ನೀಡಿದ ಇಬ್ಬರು ನ್ಯಾಯಾಧೀಶರ ಮೇಲೆ ಶಾಸಕಾಂಗ ನಿಂದನೆಯ ಆರೋಪ ಹೊರಿಸಿತು ಉತ್ತರಪ್ರದೇಶ ವಿಧಾನಸಭೆ, ಈ ನಾಲ್ವರನ್ನೂ ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಆದೇಶ ನೀಡಿತು. ವಕೀಲ ಮತ್ತು ನ್ಯಾಯಾಧೀಶರಿಬ್ಬರು ಹೈಕೋರ್ಟ್ ಮೊರೆ ಹೋದರು.

ವಿಧಾನಸಭೆಯ ಆದೇಶವನ್ನು ಜಾರಿ ಮಾಡದಂತೆ ತಡೆಯಾಜ್ಞೆ ನೀಡಿತು ಹೈಕೋರ್ಟ್ ಪೂರ್ಣಪೀಠ. ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿದರು. ಶಾಸಕಾಂಗ ಮತ್ತು ನ್ಯಾಯಾಂಗದ ನಡುವಣ ಈ ತಿಕ್ಕಾಟವನ್ನು ಸಂವಿಧಾನದ 143 (1)ರ ವಿಧಿಯ ಪ್ರಕಾರ ಸುಪ್ರೀಂ ಕೋರ್ಟ್ ಪರಿಶೀಲನೆಗೆ ಒಪ್ಪಿಸಿದರು. ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರಗಡಕರ್ ಅವರ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.

‘ಸಂವಿಧಾನವೇ ಪರಮ, ಶಾಸನಸಭೆಯ ಅಧಿಕಾರಗಳು ಸಂವಿಧಾನದ ಅಂಕೆಗೆ ಒಳಪಟ್ಟಿರುತ್ತವೆ’ ಎಂದು ಸಾರಿದ ನ್ಯಾಯಪೀಠ ‘ಭಾರತೀಯ ಶಾಸನಸಭೆಗಳು ಬ್ರಿಟನ್ ಸಂಸತ್ತಿನ ಸಾರ್ವಭೌಮತೆ ತನಗೂ ಉಂಟೆಂದು ಭಾವಿಸಿ ನಡೆದುಕೊಳ್ಳಕೂಡದು’ ಎಂದು ಹೇಳಿತು. ‘ಶಾಸನಸಭೆಗಳು ತಮ್ಮ ವಿಶೇಷಾಧಿಕಾರಗಳನ್ನು ಸಂವಿಧಾನದ 194(3)ನೆಯ ವಿಧಿಯಿಂದ ಪಡೆಯುತ್ತವೆ. ಈ ವಿಧಿಯನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಾತ್ರ ಹೊಂದಿದೆ. ತಮ್ಮ ವಿಶೇಷಾಧಿಕಾರಗಳನ್ನು ಶಾಸನಸಭೆಗಳು ವಿವೇಚನೆಯಿಂದ ಬಳಸಬೇಕು’ ಎಂದು ನ್ಯಾಯಪೀಠ ಸಾರಿತು.

ತೆಲುಗು ದಿನಪತ್ರಿಕೆ ‘ಈನಾಡು’ 1983ರ ಮಾರ್ಚ್ 10ರಂದು ಆಂಧ್ರಪ್ರದೇಶದ ವಿಧಾನಪರಿಷತ್ ಕಲಾಪ ಕುರಿತ ವರದಿಯೊಂದನ್ನು ಪ್ರಕಟಿಸಿತು. ‘ಪೆದ್ದಲ ಗಲಭ’ ಎಂಬ ತಲೆಬರಹದ ಈ ವರದಿ ಅವಹೇಳನಕರ ಎಂದು ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಯಿತು. ವರ್ಷವಿಡೀ ನಡೆದ ವಿಚಾರಣೆಯ ನಂತರ ಪತ್ರಿಕೆ ದೋಷಿಯೆಂದು ತೀರ್ಮಾನಿಸಲಾಯಿತು.

ಸಮಿತಿಯ ಮುಂದೆ ಹಾಜರಾಗಲು ‘ಈನಾಡು’ ಸಂಪಾದಕ ರಾಮೋಜಿ ರಾವ್ ನಿರಾಕರಿಸಿದ್ದರು. ಹಕ್ಕುಬಾಧ್ಯತಾ ಸಮಿತಿಯ ವರದಿಯನ್ನು ಸದನ 1984ರ ಮಾರ್ಚ್ 28ರಂದು ಅಂಗೀಕರಿಸಿ ರಾವ್ ಅವರಿಗೆ ವಾಗ್ದಂಡನೆ ವಿಧಿಸಲು ನಿರ್ಧರಿಸಿತು. ಸದನದ ಮುಂದೆ ರಾವ್ ಅವರನ್ನು ಹಾಜರುಪಡಿಸುವಂತೆ ಹೈದರಾಬಾದಿನ ಪೊಲೀಸ್ ಆಯುಕ್ತರಿಗೆ ಆದೇಶ ನೀಡಲಾಯಿತು.

ರಾವ್ ಸುಪ್ರೀಂ ಕೋರ್ಟ್ ಮೊರೆ ಹೋದರು. ರಾವ್ ಅವರನ್ನು ಬಂಧಿಸದಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ನಿರ್ದೇಶನದ ಹಿನ್ನೆಲೆಯಲ್ಲಿ ತಾವು ಇರಿಸಬೇಕಾದ ಮುಂದಿನ ಹೆಜ್ಜೆಯ ಕುರಿತು ಆದೇಶ ನೀಡುವಂತೆ ಪೊಲೀಸ್ ಆಯುಕ್ತರು ವಿಧಾನ ಪರಿಷತ್ತನ್ನು ಕೋರಿದರು. ರಾವ್ ಅವರನ್ನು ಬಂಧಿಸಿ ಕರೆತರಬೇಕೆಂಬ ಆದೇಶವನ್ನು ವಿಧಾನಪರಿಷತ್ ಪುನರುಚ್ಚರಿಸಿತು.

ರಾವ್ ಅವರನ್ನು ಬಂಧಿಸಲು ತಾವು ‘ಈನಾಡು’ ಕಚೇರಿಗೆ ತೆರಳಿ, ತಮ್ಮೊಂದಿಗೆ ಬರುವಂತೆ ಅವರನ್ನು ಕೋರಿದ್ದಾಗಿಯೂ, ‘ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಲಾಗದು’ ಎಂದು ರಾಮೋಜಿ ರಾವ್ ತಮ್ಮೊಂದಿಗೆ ಬರಲು ನಿರಾಕರಿಸಿದ್ದಾಗಿಯೂ ಪೊಲೀಸ್ ಆಯುಕ್ತರು ಪರಿಷತ್ತಿನ ಸಭಾಪತಿಯವರಿಗೆ ವರದಿ ಒಪ್ಪಿಸಿದರು. ಎರಡು ದಿನಗಳ ನಂತರ ರಾಜ್ಯಪಾಲರು ಪರಿಷತ್ ಅಧಿವೇಶನವನ್ನು ಅನಿರ್ದಿಷ್ಟ ಮುಂದೂಡಿದರು. ಪ್ರಕರಣ ಅಲ್ಲಿಗೆ ಅಂತ್ಯಗೊಂಡಿತು.

ನ್ಯಾಯಾಂಗ ನಿಂದನೆಗೆ ದಂಡ ವಿಧಿಸುವ ಅಧಿಕಾರವನ್ನು ನ್ಯಾಯಾಲಯಗಳು ಸದಾ ಎಚ್ಚರಿಕೆಯಿಂದ ವಿವೇಕದಿಂದ ಹಾಗೂ ಆತ್ಮವಿಮರ್ಶೆಯಿಂದ ಪ್ರಯೋಗಿಸಬೇಕು. ಕೋಪ ಅಥವಾ ಕಿರಿಕಿರಿಯ ಭಾವದಲ್ಲಿ ಪದೇ ಪದೇ ಅಥವಾ ವಿವೇಚನೆಯಿಲ್ಲದೆ ಈ ಅಧಿಕಾರವನ್ನು ಬಳಸಿದರೆ ನ್ಯಾಯಾಲಯದ ಘನತೆಗೆ ಚ್ಯುತಿ ಬಂದೀತು ಮತ್ತು ಕೆಲವು ಬಾರಿ ವ್ಯತಿರಿಕ್ತ ಪರಿಣಾಮ ಬೀರೀತು.

ಗುಣಮಟ್ಟದ ತೀರ್ಪುಗಳ ನೀಡಿಕೆ, ನಿರ್ಭೀತ ನಡೆ, ನ್ಯಾಯಯುತ- ವಸ್ತುನಿಷ್ಠ ನಡವಳಿಕೆ, ಸಂಯಮ, ಘನತೆ, ಶಿಷ್ಟಾಚಾರವನ್ನು ಪಾಲಿಸುವುದೇ ನ್ಯಾಯಮೂರ್ತಿಗಳು ತಮ್ಮ ಸ್ಥಾನಮಾನದ ಘನತೆ ಗೌರವವನ್ನು ಕಾಯ್ದುಕೊಳ್ಳುವ ಅತ್ಯುತ್ತಮ ಮಾರ್ಗ. ನ್ಯಾಯಾಂಗದ ಪಾಲಿನ ಈ ನಿಜ ಶಾಸಕಾಂಗಕ್ಕೂ ಸಮಾನವಾಗಿ ಅನ್ವಯಿಸಬೇಕೆಂಬುದು ನಮ್ಮ ನಿಲುವು ಎಂದು ಸುಪ್ರೀಂ ಕೋರ್ಟ್ ಕೇಶವ್ ಸಿಂಗ್ ಪ್ರಕರಣದಲ್ಲಿ ಸ್ಪಷ್ಟಪಡಿಸಿತ್ತು. ಈ ತೀರ್ಪನ್ನು ಕಡೆಗಣಿಸಿ ನಡೆದುಕೊಳ್ಳುತ್ತಿರುವ ಶಾಸನಸಭೆಗಳು ಕಾಲ ಕಾಲಕ್ಕೆ ನ್ಯಾಯಾಲಯಗಳ ಮಧ್ಯಪ್ರವೇಶದಿಂದ ಮುಖಭಂಗ ಎದುರಿಸಿರುವುದು ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT