ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರನೇ ವಾರ್ಡ್‌ ವ್ಯಾಪ್ತಿಯಲ್ಲಿ ಡೆಂಗಿ

ಸ್ಥಳೀಯರಲ್ಲಿ ಆತಂಕ: ಕಣ್ಗಾವಲು ಘಟಕದ ವೈದ್ಯಕೀಯ ಸಿಬ್ಬಂದಿಯಿಂದ ರಕ್ತ ಮಾದರಿ ಸಂಗ್ರಹ
Last Updated 1 ಜುಲೈ 2017, 5:48 IST
ಅಕ್ಷರ ಗಾತ್ರ

ಕೋಲಾರ: ನಗರದ ಆರನೇ ವಾರ್ಡ್‌ ವ್ಯಾಪ್ತಿಯ ಕೋಗಿಲಹಳ್ಳಿ ಹಾಗೂ ವಿನೋಭನಗರ ಬಡಾವಣೆ ನಿವಾಸಿಗಳಲ್ಲಿ ಡೆಂಗಿ ಮತ್ತು ಚಿಕುನ್‌ ಗುನ್ಯಾ ಕಾಯಿಲೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಅಕ್ಕಪಕ್ಕದಲ್ಲಿರುವ ಈ ಬಡಾವಣೆಗಳಲ್ಲಿ ಸುಮಾರು 250 ಮನೆಗಳಿದ್ದು, 1,400 ಜನಸಂಖ್ಯೆ ಇದೆ. ವಾರದಲ್ಲಿ ಬಡಾವಣೆಯ ಹಲವು ಮಂದಿಗೆ ಜ್ವರ, ಶೀತ ಹಾಗೂ ತಲೆ ನೋವಿನ ಲಕ್ಷಣ ಕಾಣಿಸಿಕೊಂಡಿದೆ. 10ಕ್ಕೂ ಹೆಚ್ಚು ಸ್ಥಳೀಯರು ಡೆಂಗಿ ಹಾಗೂ ಚಿಕುನ್‌ ಗುನ್ಯಾಕ್ಕೆ ತುತ್ತಾಗಿದ್ದಾರೆ.

ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಕಾಯಿಲೆ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಕಾಯಿಲೆಯಿಂದ ಬಳಲುತ್ತಿರುವವರು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಈ ವಿಷಯ ತಿಳಿದ ವೈದ್ಯರು ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳೀಯರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೇ, ಅವರ ರಕ್ತ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಜಿಲ್ಲಾ ಕಣ್ಗಾವಲು ಘಟಕಕ್ಕೆ ಕಳುಹಿಸಿದ್ದಾರೆ. ಈ ಪೈಕಿ ನಾಲ್ಕು ಮಂದಿಗೆ ಡೆಂಗಿ ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ನಗರದಲ್ಲಿ ಇತ್ತೀಚೆಗೆ ಮಳೆ ಸುರಿದಿದ್ದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಿದ್ದು, ನಗರಸಭೆ ಸಿಬ್ಬಂದಿ ಬಡಾವಣೆಗಳಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಾಸಾಯನಿಕ ಹೊಗೆ ಸಿಂಪಡಣೆ (ಫಾಗಿಂಗ್‌) ಮಾಡಲಾರಂಭಿಸಿದ್ದಾರೆ. ಅಲ್ಲದೇ, ಮನೆಯ ನೀರಿನ ತೊಟ್ಟಿಗಳು ಮತ್ತು ಡ್ರಮ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸ್ಥಳೀಯರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ನೈರ್ಮಲ್ಯ ಸಮಸ್ಯೆ: ‘ಕೋಗಿಲಹಳ್ಳಿ ಮತ್ತು ವಿನೋಭ ನಗರದ ಚರಂಡಿಗಳಲ್ಲಿ ಕೊಳಚೆ ನೀರು ಕಟ್ಟಿಕೊಂಡಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿದೆ. ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಸೊಳ್ಳೆ ಕಡಿತದಿಂದ ಸ್ಥಳೀಯರು ಡೆಂಗಿ ಮತ್ತು ಚಿಕುನ್‌ ಗುನ್ಯಾಕ್ಕೆ ಬಲಿಯಾಗಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿಜಯಕುಮಾರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡಾವಣೆಯ ಚರಂಡಿಗಳನ್ನು ಸ್ವಚ್ಛಗೊಳಿಸಿ ವರ್ಷವೇ ಕಳೆದಿದೆ. ಚರಂಡಿಗಳಲ್ಲಿ ಕೊಳಚೆ ನೀರು ಕಟ್ಟಿಕೊಂಡಿದ್ದು, ನೈರ್ಮಲ್ಯ ಸಮಸ್ಯೆ ತಲೆದೋರಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಿ, ಮನೆಯಲ್ಲಿ ಇರುವುದೇ ಕಷ್ಟವಾಗಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಪೌರ ಕಾರ್ಮಿಕರಿಗೆ ಹಲವು ಬಾರಿ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ’ ಎಂದು ಕೋಗಿಲಹಳ್ಳಿ ನಿವಾಸಿ ಮುದಾಸಿರ್‌ ದೂರಿದರು.

**

ಜಿಲ್ಲಾ ಕಣ್ಗಾವಲು ಘಟಕದ ವೈದ್ಯಕೀಯ ಸಿಬ್ಬಂದಿ ಪ್ರತಿನಿತ್ಯ ಮನೆ ಮನೆಗೂ ಭೇಟಿ ನೀಡಿ ಸ್ಥಳೀಯರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ
-ಡಾ. ವಿಜಯ್‌ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT