7

ಶಾಸಕಾಂಗದ ಅಧಿಕಾರ ಎದುರಿಸಿ ಇಲ್ಲವೇ ರದ್ದುಪಡಿಸಿ

Published:
Updated:
ಶಾಸಕಾಂಗದ ಅಧಿಕಾರ ಎದುರಿಸಿ ಇಲ್ಲವೇ ರದ್ದುಪಡಿಸಿ

ಕನ್ನಡದ ಎರಡು ವಾರಪತ್ರಿಕೆಗಳ ಸಂಪಾದಕರ ಬಂಧನಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಅವರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸದನದ ಹಕ್ಕುಬಾಧ್ಯತಾ ಸಮಿತಿಯ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಇಬ್ಬರು ಸಂಪಾದಕರಿಗೆ ಜೈಲು ಶಿಕ್ಷೆ ಪ್ರಕಟಿಸಿರುವುದು ವಿವಾದಕ್ಕೆ  ಕಾರಣ.

2003ರಲ್ಲಿ ಜೆ.ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ  ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಎನ್.ರವಿ ಮತ್ತಿತರ ನಾಲ್ವರ ಬಂಧನಕ್ಕೆ ಅಲ್ಲಿನ ವಿಧಾನಸಭೆಯ ಸ್ಪೀಕರ್ ಆದೇಶ ಹೊರಡಿಸಿದ್ದರು. ಆ ಆದೇಶದ ಕೆಲವು ದಿನಗಳ ಹಿಂದೆಯಷ್ಟೆ ತಮಿಳುನಾಡು ಪೊಲೀಸರು ಅಪರಾತ್ರಿ ವೇಳೆ ಡಿಎಂಕೆ ನೇತಾರ ಎಂ. ಕರುಣಾನಿಧಿ ಅವರ ಮನೆಗೆ ನುಗ್ಗಿ ಬಂಧಿಸಿದ್ದನ್ನು ‘ದಿ ಹಿಂದೂ’ ಖಂಡಿಸಿ ಬರೆದಿತ್ತು. ಆದ್ದರಿಂದ ಸಂಪಾದಕರ ಬಂಧನದ ಆದೇಶಕ್ಕೆ ಮುಖ್ಯಮಂತ್ರಿ ಜಯಲಲಿತಾ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‌ಡಿಎ  ಒತ್ತಡಕ್ಕೆ ಮಣಿದು  ಬಂಧನದ ಆದೇಶ ಹಿಂದೆಗೆದುಕೊಳ್ಳಲಾಗಿತ್ತು.

ಈ ಆದೇಶದ ಮೊದಲು ಮತ್ತು ನಂತರ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕುಬಾಧ್ಯತಾ ಸಮಿತಿ ಪತ್ರಕರ್ತರನ್ನು ದಂಡಿಸಿದೆ. ನಿವೃತ್ತ ರಾಯಭಾರಿ ರೋನೆನ್ ಸೇನ್ ಅವರಿಂದ ಹಿಡಿದು ಲೋಕಸಭೆಯ ನಿವೃತ್ತ ಮಹಾ ಕಾರ್ಯದರ್ಶಿ ಮತ್ತು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್‌ವರೆಗೆ ಹಲವಾರು ಗಣ್ಯರಿಗೆ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಹಕ್ಕುಚ್ಯುತಿಗಾಗಿ ನೋಟಿಸ್ ನೀಡಿದೆ.

ಕೆಲವರನ್ನು ಸದನಕ್ಕೆ ಕರೆದು ಛೀಮಾರಿ ಹಾಕಲಾಗಿದೆ. ಸುಭಾಷ್ ಕಶ್ಯಪ್ ಅವರು ಹಾಜರಾಗಲು ನಿರಾಕರಿಸಿದ್ದ ಕಾರಣಕ್ಕಾಗಿ ಅವರ ಗೈರುಹಾಜರಿಯಲ್ಲಿ ಅವರಿಗೆ ಛೀಮಾರಿ ಹಾಕಲಾಗಿತ್ತು.

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಮಾನ ನಷ್ಟವಾಗುವಂತಹ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ಪತ್ರಕರ್ತೆ ಶೋಭಾ ಡೇ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ನೋಟಿಸ್ ನೀಡಿತ್ತು. ಶೋಭಾ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.  ವಿವಾದ ಅಲ್ಲಿಗೆ ತಣ್ಣಗಾಗಿ ಹೋಗಿದೆ.

ಸಂವಿಧಾನದ ವಿಧಿ  194ರ ಅನ್ವಯ ಶಾಸಕರಿಗೆ ಒಂದಷ್ಟು ವಿಶೇಷ ಹಕ್ಕುಗಳು (Privileges) ಮತ್ತು ವಿಶೇಷ ರಕ್ಷಣೆಗಳಿವೆ (Immunity). ಈ  ಹಕ್ಕುಗಳು ಮತ್ತು ರಕ್ಷಣೆಯನ್ನು ಸಂವಿಧಾನದ 105ನೇ ವಿಧಿ  ಸಂಸದರಿಗೂ ನೀಡಿದೆ.ಈ ಬಲದಿಂದಾಗಿಯೇ ಶಾಸಕರು ಮತ್ತು ಸಂಸದರು ಸದನದಲ್ಲಿ ನ್ಯಾಯಾಂಗವೂ ಸೇರಿದಂತೆ ಜಗತ್ತಿನ ಯಾವುದೇ ವ್ಯಕ್ತಿ-ವಿಷಯಗಳ ಬಗ್ಗೆ ಮಾತನಾಡಿ ಪಾರಾಗಬಲ್ಲರು.

ಈ ರಕ್ಷಣೆಯಿಂದಾಗಿ ಸದನದ ಹೊರಗೆ ಕಾನೂನಿನ ಪ್ರಕಾರ ಮಾನನಷ್ಟದ ವ್ಯಾಖ್ಯಾನದಡಿ ಬರುವ ಹೇಳಿಕೆಗಳನ್ನು ಶಾಸಕರು ಸದನದ ಒಳಗೆ ನೀಡಿ ನಿಶ್ಚಿಂತೆಯಾಗಿ ಇರಬಲ್ಲರು. ಆ ಹಕ್ಕು ಕಾಪಾಡಿಕೊಳ್ಳಲು ರಚನೆಯಾಗಿದೆ ಹಕ್ಕುಬಾಧ್ಯತಾ ಸಮಿತಿ. ಇದು ಸರ್ಕಾರ ಅಥವಾ  ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿಲ್ಲ.

ಶಾಸಕರು ತಮ್ಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೊಡುವ ದೂರುಗಳನ್ನು ಸ್ಪೀಕರ್  ಪರಿಶೀಲಿಸಿ ವಿಚಾರಣೆಗೆ ಯೋಗ್ಯ ಎಂದು ಅನಿಸಿದರೆ ಹಕ್ಕುಬಾಧ್ಯತಾ ಸಮಿತಿಗೆ ನೀಡುತ್ತಾರೆ. ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿ ದೂರುದಾರರು ಮತ್ತು ಆರೋಪಿಗಳನ್ನು ವಿಚಾರಣೆಗೆ ಕರೆದು ಅವರ ಹೇಳಿಕೆ ದಾಖಲಿಸಿ ಕೊನೆಗೆ ತನ್ನ ಅಭಿಪ್ರಾಯದ ವರದಿ ಸಿದ್ಧಪಡಿಸಿ ಸದನಕ್ಕೆ ಸಲ್ಲಿಸುತ್ತದೆ.

ವಿವಾದಕ್ಕೆ ಕಾರಣವಾದ ಈಗಿನ ಪ್ರಕರಣದಲ್ಲಿ ಒಬ್ಬ ಸಂಪಾದಕರಿಗೆ ವಿಚಾರಣೆಗೆ ಹಾಜರಾಗಲು ಹಕ್ಕುಬಾಧ್ಯತಾ ಸಮಿತಿ ಹತ್ತು ನೋಟಿಸ್‌ ನೀಡಿದೆ. ಸಮಿತಿಯ ಮುಂದೆ ಅವರು ಹಾಜರಾಗಿಲ್ಲ. ಒಂದು ಬಾರಿ ಆ ಸಂಪಾದಕರ ಮ್ಯಾನೇಜರ್ ಪ್ರತಿಕ್ರಿಯಿಸಿದ್ದರು ಅಷ್ಟೆ. ಇನ್ನೊಬ್ಬ ಸಂಪಾದಕರು ಸಮಿತಿಯ ಮುಂದೆ ಹಾಜರಾಗಿ ಕ್ಷಮಾಪಣೆ ಕೇಳಿದ್ದರು. ಆದರೆ ಕ್ಷಮೆ ಕೇಳಿ ಹೋದ ನಂತರ ಮತ್ತೆ ಮಾನ ಹಾನಿಕರವಾದ ಲೇಖನ ಬರೆದಿದ್ದಾರೆಂದು ದೂರು ನೀಡಲಾಗಿತ್ತು.

ಹಕ್ಕುಬಾಧ್ಯತಾ ಸಮಿತಿಯ ಮುಂದೆ ಬರುವ ಎಲ್ಲ ಪ್ರಕರಣಗಳ ವಿಚಾರಣೆ ಶಿಕ್ಷೆಯಲ್ಲಿ ಕೊನೆಗೊಳ್ಳುವುದಿಲ್ಲ. ಬಹುಸಂಖ್ಯೆಯ ಪ್ರಕರಣಗಳು ರಾಜಿಯಲ್ಲಿ ಕೊನೆಗೊಳ್ಳುತ್ತವೆ. ಕೆಲವು ವರ್ಷಗಳ ಹಿಂದೆ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಸಂಪಾದಕರ ವಿರುದ್ಧ ಶಾಸಕರೊಬ್ಬರು ಹಕ್ಕುಚ್ಯುತಿಯ ದೂರು ನೀಡಿದ್ದರು.

ಅವರಲ್ಲಿ ಹೆಚ್ಚಿನವರು ಸಮಿತಿ ಮುಂದೆ ಹಾಜರಾಗಿ ಕ್ಷಮೆ ಕೇಳಿ ಪ್ರಕರಣ ಕೊನೆಗೊಳಿಸಿದ್ದರು. ಆದರೆ ‘ಪ್ರಜಾವಾಣಿ’  ಮತ್ತು ‘ಡೆಕ್ಕನ್ ಹೆರಾಲ್ಡ್’ ಸಂಪಾದಕರು ಮಾತ್ರ ಕ್ಷಮೆ ಕೇಳಲು ನಿರಾಕರಿಸಿ ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಸಮರ್ಥಿಸಿಕೊಂಡಿದ್ದರು. ಇದರಿಂದ ಕೆರಳಿದ ಸಮಿತಿ, ಆ ಪತ್ರಿಕೆಗಳಿಗೆ ಒಂದು ವರ್ಷ ಸರ್ಕಾರಿ ಜಾಹೀರಾತನ್ನು ಸ್ಥಗಿತ ಗೊಳಿಸಬೇಕೆಂದು ತೀರ್ಮಾನಿಸಿತ್ತು. ಆ ಸಂಪಾದಕರು ಅದಕ್ಕೂ ಜಗ್ಗದೆ ಇದ್ದಾಗ ಕೊನೆಗೆ ಆ ತೀರ್ಮಾನವನ್ನೂ ಹಿಂದಕ್ಕೆ ಪಡೆದು ಪ್ರಕರಣವನ್ನು ಕೊನೆಗೊಳಿಸಿತ್ತು. ಆದ್ದರಿಂದ ಇಂತಹ ಪ್ರಕರಣಗಳು ಪತ್ರಕರ್ತರ ಬದ್ಧತೆ ಮತ್ತು ವೃತ್ತಿನಿಷ್ಠೆಯನ್ನು ಕೂಡಾ ಅವಲಂಬಿಸಿವೆ.

ಸಾಮಾನ್ಯವಾಗಿ ಹಕ್ಕುಬಾಧ್ಯತಾ ಸಮಿತಿಯು ಪ್ರಕರಣಗಳ ವಿಚಾರಣೆ ನಡೆಸಿ ಕೊನೆಗೆ ತನ್ನ ಅಭಿಪ್ರಾಯದ ವರದಿಯನ್ನು ಸದನದಲ್ಲಿ ಮಂಡಿಸುತ್ತದೆ. ಈ ಬಗ್ಗೆ ಸದನದಲ್ಲಿ ಸದಸ್ಯರು ಚರ್ಚೆ ನಡೆಸುತ್ತಾರೆ. ಸದನ ವರದಿಯನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಪುರಸ್ಕರಿಸಿದರೆ ಸಮಿತಿ ನಿರ್ಧರಿಸಿದ ಶಿಕ್ಷೆಯನ್ನು ಜಾರಿಗೆ ತರಲು ಸ್ಪೀಕರ್ ಆದೇಶ ನೀಡುತ್ತಾರೆ. ಇದು ಸಹಜ ಪ್ರಕ್ರಿಯೆ.

ಈಗಿನ ಪ್ರಕರಣದಲ್ಲಿಯೂ ಹಕ್ಕುಬಾಧ್ಯತಾ ಸಮಿತಿ ಈ ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಿದೆ. ಸಮಿತಿಯ ವರದಿ ಸದನದಲ್ಲಿ ಮಂಡನೆಯಾಗಿದೆ. ಎಲ್ಲ ಪಕ್ಷಗಳ ಶಾಸಕರು ವರದಿಯ ಪರವಾಗಿ ಮಾತನಾಡಿದ್ದಾರೆ. ಕೊನೆಗೆ ಸರ್ವಾನುಮತದಿಂದ (ಬಹುಮತ ಕೂಡಾ ಅಲ್ಲ) ವರದಿಗೆ ಒಪ್ಪಿಗೆ ನೀಡಲಾಗಿದೆ. ವಿಪರ್ಯಾಸವೆಂದರೆ ಈ ಪ್ರಕರಣದಲ್ಲಿ ಸದನದೊಳಗೆ ವರದಿಯನ್ನು ಪುರಸ್ಕರಿಸಿದ್ದ ವಿರೋಧ ಪಕ್ಷಗಳ ನಾಯಕರು ಸದನದ ಹೊರಗೆ ಅದರ ವಿರುದ್ಧ ಮಾತನಾಡುತ್ತಿದ್ದಾರೆ. ನಿಯಮಾವಳಿಗಳ ಪ್ರಕಾರ ಇದು ಕೂಡಾ ಹಕ್ಕುಚ್ಯುತಿಯೇ ಆಗಿದೆ.

ವಿವಾದಾತ್ಮಕ ಹಕ್ಕುಬಾಧ್ಯತಾ ಸಮಿತಿಯ ಕಾರ್ಯಾಧಿಕಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿವೆ. ಈ ಬಗ್ಗೆ  ಅಗತ್ಯವಾಗಿ ಚರ್ಚೆ ನಡೆಯಬೇಕಾಗಿದೆ. ಮೊದಲನೆಯದಾಗಿ, ಜೈಲುವಾಸದಂತಹ ಕಠಿಣ ಶಿಕ್ಷೆ ವಿಧಿಸುವ ಅಧಿಕಾರ ಇರುವ ಹಕ್ಕುಬಾಧ್ಯತಾ ಸಮಿತಿಯ ಸದಸ್ಯರಾಗಲು ಕಾನೂನು ಜ್ಞಾನವೂ ಸೇರಿದಂತೆ ಯಾವುದೇ ನಿರ್ದಿಷ್ಟ ಅರ್ಹತೆಗಳ ಅವಶ್ಯಕತೆಗಳಿಲ್ಲ. ಶಾಸಕರಾಗಿರುವ ಯಾರಾದರೂ ಅಧ್ಯಕ್ಷರು ಇಲ್ಲವೇ ಸದಸ್ಯರಾಗಬಹುದು. ಅಷ್ಟು ಮಾತ್ರವಲ್ಲ, ದೂರುದಾರರೂ ಸದಸ್ಯರಾಗಬಹುದು. ಈಗಿನ ಸಮಿತಿಯಲ್ಲಿ ದೂರುದಾರರೊಬ್ಬರು ಸದಸ್ಯರಾಗಿದ್ದಾರೆ.

ಎರಡನೆಯದಾಗಿ, ಸಂವಿಧಾನದಲ್ಲಿ ಜನಪ್ರತಿನಿಧಿಗಳ ಹಕ್ಕುಗಳು, ರಕ್ಷಣೆಗಳ ಖಾತರಿ ನೀಡಿದರೂ ಅವುಗಳ Codification ಮಾಡಿಲ್ಲ. ಶಾಸಕರ ವಿಶೇಷ ಹಕ್ಕುಗಳು ಯಾವುವು? ಅವುಗಳ ಸ್ವರೂಪವೇನು, ಉಲ್ಲಂಘನೆಯ ವ್ಯಾಪ್ತಿ ಏನು? ಯಾವ ಉಲ್ಲಂಘಣೆಗೆ ಯಾವ ಶಿಕ್ಷೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದಕ್ಕಾಗಿ ಶಾಸಕರ ಹಕ್ಕುಗಳನ್ನು Codify ಮಾಡಬೇಕೆಂಬ ಬಗ್ಗೆ ಸಭಾಧ್ಯಕ್ಷರ ಸಮ್ಮೇಳನಗಳಲ್ಲಿ ಚರ್ಚೆ ನಡೆದಿದ್ದರೂ ಇಲ್ಲಿಯವರೆಗೆ ಅದು ಸಾಧ್ಯವಾಗಿಲ್ಲ.

ಮೂರನೆಯದಾಗಿ, ಸಮಿತಿಯಲ್ಲಿರುವವರೆಲ್ಲರೂ ಶಾಸಕರು. ಪಕ್ಷ ಬೇರೆಯಾದರೂ ಅವರೊಳಗೆ ಪಕ್ಷಾತೀತವಾದ ಬಾಂಧವ್ಯ ಇರುತ್ತದೆ.  ಜಗಳವಾಡಿದರೂ ‘ಮೂರನೆಯವರ’ ಪ್ರಶ್ನೆ ಎದುರಾದಾಗ ಸಹಜವಾಗಿ ಎಲ್ಲರೂ ‘ತಮ್ಮವರ’ ಪರವಾಗಿ ನಿಲ್ಲುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು.

ನಾಲ್ಕನೆಯದಾಗಿ ಹಕ್ಕುಬಾಧ್ಯತಾ ಸಮಿತಿಯ ಮುಂದೆ ಆರೋಪಿ ಪತ್ರಕರ್ತರೇ ಹಾಜರಾಗಬೇಕು, ವಕೀಲರ ಮೂಲಕ ಪ್ರತಿನಿಧಿ ಸುವಂತಿಲ್ಲ. ಇದರಿಂದಾಗಿ ಆರೋಪಿಗಳಿಗೆ ತಮ್ಮ ನಿರಪರಾಧಿತನ ಸಾಬೀತುಪಡಿಸಲು ಪೂರ್ಣ ಅವಕಾಶ ನಿರಾಕರಿಸಿದಂತಾಗಿದೆ ಎನ್ನುವ ವಾದವೂ  ಇದೆ. ಐದನೆಯದಾಗಿ ಹಕ್ಕುಬಾಧ್ಯತಾ ಸಮಿತಿಯ ನಿರ್ಣಯ ಎಷ್ಟೊಂದು ಶಕ್ತಿಶಾಲಿಯೆಂದರೆ ಸಮಿತಿಯ ವರದಿಯನ್ನು ಸದನ ಒಪ್ಪಿಕೊಂಡ ನಂತರ ಅದರ ವಿರುದ್ಧ ಸಮಿತಿಯ ಮುಂದೆ ಮೇಲ್ಮನವಿಯನ್ನೂ ಸಲ್ಲಿಸುವಂತಿಲ್ಲ. ಅದನ್ನು ಮತ್ತೆ ಸದನದ ಮುಂದಿಟ್ಟು ತೀರ್ಮಾನ ಕೈಗೊಳ್ಳಬಹುದು.

ಕೊನೆಯದಾಗಿ  ಶಾಸಕರ ಹಕ್ಕುಗಳು ಮತ್ತು ರಕ್ಷಣೆ ಸದನದಲ್ಲಿ ಮತ್ತು ಸದನ ಸಮಿತಿಗಳಲ್ಲಿನ ಶಾಸಕರ ನಡವಳಿಕೆಗಳಿಗೆ ಮಾತ್ರ ಸೀಮಿತವಾಗಿವೆಯೇ, ಇಲ್ಲವೇ ಸದನದ ಹೊರಗಿನ ನಡವಳಿಕೆ ಗಳಿಗೂ ಅನ್ವಯವಾಗುತ್ತವೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಈಗಿನ ಎರಡೂ ಪ್ರಕರಣಗಳಲ್ಲಿಯೂ ಪತ್ರಿಕೆಗಳು ಶಾಸಕರ ಸದನದಲ್ಲಿನ ಇಲ್ಲವೇ ಸದನ ಸಮಿತಿಯಲ್ಲಿನ ನಡವಳಿಕೆ ಬಗ್ಗೆ ಬರೆದಿರಲಿಲ್ಲ.

‘ಶಾಸಕರು–ಸಂಸದರ ಕಾರ್ಯನಿರ್ವಹಣೆಯನ್ನು ನಿರ್ಬಂಧಿ ಸುವ, ಸದನ, ಸದಸ್ಯರು ಮತ್ತು ಸದನ ಸಮಿತಿಗಳ ಮಾನನಷ್ಟ ಮಾಡುವಂತಹ ಯಾವುದೇ ನಡವಳಿಕೆ ಹಕ್ಕುಚ್ಯುತಿಯಾಗುತ್ತದೆ’ ಎನ್ನುತ್ತಾರೆ ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ ಸುಭಾಷ್ ಕಶ್ಯಪ್.ಆದರೆ ಮೂರು ವರ್ಷಗಳ ಹಿಂದೆ ಮಧ್ಯಪ್ರದೇಶದ ಲೋಕಾಯುಕ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ‘ಶಾಸಕರು ಮತ್ತು ಸಂಸದರಿಗೆ ನೀಡಲಾದ ವಿಶೇಷ ಹಕ್ಕುಗಳು ವಿಧಾನಸಭೆ ಮತ್ತು ಸಂಸತ್‌ನ ಸದನದ ಕಲಾಪಗಳಿಗಷ್ಟೇ ಸಂಬಂಧಿಸಿದ್ದಾಗಿದ್ದು ಅವನ್ನು ಸದನದ ಹೊರಗಿನ ನಡವಳಿಕೆಗಳಿಗೆ ಅನ್ವಯಿಸುವಂತಿಲ್ಲ’ ಎಂದು ತೀರ್ಪು ನೀಡಿತ್ತು.

ಈ ಪ್ರಕರಣದಲ್ಲಿ ಮಧ್ಯಪ್ರದೇಶದ ಲೋಕಾಯುಕ್ತರು ವಿಧಾನಸಭೆಯ ಆವರಣದಲ್ಲಿ ನಿರ್ಮಿಸಲಾದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ನಡೆದಿದೆ ಯೆನ್ನಲಾದ ಅಕ್ರಮಗಳ ತನಿಖೆಗಾಗಿ ವಿಧಾನಸಭೆಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದರು. ಇದು ಸದನದ ಹಕ್ಕುಚ್ಯುತಿ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಸ್ಪೀಕರ್ ನೋಟಿಸ್ ನೀಡಿದ್ದರು.

ಹಕ್ಕುಬಾದ್ಯತಾ ಸಮಿತಿಯ ಅನಿರ್ಬಂಧಿತ ಅಧಿಕಾರದ ಬಗ್ಗೆ ಅನೇಕ ಬಾರಿ ಚರ್ಚೆಗಳಾಗಿವೆ. ಸಾಮಾನ್ಯವಾಗಿ ಇಂತಹ ಚರ್ಚೆ ‘ಯುದ್ಧಕಾಲ’ದಲ್ಲಿ ನಡೆಯುತ್ತದೆ. ಯುದ್ಧ ವಿರಾಮ ಘೋಷಣೆಯ ನಂತರ ಪತ್ರಕರ್ತರು ಮರೆತುಬಿಡುತ್ತಾರೆ, ಶಾಸಕರ ನೆನಪಲ್ಲಿಯೂ ಇರುವುದಿಲ್ಲ. ಈ ಬಗ್ಗೆ ‘ಶಾಂತಿ ಕಾಲ’ದಲ್ಲಿ ಪತ್ರಕರ್ತರು, ಶಾಸಕರು, ಸಂವಿಧಾನತಜ್ಞರು ಕೂಡಿ ಚರ್ಚೆ ನಡೆಸಿದರೆ ಪರಿಹಾರದ ದಾರಿ ಕಂಡುಕೊಳ್ಳಬಹುದೇನೋ?

ಕಾನೂನು ಎನ್ನುವುದು ಒಂದು ಅಸ್ತ್ರ. ಅದರ ಉಪಯೋಗ ಮಾತ್ರವಲ್ಲ. ಅದರ ದುರುಪಯೋಗವೂ ಸಾಧ್ಯ. ಅದು ಚಲಾಯಿಸುವವರನ್ನು ಅವಲಂಬಿಸಿರುತ್ತದೆ. ಕೈಯಲ್ಲಿ ಲಾಠಿ ಕೊಟ್ಟು ಬೀಸಬೇಡಿ ಎಂದು ಹೇಳಲಾಗದು. ಆಯ್ಕೆ ಬಹಳ ಸ್ಪಷ್ಟ. ಒಂದೋ ಪತ್ರಕರ್ತರನ್ನು ದಂಡಿಸಲು ಹಕ್ಕುಬಾಧ್ಯತಾ ಸಮಿತಿಗೆ ಇರುವ ಅಧಿಕಾರವನ್ನು ರದ್ದುಪಡಿಸಬೇಕು, ಇಲ್ಲದೆ ಇದ್ದರೆ ಆ ಅಧಿಕಾರವನ್ನು ಎದುರಿಸುವ ಸವಾಲನ್ನು ಪತ್ರಕರ್ತರು ಸ್ವೀಕರಿಸಬೇಕು. ಮೂರನೇ ಆಯ್ಕೆ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry